‘ಅಸಮಾಧಾನ ಇರೋದು ನಿಜ, ಆದರೆ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹಾರಲ್ಲ’: ಬಿ.ಸಿ. ಪಾಟೀಲ್‌
COVER STORY

‘ಅಸಮಾಧಾನ ಇರೋದು ನಿಜ, ಆದರೆ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹಾರಲ್ಲ’: ಬಿ.ಸಿ. ಪಾಟೀಲ್‌

“ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾನು ಪಕ್ಷ ಬಿಟ್ಟು ಬಿಜೆಪಿಗೆ ಹಾರುವುದಿಲ್ಲ. ಅಲ್ಲೂ ನನಗೆ ಸಚಿವ ಸ್ಥಾನ ಸಿಗದಿದ್ದರೆ ನನ್ನ ಸ್ಥಿತಿ ತಿರುಕನ ಕನಸಿನಂತಾಗುತ್ತದೆ...

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಪಕ್ಷದ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್‌ ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಸಂಪುಟ ವಿಸ್ತರಣೆ ವಿಳಂಬ ಮಾಡುವ ಮೂಲಕ ಚುನಾಯಿತ ಶಾಸಕರನ್ನು ಅಪಮಾನಿಸಲಾಗುತ್ತಿದೆ ಎಂದು ಪಾಟೀಲ್‌ ಟ್ವೀಟ್‌ ಮಾಡಿದ್ದಾರೆ.

“ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಯನ್ನು ಎಳೆಯುತ್ತಾ ಬರಲಾಗುತ್ತಿದೆ. ಇದು ಶಾಸಕರನ್ನು ಅಪಮಾನಿಸುವ, ಪ್ರಜಾಪ್ರಭುತ್ವವನ್ನು ಕೊಲ್ಲುವ ಹಾಗೂ ಪಕ್ಷದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆ ತೋರುವ ನಡೆಯಾಗಿದೆ” ಎಂದು ಪಾಟೀಲ್‌ ಟ್ವೀಟ್‌ನಲ್ಲಿ ಬರೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರಿಗೆ ಈ ಟ್ವೀಟ್‌ ಟ್ಯಾಗ್ ಮಾಡಿದ್ದಾರೆ.

ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಮ್ಮನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದ ವಿಚಾರವನ್ನು ಬಹಿರಂಗಗೊಳಿಸಿದ್ದ ಬಿ.ಸಿ. ಪಾಟೀಲ್‌ ಈಗ ತಮ್ಮ ಪಕ್ಷದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಅಸಮಾಧಾನದ ಕಾರಣಕ್ಕೆ ತಾವು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದೂ ಪಾಟೀಲ್‌ ಹೇಳಿದ್ದಾರೆ.

ತಮ್ಮ ಟ್ವೀಟ್‌ ಬಗ್ಗೆ 'ಸಮಾಚಾರ'ದ ಜತೆಗೆ ಮಾತನಾಡಿದ ಬಿ.ಸಿ. ಪಾಟೀಲ್‌, “ಹಿರೇಕೆರೂರು ಭಾಗದ ಶಾಸಕರಿಗೆ ಸುಮಾರು ಮೂರು ದಶಕಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ಇಲ್ಲಿನ ಜನತೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿದ್ದರು. ಆದರೆ, ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಹೋಗುತ್ತಿರುವುದರಿಂದ ಜನತೆಗೆ ಹಾಗೂ ನನಗೂ ಸಹಜವಾಗಿಯೇ ಬೇಸರವಾಗಿದೆ. ಈ ಬಗ್ಗೆ ಹಲವು ಬಾರಿ ಪಕ್ಷದ ವರಿಷ್ಠರ ಜತೆಗೆ ಮಾತನಾಡಿದ್ದೇನೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ನನ್ನ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಿದ್ದೇನೆ” ಎಂದರು.

ತಮ್ಮ ಮಾತಿನ ನಡುವೆ ಲಿಂಗಾಯತ ಸಮುದಾಯದ ವಿಷಯವನ್ನೂ ಎಳೆದುತಂದ ಪಾಟೀಲ್‌, ಈ ಸರಕಾರದಲ್ಲಿ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರಿಗೆ ಸೂಕ್ತ ಸ್ಥಾನ ಸಿಕ್ಕಿಲ್ಲ. ಹೀಗಾಗಿ ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನನಗೂ ಸಚಿವನಾಗಬೇಕೆಂಬ ಕನಸಿದೆ. ಹಿರೇಕೆರೂರು ಭಾಗದ ಲಿಂಗಾಯತ ಮುಖಂಡರಿಗೂ ನಾನು ಸಚಿವನಾಗಬೇಕೆಂಬ ಬಯಕೆ ಇದೆ. ಆದರೆ, ಈ ಆಸೆ ಈಡೇರುತ್ತದೆಯೋ, ಇಲ್ಲವೋ ಎಂಬುದು ಸಂಪುಟ ವಿಸ್ತರಣೆಯಲ್ಲೇ ಗೊತ್ತಾಗಲಿದೆ ಎಂದು ಹೇಳಿದರು. ಈ ಮೂಲಕ ಸಮುದಾಯದ ಪ್ರಾತಿನಿಧ್ಯದ ವಿಷಯವನ್ನೂ ಅವರು ಮುನ್ನೆಲೆಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ.

“ಸಂಪುಟ ವಿಸ್ತರಣೆಯಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾನು ಪಕ್ಷ ಬಿಟ್ಟು ಬಿಜೆಪಿಗೆ ಹಾರುವುದಿಲ್ಲ. ಅಲ್ಲೂ ನನಗೆ ಸಚಿವ ಸ್ಥಾನ ಸಿಗದಿದ್ದರೆ ನನ್ನ ಸ್ಥಿತಿ ತಿರುಕನ ಕನಸಿನಂತಾಗುತ್ತದೆ. ಹೀಗಾಗಿ ನಾನು ಪಕ್ಷ ಬಿಡುವ ಮಾತಿಲ್ಲ. ಪಕ್ಷದಲ್ಲಿನ ವ್ಯವಸ್ಥೆಯ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸಲು ಈ ಟ್ವೀಟ್ ಮಾಡಿದ್ದೇನೆ. ಇದು ಯಾರನ್ನೂ ಬೆದರಿಸುವ ತಂತ್ರವಲ್ಲ” ಎಂದರು.

“ಟ್ವೀಟ್‌ ಮಾಡಿದ ಬಳಿಕವೂ ಪಕ್ಷದ ಯಾವ ಮುಖಂಡರೂ ನನ್ನನ್ನು ಸಂಪರ್ಕ ಮಾಡಿಲ್ಲ. ಪಕ್ಷದ ಮುಖಂಡರು ಏನು ಮಾಡುತ್ತಾರೆ ನೋಡೋಣ. ನಾನಂತೂ ನನ್ನ ಮನಸ್ಸಿನಲ್ಲಿದ್ದ ಭಾವನೆಯನ್ನು ಹೊರ ಹಾಕಿದ್ದೇನೆ. ಎಷ್ಟು ದಿನ ನಾನು ನನ್ನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಿ. ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ. ಮುಂದಿನದ್ದು ಪಕ್ಷಕ್ಕೆ ಬಿಟ್ಟಿದ್ದು” ಎಂದು ಅವರ ಹೇಳಿದರು.

ಸದ್ಯ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಈ ಉಪ ಚುನಾವಣೆಯ ಫಲಿತಾಂಶದ ಬಳಿಕವೇ ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಿರ್ಧರಿಸಿವೆ ಎನ್ನಲಾಗುತ್ತಿದೆ. ಉಪ ಚುನಾವಣೆ ಘೋಷಣೆಯಾಗದಿದ್ದರೆ ಹಾಗೂ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ 10ನೇ ತಾರೀಖಿನಂದು ನಾಲ್ಕರಿಂದ ಆರು ಮಂದಿ ಕಾಂಗ್ರೆಸ್ ಶಾಸಕರು ಸಂಪುಟ ಸೇರುತ್ತಾರೆ ಎನ್ನಲಾಗಿತ್ತು. ಆದರೆ, ಉಪ ಚುನಾವಣೆಯ ಕಾರಣಕ್ಕೆ ಸಂಪುಟ ವಿಸ್ತರಣೆ ಇನ್ನೂ ವಿಳಂಬವಾಗಲಿದೆ. ಅದರ ಜತೆಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನವೂ ಹೆಚ್ಚಾಗುವ ಸಾಧ್ಯತೆ ಇದೆ.