ಇನ್ನು ಅನುಮಾನಗಳು ಬೇಕಿಲ್ಲ; ಹಣ ದುಬ್ಬರ ಎದುರಿಸಲು ಸಜ್ಜಾಗಿ...
COVER STORY

ಇನ್ನು ಅನುಮಾನಗಳು ಬೇಕಿಲ್ಲ; ಹಣ ದುಬ್ಬರ ಎದುರಿಸಲು ಸಜ್ಜಾಗಿ...

ಬೆಂಗಳೂರಿನಲ್ಲಿ ಸದ್ಯಕ್ಕೆ ಲೀಟರ್‌ ಪೆಟ್ರೋಲ್‌ ದರ 84.72 ರೂಪಾಯಿ ಇದ್ದರೆ ಡೀಸೆಲ್‌ ದರ 75 ರೂ.ಗಳ ಗಡಿ ದಾಟಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. 

ತಜ್ಞರು ಊಹಿಸಿದ ರೀತಿಯಲ್ಲೇ ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದೀಪಾವಳಿ ವೇಳೆಗೆ ಮುಂಬೈನಲ್ಲಿ ಪೆಟ್ರೋಲ್‌ ದರ ಸೆಂಚುರಿ ಬಾರಿಸುವ ಧಾವಂತದಲ್ಲಿ ಮುನ್ನುಗ್ಗುತ್ತಿದೆ. ಡೀಸೆಲ್ ದರ ಹಿಂದೆ ಎಂದೂ ಕಾಣದ ಏರಿಕೆ ಕಾಣುತ್ತಿದೆ. ಡಾಲರ್ ಎದುರು ರೂಪಾಯಿ ದರ ಸಾರ್ವಕಾಲಿಕ ಕುಸಿತ ಕಾಣುತ್ತಿದೆ. ಅಡುಗೆ ಅನಿಲ ದುಬಾರಿಯಾಗುತ್ತಿದೆ. ಗೊಂದಲ ಬೇಕಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಹಿಂದೆಂದೂ ಕಾಣದ ಹಣ ದುಬ್ಬರವನ್ನು ಎದುರಿಸಲು ಜನ ಸಜ್ಜಾಗಲೇಬೇಕಿದೆ.

ಗುರುವಾರ ಮಾಯಾನಗರಿಯಲ್ಲಿ 13 ಪೈಸೆ ಏರಿಕೆ ಕಂಡಿರುವ ಲೀಟರ್‌ ಪೆಟ್ರೋಲ್‌ ದರ 91.39 ರೂಪಾಯಿ ತಲುಪಿದೆ. ದೀಪಾವಳಿಗೆ ಭರ್ತಿ 5 ವಾರಗಳಿದ್ದು 35 ದಿನದಲ್ಲಿ ಸೆಂಚುರಿಗೆ ಇನ್ನು 8.61 ರೂಪಾಯಿಗಳ ಏರಿಕೆ ಬೇಕಾಗಿದೆ. ಇನ್ನು ಡೀಸೆಲ್‌ ದರ 80ರ ಗಡಿ ದಾಟಿದ್ದು 80.15 ರೂಪಾಯಿಗೆ ಮುಟ್ಟಿದೆ. ಬುಧವಾರ ಡೀಸೆಲ್‌ ದರ 20 ಪೈಸೆ ಏರಿಕೆ ಕಂಡಿದ್ದು 90 ರೂಪಾಯಿಯತ್ತ ಯಶಸ್ವಿಯಾಗಿ ಮುನ್ನಡೆದಿದೆ.

ಬೆಂಗಳೂರಿನಲ್ಲಿ ಸದ್ಯಕ್ಕೆ ಲೀಟರ್‌ ಪೆಟ್ರೋಲ್‌ ದರ 84.72 ರೂಪಾಯಿ ಇದ್ದರೆ, ಡೀಸೆಲ್‌ ದರ 75 ರ ಗಡಿ ದಾಟಿ 75.89 ರೂಪಾಯಿ ತಲುಪಿದೆ.

ರೂಪಾಯಿ ಭೀಕರ ಕುಸಿತ:

ಇದೇ ವೇಳೆ ಸೆಂಚುರಿ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ರೂಪಾಯಿಯೂ ವೇಗವಾಗಿ ಮುನ್ನಡೆಯುತ್ತಿದೆ. ಸದ್ಯ 10 ಗಂಟೆ 40 ನಿಮಿಷದ ಹೊತ್ತಿಗೆ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ 73.88ಕ್ಕೆ ಕುಸಿತ ಕಂಡಿದೆ. ವಾರದ ಹಿಂದೆ ಮಾತನಾಡಿದ್ದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್ “ಅನಗತ್ಯ ವಸ್ತುಗಳ ಆಮದು ತಡೆಯುವುದರಿಂದ ಮತ್ತು ನಾನಾ ಕ್ರಮಗಳನ್ನು ಕೈಗೊಳ್ಳುವುದರಿಂದ ರೂಪಾಯಿ ದರವನ್ನು ಮತ್ತೆ 68 ರಿಂದ 70ರ ಮಟ್ಟದಲ್ಲಿ ಇಡಲು ಸಾಧ್ಯವಾಗುತ್ತದೆ,” ಎಂದಿದ್ದರು. ಆದರೆ ರೂಪಾಯಿ ಮಾತ್ರ ಪಾತಳಕ್ಕೆ ಕುಸಿಯುತ್ತಿದ್ದು 75 ಕ್ಕಿಂತಲೂ ಕೆಳಗಿಳಿಯುವ ಸಾಧ್ಯತೆಗಳು ಕಾಣುತ್ತಿವೆ.

ರೂಪಾಯಿ ಇಳಿಕೆ, ಪಟ್ರೋಲ್‌-ಡೀಸೆಲ್‌ ದರದ ಏರಿಕೆಯ ಪರಿಣಾಮಗಳು ಜನಸಾಮನ್ಯರನ್ನು ತಟ್ಟುತ್ತಿರುವುದರ ಜತೆಗೆ ಷೇರುಪೇಟೆಯ ಮೇಲೂ ಹೊಡೆತ ಬೀಳುತ್ತಿದೆ. ಬುಧವಾರ ಒಂದೇ ದಿನ ಸೆನ್ಸೆಕ್ಸ್‌ 551 ಅಂಕಗಳ ಕುಸಿತ ಕಂಡು 36,000 ಕ್ಕಿಂತ ಕೆಳಗಿಳಿದಿತ್ತು. ಇದರಿಂದ 1.79 ಲಕ್ಷ ಕೋಟಿ ರೂಪಾಯಿ ಹಣವನ್ನು ಷೇರುದಾರರು ಕಳೆದುಕೊಂಡಿದ್ದರು. ಗುರುವಾರ ಮುಂಜಾನೆಯೂ ಕುಸಿತ ಮುಂದುವರಿದಿದ್ದು ಆರಂಭಿಕ ವ್ಯವಹಾರದಲ್ಲೇ ಬರೋಬ್ಬರಿ 500 ಅಂಕಗಳ ಪತನವಾಗಿದೆ.

ಇವೆಲ್ಲದಕ್ಕೂ ಪರೋಕ್ಷ ಕಾರಣವಾಗಿರುವ ಕಚ್ಛಾ ತೈಲ ದರ. ಬುಧವಾರ ಅದು ಬ್ಯಾರಲ್‌ಗೆ 85 ಡಾಲರ್‌ ಮುಟ್ಟಿದೆ. ಮುಂದಿನ ದಿನಗಳಲ್ಲಿ ಇದು 88-90 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಕರಿ ನೆರಳ ಛಾಯೆ ಆವರಿಸಿದೆ.

ಒಂದು ಕಡೆ ಷೇರುಪೇಟೆ ಮತ್ತು ರೂಪಾಯಿ ಕುಸಿತ ಇನ್ನೊಂದು ಕಡೆ ಪೆಟ್ರೋಲ್‌ ಡೀಸೆಲ್‌ ದರದ ಏರಿಕೆ ನಡೆಯುತ್ತಿದೆ. ಮತ್ತೊಂದು ಕಡೆ ಬ್ಯಾಂಕ್‌ಗಳು ಸಂಕಷ್ಟದಲ್ಲಿವೆ, ಐಎಲ್‌&ಎಫ್‌ಎಸ್‌ನಂಥ ಬೃಹತ್‌ ಕಂಪನಿಗಳು 88 ಸಾವಿರ ಕೋಟಿಯಷ್ಟು ಸಾಲದ ಸುಳಿಯಲ್ಲಿ ಸಿಲುಕಿವೆ. ಇವುಗಳ ಪರಿಣಾಮ ನಮ್ಮ ಮೆಟ್ರೋದಿಂದ ಹಿಡಿದು ಹಲವು ಕಾಮಗಾರಿಗಳ ಮೇಲಾಗುತ್ತಿವೆ. ಐಎಲ್‌&ಎಫ್‌ಎಸ್‌ನಂಥ ಕಂಪನಿಗಳನ್ನು ಮೇಲಕ್ಕೆತ್ತಲು ಸರಕಾರ ಹತಾಶ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ದಿನದಿಂದ ದಿನಕ್ಕೆ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ದೇಶದ ಆರ್ಥಿಕ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ಇದೇ ಟ್ರೆಂಡ್‌ ಮುಂದುವರಿದರೆ ಭಾರತ ಮಹಾ ಆರ್ಥಿಕ ಹಿಂಜರಿತವನ್ನು ಕಾಣುವ ದಿನಗಳು ದೂರದಲ್ಲಿಲ್ಲ.

ಪರಿಸ್ಥಿತಿ ಹೀಗಿರುವಾಗ, ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಹಾಗೂ ಆಡಳಿತವನ್ನು ಬೆಂಬಲಿಸುವವರು ಬೇರೆಯೇ ಗುಂಗಿನಲ್ಲಿದ್ದಂತೆ ಕಾಣಿಸುತ್ತಿದೆ. ಹಣ ದುಬ್ಬರದ ಬಿಸಿಯನ್ನು ಇದು ಮರೆಮಾಚಲು ಸಾಧ್ಯವೇ ಹೊರತು ಹೆಚ್ಚು ದಿನಗಳ ಕಾಲ ಮುಚ್ಚಿಡಲು ಸಾಧ್ಯವಾಗಲಾರದು. ವಾದ- ವಿವಾದಗಳೇನೇ ಇರಲಿ, ಮುಂದಿನ ದಿನಗಳಲ್ಲಿ ಹಿಂದೆಂದೂ ಕಾಣದ ಹಣ ದುಬ್ಬರವೊಂದನ್ನು ಎದುರಿಸಲು ಜನ ಸಾಮಾನ್ಯರು ಸಜ್ಜಾಗಬೇಕಿದೆ. ಅದರಲ್ಲಿ ಯಾವ ಅನುಮಾನಗಳೂ ಬೇಕಿಲ್ಲ.