samachara
www.samachara.com
ಕಾವೇರಿದ ಸಂಪುಟ ವಿಸ್ತರಣೆ ಕಸರತ್ತು; ಅಮಾವಾಸೆ ಬಳಿಕ ಯಾರಿಗೆಲ್ಲಾ ‘ವಿಜಯ’ ದಶಮಿ?
COVER STORY

ಕಾವೇರಿದ ಸಂಪುಟ ವಿಸ್ತರಣೆ ಕಸರತ್ತು; ಅಮಾವಾಸೆ ಬಳಿಕ ಯಾರಿಗೆಲ್ಲಾ ‘ವಿಜಯ’ ದಶಮಿ?

ಸಮ್ಮಿಶ್ರ ಸರಕಾರ ಪತನವೇ ಆಗುತ್ತದೆ ಎಂಬಂತಹ ‘ಕೃತಕ ಸನ್ನಿವೇಶ’ ಸೃಷ್ಟಿಯಾಗಿದ್ದ ರಾಜ್ಯದಲ್ಲಿ ಈಗ ಸಂಪುಟ ವಿಸ್ತರಣೆಯ ಕಸರತ್ತು ಕಾವು ಪಡೆದುಕೊಳ್ಳುತ್ತಿದೆ.

Team Samachara

ಸೆಪ್ಟೆಂಬರ್‌ ಮಧ್ಯಂತರದ ವೇಳೆಗೇ ರಾಜ್ಯ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ಆಗುತ್ತದೆ ಎಂಬ ಸುದ್ದಿಗಳು ಸುಳ್ಳಾಗಿವೆ. ಸಮ್ಮಿಶ್ರ ಸರಕಾರ ಪತನವೇ ಆಗುತ್ತದೆ ಎಂಬಂತಹ ‘ಕೃತಕ ಸನ್ನಿವೇಶ’ ಸೃಷ್ಟಿಯಾಗಿದ್ದ ರಾಜ್ಯದಲ್ಲಿ ಈಗ ಸಂಪುಟ ವಿಸ್ತರಣೆಯ ರಾಜಕೀಯ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದೆ.

ಅಕ್ಟೋಬರ್‌ 10ಕ್ಕೆ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳಿದ್ದರೂ ಅದಿನ್ನೂ ಅಧಿಕೃತವಾಗಿಲ್ಲ. 10ರ ಬುಧವಾರದ ‘ಶುಭಲಗ್ನ’ದಲ್ಲಿ ನಾಲ್ಕರಿಂದ ಆರು ಮಂದಿ ಶಾಸಕರು ಸಚಿವರಾಗಿ ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬ ಸುದ್ದಿ ಇನ್ನೂ ಬಹಿರಂಗಗೊಂಡಿಲ್ಲ.

ಮೊದಲು ನಿಗಮ, ಮಂಡಳಿಗಳಿಗೆ ನೇಮಕ ಮುಗಿಸಿ ಬಳಿಕ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಂಬಂಧ ಕಾಂಗ್ರೆಸ್ ಒಲವು ತೋರಿದೆ ಎನ್ನಲಾಗುತ್ತಿದೆ. ಸುಮಾರು 20ರಿಂದ 25 ಮಂದಿ ಶಾಸಕರನ್ನು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಕೂರಿಸಿದರೆ ಸಹಜವಾಗಿಯೇ ಅಧಿಕಾರ ಸಿಗದ ಅಸಮಾಧಾನ ತಣಿದಂತಾಗುತ್ತದೆ. ಆ ಬಳಿಕ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಯನ್ನು ಹೈ ಕಮಾಂಡ್‌ಗೆ ಕಳಿಸಲು ಪಕ್ಷ ನಿರ್ಧರಿಸಿದೆ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ಆದರೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರೆಲ್ಲಾ ಹೊರ ಹೋಗುತ್ತಾರೆ, ಯಾರೆಲ್ಲಾ ಸಂಪುಟ ಸೇರುತ್ತಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಲೇ ಇವೆ. ಕಾಂಗ್ರೆಸ್‌ನಲ್ಲಿ ಬಂಡಾಯ ಏಳಲಿದ್ದಾರೆ ಎನ್ನಲಾಗಿದ್ದ ಶಾಸಕರು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಪದೇ ಪದೇ ಭೇಟಿಯಾಗುತ್ತಲೇ ಇದ್ದಾರೆ. ಆದರೆ, ಸಿದ್ದರಾಮಯ್ಯ ಯಾರಿಗೂ ಯಾವುದೇ ಗಟ್ಟಿ ಭರವಸೆ ನೀಡಿಲ್ಲ ಎನ್ನಲಾಗಿದೆ.

ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಆದರೆ, ಯಾರು ಯಾರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬ ಗುಟ್ಟನ್ನು ಇನ್ನೂ ಕೈ ಪಾಳಯ ಬಿಟ್ಟುಕೊಟ್ಟಿಲ್ಲ. ಕೈ ಹೈಕಮಾಂಡ್‌ ಅಂತಿಮ ಪಟ್ಟಿ ಬಿಡುಗಡೆ ಮಾಡುವವರೆಗೂ ಈ ಗುಟ್ಟನ್ನು ಕಾಯ್ದುಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

ಕಾಂಗ್ರೆಶ್‌ ಶಾಸಕರಾದ ಸುಧಾರಕ್‌, ಎಂಟಿಬಿ ನಾಗರಾಜ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಜೋರಾಗಿವೆ. ಇತ್ತ ಜೆಡಿಎಸ್‌ನಲ್ಲಿ ತೋಟಗಾರಿಕಾ ಸಚಿವ ಎಂ.ಸಿ. ಮನಗುಳಿ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಮಾತುಗಳಿವೆ. ಎನ್‌. ಮಹೇಶ್‌ ಅವರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿ.ಟಿ. ದೇವೇಗೌಡ ಅವರಿಂದ ಉನ್ನತ ಶಿಕ್ಷಣ ಖಾತೆಗಳನ್ನು ಕಿತ್ತು ಬಸವರಾಜ ಹೊರಟ್ಟಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅವರಿಗೆ ಈ ಎರಡೂ ಖಾತೆಗಳ ಹೊಣೆ ನೀಡಲಾಗುತ್ತದೆ ಎನ್ನಲಾಗಿದೆ.

ಎನ್‌. ಮಹೇಶ್‌ ಮತ್ತು ಜಿ.ಟಿ. ದೇವೇಗೌಡ ತಮಗೆ ನೀಡಿರುವ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂಬ ಮಾತುಗಳು ಜೆಡಿಎಸ್‌ ವಲಯದಲ್ಲಿವೆ. ಹೀಗಾಗಿ ಈ ಎರಡೂ ಖಾತೆಗಳನ್ನು ಹೊರಟ್ಟಿ ಹೆಗಲಿಗೆ ಹೊರಿಸಿ ತೋಟಗಾರಿಕೆ ಖಾತೆಯನ್ನು ಮಹೇಶ್ ಅಥವಾ ಜಿ.ಟಿ. ದೇವೇಗೌಡರಿಗೆ ನೀಡಲಾಗುತ್ತದೆ ಎಂಬ ಮಾತುಗಳಿವೆ.

ಆದರೆ, ಖಾತೆ ಅದಲು ಬದಲು ದೊಡ್ಡ ಪ್ರಮಾಣದಲ್ಲಿ ಆಗುತ್ತದೆಯೋ ಅಥವಾ ತೋಟಗಾರಿಕೆ, ಶಿಕ್ಷಣಕ್ಕೆ ಮಾತ್ರ ಸೀಮಿತವಾಗಲಿದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ರಾಣೇಬೆನ್ನೂರಿನಿಂದ ಆಯ್ಕೆಯಾಗಿರುವ ಆರ್‌. ಶಂಕರ್‌ ಅವರನ್ನೂ ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಮಾಹಿತಿ ಇದೆ. ಆದರೆ, ಸರಕಾರದ ಮಟ್ಟದಲ್ಲಿ ಇನ್ನೂ ಯಾವುದೂ ಅಂತಿಮವಾದಂತಿಲ್ಲ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಆರ್‌. ಶಂಕರ್‌, ಎನ್‌. ಮಹೇಶ್‌, ಎಂ.ಸಿ. ಮನಗೂಳಿ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಮಹೇಶ್‌ ಮತ್ತು ಶಂಕರ್‌ ಅವರ ಮೊಬೈಲ್‌ ನಂಬರ್‌ಗಳು ನಾಟ್‌ ರೀಚಬಲ್‌ ಆಗಿದ್ದರೆ, ಮನಗೂಳಿ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ.

ಇತ್ತ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಹಾಗೂ ಯಾರಿಗೆ ಯಾವ ಖಾತೆ ಎಂಬುದನ್ನು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಲಿದೆ ಎನ್ನಲಾಗಿದೆ. ಸಮನ್ವಯ ಸಮಿತಿಯು ಈ ವಿಚಾರದ ಅಂತಿಮ ನಿರ್ಧಾರವನ್ನು ಕೈ ಹೈಕಮಾಂಡ್‌ಗೆ ಬಿಟ್ಟಿದೆ. ಆದರೆ, ಬಂಡಾಯದಿಂದ ಸುದ್ದಿಯಲ್ಲಿದ್ದವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮಣೆ ಹಾಕಲಿದೆಯೋ ಅಥವಾ ನಿರೀಕ್ಷೆ ಮೀರಿದ ತಿರ್ಮಾನವನ್ನು ಪ್ರಕಟಿಸಲಿದೆಯೋ ಎಂಬುದು ಮುಂದಿನ ವಾರದೊಳಗೆ ಗೊತ್ತಾಗಲಿದೆ.

ಮಹಾಲಯ ಅಮಾವಾಸೆ ಅಡ್ಡಿ:

ಮಹಾಲಯ ಅಮಾವಾಸೆಗೂ ಮುನ್ನಾ ಸಂಪುಟ ವಿಸ್ತರಣೆ ಸಾಧ್ಯತೆ ಇಲ್ಲವೇ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಮಹಾಲಯ ಅಮಾವಾಸೆ ಸಂದರ್ಭದಲ್ಲಿ ಶುಭ ಕಾರ್ಯಗಳು ನಡೆಯುವುದು ಕಡಿಮೆ. ಆಚಾರಗಳನ್ನು ಹೆಚ್ಚಾಗಿ ನಂಬುವ ಜೆಡಿಎಸ್‌ ಪ್ರಮುಖರು ಮಹಾಲಯ ಅಮಾವಾಸೆ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಮುಂದಾಗುವ ಸಾಧ್ಯತೆ ಇಲ್ಲ. ಹೀಗಾಗಿ ಅಮಾವಾಸೆ ನಂತರ ಹಾಗೂ ವಿಜಯದಶಮಿ ಹಿಂದೆ ಮುಂದೆ ಸಂಪುಟ ವಿಸ್ತರಣೆ ಖಚಿತ ಎನ್ನಲಾಗುತ್ತಿದೆ. ಆದರೆ, ಮುಂದಿನ ಬುಧವಾರವೇ ಸಂಪುಟ ವಿಸ್ತರಣೆಯಾಗಲಿದೆಯೇ ಅಥವಾ ಆಕಾಂಕ್ಷಿಗಳು ಸಂಪುಟ ಸೇರಲು ಇನ್ನಷ್ಟು ದಿನಗಳು ಕಾಯಬೇಕೋ ಎಂಬುದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ.