ಮೋದಿ ಟೀಕೆಗೆ ಪದ್ಯದ ಹಾದಿ; ಅಣಕಕ್ಕೆ ಪ್ರಾಸಗಳ ಮೊರೆ ಹೋದ ರಾಹುಲ್‌ ಗಾಂಧಿ!
COVER STORY

ಮೋದಿ ಟೀಕೆಗೆ ಪದ್ಯದ ಹಾದಿ; ಅಣಕಕ್ಕೆ ಪ್ರಾಸಗಳ ಮೊರೆ ಹೋದ ರಾಹುಲ್‌ ಗಾಂಧಿ!

ಮೋದಿ ಸರಕಾರದ ಹಗರಣಗಳ ಟೀಕೆಗೆ ರಾಹುಲ್‌ ಗಾಂಧಿ ಈಗ ಅಣಕ ಪದ್ಯಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಜರಿಯಲು ಪ್ರಮುಖ ವಿಪಕ್ಷ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್‌ ಗಾಂಧಿ ಹಲವು ದಿನಗಳಿಂದ ಅಣಕದ ಕವನಗಳ ಮೊರೆ ಹೋಗಿದ್ದಾರೆ. ರೂಪಾಯಿ ಮೌಲ್ಯ ಕುಸಿತ, ರಫೇಲ್‌ ಹಗರಣ, ತೈಲ ಬೆಲೆ ಏರಿಕೆಯ ಬಗ್ಗೆ ಹಿಂದಿಯಲ್ಲಿ ಪ್ರಾಸಬದ್ಧವಾಗಿ ಅಣಕ ಕವನಗಳನ್ನು ರಾಹುಲ್ ಗಾಂಧಿ ಟ್ವೀಟ್‌ ಮಾಡುತ್ತಲೇ ಬರುತ್ತಿದ್ದಾರೆ.

ರಾಹುಲ್‌ ಗಾಂಧಿ ಟ್ವೀಟ್‌ ಮಾಡುತ್ತಿರುವ ಈ ಕವನಗಳು, ಅವರ ಇತರೆ ಟ್ವೀಟ್‌ಗಳಿಗಿಂತ ಹೆಚ್ಚೆಚ್ಚು ಜನರನ್ನು ತಲುಪುತ್ತಿವೆ. ರಾಹುಲ್‌ ಟ್ವೀಟ್‌ ಮಾಡುತ್ತಿರುವ ಈ ಪ್ರಾಸಪದ್ಯಗಳನ್ನು ಸಾವಿರಾರು ಜನ ರಿಟ್ವೀಟ್‌ ಮಾಡುತ್ತಿದ್ದು, ಸಾವಿರಾರು ಲೈಕ್‌ಗಳನ್ನು ಈ ಪದ್ಯಗಳು ಪಡೆದುಕೊಳ್ಳುತ್ತಿವೆ.

ನಿನ್ನೆ ರಾಹುಲ್‌ ಗಾಂಧಿ ಮಾಡಿರುವ ಟ್ವೀಟ್‌ ಪದ್ಯ ಇದು:

ಹಿಂದಿಯ ಪದ್ಯದ ಸಾರಾಂಶ ಇಷ್ಟು:

73 ದಾಟಿದೆ ರೂಪಾಯಿ ಬೆಲೆ

ಎದ್ದಿದೆ ಹಾಹಾಕಾರದ ಅಲೆ

ತೈಲ- ಗ್ಯಾಸ್‌ಗೆ ಬಿದ್ದಿದೆ ಬೆಂಕಿ

ಮಾರುಕಟ್ಟೆಯಾಗಿದೆ ಕಕ್ಕಾಬಿಕ್ಕಿ

ಓ 56 ಇಂಚಿನ ಎದೆಯವರೆ

ಎಲ್ಲಿಯವರೆಗೂ ಮುಂದುವರೆಯಲಿದೆ ‘ಸೈಲೆಂಟ್‌ ಮೋಡ್‌’

ಎಲ್ಲಿದೆ ‘ಅಚ್ಚೇ ದಿನದ ಕೋಡ್‌’?

ಸೆಪ್ಟೆಂಬರ್‌ 29ರಂದು ಟ್ವೀಟ್‌ ಮಾಡಿರುವ ಮತ್ತೊಂದು ಪದ್ಯ:

ಸಾಹೇಬರ ಮೋಡಿ ನೋಡಿ

ರಫೇಲ್‌ನ ಹಗರಣ ನೋಡಿ

ರೂಪಾಯಿ ಕುಸಿಯುತ್ತಿರುವುದು ನೋಡಿ

ತೈಲ ಬೆಲೆಯ ಏರಿಕೆ ನೋಡಿ

ಮುಂಬೈನಲ್ಲಿ

ಪೆಟ್ರೋಲ್‌ – 90.75 ರೂಪಾಯಿ

ಡೀಸೆಲ್‌ – 79.23 ರೂಪಾಯಿ

ದೆಹಲಿಯಲ್ಲಿ

ಪೆಟ್ರೋಲ್‌ – 83.4 ರೂಪಾಯಿ

ಡೀಸೆಲ್‌ – 74.63 ರೂಪಾಯಿ

ರಫೇಲ್‌ ಹಗರಣದ ಬಗ್ಗೆ ಒಂದು ಅಣಕ:

ನೋಡಿ ಮೋದಿ- ಅಂಬಾನಿಯ ಆಟ

ಎಚ್‌ಎಎಲ್‌ನಿಂದ ಕಿತ್ತರು ರಫೇಲ್‌ ಕೂಟ

ಉದ್ಯಮಿಗಳಲ್ಲಿ ಎಂಥ ಭಕ್ತಿ

ಕುಗ್ಗಿಸಿದರು ಸೇನೆಯ ಶಕ್ತಿ

ಯಾವ ಅಧಿಕಾರಿ ತಡೆದಿದ್ದ ಕಳ್ಳತನ

ಆತನನ್ನೇ ಮಾಡಿದರು ಅಪಹರಣ

ಚೋರರಿಗೆ ಸಿಕ್ಕಿದೆ ಶಹಬಾಶ್‌ಗಿರಿ

ಉದ್ಯಮಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರು ಹಾರಿ

ಜನ ಜನರಲ್ಲಿ ಹೆಚ್ಚುತ್ತಿದೆ ಅಸಮಾಧಾನ

ಎಲ್ಲರೂ ಸೇರಿ ತಡೆಯೋಣ ಚೋರರ ಸಂಸ್ಥಾನ

ಹೀಗೆ ರಾಹುಲ್‌ ಗಾಂಧಿ ಪ್ರಸ್ತುತ ಸಂದರ್ಭದ ರಾಜಕೀಯ ಬಿಕ್ಕಟ್ಟು, ಸಮಕಾಲೀನ ಸಮಸ್ಯೆ ಹಾಗೂ ದೊಡ್ಡ ದೊಡ್ಡ ಹಗರಣಗಳನ್ನು ಪದ್ಯಕಟ್ಟಿ ಟ್ವೀಟ್‌ ಮಾಡಿ ಜನರ ಗಮನ ಸೆಳೆಯುತ್ತಿದ್ದಾರೆ. ರಾಹುಲ್‌ ಗಾಂಧಿಯೇನು ಮೂಲತಃ ಕವಿಯಲ್ಲ ಅಥವಾ ಸಾಹಿತ್ಯದ ವಿದ್ಯಾರ್ಥಿಯಲ್ಲ. ಆದರೂ ರಾಹುಲ್‌ ಮಾಡುತ್ತಿರುವ ಪ್ರಾಸಬದ್ಧ ಪದ್ಯಗಳು ದೇಶದ ಹಗರಣಗಳನ್ನು ಹಿಡಿದು ಮೋದಿಯನ್ನು ಕುಟುಕುತ್ತಿವೆ.

ರಾಜಕಾರಣಿಯೊಬ್ಬ ಜನರನ್ನು ಸೆಳೆಯಲು ಕೇವಲ ಮಾತಿನ ಅಸ್ತ್ರವಷ್ಟೇ ಅಲ್ಲ, ಕವನವನ್ನೂ ಅಸ್ತ್ರ ಮಾಡಿಕೊಳ್ಳಬಹುದೆಂಬುದಕ್ಕೆ ರಾಹುಲ್‌ ಅಣಕ ಪದ್ಯಗಳು ಉದಾಹರಣೆಯಂತಿವೆ. ರಾಹುಲ್‌ ಗಾಂಧಿ ಈ ಪದ್ಯಗಳನ್ನು ಖುದ್ದು ತಾವೇ ಬರೆಯುತ್ತಿದ್ದಾರೋ ಅಥವಾ ಅವರ ಜತೆಗಿರುವವರು ಈ ಪದ್ಯಗಳನ್ನು ಹೆಣೆದು ಅವರ ಖಾತೆಯಿಂದ ಟ್ವೀಟ್‌ ಮಾಡುತ್ತಿದ್ದಾರೋ ಅದು ಬೇರೆಯದೇ ವಿಷಯ. ಆದರೆ, ರಾಹುಲ್‌ ಟ್ವೀಟ್‌ ಮಾಡುತ್ತಿರುವ ಈ ಅಣಕದ ಪದ್ಯಗಳು ಜನರನ್ನು ಎಚ್ಚರಿಸಲು ಸಶಕ್ತ ಮಾಧ್ಯಮವಾಗಿ ಬೆಳೆಯುತ್ತಿವೆ.

ಹಾಗೆ ನೋಡಿದರೆ ಪ್ರಸ್ತುತ ಸಂದರ್ಭದ ರಾಜಕೀಯಕ್ಕೆ ಕವಿಗಳು ರಾಜಕೀಯ ಕವನಗಳ ಮೂಲಕ ಹೆಚ್ಚೆಚ್ಚು ಸ್ಪಂದಿಸಬೇಕಿತ್ತು. ಆಳುವ ಸರಕಾರಗಳನ್ನು ಕೆಣಕಲು, ಜನಮಾನಸದ ಅಸಮಾಧಾನವನ್ನು ಹೊರಹಾಕಲು ಕವನಗಳನ್ನು ಬಳಸಿಕೊಳ್ಳಬಹುದಿತ್ತು. ಸಾಮಾಜಿಕ ಜಾಲತಾಣಗಳು ಶಕ್ತಿಯುತವಾಗಿರುವ ಇಂದಿನ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಕಾಶವಿದೆ. ಆದರೆ, ಬಹುತೇಕ ಕವಿಗಳು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ರಾಜಕೀಯ ಕವನಗಳ ಅಥವಾ ಅಣಕ ಪದ್ಯಗಳ ರಚನೆಗೆ ಕೈ ಹಾಕುತ್ತಿಲ್ಲ.

ಪ್ರೇಮ, ಕಾಮ, ವಿರಹ, ವಿಷಾದ, ಆಧಾತ್ಮಗಳಷ್ಟೇ ಈಗ ಹೆಚ್ಚೆಚ್ಚು ಕವನದ ರೂಪ ಪಡೆಯುತ್ತಿವೆ. ರಾಜಕೀಯ ಕವನಗಳನ್ನು ಬರೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಇನ್ನು ಅಣಕ ಪದ್ಯಗಳನ್ನು ಬರೆಯುವವರು ಎಲ್ಲೋ ಬೆರಳೆಣಿಕೆಯಷ್ಟು ಮಂದಿ. ಆದರೆ, ಅಂಥವರು ಬಹುತೇಕ ಅಜ್ಞಾತರು. ರಾಜಕೀಯಕ್ಕೆ ಸ್ಪಂದಿಸಲು ಜನಪದ ಕವಿಗಳಿಂದ ಹಿಡಿದು ಮಹಾಕವಿಗಳವರೆಗೂ ಯಾರೂ ಹಿಂದೆ ಉಳಿದಿಲ್ಲ. ಆಳುವ ವರ್ಗಕ್ಕೆ ತಮ್ಮ ಅಸಮಾಧಾನ ತೋರಲು ಅಣಕ ಪದ್ಯಗಳು ಶಕ್ತಿಯುತ ಮಾಧ್ಯಮ ಎಂಬುದು ಯುವ ಕವಿಗಳಿಗೆ ಅರ್ಥವಾಗುತ್ತಿಲ್ಲವೋ ಏನೋ?

ಆದರೆ, ಈ ಪದ್ಯಗಳಿರುವ ಶಕ್ತಿಯನ್ನು ರಾಹುಲ್‌ ಗಾಂಧಿ ಅಥವಾ ರಾಹುಲ್‌ ಗಾಂಧಿ ಜತೆಗಿರುವ ಟೀಂ ಅರ್ಥ ಮಾಡಿಕೊಂಡಿರುವಂತಿದೆ. ಹೀಗಾಗಿ ಆಗಾಗ ಈ ಬಗೆಯ ಅಣಕ ಪದ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಈ ಪದ್ಯಗಳೂ ಪಕ್ಷದ ಗೆರೆ ಮೀರಿ ಪ್ರಸ್ತುತ ಸಂದರ್ಭದ ಸತ್ಯವನ್ನೇ ಹೇಳುತ್ತಿರುವುದರಿಂದ ಕಾಂಗ್ರೆಸ್ ವಿರೋಧಿಗಳೂ ನೋಡಿದರೆ ಒಮ್ಮೆ ಈ ಪ್ರಾಸಗಳನ್ನು ಗುನುಗುನಿಸದೇ ಇರಲಾರರು.