samachara
www.samachara.com
ಕೊಡಗಿನ ಮಹಿಳೆಯರ ಈ ಆರ್ತನಾದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಿವಿಗೊಡಬೇಕಿದೆ...
COVER STORY

ಕೊಡಗಿನ ಮಹಿಳೆಯರ ಈ ಆರ್ತನಾದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಿವಿಗೊಡಬೇಕಿದೆ...

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಮುಂದಾಳತ್ವದ ಎಸ್‌ಕೆಡಿಆರ್‌ಡಿಪಿಯ ಸಂಘಗಳ ಮೇಲೆ ಕೊಡಗಿನ ಜನರು ತಿರುಗಿ ಬಿದ್ದಿದ್ದಾರೆ. ಪರಿಣಾಮ ವಿಡಿಯೋ ಒಂದು ಹೊರಬಿದ್ದಿದೆ. 

Team Samachara

ದೇವರು ಅಂತ ನೆಚ್ಚಿಕೊಂಡು, ಮನೆಯಲ್ಲಿ ಫೊಟೋ ಇಟ್ಟುಕೊಂಡು ಪೂಜೆ ಮಾಡುವ ಜನ ಭ್ರಮನಿರಸನಕ್ಕೆ ಒಳಗಾದರೆ ಏನಾಗಬಹುದೋ, ಅದೇ ನಡೆಯುತ್ತಿದೆ ಕೊಡಗಿನಲ್ಲಿ.

ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆ ಕೊಡಗಿನಲ್ಲಿ ಭೀಕರ ಭೂಕುಸಿತ ಮತ್ತು ಪ್ರವಾಹವನ್ನು ಸೃಷ್ಟಿಸಿತ್ತು. ಸಾವಿರಾರು ಮನೆಗಳು ಕೊಚ್ಚಿ ಹೋಗಿ, ಜನ ನಿರಾಶ್ರಿತರಾಗಿ ಇಂದಿಗೂ ಪರಿಹಾರ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಇವರ ನೆರವಿಗೆ ಹಲವು ಸಂಘ ಸಂಸ್ಥೆಗಳು ಮುಂದೆ ಬಂದಿದ್ದವು. ಹಾಗೆ ಧಾವಿಸಿದವರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯೂ ಒಬ್ಬರು. ಪ್ರಾಕೃತಿಕ ವಿಕೋಪಗಳ ಪರಿಹಾರಕ್ಕೆ 10 ಕೋಟಿ ರೂಪಾಯಿಗಳ ನೆರವು ನೀಡುತ್ತಿರುವುದಾಗಿ ಸೆಪ್ಟೆಂಬರ್‌ 7ರಂದು ಘೋಷಿಸಿದ ಅವರು ಪತ್ರಿಕೆಗಳ ತಲೆಬರಹಗಳಲ್ಲಿ ಜಾಗ ಪಡೆದುಕೊಂಡಿದ್ದರು.

ಇದರಲ್ಲಿ ದೊಡ್ಡ ಮೊತ್ತದ ಹಣವನ್ನು ಅವರೇನು ಕೈಯಿಂದ ನೀಡಿರಲಿಲ್ಲ. ಬದಲಿಗೆ ಎಸ್‌ಕೆಡಿಆರ್‌ಡಿಪಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತಮ್ಮ ವೇತನದಿಂದ ನೀಡಿದ್ದರು. ಸದ್ಯಕ್ಕೆ ಇದನ್ನು ಪಕ್ಕಕ್ಕಿಟ್ಟರೆ, ಅಂತೂ 10 ಕೋಟಿ ರೂಪಾಯಿ ನಿಧಿ ನೆರವಿನ ರೂಪದಲ್ಲಿ ಕೊಡಗಿಗೆ ತಲುಪಿತ್ತು.

ಆದರೆ ಅದೇ ಕೊಡಗಿನಲ್ಲಿ ಹೆಗ್ಗಡೆ ಅವರ ನೇತೃತ್ವದ ಎಸ್‌ಕೆಡಿಆರ್‌ಡಿಪಿಯ ಸಂಘಗಳು ವಿಕೋಪ ನಡುವೆಯೂ ಸಾಲ ಕಟ್ಟಿ ಎಂದು ಜನರ ಜೀವ ಹಿಂಡುತ್ತಿವೆ. ಮೊದಲಿಗೆ ಹೀಗೊಂದು ದೂರು ಆಗಸ್ಟ್‌ 17ರಂದು ನಜ್ಮಾ ನಝೀರ್‌ ಚಿಕ್ಕನೇರಳೆ ಎನ್ನುವವರಿಂದ ಬಂದಿತ್ತು. “ಕೊಡಗು, ಕರಾವಳಿ, ಅರೆಮಲೆನಾಡಿನ ಜನರು ಮಳೆಯ ಆರ್ಭಟದಿಂದ ತತ್ತರಿಸಿದ್ದಾರೆ. ಹೀಗಿದ್ದೂ ಸ್ವ ಸಹಾಯ ಗುಂಪುಗಳು ಸಾಲ ಕಟ್ಟುವಂತೆ ಜನರನ್ನು ಪೀಡಿಸುತ್ತಿವೆ. ಮಳೆ ನಿಲ್ಲುವವರೆಗಾದರೂ ಜನರ ಮೇಲೆ ಸೌಜನ್ಯ ತೋರಬಾರದೆ,” ಎಂಬ ಫೇಸ್‌ಬುಕ್‌ ಪೋಸ್ಟ್‌ನ್ನು ಅವರು ಹಾಕಿದ್ದರು.

ಇದು ಎಸ್‌ಕೆಡಿಆರ್‌ಡಿಪಿ ಅಧ್ಯಕ್ಷ ವೀರೇಂದ್ರ ಹೆಗ್ಗಡೆಯವರನ್ನು ತಲುಪಿತ್ತು. ಇದಕ್ಕೆ ಸ್ಪಂದಿಸಿದ್ದ ಸರಕಾರೇತರ ಸಂಸ್ಥೆ ಎಸ್‌ಕೆಡಿಆರ್‌ಡಿಪಿ, ಎರಡು ವಾರಗಳ ಕಾಲ ಸಂಘದ ಸಭೆಯನ್ನು ಮುಂದೂಡಬಹುದು ಎಂದು ತಿಳಿಸಿತ್ತು. ಈ ಸಂಬಂಧ ಎಸ್‌ಕೆಡಿಆರ್‌ಡಿಪಿಯ ನಿರ್ದೇಶಕ ಎಲ್‌.ಎಚ್‌. ಮಂಜುನಾಥ್‌ ಸುತ್ತೋಲೆ ಹೊರಡಿಸಿದ್ದರು. ಕೊನೆಗೆ, ಸೆಪ್ಟೆಂಬರ್‌ 7 ರಂದು 10 ಕೋಟಿ ರೂ. ನೆರವು ಘೋಷಣೆ ವೇಳೆ, 12 ವಾರಗಳ ಕಾಲ ಸಾಲ ಮರುಪಾವತಿಯನ್ನು ಮುಂದೂಡಲಾಗಿತ್ತು.

ಆದರೆ ಕೊಡಗಿನ ಹಲವಾರು ಜನರು ಮನೆಯಿಲ್ಲದೆ, ತಿನ್ನಲು ಕೂಳಿಲ್ಲದೆ ಇನ್ನೂ ನಿರಾಶ್ರಿತ ಕೇಂದ್ರಗಳಲ್ಲೇ ಉಳಿದುಕೊಂಡಿದ್ದಾರೆ. ಇವರ ಕೈಯಲ್ಲಿ ಕೆಲಸವಿಲ್ಲ. ಸಾಲ ಕಟ್ಟಲು ದುಡಿಮೆ ಇಲ್ಲ. ಆದರೂ ಸ್ವಸಹಾಯ ಸಂಘಗಳು ಸಾಲ ಕಟ್ಟುವಂತೆ ಜನರ ಜೀವ ಹಿಂಡುತ್ತಿವೆ. ಈ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಮುಂದಾಳತ್ವದ ಎಸ್‌ಕೆಡಿಆರ್‌ಡಿಪಿಯ ಸಂಘಗಳ ಮೇಲೆ ಕೊಡಗಿನ ಜನರು ತಿರುಗಿ ಬಿದ್ದಿದ್ದಾರೆ. ಈ ಸಂಬಂಧ ಮಹಿಳೆಯೊಬ್ಬರು ಅಳಲು ತೋಡಿಕೊಳ್ಳುತ್ತಿರುವ ವಿಡಿಯೋ ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

“ಸಾಲ ಕಟ್ಟಲು ಆಗುತ್ತಿಲ್ಲ; ವಾರ ವಾರ ಬಡ್ಡಿ ಜಾಸ್ತಿಯಾಗುತ್ತಿದೆ. ನಾವು 11 ವರ್ಷ ಸಾಲ ಕಟ್ಟಿದ್ದೇವೆ. ಒಂದು ವರ್ಷ ಅವರಿಗೆ ಕಂತು ಮನ್ನಾ ಮಾಡಿದರೆ ಏನೂ ಆಗುವುದಿಲ್ಲ. ವರ್ಷ ವರ್ಷವೂ ಮನ್ನಾ ಮಾಡಿ ಎಂದು ನಾವೇನೂ ಕೇಳುತ್ತಿಲ್ಲ,” ಎಂದು ವಿಡಿಯೋದಲ್ಲಿರುವ ಮಹಿಳೆ ಮನವಿ ಮಾಡಿಕೊಂಡಿದ್ದಾರೆ. ಒಂದು ವರ್ಷದ ಸಾಲದ ಕಂತು ಮನ್ನಾ ಮಾಡಿದರೆ ಹೆಗ್ಗಡೆಯವರಿಗೆ ಏನು ತಾನೇ ಕಡಿಮೆ ಆಗುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. 2014-15ರಲ್ಲೇ ವರ್ಷಕ್ಕೆ 52.91 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ ಎಸ್‌ಕೆಡಿಆರ್‌ಡಿಪಿಯ ಮುಖ್ಯಸ್ಥರಿಗೆ ಅವರು ಹೀಗೊಂದು ತಾರ್ಕಿಕ ಪ್ರಶ್ನೆಯನ್ನು ಕೇಳಿದ್ದಾರೆ. ಅಂದ ಹಾಗೆ ಇವತ್ತಿಗೆ ಸಂಸ್ಥೆಯ ನಿವ್ವಳ ಲಾಭ ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆಗಳಿವೆ.

“ಹೆಗ್ಗಡೆಯವರನ್ನು ಜೀವಂತ ದೇವರು ಅಂತ ಇವತ್ತಿಗೂ ಫೋಟೋ ಇಟ್ಟು ಪೂಜೆ ಮಾಡುತ್ತೇವೆ. ಆದರೆ ಸತ್ತಿದ್ದೀರೋ ಬದುಕಿದ್ದೀರೋ ಎಂದು ಕೇಳಲು ಬರದವರು ಸಾಲ ಕಟ್ಟಿ ಸಾಲ ಕಟ್ಟಿ ಎಂದು ಹೇಳುತ್ತಿದ್ದಾರೆ ಇದು ನ್ಯಾಯನಾ?” ಎಂದು ಸುತ್ತ ಮುತ್ತ ಹತ್ತಾರು ಮಹಿಳೆಯರನ್ನು ಬೆನ್ನಿಗಿಟ್ಟುಕೊಂಡು ಅವರು ಸಂಘದ ಪ್ರತಿನಿಧಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊನೆಗೆ ಸಾಲ ಕಟ್ಟಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ತೀರ್ಮಾನವೊಂದನ್ನು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. “ಈ ವರ್ಷದ ಸಾಲವನ್ನು ಮನ್ನಾ ಮಾಡಲೇಬೇಕು. ನಾವು ಸಾಲ ಕಟ್ಟುವುದೇ ಇಲ್ಲ. ನಮ್ಮಿಂದ ಸಾಲ ಕಟ್ಟಲು ಸಾಧ್ಯವಿಲ್ಲ,” ಎಂದವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಅಲ್ಲಿಂದ ಮಹಿಳೆಯರೂ ಧ್ವನಿಗೂಡಿಸಿದ್ದಾರೆ. ವೀರೇಂದ್ರ ಹೆಗ್ಗಡೆಯವರಿಗೆ ಈ ಸಂಬಂಧ ಪತ್ರ ಬರೆದಿದ್ದನ್ನು ಮತ್ತು ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

“ಪ್ರತೀ ಶನಿವಾರ ಭಾನುವಾರ ಬಂದರೆ ಸಾಲ ಕಟ್ಟಿ ಎಂದು ಇಲ್ಲಿ ಯುದ್ಧವೇ ನಡೆಯುತ್ತದೆ. ಕಟ್ಟಿ ಎಂದರೆ ಯಾರ ಹತ್ರ ಇಲ್ಲಿ ದುಡ್ಡಿದೆ? ಎಲ್ಲಿಂದ ಕಟ್ಟುವುದು?” ಎಂದು ಹೇಳಿರುವ ಅವರು, “ಸಾಲ ಕಟ್ಟದಿದ್ದರೆ ದೂರು ನೀಡುತ್ತಾರಂತೆ, ಮನೆ ಜಪ್ತಿ ಮಾಡ್ತಾರಂತೆ’ ಎಂದು ಬೆದರಿಸುತ್ತಿದ್ದಾರೆ. ಅದು ಯಾರು ಜಪ್ತಿ ಮಾಡಲು ಬರುತ್ತಾರೋ ಬರಲಿ. ನಾವೂ ನೋಡಿಕೊಳ್ಳುತ್ತೇವೆ. ಕೈಯಲ್ಲೊಂದು ಬಾಟಲ್‌ ವಿಷ ತೆಗೆದುಕೊಳ್ಳುತ್ತೇವೆ ‘ಜಪ್ತಿ ಮಾಡಿ’ ಎನ್ನುತ್ತೇವೆ,” ಎಂದು ಕಣ್ಣೀರು ಹಾಕಿದ್ದಾರೆ.

ನಮಗೂ ಅವರಿಗೂ ಸಂಬಂಧವಿಲ್ಲ’:

ಈ ವಿಡಿಯೋ ಬಗ್ಗೆ ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದ ಎಸ್‌ಕೆಡಿಆರ್‌ಡಿಪಿ ನಿರ್ದೇಶಕರಾದ ಎಲ್. ಎಚ್ ಮಂಜುನಾಥ್ ‘ನಮಗೂ ಅವರಿಗೂ ಸಂಬಂಧವಿಲ್ಲ’ ಎಂದರು. “ಸ್ವಸಹಾಯ ಸಂಘ ಅಂದರೆ ಸ್ವ ಸಹಾಯ ಸಂಘ. ಅವು ಬ್ಯಾಂಕಿನಿಂದ ತೆಗೆದುಕೊಂಡಿರುವ ಸಾಲಗಳು ಇವು. ಎಸ್‌ಕೆಡಿಆರ್‌ಡಿಪಿಯಿಂದ ಯಾವ ಸಾಲವನ್ನೂ ನೀಡುತ್ತಿಲ್ಲ. ಆ ದಿನಗಳು ಹೊರಟು ಹೋದವು. ಅವರು ಐಡಿಬಿಐ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡಿದ್ದಾರೆ. ಈಗ ಅವರು ಹೋಗಿ ಬ್ಯಾಂಕಿಗೆ ಸಾಲ ಕಟ್ಟಬೇಕು,” ಎಂದು ತಾಂತ್ರಿಕ ಕಾರಣಗಳನ್ನು ಮುಂದಿಟ್ಟರು.

“ನಾವು ಅವರ ಜತೆ ‘ಬಿಸಿನೆಸ್‌ ಕರೆಸ್ಪಾಂಡೆನ್ಸ್‌’ಗಳಾಗಿ ಕೆಲಸ ಮಾಡುತ್ತಿದ್ದೇವೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಮ್ಮ ಹತ್ರ ದುಡ್ಡಿಲ್ಲ. ಸಾಲ ಮನ್ನಾ ಮಾಡಿದರೆ ದುಡ್ಡು ಯಾರು ಕೊಡುವುದು? ಅದರಿಂದ ನಾವು ಮನ್ನಾ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ಅಧಿಕಾರವೂ ನಮಗಿಲ್ಲ. ಅದು ನಾವು ಕೊಟ್ಟಿರುವ ಸಾಲವೂ ಅಲ್ಲ. ಐಡಿಬಿಐ ಬ್ಯಾಂಕಿನವರು ಕೊಟ್ಟಿರುವುದು,’’ ಎಂಬುದು ಮಂಜುನಾಥ್ ಅವರ ಮಾತುಗಳು.

ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಗುಂಪುಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುವ ಎಸ್‌ಕೆಡಿಆರ್‌ಡಿಪಿ ಅದಕ್ಕಾಗಿ ಕಮಿಷನ್‌ ಹಣ ಪಡೆದುಕೊಳ್ಳುತ್ತದೆ. ಆದರೆ ಸಾಲ ಪಡೆದುಕೊಂಡವರು ಸಂಕಷ್ಟದಲ್ಲಿರುವಾಗ, ನಮಗೂ ಅವರಿಗೂ ಸಂಬಂಧ ಇಲ್ಲ ಎಂಬ ತಾಂತ್ರಿಕ ಕಾರಣವನ್ನು ಅವರು ಮುಂದಿಡುತ್ತಿದ್ದಾರೆ. ಇದು ತಾಂತ್ರಿಕತೆಯನ್ನು ಮೀರಿದ ನೈತಿಕ ಪ್ರಶ್ನೆ ಅಷ್ಟೆ.

ಅಂದ ಹಾಗೆ ಇದೇ ಕೊಡಗಿನಲ್ಲಿ ಕೆಲವು ವಾರಗಳ ಕೆಳಗೆ ಆಂಧ್ರ ಮೂಲದ ಎಸ್‌ಕೆಎಸ್‌ ಮೈಕ್ರೋಫೈನಾನ್ಸ್‌ ಮತ್ತು ಇತರ ಸ್ವಸಹಾಯ ಸಂಘಗಳಿಂದ ಸಾಲ ಪಡೆದುಕೊಂಡಿದ್ದ ಇಬ್ಬರು ಮಹಿಳೆಯರು ಸಾಲ ಕಟ್ಟಲಾಗದೆ, ಸಾಮಾಜಿಕ ಅವಮಾನವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದರು. ಇಂತಹ ಘಟನೆಗಳು ಮರುಕಳಿಸದಂತೆ ಕಡೆಯುವ ನೈತಿಕ ಹೊಣೆಗಾರಿಕೆಯನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ತೆಗೆದುಕೊಳ್ಳಬೇಕಿರುವ ಹೊತ್ತಿದು.

Also read: ಕೊಡಗು ವಿಕೋಪ ಪೀಡಿತ ಜನರ ರಕ್ತ ಹೀರಲು ನಿಂತಿದೆ ಮೈಕ್ರೋ ಫೈನಾನ್ಸ್ ‘ಮೀಟರ್ ಬಡ್ಡಿ’ ದಂಧೆ