‘ಕಾಂಗ್ರೆಸ್- ಬಿಜೆಪಿಯಿಂದ ಸಮಾನ ಅಂತರ’: ಬಿಎಸ್‌ಪಿ ನಾಯಕಿ ಮಾಯಾವತಿ ಮನಸ್ಸಿನಲ್ಲೇನಿದೆ? 
COVER STORY

‘ಕಾಂಗ್ರೆಸ್- ಬಿಜೆಪಿಯಿಂದ ಸಮಾನ ಅಂತರ’: ಬಿಎಸ್‌ಪಿ ನಾಯಕಿ ಮಾಯಾವತಿ ಮನಸ್ಸಿನಲ್ಲೇನಿದೆ? 

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಮಾಯಾವತಿಯವರನ್ನು ತಬ್ಬಿ ಹಿಡಿದಿದ್ದರು. ಈ ಚಿತ್ರ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷಗಳ ಮಹಾಮೈತ್ರಿಯ ಮುನ್ಸೂಚನೆ ಎಂದು ಬಿಂಬಿತವಾಗಿತ್ತು. ಆದರೆ...

ಇದು ಮಾಯಾವತಿಯವರ ‘ಆನೆ ನಡಿಗೆ’. ಇವರ ಮೂಡಿದ ಹೆಜ್ಜೆಗಳನ್ನು ಗುರುತಿಸಲು ಸಾಧ್ಯವೇ ಹೊರತು, ಇನ್ನೂ ಮೂಡದ ನಡೆಗಳನ್ನು ಊಹಿಸುವುದು ಕಷ್ಟ. ರಾಷ್ಟ್ರ ರಾಜಕಾರಣದಲ್ಲಿ ನಿರೀಕ್ಷೆ ಮೀರಿದ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲವೇ ರಾಜಕಾರಣಿಗಳ ಪೈಕಿ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಕೂಡ ಒಬ್ಬರು. ಕಳೆದ ಎರಡು ದಿನಗಳಲ್ಲಿ ಅವರು ನೀಡಿದ ಎರಡು ಪ್ರತ್ಯೇಕ ಹೇಳಿಕೆಗಳು ಮೇಲಿನ ಮಾತುಗಳಿಗೆ ಪುಷ್ಟಿ ನೀಡಿವೆ.

ಬುಧವಾರ ರಾಜಸ್ಥಾನ ಹಾಗೂ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗಳ ವಿಚಾರದಲ್ಲಿ ಅವರು ಕಾಂಗ್ರೆಸ್ ಜತೆಗಿನ ಹೊಂದಾಣಿಕೆಯನ್ನು ಸ್ಪಷ್ಟ ಮಾತುಗಳನ್ನು ನಿರಾಕರಿಸಿದ್ದಾರೆ. ಅಷ್ಟೆ ಅಲ್ಲ, ಕಾಂಗ್ರೆಸ್ ಪಕ್ಷವನ್ನು ಅವರು ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ, ರಾಜ್ಯದ ನೂತನ ಸಮ್ಮಿಶ್ರ ಸರಕಾರದ ಪ್ರಮಾಣ ವಚನ ವೇದಿಕೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಯಾವತಿಯವರನ್ನು ತಬ್ಬಿ ಹಿಡಿದಿದ್ದರು. ಈ ಚಿತ್ರ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷಗಳ ಮಹಾಮೈತ್ರಿಯ ಮುನ್ಸೂಚನೆ ಎಂದು ಬಿಂಬಿತವಾಗಿತ್ತು. ಆದರೆ, ಅಂತಹದೊಂದು ಆಶಯವನ್ನು ಮಾಯಾವತಿಯವರ ಬುಧವಾರದ ಹೇಳಿಕೆ ಬುಡಮೇಲು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಮಾಯಾವತಿ ಮತ್ತು ಸೋನಿಯಾ ಗಾಂಧಿ. 
ಬೆಂಗಳೂರಿನಲ್ಲಿ ಮಾಯಾವತಿ ಮತ್ತು ಸೋನಿಯಾ ಗಾಂಧಿ. 

ಗಮನಿಸಬೇಕಿರುವುದು ಏನೆಂದರೆ, ಮಂಗಳವಾರ ಮಾಯಾವತಿ ಅಷ್ಟೆ ಕಠೋರವಾಗಿ ಬಿಜೆಪಿ ವಿರುದ್ಧವೂ ಹರಿಹಾಯ್ದಿದ್ದರು. “ಜನ ನಿಮ್ಮನ್ನು ಕ್ಷಮಿಸುವುದಿಲ್ಲ,’’ ಎಂದು ಅವರು ಎಚ್ಚರಿಕೆ ನೀಡಿದ್ದರು. ಉತ್ತರ ಪ್ರದೇಶದ ರೈತರ ಮೇಲೆ ಹೆದ್ದಾರಿಯಲ್ಲಿ ಪೊಲೀಸರು ನಡೆಸಿದ ಪ್ರಹಾರದ ಸಂದರ್ಭವನ್ನು ಬಳಸಿಕೊಂಡ ಅವರು ಕೇಂದ್ರ ಸರಕಾರದ ನಡೆಗಳನ್ನು ಟೀಕಿಸಿದ್ದರು. ಎರಡು ದಿನಗಳ ಅಂತರದಲ್ಲಿ ಮಾಯಾವತಿ ನೀಡಿದ ಎರಡು ಪ್ರತ್ಯೇಕ ಹೇಳಿಕೆಗಳು, ಇವತ್ತಿಗೆ ಬಿಎಸ್‌ಪಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ ಮನಸ್ಥಿತಿಯಲ್ಲಿದೆ ಎಂಬುದನ್ನು ಬಿಂಬಿಸುತ್ತಿದೆ. ಇಷ್ಟಕ್ಕೂ ಮಾಯಾವತಿಯವರ ಈ ಹೇಳಿಕೆಗಳ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಏನಿರಬಹುದು?

“ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರದ ಒಂದೊಂದೂ ಜನ ವಿರೋಧಿ ನಡೆಗಳನ್ನು ಕಟುವಾಗಿ ಟೀಕಿಸಿಕೊಂಡು ಬಂದವರು ಅಕ್ಕ ಮಾಯಾವತಿ. ಅವರಿಗೆ ಬಿಜೆಪಿಯೇತರ ಪಕ್ಷಗಳ ಸಮನ್ವಯ ಅಗತ್ಯ ಅಂತ ಅನ್ನಿಸಿದೆ. ಹಾಗಂತ, ಸ್ವಂತಿಕೆ ಕಳೆದುಕೊಂಡು ಕಾಂಗ್ರೆಸ್ ಜತೆ ಹೋಗಲು ತಯಾರಿಲ್ಲ ಅಷ್ಟೆ,’’ ಎನ್ನುತ್ತಾರೆ ಕರ್ನಾಟಕ ಬಿಎಸ್‌ಪಿಯ ಹಿರಿಯ ನಾಯಕ ಮಾರಸಂದ್ರ ಮುನಿಯಪ್ಪ.

‘ಸಮಾಚಾರ’ದ ಜತೆ ಮಾತನಾಡಿದ ಮುನಿಯಪ್ಪ, ಮಾಯಾವತಿ ಅವರ ಹೇಳಿಕೆಗಳ ಹಿಂದಿನ ರಾಜಕೀಯ ಅನಿವಾರ್ಯತೆಯನ್ನು ಬಿಡಿಸಿಟ್ಟರು.

“ರಾಜಸ್ಥಾನದಲ್ಲಿ ಬಿಎಸ್‌ಪಿ ಈವರೆಗೆ ಪಡೆದ ಮತಗಳ ಆಧಾರದಲ್ಲಿ ಸೀಟು ಹಂಚಿಕೆ ಮಾಡಿ ಎಂದು ಕೇಳಿದ್ದೆವು. ಮಧ್ಯ ಪ್ರದೇಶದಲ್ಲಿಯೂ ಬಿಎಸ್‌ಪಿ ಹಿಂದೆ 25 ಎಂಎಲ್‌ಎಗಳನ್ನು, ಮೂವರು ಎಂಪಿಗಳನ್ನು ಹೊಂದಿತ್ತು. ಈ ಆಧಾರದ ಮೇಲೆ ಸೀಟು ಹಂಚಿಕೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕೊಡಿ ಎಂದು ಕೇಳಿದ್ದೆವು. ಆದರೆ ಕಾಂಗ್ರೆಸ್ ಚೌಕಾಸಿಗೆ ಇಳಿದಿತ್ತು. ಹಿಂದೆ ಗುಜರಾತ್ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೆ ಚೌಕಾಸಿ ನಡೆಸಿ ಬಿಎಸ್‌ಪಿಯನ್ನು ಕಾಂಗ್ರೆಸ್ ದಿಕ್ಕು ತಪ್ಪಿಸಿತ್ತು. ನಮ್ಮ ಸ್ವಾಭಿಮಾನ, ಪಕ್ಷದ ನೆಲೆ ಕಳೆದುಕೊಂಡು ರಾಜಕೀಯ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಾಯಾವತಿ ಅಂತಹದೊಂದು ಹೇಳಿಕೆ ನೀಡಿದ್ದಾರೆ,’’ ಎಂದವರು ಹೇಳುತ್ತಾರೆ.

ಒಂದು ಕಡೆ ಮಾಯಾವತಿಯವರ ಈ ಹೇಳಿಕೆ ಈ ವರ್ಷದ ಅಂತ್ಯದಲ್ಲಿ ನಡೆಯುವ ಎರಡು ವಿಧಾನಸಭಾ ಚುನಾವಣೆಗಳಿಗೆ ಮಾತ್ರವೇ ಸೀಮಿತ ಎಂದು ಪಕ್ಷದೊಳಗಿನ ಕೆಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನೊಂದು ಕಡೆ, ಇದು ಕರ್ನಾಟಕದ ಕಾಂಗ್ರೆಸ್- ಜೆಡಿಎಸ್‌- ಬಿಎಸ್‌ಪಿ ಸಂಬಂಧದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬ ವಿಶ್ವಾಸವನ್ನೂ ಅವರುಗಳು ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ರಾಷ್ಟ್ರ ಮಟ್ಟದಲ್ಲಿ ಬಿಎಸ್‌ಪಿಯ ಆಲೋಚನೆ ಬೇರೆಯದೇ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಖ್ಯವಾಗಿ, ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶದಿಂದ ಕಲಿತ ಪಾಠ. ಎಸ್‌ಪಿ ಮತ್ತು ಬಿಎಸ್‌ಪಿ ಒಟ್ಟಾಗುವ ಮೂಲಕ ಅಧಿಕಾರಕ್ಕೇರಿದ ಬಿಜೆಪಿಯನ್ನು ಉಪ ಚುನಾವಣೆಗಳಲ್ಲಿ ಬಗ್ಗು ಬಡಿಯಲು ಸಾಧ್ಯವಾಗಿತ್ತು. ಇರುವ 80 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಟ 40 ಸ್ಥಾನಗಳನ್ನು ಬಿಎಸ್‌ಪಿ ತನಗೆ ಬೇಕು ಎಂಬ ಲೆಕ್ಕಾಚಾರದಲ್ಲಿದೆ. ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಈಗಾಗಲೇ ‘ಮಹಾ ಮೈತ್ರಿ’ಗಾಗಿ ಕಳೆದುಕೊಳ್ಳಲು ಸಿದ್ಧ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಉಳಿದ ಎಸ್‌ಪಿ ಕೋಟಾದಲ್ಲಿ ಕಾಂಗ್ರೆಸ್‌ ಪಾಲು ಪಡೆದುಕೊಳ್ಳಬೇಕು ಎಂಬ ಇರಾದೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ಇದ್ದ ಹಾಗಿದೆ.

ಮತ್ತೊಂದು ಕಡೆ ವರ್ಷಾಂತ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿ ಹುಟ್ಟಿಕೊಂಡಿರುವ ಆಡಳಿತ ವಿರೋಧಿ ಅಲೆಯನ್ನು ಮೀರಿ ಉತ್ತಮ ಪ್ರದರ್ಶನ ನೀಡಿದರೆ ಬಿಎಸ್‌ಪಿ ತಟಸ್ಥ ನೀತಿಯನ್ನು ಅನುಸರಿಸುವ ಸಾಧ್ಯತೆಗಳಿವೆ ಎನ್ನುತ್ತವೆ ಕೆಲವು ವಿಶ್ಲೇಷಣೆಗಳು. ಹಿಂದೆ ಮಾಯಾವತಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ ಉದಾಹರಣೆಯೂ ಇರುವುದರಿಂದ ಅಧಿಕಾರ ರಾಜಕಾರಣದ ವಿಚಾರದಲ್ಲಿ ಬಿಎಸ್‌ಪಿಯ ಇಂತಹ ತೀರ್ಮಾನಗಳ ಹಿಂದೆ ಅಚ್ಚರಿ ಏನಿಲ್ಲ.

ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯೇತರ ಪಕ್ಷಗಳ ಮೈತ್ರಿ ಸಂಬಂಧ ಮಾಯಾವತಿಯವರ ಹೇಳಿಕೆ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಅಷ್ಟು ಮಾತ್ರವೇ ಸತ್ಯ.