samachara
www.samachara.com
‘Naughty ಸಂಪಾದಕ’ರಿಗೆ #MeToo ಚಾಟಿ ಏಟು: ಮಾಧ್ಯಮ ಲೋಕಕ್ಕೂ ಕಾಲಿಟ್ಟ ಅಭಿಯಾನ...
COVER STORY

‘Naughty ಸಂಪಾದಕ’ರಿಗೆ #MeToo ಚಾಟಿ ಏಟು: ಮಾಧ್ಯಮ ಲೋಕಕ್ಕೂ ಕಾಲಿಟ್ಟ ಅಭಿಯಾನ...

ಪತ್ರಕರ್ತೆ ಸಂಧ್ಯಾ ಮೆನನ್‌ ಮೊದಲ ಬಾರಿಗೆ ಹಲವು ವರ್ಷಗಳ ಕಾಲ ಮುಚ್ಚಿಟ್ಟಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವುದರೊಂದಿಗೆ ಮೊದಲ ಬಾರಿಗೆ ‘#ಮೀಟೂ’ವನ್ನು ಪತ್ರಕರ್ತರ ವಲಯಕ್ಕೆ ಕರೆ ತಂದಿದ್ದಾರೆ.

Team Samachara

ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು ತನುಶ್ರೀ ದತ್ತಾ. ಈ ಮೂಲಕ ಭಾರತದಲ್ಲಿ ಹೊಸ ಸರಣಿಯ #MeToo ಅಭಿಯಾನ ಆರಂಭವಾಗಿತ್ತು. ಈ ಅಭಿಯಾನವೀಗ ಮಾಧ್ಯಮ ಲೋಕಕ್ಕೆ ಕಾಲಿಟ್ಟಿದೆ. ಪ್ರಮುಖ ಪತ್ರಿಕೆ, ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು, ಸಂಪಾದಕರ ಹೆಸರುಗಳು ಆರೋಪಿಗಳ ಪಟ್ಟಿಯಲ್ಲಿದ್ದು ಮಾಧ್ಯಮ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಪತ್ರಕರ್ತೆ ಸಂಧ್ಯಾ ಮೆನನ್‌ ಮೊದಲ ಬಾರಿಗೆ ಹಲವು ವರ್ಷಗಳ ಕಾಲ ಮುಚ್ಚಿಟ್ಟಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವುದರೊಂದಿಗೆ ಮೊದಲ ಬಾರಿಗೆ ‘#ಮೀಟೂ’ವನ್ನು ಪತ್ರಕರ್ತರ ವಲಯಕ್ಕೆ ಕರೆ ತಂದಿದ್ದಾರೆ. ಅಲ್ಲಿಂದ ಹಲವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಶ್ಲೀಲ ಮಾತುಗಳು, ಅನಗತ್ಯ ದೈಹಿಕ ಸ್ಪರ್ಷಗಳು, ಸೆಕ್ಸ್‌ಗಾಗಿ ಬೇಡಿಕೆ, ನೀಲಿ ಚಿತ್ರಗಳ ರವಾನೆಯಂಥ ಆರೋಪಗಳನ್ನು ಸಹೋದ್ಯೋಗಿಗಳ ವಿರುದ್ಧ ಹೊರಿಸಿದ್ದಾರೆ.

ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಹೈದರಾಬಾದ್ ಸ್ಥಾನಿಕ ಸಂಪಾದಕರಾಗಿರುವ ಕೆ. ಆರ್‌. ಶ್ರೀನಿವಾಸ್‌ ಮತ್ತು ಡಿಎನ್‌ಎ ಮುಂಬೈನ ಸಂಪಾದಕ ಗೌತಮ್‌ ಅಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಸಂಧ್ಯಾ ಮೆನನ್‌ ಅವರು ಹೊರಿಸಿದ್ದಾರೆ. ಅಧಿಕಾರಿ ತನ್ನ ಮೇಲೂ ದೌರ್ಜನ್ಯ ನಡೆಸಿದ್ದರು ಎಂದು ಸಿಯಾಟಲ್‌ ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಪ್ರಾಧ್ಯಾಪಕಿಯಾಗಿರುವ ಸೊನೋರಾ ಝಾ ಕೂಡ ಹೇಳಿದ್ದಾರೆ.

‘ಅಲ್‌ ಜಝೀರಾ’ಗೆ ಪ್ರತಿಕ್ರಿಯೆ ನೀಡಿರುವ ಅವರು, 1995ರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ನಾನು ನನ್ನ ಮಗುವನ್ನು ಪಡೆದ ಎರಡು ತಿಂಗಳ ನಂತರ, ಅಧಿಕಾರಿ ಅವರ ಬೆಂಗಳೂರು ಕಚೇರಿಗೆ ಭೇಟಿ ನೀಡಿದ್ದೆ. ಮುಂದೆ ಅವರು ಟೈಮ್ಸ್‌ ಆಫ್‌ ಇಂಡಿಯಾದ ಕಾರ್ಯನಿರ್ವಾಹಕ ಸಂಪಾದಕರಾದರು. ನನಗೆ ಹೊಂದಿಕೆಯಾಗುವ ಕೆಲಸದ ಅವಧಿ ಬೇಕಾಗಿತ್ತು. ಈ ಸಂಬಂಧ ಚರ್ಚೆ ಮಾಡಲೆಂದು ಹೋಗಿದ್ದೆ. ಆ ಬಗ್ಗೆ ಚರ್ಚೆ ನಡೆಸಲು ನನ್ನ ಹೋಟೆಲ್ ಕೋಣೆಗೆ ಬರುವಂತೆ ಅವರು ತಿಳಿಸಿದರು.”

"ನಾನು ಅಲ್ಲಿಗೆ ಹೋದ ನಂತರ, ವಿಶ್ರಾಂತಿ ತೆಗೆದುಕೊ, ಪಾದಗಳನ್ನು ಮೇಲಕ್ಕೆತ್ತು, ಮಲಗು ಎಂದು ಸೂಚಿಸಿದರು. ನಾನು ಅದಕ್ಕೆ ನಿರಾಕರಿಸಿದೆ. ಆತ ಬಲವಂತವಾಗಿ ನನ್ನ ಮುಖವನ್ನು ಹಿಡಿದು ಮುದ್ದಿಟ್ಟ. ನನ್ನ ಬಾಯಿಯೊಳಗೆ ನಾಲಗೆ ತಳ್ಳಲು, ಹಾಸಿಗೆಯ ಮೇಲೆ ಬೀಳಿಸಲು ಯತ್ನಿಸಿದ. ನಾನು ಅವನನ್ನು ತಳ್ಳಿ, ಬಾಗಿಲು ತೆಗೆದುಕೊಂಡು ಹೊರಗೆ ಧಾವಿಸಿದೆ, " ಎಂದು ಅವರು ನಡೆದಿದ್ದನ್ನು ವಿವರಿಸಿದ್ದಾರೆ.

ಅವತ್ತಿಗೆ 27 ವರ್ಷ ವಯಸ್ಸಿನವಳಾಗಿದ್ದ ನಾನು ನನ್ನ ‘ಅನಿಶ್ಚಿತ ಭವಿಷ್ಯ’ದ ಬಗ್ಗೆ ಯೋಚಿಸಿದೆ. ಮತ್ತು "TOI ಮುಖ್ಯಸ್ಥನನ್ನು ಆರೋಪಿಸಿರುವ ಆ ಮಹಿಳೆ" ಎಂದು ನಾನು ಗುರುತಿಸಿಕೊಳ್ಳಲು ಬಯಸಲಿಲ್ಲ. ಮಗುವನ್ನು ನೋಡಿಕೊಳ್ಳಬೇಕಾಗಿದ್ದರಿಂದ ಕಾನೂನುಬದ್ಧವಾಗಿ ಈ ಪ್ರಕರಣವನ್ನು ಮುಂದುವರಿಸಬಾರದೆಂದು ಅಂದು ಆಕೆ ನಿರ್ಧರಿಸಿದ್ದರು. ಇದೀಗ ಹಲವು ವರ್ಷಗಳ ನಂತರ ನಡೆದ ಘಟನೆಯನ್ನು ಅವರು ಹೊರ ಹಾಕಿದ್ದಾರೆ.

ಸರಣಿ ಆರೋಪ

ಅಸಲಿಗೆ ಇಂಥಹದ್ದೊಂದು ಆರೋಪಗಳ ಸರಣಿ ಗುರುವಾರದಿಂದ ಆರಂಭವಾಗಿತ್ತು. ಅಂದು ಯೂಟ್ಯೂಬ್‌ ಸ್ಟಾರ್‌ ಉತ್ಸವ್‌ ಚಕ್ರವರ್ತಿ ವಿರುದ್ಧ ಬರಹಗಾರರೊಬ್ಬರು ಮೊದಲ ಬಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಿದ್ದರು. ನಂತರ ಈ ಸಂಬಂಧ ಉತ್ಸವ್‌ ಕ್ಷಮೆ ಕೋರಿದ್ದರು.

ಇದಾದ ಬಳಿಕ ಕಿರಣ್‌ ನಗರ್ಕರ್‌ ಮತ್ತು ಸಿಪಿ ಸುರೇಂದ್ರನ್‌ ವಿರುದ್ಧ ಇದೇ ರೀತಿಯ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿತ್ತು. ಇದೇ ರೀತಿ ಫೋಟೋಗ್ರಾಫರ್‌ ಪಾಬ್ಲೊ ಬಾರ್ತೊಲೋಮಿಯೋ ಬಳಿ ತಾನು ಯುವ ವರದಿಗಾರ್ತಿಯಾಗಿದ್ದಾಗ ಸಂದರ್ಶನಕ್ಕೆ ಹೋಗಿದ್ದೆ. ಈ ಸಂದರ್ಭದಲ್ಲಿ ನನ್ನ ಮೇಲೂ ದೌರ್ಜನ್ಯ ನಡೆಸಿದ್ದಾಗಿ ಹೆಸರು ಹೇಳಲಿಚ್ಚಿಸದ ಮಹಿಳೆಯೊಬ್ಬರು ಹೇಳಿದ್ದಾರೆ.

‘ಬಿಸಿನೆಸ್‌ ಸ್ಟಾಂಡರ್ಡ್‌’ ಪ್ರಧಾನ ವರದಿಗಾರ ಮಯಾಂಕ್‌ ಜೈನ್‌ರನ್ನು ಲೈಂಗಿಕ ಭಕ್ಷಕ ಎಂಬುದಾಗಿ ಪತ್ರಕರ್ತೆ ಅನು ಭುಯಾನ್‌ ಕರೆದಿದ್ದಾರೆ. ಮತ್ತೋರ್ವ ಪತ್ರಕರ್ತೆಯೂ ಅವರ ಮೇಲೆ ಇದೇ ರೀತಿಯ ಆರೋಪ ಹೊರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಆಂತರಿಕ ತನಿಖೆಗೆ ಬಿಸಿನೆಸ್‌ ಸ್ಟ್ಯಾಂಡರ್ಡ್‌ ಆದೇಶ ನೀಡಿದೆ.

ಇದೇ ವೇಳೆ ‘ಬೆತ್ತಲೆ ಚಿತ್ರ’ಕ್ಕಾಗಿ ಒತ್ತಾಯಿಸುತ್ತಿದ್ದರು ಎಂಬುದಾಗಿ ಹಫಿಂಗ್ಟನ್‌ ಪೋಸ್ಟ್‌ ಮಾಜಿ ಸಂಪಾದಕ ಅನುರಾಗ್‌ ವರ್ಮಾ ಮೇಲೂ ಮಹಿಳೆಯರು ಆರೋಪ ಹೊರಿಸಿದ್ದಾರೆ. ಈ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿರುವ ‘ಹಫಿಂಗ್ಟನ್‌ ಪೋಸ್ಟ್‌’, ಈ ರೀತಿಯ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಹೀಗೆ ಸಂಪಾದಕರುಗಳ ಮೇಲೆ ಅದರಲ್ಲೂ ಶ್ರೀನಿವಾಸ್‌ ಮತ್ತು ಅಧಿಕಾರಿ ವಿರುದ್ಧ ಕೇಳಿ ಬಂದಿರುವ ಆರೋಪಗಳು ಮಾಧ್ಯಮ ವಲಯದಲ್ಲಿ ಕಂಪನ ಮೂಡಿಸಿವೆ. ಈ ಬಗ್ಗೆ ‘ಅಲ್‌ ಜಝೀರಾ’ಗೆನ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್‌, ಟೈಮ್ಸ್ ಗ್ರೂಪ್‌ ಆಂತರಿಕೆ ತನಿಖೆಗೆ ಆದೇಶ ನೀಡಿದೆ. ಎಲ್ಲ ಮಾಹಿತಿಯನ್ನು ತನಿಖಾ ದಳಕ್ಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂದುವರಿದ ಬೆಳವಣಿಗೆಯಲ್ಲಿ ಅವರ ವಿರುದ್ಧ ಟೈಮ್ಸ್‌ ಗ್ರೂಪ್‌ ಮುಖ್ಯಸ್ಥ ವಿನೀತ್‌ ಜೈನ್‌ಗೆ 7 ಮಹಿಳೆಯರು ದೂರು ನೀಡಿದ್ದು, ತಕ್ಷಣ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಇನ್ನು, “ನಾನು ನನ್ನ ಸಹದ್ಯೋಗಿಗೆ ಯಾವುದೇ ರೀತಿಯಲ್ಲಿ ಅನಾನುಕೂಲವನ್ನು ಮಾಡಿದ್ದರೆ, ನಾನು ಕ್ಷಮೆ ಕೇಳಲು ಸಿದ್ದವಾಗಿದ್ದೇನೆ. ಆದರೆ ನಾನು ಯಾರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿಲ್ಲ,” ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಇದೇ ಮೀಟೂ ಅಭಿಯಾನದ ಪರಿಣಾಮ ‘ಹಿಂದೂಸ್ಥಾನ್‌ ಟೈಮ್ಸ್‌’ ಬ್ಯೂರೋ ಮುಖ್ಯಸ್ಥ ಮತ್ತು ಪೊಲಿಟಿಕಲ್‌ ಎಡಿಟರ್‌ ಪ್ರಶಾಂತ್‌ ಝಾ ತಮ್ಮ ಹುದ್ದೆಯನ್ನು ಕಳೆದುಕೊಳ್ಳುವಂತಾಗಿದೆ. ಮಾಜಿ ಸಹೋದ್ಯೋಗಿಯೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಮತ್ತು ಅದಕ್ಕೆ ಸಾಕ್ಷಿಯಾಗಿ ಕಚೇರಿಯಲ್ಲಿ ನಡೆದ ಭೇಟಿಯ ಫೋಟೋಗಳನ್ನು ಲಗತ್ತಿಸಿದ್ದರು. ಪರಿಣಾಮ ಅವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಮ್ಯಾನೇಜ್‌ಮೆಂಟ್‌ ಸೂಚಿಸಿದೆ. ಬೆನ್ನಿಗೆ ಅವರು ಹುದ್ದೆ ತೊರೆದಿದ್ದಾರೆ.

ಆರಂಭವಷ್ಟೇ..

1997ರಲ್ಲೇ ಸುಪ್ರೀಂ ಕೋರ್ಟ್‌ ಐತಿಹಾಸಿಕ ‘ವಿಶಾಖಾ ಮಾರ್ಗದರ್ಶಿ’ ಸೂತ್ರಗಳನ್ನು ನೀಡಿತ್ತು. ಕೆಲಸದ ಸ್ಥಳಗಳಲ್ಲಿ ಮಹಿಳೆಯರನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ನ್ಯಾಯಾಲಯ ಈ ಸೂತ್ರಗಳನ್ನು ರಚಿಸಿತ್ತು. ಆದರೆ ಈ ಸೂತ್ರಗಳ ಆಶಯದಂತೆ ಆಂತರಿಕ ದೂರು ಸಮಿತಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿವೆ. ಅವುಗಳು ಎಷ್ಟು ಕಂಪನಿಗಳಲ್ಲಿವೆ ಎಂಬುದರ ಬಗ್ಗೆ ಯಾವುದೇ ಅಧ್ಯಯನಗಳಾಗಿಲ್ಲ.

ಈ ಹಿಂದೆ 2004-05ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಮಹಿಳಾ ಪತ್ರಕರ್ತರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ‘ಪ್ರೆಸ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ’ಗೆ ಸೂಚಿಸಿತ್ತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 100 ಮಹಿಳಾ ಪತ್ರಕರ್ತರಲ್ಲಿ ಹೆಚ್ಚಿನವರು ತಮಗೆ ಸಹೋದ್ಯೋಗಿಗಳು ಲೈಂಗಿಕ ಕಿರುಕುಳ ನೀಡಿದ್ದಾಗಿ ಹೇಳಿದ್ದರು. ಹೀಗೆ ಕುರುಕುಳ ನೀಡಿದ ಹೆಚ್ಚಿನ ಪತ್ರಕರ್ತರು ಅವರಿಗಿಂತ ಮೇಲಿನ ಸ್ಥಾನಗಳಲ್ಲಿದ್ದರು.

ಇದೀಗ ಅವರುಗಳ ಹೆಸರುಗಳನ್ನು ಮಹಿಳಾ ಪತ್ರಕರ್ತರು ‘ಮೀಟೂ’ ಹೆಸರಿನಲ್ಲಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ಮಾಧ್ಯಮ ವಲಯದೊಳಗಿರುವ ಹುಳುಕುಗಳನ್ನೂ ಜನರ ಮುಂದಿಟ್ಟಿದ್ದಾರೆ. ಇದಕ್ಕೆ ವೇದಿಕೆಯಾಗಿದ್ದು ಭವಿಷ್ಯದ ಪರ್ಯಾಯ ಮಾಧ್ಯಮ ಎಂದು ಕರೆಸಿಕೊಂಡ ಸಾಮಾಜಿಕ ಜಾಲತಾಣಗಳು. ಅವಿಲ್ಲದೆ ಇದ್ದಿದ್ದರೆ ಈ ದೌರ್ಜನ್ಯಗಳು ಒಳಗೇ ಉಳಿದುಕೊಂಡು ಬಿಡುತ್ತಿದ್ದವೇನೋ.

ಪೂರಕ ಮಾಹಿತಿ: ಅಲ್‌ಜಝೀರಾ