ಇಂಧನ ಬೆಲೆ ಇಳಿಕೆ; ಬೆನ್ನಲ್ಲೇ ಹೊರಬಿದ್ದ ಸಮೀಕ್ಷೆ: ಇದು ಗುರುವಾರ ನಡೆದ ‘ಪ್ರೈಂ ಟೈಮ್ ಮ್ಯಾನೇಜ್‌ಮೆಂಟ್’!
COVER STORY

ಇಂಧನ ಬೆಲೆ ಇಳಿಕೆ; ಬೆನ್ನಲ್ಲೇ ಹೊರಬಿದ್ದ ಸಮೀಕ್ಷೆ: ಇದು ಗುರುವಾರ ನಡೆದ ‘ಪ್ರೈಂ ಟೈಮ್ ಮ್ಯಾನೇಜ್‌ಮೆಂಟ್’!

ಎಲ್ಲಾ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ತಯಾರಾಗಿದ್ದು ‘ಪ್ರೈಂ ಟೈಂ ಮ್ಯಾನೇಜ್‌ಮೆಂಟ್’ ತಂತ್ರಗಾರಿಕೆ; ಅದು ನಡೆದು ಹೋಗಿದ್ದು ಗುರುವಾರ.

ಪೂರ್ಣಾವಧಿ ಪೂರೈಸುವ ಪ್ರತಿ ಸರಕಾರವೂ ಚುನಾವಣೆ ಹೊಸ್ತಿಲಿನಲ್ಲಿ ನಿಂತಾಗ ಅನುಭವಿಸುವ ಆಡಳಿತ ವಿರೋಧಿ ಅಲೆಯನ್ನು ಕೇಂದ್ರ ಸರಕಾರ ಅನುಭವಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ಪಕ್ಷ, ದಿನಗಳೆದಂತೆ ಜನಾಭಿಪ್ರಾಯವನ್ನು ಕಳೆದುಕೊಳ್ಳುತ್ತಿದೆ. ಜತೆಗೆ, ಕಳೆದ ಒಂದು ತಿಂಗಳ ಅಂತರದಲ್ಲಿ ನಡೆದ ಇಂಧನ ಬೆಲೆ ಏರಿಕೆ ಸರಕಾರಕ್ಕೆ ಮತ್ತಷ್ಟು ಮುಜುಗರ ತಂದಿತ್ತು. ಇಂತಹ ಎಲ್ಲಾ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ತಯಾರಾಗಿದ್ದು ‘ಪ್ರೈಂ ಟೈಂ ಮ್ಯಾನೇಜ್‌ಮೆಂಟ್’ ತಂತ್ರಗಾರಿಕೆ; ಅದು ನಡೆದು ಹೋಗಿದ್ದು ಗುರುವಾರ.

ಬಿಜೆಪಿ ಹಾಗೂ ಸಂಘ ಪರಿವಾರದ ಆಂತರಿಕ ಮೂಲಗಳು ನೀಡುವ ಮಾಹಿತಿ ಪ್ರಕಾರ, “ಇಂಧನ ಬೆಲೆ ಇಳಿಕೆ ಬೆನ್ನಿಗೇ ಸರಕಾರದ ಕುರಿತು ಸದಾಭಿಪ್ರಾಯ ಹೊಂದಿರುವ ಸಮೀಕ್ಷೆಯ ಬಿಡುಗಡೆ ಕೇಂದ್ರ ಸರಕಾರದ ಬಗೆಗೆ ಜನರ ಆಶಯವನ್ನು ಪುನರ್ ಸ್ಥಾಪಿಸಿದೆ.”

ಏನಿದು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮುನ್ನ, ಗುರುವಾರ ಮಧ್ಯಾಹ್ನದ ನಂತರ ದಿಲ್ಲಿ ಕೇಂದ್ರವಾಗಿಟ್ಟುಕೊಂಡು ನಡೆದ ಬೆಳವಣಿಗೆಗಳನ್ನು ಗಮನಿಸಬೇಕಿದೆ. ಮೂರು ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಘೋಷಣೆ ಮಾಡಿದರು. ಜತೆಗೆ ರಾಜ್ಯ ಸರಕಾರಗಳೂ ತಮ್ಮ ಮೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು. ಕೇಂದ್ರ ಸಚಿವರ ಘೋಷಣೆ ಬೆನ್ನಿಗೇ ಬಿಜೆಪಿ ಆಡಳಿತವಿರುವ ಗೋವಾ, ಮಹಾರಾಷ್ಟ್ರ, ರಾಜಸ್ತಾನ, ಮಣಿಪುರ ಸೇರಿದಂತೆ 8 ರಾಜ್ಯಗಳು ಇಂಧನಗಳ ಮೇಲಿನ ತೆರಿಗೆ ಕಡಿತಗೊಳಿಸುವ ಘೋಷಣೆ ಮಾಡಿದವು. ಈ ಮೂಲಕ ಕಳೆದ ತಿಂಗಳ ಅಂತರದಲ್ಲಿ ಏರುಗತಿಯಲ್ಲೇ ಇದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಮುಖದ ಶುಭ ಸೂಚನೆಯನ್ನು ಕೇಂದ್ರ ಸರಕಾರ ದೇಶವಾಸಿಗಳಿಗೆ ರವಾನಿಸಿತು.

ಕೇಂದ್ರದ ಸುಂಕ ಕಡಿತ ತೀರ್ಮಾನವನ್ನು ಕೇಂದ್ರ ಸಚಿವರುಗಳು ಸ್ವಾಗತಿಸಿದರು. ‘ಇದೊಂದು ಜನಪರ ತೀರ್ಮಾನ’ ಎಂದು ಬಣ್ಣಿಸಿದರು. ದೇಶ ಬೆಲೆ ಇಳಿಕೆ ಸುತ್ತ ಚರ್ಚೆಯಲ್ಲಿ ಮುಳುಗಿತ್ತು. ಈ ಸಮಯದಲ್ಲಿ ಹೊರಬಿತ್ತು ಸಿ- ವೋಟರ್ ಸಮೀಕ್ಷೆ.

ಸಮೀಕ್ಷೆ ಹೇಳಿದ್ದೇನು?:

‘ದೇಶ್ ಕಾ ಮೂಡ್’ ಹೆಸರಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ಸಿ- ವೋಟರ್ ಸಮೀಕ್ಷೆ ಗುರುವಾರ ಪ್ರೈಂ ಟೈಂಗೆ ಸರಿಯಾಗಿ ಬಿಡುಗಡೆ ಮಾಡಿತು. ಎನ್‌ಡಿಎ ಮೈತ್ರಿ ಕೂಟ 276 ಸ್ಥಾನಗಳನ್ನು, ಯುಪಿಎ ಮೈತ್ರಿಕೂಟ 112 ಸ್ಥಾನಗಳನ್ನು ಹಾಗೂ ಇತರೆ 155 ಲೋಕಸಭಾ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂಬುದು ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿತ್ತು.

ಹೆಚ್ಚು ಕಡಿಮೆ ಇಂತಹದ್ದೇ ಜನಾಭಿಪ್ರಾಯದ ಸಮೀಕ್ಷೆಯೊಂದು ಈ ವರ್ಷದ ಆರಂಭದಲ್ಲಿ ‘ಲೋಕನೀತಿ-ಸಿಎಸ್‌ಡಿಎಸ್‌-ಎಬಿಪಿ’ಗಳು ಮುಂದಿಟ್ಟಿದ್ದವು. ಜನವರಿ ತಿಂಗಳಿನಲ್ಲಿ ಹೊರಬಿದ್ದಿದ್ದ ಸಮೀಕ್ಷೆ ಸಾರಾಂಶದಲ್ಲಿ ಶೇ. 47ರಷ್ಟು ಜನ ಮೋದಿ ಸರಕಾರ ಮತ್ತೆ ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಹಿಂದಿನ ಯುಪಿಎ ಸರಕಾರ ತನ್ನ ಕೊನೆಯ ದಿನಗಳಲ್ಲಿ ಹೊಂದಿದ್ದ ಆಡಳಿತ ವಿರೋಧಿ ಅಲೆಯಷ್ಟೇ, ಈಗಿನ ಮೋದಿ ನೇತೃತ್ವದ ಸರಕಾರ ಕೂಡ ಸದಾಭಿಪ್ರಾಯ ಕಳೆದುಕೊಂಡಿದೆ ಎಂದು ಸಮೀಕ್ಷೆ ಹೇಳಿತ್ತು. ಈ ಸಮೀಕ್ಷೆಯನ್ನೂ ಕೂಡ ‘ದೇಶ್‌ ಕ ಮೂಡ್’ ಎಂದು ಕರೆಯಲಾಗಿತ್ತು.

ಇದಾಗಿ 10 ತಿಂಗಳ ನಂತರ ಬಂದ ಸಿ- ವೋಟರ್ ಸಮೀಕ್ಷೆ ಕೂಡ ಎನ್‌ಡಿಎ ಮೈತ್ರಿಕೂಟ ತನ್ನ ಹಳೆಯ ಸೀಟು ಗಳಿಕೆಗೆ ಹೋಲಿಸಿದರೆ ಈ ಬಾರಿ ಸುಮಾರು 60 ಸೀಟುಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ. ಅತಿದೊಡ್ಡ ರಾಜ್ಯ ಯುಪಿಯಲ್ಲಿ ಕಾಂಗ್ರೆಸ್- ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟ ಮಾಡಿಕೊಂಡರೆ ಎನ್‌ಡಿಎ ಮೈತ್ರಿಕೂಟದ ಸೀಟುಗಳು ಮತ್ತೂ ಕುಸಿಯಲಿವೆ ಎಂದು ಹೇಳಿದೆ. ಆದರೆ, ಅದೆಲ್ಲಕ್ಕಿಂತ ಮುಖ್ಯವಾಗಿದ್ದು, ‘ಮೋದಿ ಮತ್ತೆ ಅಧಿಕಾರ’ಕ್ಕೆ ಎಂಬ ಒನ್‌ಲೈನರ್.

ಮುಂದಿನ ಹಾದಿ:

“ದಿಲ್ಲಿಯಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರ ಹಲವು ಮಾತುಗಳ ನಡುವೆ ಮುಖ್ಯವಾಗಿದ್ದು, ಒನ್‌ಲೈನರ್‌ಗಳಿಗಾಗಿ ಹೇಳಿಕೆಗಳನ್ನು ಕೊಡಬೇಡಿ ಎಂಬುದು. ಆದರೆ ರಾಜಕಾರಣದಲ್ಲಿ ಒನ್‌ಲೈನರ್‌ಗಳೇ ಪರಿಣಾಮಕಾರಿ. ನಿನ್ನೆ ಸಮೀಕ್ಷೆಯ ಸಾರಾಂಶವನ್ನು ಜನರಿಗೆ ನೀಡುವಾಗ ಸೆಳೆದಿದ್ದು ಮೋದಿ ಮತ್ತೆ ಅಧಿಕಾರಕ್ಕೆ ಎಂಬ ಒಂದು ಸಾಲು,’’ ಎನ್ನುತ್ತಾರೆ ಆರ್‌ಎಸ್‌ಎಸ್‌ನ ಪ್ರಾಂತ್ಯ ನಾಯಕರೊಬ್ಬರು. “ಸದ್ಯಕ್ಕೆ ಬಿಜೆಪಿಗೆ ಅದರ ಅಗತ್ಯವೂ ಇದೆ. ಜನಪ್ರಿಯತೆಯನ್ನು ಉಳಿಸಿಕೊಳ್ಳುವುದು ಹೋಗಲಿ, ಮರಳಿ ಗಳಿಸಿಕೊಳ್ಳುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಗುರುವಾರ ನಡೆದ ಬೆಳವಣಿಗೆಗಳು ಬಿಜೆಪಿಗೆ ಅನುಕೂಲ ಆಗಬಹುದು,’’ ಎಂದವರು ವಿಶ್ಲೇಷಿಸುತ್ತಾರೆ.

ಆದರೆ ಈ ಅಭಿಪ್ರಾಯವನ್ನು ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಅಲ್ಲಗೆಳೆಯುತ್ತಾರೆ. “ಮೊದಲು ಸರಕಾರಕ್ಕೆ ಆಡಳಿತ ವಿರೋಧಿ ಅಲೆಯೇ ಇಲ್ಲ. ಬೆಲೆ ಇಳಿಕೆಯ ಹಿಂದೆ ರಾಜಕೀಯ ಇಲ್ಲ, ಬದಲಿಗೆ ಜನರ ಪರವಾದ ಕಾಳಜಿಯಿಂದ ಸುಂಕ ಕಡಿತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಮೀಕ್ಷೆ ಸರಿಯಾಗಿಯೇ ಇದೆ. ನಾವು ಅದಕ್ಕಿಂತ ಹೆಚ್ಚಿನ ಸೀಟುಗಳನ್ನು ಪಡೆಯುತ್ತೇವೆ. ಯಾಕೆಂದರೆ ವಿರೋಧ ಪಕ್ಷಗಳಲ್ಲಿ ಮೋದಿಗೆ ಎದುರಾಗಿ ನಿಲ್ಲುವ ನಾಯಕ ಯಾರಿದ್ದಾರೆ ಹೇಳಿ?’’ ಎಂದವರು ಪ್ರಶ್ನಿಸುತ್ತಾರೆ.

ಆದರೆ, ಬಿಜೆಪಿ ಕೇಂದ್ರ ಸಚಿವರಿಂದ ಹಿಡಿದು ಸಂಸದರವರೆಗೆ ಬೆಲೆ ಇಳಿಕೆಯನ್ನು ಸಂಭ್ರಮಿಸುವ ವಾತಾವರಣ ಅವರ ಟ್ವೀಟ್‌ಗಳಲ್ಲಿ ಕಾಣಿಸುತ್ತಿದೆ. ಈ ಮೂಲಕ ಸರಕಾರದ ಜನಪರವಾಗಿದೆ ಎಂದು ಒತ್ತಿ ಹೇಳುವ ಪ್ರಯತ್ನ ಕಾಣಿಸುತ್ತಿದೆ. ಇದರ ಜತೆಗೆ ಹೊರಬಿದ್ದ ಸಮೀಕ್ಷೆಯಲ್ಲಿ ಒಂದು ಸಾಲು ಮಾತ್ರವೇ ಮುಂಚೂಣಿಗೆ ಬಂದಿರುವುದು ಕಾಕತಾಳೀಯ ಇರಲಾರದು. ಎಷ್ಟಾದರೂ ಅಂತಿಮವಾಗಿ ರಾಜಕೀಯ ಅಧಿಕಾರ ಮುಖ್ಯ ಎಂದು ನಂಬಿರುವ ಪಕ್ಷಗಳನ್ನು ಹೊಂದಿರುವಾಗ ರಾಜಕೀಯದಿಂದ ಹೊರಗೆ ನಿಂತು ಬೆಳವಣಿಗೆಗಳನ್ನು ನೋಡುವುದು ಮೂರ್ಖತನವಾದೀತು.