ಏರಿಸಿದ್ದು ₹19.48, ಇಳಿಸಿದ್ದು ₹4.5: ಇಂಧನ ಬೆಲೆ ಇಳಿಕೆಗೆ ಸಂಭ್ರಮ ಪಡಲು ಕಾರಣಗಳು ಸಿಗುತ್ತಿಲ್ಲ!
COVER STORY

ಏರಿಸಿದ್ದು ₹19.48, ಇಳಿಸಿದ್ದು ₹4.5: ಇಂಧನ ಬೆಲೆ ಇಳಿಕೆಗೆ ಸಂಭ್ರಮ ಪಡಲು ಕಾರಣಗಳು ಸಿಗುತ್ತಿಲ್ಲ!

ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಏರಿಸುತ್ತಲೇ ಬಂದ ಪೆಟ್ರೋಲ್‌- ಡೀಸೆಲ್‌ ಬೆಲೆ ಇಳಿಕೆಯಾಗಿದ್ದು ಮಾತ್ರ ಎರಡು ಬಾರಿ. ಇದರಿಂದ ಕೇಂದ್ರದ ಅಬಕಾರಿ ವರಮಾನ ಬಹುತೇಕ ದುಪ್ಪಟ್ಟಾಗಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಪೆಟ್ರೋಲ್‌ ಬೆಲೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ 1.5 ರೂಪಾಯಿ ಅಬಕಾರಿ ಸುಂಕ ಕಡಿತ ಎಂಬ ಮುಲಾಮು ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಹಾಗೆ ನೋಡಿದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತೈಲ ಬೆಲೆ ಏರಿಕೆಗೂ, ಬೆಲೆ ಇಳಿಕೆಗೂ ತಾಳಮೇಳವೇ ಇಲ್ಲ. ನಾಲ್ಕು ವರ್ಷಗಳಲ್ಲಿ ಸುಮಾರು 20 ರೂಪಾಯಿ ಬೆಲೆ ಏರಿಕೆ ಮಾಡಿರುವ ಕೇಂದ್ರ, ಈ ಬಾರಿಯ ಸುಂಕ ಕಡಿತವೂ ಸೇರಿದಂತೆ ಬೆಲೆ ಇಳಿಸಿರುವುದು ಸುಮಾರು 4 ರೂಪಾಯಿಯಷ್ಟು ಮಾತ್ರ. ಅಂದರೆ ಏರಿಕೆ ಮಾಡಿದ ಸುಂಕದ ನಾಲ್ಕನೇ ಒಂದು ಭಾಗದಷ್ಟನ್ನೂ ಪೂರ್ತಿಯಾಗಿ ಕೇಂದ್ರ ಇಳಿಸಿಲ್ಲ.

ಈ ವರ್ಷದ ಆಗಸ್ಟ್‌ ತಿಂಗಳಿಂದ ವೇಗವಾಗಿ ಏರಲು ಆರಂಭಿಸಿದ ಪೆಟ್ರೋಲ್‌- ಡೀಸೆಲ್‌ ಬೆಲೆ ಈವರೆಗೂ ಇಳಿಕೆ ಕಂಡಿರಲಿಲ್ಲ. ಈಗಷ್ಟೇ ಅಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಒಮ್ಮೆ ಮಾತ್ರ 2 ರೂಪಾಯಿಯಷ್ಟು ಅಬಕಾರಿ ಸುಂಕ ಕಡಿತ ಮಾಡಿದ್ದು ಬಿಟ್ಟರೆ ಬೆಲೆ ಏರಿಕೆಯೇ ಸಾಧನೆ. ಈಗ ಪೆಟ್ರೋಲ್‌- ಡೀಸೆಲ್‌ ಬೆಲೆಗೆ ಕಡಿವಾಣ ಹಾಕುವ ಹೆಸರಿನಲ್ಲಿ ಕೇಂದ್ರ 1.5 ರೂಪಾಯಿ ಅಬಕಾರಿ ಸುಂಕ ತಗ್ಗಿಸಿ, 1 ರೂಪಾಯಿಯನ್ನು ತೈಲ ಕಂಪೆನಿಗಳು ಕಡಿಮೆ ಮಾಡುವಂತೆ ಹೇಳಿದೆ.

ಈ ಕಡಿತದಿಂದ ಸದ್ಯಕ್ಕೆ ಪೆಟ್ರೋಲ್‌- ಡೀಸೆಲ್‌ ಬೆಲೆ 2.5 ರೂಪಾಯಿ ಇಳಿದಂತಾಗಿದೆ. ರಾಜ್ಯ ಸರಕಾರಗಳೂ 2.5 ತೆರಿಗೆ ಕಡಿತ ಮಾಡುವಂತೆ ಕೇಂದ್ರ ರಾಜ್ಯಗಳಿಗೆ ಮನವಿ ಮಾಡಿದೆ. ಒಂದು ವೇಳೆ ಎಲ್ಲಾ ರಾಜ್ಯ ಸರಕಾರಗಳೂ 2.5 ರೂಪಾಯಿ ತೆರಿಗೆ ಕಡಿತ ಮಾಡಿದರೆ ಪೆಟ್ರೋಲ್‌ ಬೆಲೆ ಒಟ್ಟು ಸುಮಾರು 5 ರೂಪಾಯಿ ಇಳಿದಂತಾಗುತ್ತದೆ. ಆದರೆ, ಕೇಂದ್ರ ಸರಕಾರ ಕಳೆದ ಒಂದು ತಿಂಗಳಿಂದ ಏರಿಸಿಕೊಂಡು ಬಂದಿರುವ ಬೆಲೆ ಸುಮಾರು 10 ರೂಪಾಯಿ. ಈಗ ಇಳಿಕೆ ಮಾಡಿರುವುದು 2.5 ರೂಪಾಯಿ.

ತೈಲ ಬೆಲೆ ಏರಿಕೆ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವಂಥದ್ದು. ಎನ್‌ಡಿಎ ಸರಕಾರ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದ ಸಂದರ್ಭದಲ್ಲೂ ಭಾರತದಲ್ಲಿ ಬೆಲೆ ಏರಿಕೆ ಮಾಡಿದೆ. ಈಗ 2.5 ಇಳಿಕೆಯಾಗಿರುವುದು ಸ್ವಲ್ಪ ಮಟ್ಟಿಗೆ ಜನರಿಗೆ ನೆಮ್ಮದಿ ತಂದಿದೆ. ಪೆಟ್ರೋಲ್‌- ಡೀಸೆಲ್‌ ಬೆಲೆಯನ್ನು ಹೆಚ್ಚು ಏರಿಕೆ ಮಾಡಿ, ಕಡಿಮೆ ಇಳಿಕೆ ಮಾಡುವ ತಂತ್ರ ಸರಿಯಲ್ಲ. ಈ ಪ್ರಮಾಣದ ಇಳಿಕೆ ಸಮರ್ಥನೀಯವಲ್ಲ.
ಪ್ರೊ. ಕೇಶವ, ಅರ್ಥಶಾಸ್ತ್ರ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ

2014 ಮತ್ತು 2016ರ ನಡುವಿನ ಅವಧಿಯಲ್ಲಿ ಪೆಟ್ರೋಲ್‌- ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚೇ ಅನ್ನಿಸುವಷ್ಟು ಏರಿಸಲಾಯಿತು. ಈಗ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ 19.48 ರೂಪಾಯಿ ಹಾಗೂ ಪ್ರತಿ ಲೀಟರ್‌ ಡೀಸೆಲ್‌ ಮೇಲೆ 15.33 ರೂಪಾಯಿ ಕೇವಲ ಅಬಕಾರಿ ಸುಂಕವೇ ಇದೆ.

2014ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ನಂತರ ಮೋದಿ ಸರಕಾರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ 11.77 ರೂಪಾಯಿ ಹಾಗೂ ಪ್ರತಿ ಲೀಟರ್‌ ಡೀಸೆಲ್‌ ಮೇಲೆ 13.47 ರೂಪಾಯೊ ಹೆಚ್ಚಿಸಿತು. 2014ರ ನವೆಂಬರ್‌ನಿಂದ 2016ರ ಜನವರಿವರೆಗೆ 9 ಬಾರಿ ಈ ಸುಂಕ ಹೆಚ್ಚಿಸಲಾಯಿತು. ಆದರೆ, ಸುಂಕ ಇಳಿಸಿದ್ದು ಮಾತ್ರ ಎರಡು ಬಾರಿ ಮಾತ್ರ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಲೀಟರ್‌ ಮೇಲೆ 2 ರೂಪಾಯಿ ಇಳಿಕೆ ಮಾಡಿದ್ದ ಕೇಂದ್ರ ಸರಕಾರ, ಅದಾದ ಒಂದು ವರ್ಷದ ಬಳಿಕ ಈಗ 2.5 ರೂಪಾಯಿ ಸುಂಕ ಕಡಿತ ಮಾಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದ ಅಬಕಾರಿ ಸುಂಕ ಸಂಗ್ರಹ ಬಹುತೇಕ ದುಪ್ಪಟ್ಟಾಗಿದೆ. 2014-15ರಲ್ಲಿ 99,184 ಕೋಟಿ ರೂಪಾಯಿ ಇದ್ದ ಅಬಕಾರಿ ಸುಂಕ ಸಂಗ್ರಹ, 2017-18ರಲ್ಲಿ 2,29,019 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ. ಆದರೆ, ರಾಜ್ಯಗಳ ತೆರಿಗೆ ಏರಿಕೆಯಲ್ಲಿ ಈ ಭಾರೀ ಏರಿಕೆ ಆಗಿಲ್ಲ. 2014-15ರಲ್ಲಿ 1,37,157 ಕೋಟಿ ರೂಪಾಯಿ ಇದ್ದ ರಾಜ್ಯಗಳ ಒಟ್ಟು ಅಬಕಾರಿ ಸುಂಕ 2017-18ರಲ್ಲಿ 1,84,091 ಕೋಟಿಯಷ್ಟು ಹೆಚ್ಚಾಗಿದೆ.

ಇಷ್ಟೆಲ್ಲಾ ಅಂಕಿಸಂಖ್ಯೆಗಳನ್ನು ನೋಡಿದ ಮೇಲೆ ಕೇಂದ್ರ ಸರಕಾರ ಬೆಲೆ ಏರಿಸಿದ್ದು ಎಷ್ಟು, ಇಳಿಸಿದ್ದು ಎಷ್ಟು ಎಂಬುದು ಸಾಮಾನ್ಯ ಗಣಿತ ಜ್ಞಾನ ಇರುವವರಿಗೂ ಗೊತ್ತಾಗುತ್ತದೆ. ಆದರೆ ಇಷ್ಟು ದಿನ, “ಮೋದಿ ಎಂಬ ಹುಲಿ ಸಾಕಲು ಬೆಲೆ ಏರಿದರೂ ಪರವಾಗಿಲ್ಲ” ಎನ್ನುತ್ತಿದ್ದ ‘ಭಕ್ತಸಮೂಹ’ ಈಗ ಪೆಟ್ರೋಲ್‌- ಡೀಸೆಲ್‌ ಬೆಲೆ ಇಳಿಕೆಯ ಮೂಲಕ ಮೋದಿ ಸರಕಾರ ಜನರಿಗೆ ದೊಡ್ಡ ಉಪಕಾರ ಮಾಡಿದೆ ಎಂದು ಬಿಂಬಿಸಲು ಮುಂದಾಗಿದೆ. ಆದರೆ ಅದರಲ್ಲಿ ವಾಸ್ತವ ಮತ್ತು ಸತ್ಯಾಂಶಗಳಿಲ್ಲ ಎಂಬುದನ್ನು ಈ ಲೆಕ್ಕಾಚಾರಗಳು ತೆರೆದಿಡುತ್ತಿವೆ.

Also read: ಪೆಟ್ರೋಲ್‌- ಡೀಸೆಲ್‌ ಬೆಲೆ ಏರಿಕೆಯಿಂದ ನಿಜಕ್ಕೂ ಲಾಭ ಆಗುತ್ತಿರುವುದು ಯಾರಿಗೆ?