samachara
www.samachara.com
‘ಮನುವಾದಿ, ಮನಿವಾದಿಗಳಿಂದ ಭಾರತಕ್ಕೆ ಅಪಾಯ’: ಬಿ.ಜಿ. ಕೋಲ್ಸೆ ಪಾಟೀಲ್ ಜತೆ ಮಾತುಕತೆ
COVER STORY

‘ಮನುವಾದಿ, ಮನಿವಾದಿಗಳಿಂದ ಭಾರತಕ್ಕೆ ಅಪಾಯ’: ಬಿ.ಜಿ. ಕೋಲ್ಸೆ ಪಾಟೀಲ್ ಜತೆ ಮಾತುಕತೆ

“ಶತ್ರು ನಮಗಿಂತಲೂ ಹೆಚ್ಚು ಶಕ್ತಿಯುತವಾಗಿದ್ದಾನೆ ಎಂಬ ಕಾರಣಕ್ಕೆ ನಾವು ಹೋರಾಟದಿಂದ ಹಿಂದೆ ಹೋಗಬಾರದು. ಮನುವಾದಿ, ಮನಿವಾದಿಗಳಿಂದ ದೇಶಕ್ಕೆ ಒದಗಿರುವ ಅಪಾಯದ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸಬೇಕು...”

ದಯಾನಂದ

ದಯಾನಂದ

ಸರಕಾರದ ಜನವಿರೋಧಿ ನೀತಿಗಳನ್ನು ಹಾಗೂ ಕಾರ್ಪೊರೇಟ್‌ ಶಕ್ತಿಗಳ ಅಪಾಯವನ್ನು ಎದುರಿಸಲು ನ್ಯಾಯಮೂರ್ತಿ ಹುದ್ದೆಯನ್ನು ತ್ಯಜಿಸಿ ಸಾಮಾಜಿಕ ಹೋರಾಟಕ್ಕಿಳಿದವರು ಬಿ. ಜಿ. ಕೋಲ್ಸೆ ಪಾಟೀಲ್‌. ದೇಶದಲ್ಲಿ ಹಿಂದುತ್ವವಾದಿ ಶಕ್ತಿಗಳು ನಡೆಸುತ್ತಿರುವ ಅವಾಂತರವನ್ನು ತಮ್ಮ ಇಳಿ ವಯಸ್ಸಿನಲ್ಲೂ ತೀವ್ರವಾಗಿ ವಿರೋಧಿಸುತ್ತ ಬಂದವರು ಅವರು. ‘ನಗರ ನಕ್ಸಲ’ರ ಹೆಸರಿನಲ್ಲಿ ಪುಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿದ ಪ್ರಕರಣ ಹಾಗೂ ಕರ್ನಾಟಕದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಬೆಂಗಳೂರಿಗೆ ಬಂದಿರುವ ಕೋಲ್ಸೆ ಪಾಟೀಲ್‌ ‘ಸಮಾಚಾರ’ದೊಂದಿಗೆ ಮಾತುಕತೆಗೆ ಸಿಕ್ಕರು.

ಪಾಟೀಲ್‌ ಸಾಬ್ ಜತೆ ನಡೆಸಿದ ಮಾತುಕತೆಯ ಆಯ್ದಭಾಗ ಇದು.

ಸಮಾಚಾರ: ಐದು ಮಂದಿ ಸಾಮಾಜಿಕ ಹೋರಾಟಗಾರರನ್ನು ಸರಕಾರ ‘ನಗರ ನಕ್ಸಲ’ರ ಹೆಸರಿನಲ್ಲಿ ಬಂಧಿಸಿದೆ. ಸರಕಾರದ ವಿರುದ್ಧ, ಮನುವಾದಿಗಳ ವಿರುದ್ಧ ಮಾತನಾಡುವವರನ್ನೆಲ್ಲಾ ಸರಕಾರ ‘ನಗರ ನಕ್ಸಲ’ರೆಂದು ಹಣೆಪಟ್ಟಿ ಕಟ್ಟುತ್ತಿದೆಯಲ್ಲಾ…

ಕೋಲ್ಸೆ ಪಾಟೀಲ್‌: 2014ರ ಬಳಿಕ ದೇಶದ ವಾತಾವರಣವೇ ಬದಲಾಗಿದೆ. ಕೇಂದ್ರದಲ್ಲಿ ಮನುವಾದಿಗಳು ಅಧಿಕಾರಕ್ಕೆ ಬಂದ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯ ಆತಂಕದಲ್ಲಿದೆ. ಸರಕಾರದ ವಿರುದ್ಧ ಮಾತನಾಡುವುದನ್ನು ಸರಕಾರದಲ್ಲಿರುವವರು ಸಹಿಸುತ್ತಿಲ್ಲ. ಸಾಮಾಜಿಕ ಹೋರಾಟಗಾರರ ವಿರುದ್ಧ ಸರಕಾರ ಹಿಂದೆಂದಿಗಿಂತಲೂ ಹೆಚ್ಚು ಅಸಹಿಷ್ಣುವಾಗಿದೆ. ಸರಕಾರದ ವಿರುದ್ಧದ ದನಿಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಮಾಡುತ್ತಾ ಬರಲಾಗುತ್ತಿದೆ. ದೇಶದಲ್ಲಿ ಯಾರೆಲ್ಲಾ ಸರಕಾರದ ವಿರುದ್ಧ ಗಟ್ಟಿಯಾಗಿ ಮಾತನಾಡುತ್ತಿದ್ದರು ಅವರನ್ನು ಬಂಧಿಸುವ ಮೂಲಕ ಅವರ ಬಾಯಿ ಮುಚ್ಚಿಸುವ ವಿಫಲ ಯತ್ನ ಸರಕಾರದ್ದು. ಆದರೆ, ಸಾಮಾಜಿಕ ಹೋರಾಟಗಾರರ ಬಾಯನ್ನು ಪೂರ್ತಿಯಾಗಿ ಮುಚ್ಚಿಸಲು ಸರಕಾರಕ್ಕೆ ಸಾಧ್ಯವಿಲ್ಲ.

ಸಮಾಚಾರ: ಭೀಮಾಕೋರೆ ಗಾಂವ್‌ ಗಲಭೆ ಪ್ರಕರಣ ಹಾಗೂ ಮೋದಿ ಹತ್ಯೆ ಸಂಚಿನ ಆರೋಪಗಳನ್ನು ಪುಣೆ ಪೊಲೀಸರು ತಳುಕು ಹಾಕಿದ್ದಾರಲ್ಲಾ, ಭೀಮಾಕೋರೆ ಗಾಂವ್‌ ವಿಜಯೋತ್ಸವದಲ್ಲಿ ನಿಜಕ್ಕೂ ನಡೆದಿದ್ದು ಏನು?

ಕೋಲ್ಸೆ ಪಾಟೀಲ್‌: ಭೀಮಾಕೋರೆ ಗಾಂವ್‌ ವಿಜಯೋತ್ಸವ ಸಂಘಟಿಸಿದವರಲ್ಲಿ ನಾನೂ ಒಬ್ಬ. ದೇಶದ ವಿವಿಧ ಭಾಗದಿಂದ ಹೋರಾಟಗಾರರನ್ನು ಪುಣೆಯ ಶನಿವಾರ್‌ ವಾಡಕ್ಕೆ ಕರೆಸಲಾಗಿತ್ತು. ಅಲ್ಲಿ ‘ಭಾರತವನ್ನು ಆರ್‌ಎಸ್‌ಎಸ್‌ ಮುಕ್ತವಾಗಿಸಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು’ ಎಂಬ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಇದನ್ನು ಈ ಮನುವಾದಿ ಸರಕಾರ ಸಹಿಸಲಿಲ್ಲ. ಹೀಗಾಗಿ ಮನುವಾದಿಗಳು ಒಟ್ಟಾಗಿ ಗಲಭೆ ಸೃಷ್ಟಿಸಿ, ಮೋದಿ ಹತ್ಯೆ ಎಂಬ ನಾಟಕ ರಚಿಸಿ ಅದರಲ್ಲಿ ಸಾಮಾಜಿಕ ಹೋರಾಟಗಾರನ್ನು ಸಿಲುಕಿಸುವ ಪ್ರಯತ್ನ ನಡೆಸಿದರು. ಮನುವಾದಿ ಸರಕಾರದಲ್ಲಿರುವವರು ಮೊದಲು ಸಾಮಾಜಿಕ ಹೋರಾಟಗಾರರನ್ನು ನಿರ್ಲಕ್ಷ್ಯಿಸಿದರು. ಆದರೆ, ಆ ನಿರ್ಲಕ್ಷ್ಯವನ್ನೂ ಮೀರಿ ನಮ್ಮ ಮಾತು ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗೊತ್ತಾದಾಗ ನಮ್ಮ ಬಾಯಿ ಮುಚ್ಚಿಸುವ ಕೆಲಸಕ್ಕೆ ಕೈ ಹಾಕಿದರು.

ಸರಕಾರ ನಮ್ಮ ಬಾಯಿ ಮುಚ್ಚಿಸುವ ಮೊದಲೇ ಮನುವಾದಿಗಳು ಸಾಮಾಜಿಕ ಹೋರಾಟಗಾರ ಜೀವವನ್ನೇ ತೆಗೆಯುವ ಕೆಲಸಕ್ಕೆ ಕೈಹಾಕಿದರು. ಪಾನ್ಸಾರೆ, ಕಲಬುರ್ಗಿ, ದಾಬೋಲ್ಕರ್‌, ಗೌರಿ ಲಂಕೇಶ್‌ – ಹೀಗೆ ಯಾರೆಲ್ಲಾ ಮನುವಾದಿಗಳನ್ನು ತೀವ್ರವಾಗಿ ಟೀಕಿಸುತ್ತಿದ್ದರೋ ಅವರ ಪ್ರಾಣ ತೆಗೆಯಲಾಯಿತು. ಇನ್ನುಳಿದವರನ್ನು ಮಟ್ಟಹಾಕಬೇಕೆಂದು ಈಗ ನೇರವಾಗಿ ಸರಕಾರವೇ ಆ ಕೆಲಸಕ್ಕೆ ಇಳಿದಿದೆ. ಸಾಮಾಜಿಕ ಹೋರಾಟಗಾರರನ್ನು ಹೊಸಕಲು ಸರಕಾರಕ್ಕೆ ಸಿಕ್ಕ ಅವಕಾಶ ಭೀಮಾಕೋರೆ ಗಾಂವ್‌.

ಸಮಾಚಾರ: ಕಾರ್ಪೊರೇಟ್‌ ಶಕ್ತಿ ಇಂದು ಸರಕಾರವನ್ನೂ ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಕಾರ್ಪೊರೇಟ್‌ಗಳು ಇಂದು ಎಲ್ಲವನ್ನೂ ಆಕ್ರಮಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಕಾರ್ಪೊರೇಟ್‌ ಶಕ್ತಿಗಳನ್ನು ಎದುರಿಸುವ ಸವಾಲು ಎಂಥದ್ದು?

ಕೋಲ್ಸೆ ಪಾಟೀಲ್‌: ತಾನೂ ಕ್ಯಾಪಿಟಲಿಸ್ಟ್‌ ಆಗಿರುವ ಸರಕಾರ ಕಾರ್ಪೊರೇಟ್‌ ಕಂಪೆನಿಗಳಿಗೆ ಬೇಕಾದಂತೆ ತನ್ನ ನೀತಿ ನಿರೂಪಣೆಗಳನ್ನು ಬದಲಿಸಿಕೊಳ್ಳುತ್ತಿದೆ. ದೇಶದ ಬ್ಯಾಂಕ್‌ಗಳಲ್ಲಿ, ಎಲ್‌ಐಸಿಯಲ್ಲಿ ಇರುವ ಜನ ಸಾಮಾನ್ಯರ ಠೇವಣಿಯ ಹಣವನ್ನು ಕಾರ್ಪೊರೇಟ್‌ ಕಂಪೆನಿಗಳು, ಉದ್ಯಮಿಗಳು ಲೂಟಿ ಮಾಡಲು ಸರಕಾರವೇ ಅನುಕೂಲ ಮಾಡಿಕೊಡುತ್ತಿದೆ. ಜಿಎಸ್‌ಟಿ, ನೋಟುರದ್ಧತಿ ಹೆಸರಿನಲ್ಲಿ ಜನರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಈಡು ಮಾಡಿದ ಸರಕಾರ ಕಾರ್ಪೊರೇಟ್‌ ಕಳ್ಳರು ದೇಶ ಬಿಟ್ಟು ಹೋದರೂ ಕೈ ಕಟ್ಟಿ ಕುಳಿತಿದೆ. ಹಿಂದೆ ಇದ್ದ ಕಾಂಗ್ರೆಸ್‌ ಸರಕಾರದ ವೇಳೆಯೇ ಹಗರಣಗಳು ನಡೆದಿದ್ದರೂ ಅದನ್ನು ತಡೆಯುವುದು ಈ ಸರಕಾರದ ಕರ್ತವ್ಯವಾಗಬೇಕಿತ್ತು. ಆ ಕರ್ತವ್ಯವನ್ನು ಈ ಸರಕಾರ ನಿಭಾಯಿಸಲಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್‌ ಪಕ್ಷವೇನೂ ಪೂರ್ತಿ ಸಾಚಾ ಅಲ್ಲ. ಆದರೆ, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಪರವಾಗಿಲ್ಲ.

ಈ ಹೊತ್ತು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೊರೇಟ್‌ ಪ್ರಭಾವ ಹೆಚ್ಚಾಗಿದೆ. ಬ್ಯಾಂಕ್‌ಗಳಿಂದ ಹಿಡಿದು ಮಾಧ್ಯಮಗಳವರೆಗೂ ಕಾರ್ಪೊರೇಟ್‌ ಶಕ್ತಿಗಳು ಎಲ್ಲವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ಆದರೆ, ಮಾಧ್ಯಮ ಸಂಸ್ಥೆಗಳು ಅವರ ಕೈಯಲ್ಲಿವೆ ಎಂದು ನಾವು ಮಾತನಾಡುವುದನ್ನೇ ನಿಲ್ಲಿಸಬಾರದು. ನಾವು ಜನರಲ್ಲಿ ಜಾಗೃತಿ ಮೂಡಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹಿಂದುತ್ವವನ್ನು ಹೇರುತ್ತಿರುವ ಸರಕಾರ ಹಾಗೂ ಪ್ರಾಕೃತಿಕ ಸಂಪತ್ತನ್ನು ದೋಚುತ್ತಿರುವ ಕಾರ್ಪೊರೇಟ್ ಕಂಪೆನಿಗಳು ನಮ್ಮ ಮುಂದೆ ಶತ್ರುಗಳಂತೆ ನಿಂತಿವೆ. ಈ ಮನುವಾದಿ ಹಾಗೂ ಮನಿವಾದಿಗಳೇ ಭಾರತ ದೇಶಕ್ಕೆ ದೊಡ್ಡ ಅಪಾಯ. ಶತ್ರು ನಮಗಿಂತಲೂ ಹೆಚ್ಚು ಶಕ್ತಿಯುತವಾಗಿದ್ದಾನೆ ಎಂಬ ಕಾರಣಕ್ಕೆ ನಾವು ಹೋರಾಟದಿಂದ ಹಿಂದೆ ಹೋಗಬಾರದು. ಸತ್ಯವನ್ನು ಬಹಿರಂಗ ಪಡಿಸುತ್ತಲೇ ಹೋಗಬೇಕು. ಮನುವಾದಿ, ಮನಿವಾದಿಗಳಿಂದ ದೇಶಕ್ಕೆ ಒದಗಿರುವ ಅಪಾಯದ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸಬೇಕು.

ಮಹಾರಾಷ್ಟ್ರದ ಸಭೆಯೊಂದರಲ್ಲಿ ಮಾತನಾಡುತ್ತಿರುವ ಕೋಲ್ಸೆ ಪಾಟೀಲ್
ಮಹಾರಾಷ್ಟ್ರದ ಸಭೆಯೊಂದರಲ್ಲಿ ಮಾತನಾಡುತ್ತಿರುವ ಕೋಲ್ಸೆ ಪಾಟೀಲ್

ಸಮಾಚಾರ: ಇವತ್ತಿನ ಸಾಮಾಜಿಕ, ರಾಜಕೀಯ ಸಂದರ್ಭವನ್ನು ನೋಡಿದರೆ ಪ್ರತಿಭಟನೆ, ಸತ್ಯಾಗ್ರಹ, ಹೋರಾಟಗಳ ಭವಿಷ್ಯದ ಬಗ್ಗೆ ನಿಮ್ಮ ಭರವಸೆ ಏನು?

ಕೋಲ್ಸೆ ಪಾಟೀಲ್‌: ಇವತ್ತಿನ ಪರಿಸ್ಥಿತಿ ಕೆಟ್ಟದಾಗಿದೆ. ಆದರೆ, ನಾಳೆಯ ಬಗ್ಗೆ ಭರವಸೆ ಕಳೆದುಕೊಳ್ಳುವುದು ಬೇಡ. ಮುಂಬೈ ಸಮೀಪ ಅಂಬಾನಿ ಕಂಪೆನಿ ಸುಮಾರು 45 ಗ್ರಾಮಗಳ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಅಲ್ಲಿ ಮತ್ತೊಂದು ಮುಂಬೈ ನಿರ್ಮಿಸಲು ಹೊರಟಿತ್ತು. ಪುಣೆ ಸಮೀಪದಲ್ಲಿ ಡೌ ಕೆಮಿಕಲ್‌ ಕಂಪೆನಿ ರಸಾಯನಿಕ ಕಾರ್ಖಾನೆ ತೆರೆಯಲು ಮುಂದಾಗಿತ್ತು. ಈ ಎರಡೂ ಜೀವ ವಿರೋಧಿ ಯೋಜನೆಗಳನ್ನು ಬುಡ ಸಮೇತ ಕಿತ್ತು ಹಾಕಿದ್ದು ನಮ್ಮ ಹೋರಾಟದ ಗೆಲುವು. ತಳಮಟ್ಟದಲ್ಲಿ ಜನರನ್ನು ಸಂಘಟಿಸಿ, ಜನರಲ್ಲಿ ಎಚ್ಚರ ಮೂಡಿಸಿದರೆ ಅರ್ಧ ಹೋರಾಟ ಗೆದ್ದಂತೆ.

ಆದರೆ, ನಾನು ಅಬ್ರಾಹ್ಮಣ ಎಂಬ ಕಾರಣಕ್ಕೆ ನಮ್ಮ ಚಳವಳಿ, ಹೋರಾಟಗಳಿಗೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹೆಚ್ಚು ಸ್ಥಾನ ಸಿಗುತ್ತಿಲ್ಲ. ಹಾಗೆಂದು ನಾವು ಭವಿಷ್ಯದ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳುವ ಅಗತ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು ಆಸಕ್ತಿ ಇರುವ ಸಮಾನ ಮನಸ್ಕರು ಸಿಕ್ಕರೆ ಹೋರಾಟವನ್ನು ಮುನ್ನಡೆಸಿಕೊಂಡು ಹೋಗಬಹುದು. ಸಮಾಜದ ಕಾಳಜಿಯೇ ಮುಖ್ಯವಾದ ಸ್ವಾರ್ಥವಿಲ್ಲದ ಹೋರಾಟಕ್ಕೆ ಯಾವಾಗಲೂ ಜಯ ಇದ್ದೇ ಇರುತ್ತದೆ.

ಸಮಾಚಾರ: ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸುಪ್ರೀಂಕೋರ್ಟ್‌ನ ನಾಲ್ಕು ಮಂದಿ ನ್ಯಾಯಮೂರ್ತಿಗಳೇ ಸಿಡಿದೆದ್ದಿದ್ದರು. ಅವರಲ್ಲೊಬ್ಬರು ಈಗ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ್ದಾರೆ. ಈ ಹೊತ್ತಿನ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಿಮಗೇನನ್ನಿಸುತ್ತಿದೆ?

ಕೋಲ್ಸೆ ಪಾಟೀಲ್‌: ನ್ಯಾಯಾಂಗದೊಳಗಿನ ಅವ್ಯವಸ್ಥೆಯನ್ನು ಸಹಿಸಲಾರದೆ ನಾಲ್ಕು ಮಂದಿ ಬಹಿರಂಗವಾಗಿ ಮಾತನಾಡಿದ್ದು ಐತಿಹಾಸಿಕ ಎನಿಸುವಂಥ ಬೆಳವಣಿಗೆ. ಆದರೆ, ಇಡೀ ವ್ಯವಸ್ಥೆಯೇ ಕಲುಷಿತಗೊಂಡಿದೆ. ಆಗ ಸಿಡಿದೆದ್ದಿದ್ದವರ ಪೈಕಿ ಗೊಗೋಯಿ ಈಗ ಸಿಜೆಐ ಆಗಿದ್ದಾರೆ. ಅವರೂ ಕಲುಷಿತ ವ್ಯವಸ್ಥೆಯೊಳಗೇ ಇದ್ದಾರೆ. ಅವರು ಸಿಜೆಐ ಆದ ಮಾತ್ರಕ್ಕೆ ಇಡೀ ವ್ಯವಸ್ಥೆ ಬದಲಾಗುವುದಿಲ್ಲ. ಪ್ರಮುಖ ತೀರ್ಮಾನಗಳನ್ನು ಅವರು ನಿಸ್ಪಕ್ಷಪಾತವಾಗಿ, ನ್ಯಾಯಸಮ್ಮತವಾಗಿ ನೀಡಬಹುದೆಂಬ ನಿರೀಕ್ಷೆ ಇದೆ. ಆದರೆ, ಹಾಳಾಗಿರುವ ಈ ವ್ಯವಸ್ಥೆಯೊಳಗೆ ಒಬ್ಬ ಸಿಜೆಐ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ.

ಸಮಾಚಾರ: 2019ರ ಲೋಕಸಭಾ ಚುನಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಕೋಲ್ಸೆ ಪಾಟೀಲ್‌: ರಾಮಮಂದಿರ ನಿರ್ಮಾಣ, ದಾವೂದ್‌ ಇಬ್ರಾಹಿಂನನ್ನು ಭಾರತಕ್ಕೆ ಕರೆ ತರುವುದು, ಪಾಕಿಸ್ತಾನದ ಮೇಲೆ ಯುದ್ಧ ಸಾರುವುದು, ಕಾಶ್ಮೀರ ಗಲಭೆ, ಇವಿಎಂ ಯಂತ್ರಗಳ ದುರ್ಬಳಕೆ – ಈ ವಿಷಯಗಳನ್ನು ಇಟ್ಟುಕೊಂಡು ಮತ್ತೆ ಬಿಜೆಪಿ 2019ರಲ್ಲಿ ಅಧಿಕಾರಕ್ಕೆ ಬರಬಹುದು. ಮೋದಿ ಎಂಬ ಕೊಲೆಗಾರನನ್ನು ಇಟ್ಟುಕೊಂಡು ಬಿಜೆಪಿ ಮತ್ತೆ ಚುನಾವಣೆಯಲ್ಲಿ ಗೆಲ್ಲಬಹುದು.

ಹಾಗೆಂದು ನಮ್ಮ ಹೋರಾಟದ ಬಗ್ಗೆ ಭ್ರಮನಿರಸನರಾಗುವ ಅಗತ್ಯವಿಲ್ಲ. ನಮ್ಮ ಹೋರಾಟಕ್ಕೆ ಇಂದಿಲ್ಲಾ ನಾಳೆ ಗೆಲುವು ಸಿಕ್ಕೇ ಸಿಗುತ್ತದೆ. ದೇಶದಲ್ಲಿ ಸುಮಾರು ಶೇಕಡ 75ರಷ್ಟು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿಚಾರಣೆಯೇ ಇಲ್ಲದೆ ಜೈಲುಗಳಲ್ಲಿ ಹತ್ತಾರು ವರ್ಷಗಳಿಂದ ಕೊಳೆಯುತ್ತಿದ್ದಾರೆ. ಇದರಿಗೆ ನ್ಯಾಯ ಕೊಡಿಸಬೇಕಿದೆ. ದಲಿತರ, ದಮನಿತರ ಪರವಾಗಿ ನಿಂತು ಹೋರಾಟಗಳನ್ನು ರೂಪಿಸಬೇಕಿದೆ. ಜನರಿಗೆ ತಾವು ಇರುವ ಸನ್ನಿವೇಶ ಎಂಥದ್ದು ಎಂಬುದನ್ನು ಮನವರಿಕೆ ಮಾಡಿದರೆ ಈ ಮನುವಾದಿಗಳ ಶಕ್ತಿ ನಿಧಾನವಾಗಿಯಾದರೂ ಕುಸಿಯುತ್ತದೆ. ನಾಳೆಯ ಬಗ್ಗೆ ಭರವಸೆ ಕಳೆದುಕೊಳ್ಳಬೇಕಾಗಿಲ್ಲ.