samachara
www.samachara.com
ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?
COVER STORY

ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮಹಿಳೆಯರನ್ನು ಬೀದಿಗಿಳಿಸಿರುವ ಹಿಂದುತ್ವ ಶಕ್ತಿಗಳು, ಮಹಿಳೆಯರನ್ನು ಹಣಿಯಲು ಮಹಿಳೆಯರನ್ನೇ ಗುರಾಣಿಯಂತೆ ಬಳಸಿಕೊಳ್ಳುತ್ತಿವೆ.

ದಯಾನಂದ

ದಯಾನಂದ

ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್‌ ನೀಡಿರುವ ಬೆನ್ನಲ್ಲೇ ಕೇರಳದಲ್ಲಿ ಈ ತೀರ್ಪಿನ ವಿರುದ್ಧ ಮಹಿಳೆಯರು ತಿರುಗಿಬಿದ್ದಿದ್ದಾರೆ. ಮಹಿಳಾ ಪರವಾದ ಈ ತೀರ್ಪನ್ನು ಮಹಿಳೆಯರ ಮೂಲಕವೇ ವಿರೋಧಿಸಲು ಸಾವಿರಾರು ಸಂಖ್ಯೆಯ ಮಹಿಳೆಯರನ್ನು ಮಂಗಳವಾರ ಕೇರಳದ ಹಲವು ಕಡೆಗಳಲ್ಲಿ ಬೀದಿಗಿಳಿಸಲಾಗಿದೆ.

ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಸಂಘಟನೆ ಹೆಸರಿನಲ್ಲಿ ಬೀದಿಗಿಳಿಸಿದ್ದ ಸಾವಿರಾರು ಮಹಿಳೆಯರು ಕೇರಳದ ಹಲವು ಕಡೆಗಳಲ್ಲಿ ಹೆದ್ದಾರಿ ತಡೆ ನಡೆಸಿ ಸುಪ್ರೀಂಕೋರ್ಟ್‌ ತೀರ್ಪನ್ನು ವಿರೋಧಿಸಿದ್ದಾರೆ. ಮಹಿಳೆಯರ ಮೂಲಕ ಮಹಿಳಾ ಪರವಾದ ತೀರ್ಪನ್ನು ವಿರೋಧಿಸುವ ಬೀದಿ ನಾಟಕವನ್ನು ಮಂಗಳವಾರ ಹಿಂದುತ್ವ ಸಂಘಟನೆಗಳು ಕೇರಳದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಿವೆ!

ಮುಟ್ಟಿನ ಕಾರಣದಿಂದ 10 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ನಿಷೇಧಿಸಲಾಗಿತ್ತು. ಇದು ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆ ಎಂದಿದ್ದ ಸುಪ್ರೀಂಕೋರ್ಟ್‌, “ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ಮುಕ್ತ” ಎಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು.

ಈ ತೀರ್ಪು ನೀಡಿದ್ದ ನ್ಯಾಯಪೀಠದಲ್ಲಿದ್ದ ಒಬ್ಬರೇ ಮಹಿಳಾ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರೇ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು. “ಧಾರ್ಮಿಕ ನಂಬಿಕೆಗಳಲ್ಲಿ ನ್ಯಾಯಾಂಗದ ಮಧ್ಯ ಪ್ರವೇಶ ಸರಿಯಲ್ಲ” ಎಂದು ಇಂದೂ ಮಲ್ಹೋತ್ರಾ ಅಭಿಪ್ರಾಯ ಪಟ್ಟಿದ್ದರು. ಶಬರಿಮಲೆಗೆ ಮಹಿಳೆಯರು ಹೋಗುವುದಕ್ಕೆ ಮಹಿಳೆಯರೇ ವಿರೋಧಿಸುತ್ತಿದ್ದಾರೆ ಎಂದು ಹಿಂದುತ್ವ ಸಂಘಟನೆಗಳು ಬೊಬ್ಬೆ ಹೊಡೆಯುವುದಕ್ಕೆ ನ್ಯಾಯಪೀಠದಿಂದಲೇ ‘ನೆವ’ವೊಂದು ಸಿಕ್ಕಿತ್ತು.

ಇಂದೂ ಮಲ್ಹೋತ್ರಾ ಅವರ ಅಭಿಪ್ರಾಯವನ್ನೇ ಮುಂದು ಮಾಡಿಕೊಂಡು ಹಿಂದುತ್ವ ಸಂಘಟನೆಗಳು ಈಗ ಮಹಿಳೆಯರ ಮೂಲಕವೇ ಸುಪ್ರೀಂಕೋರ್ಟ್‌ ತೀರ್ಪನ್ನು ವಿರೋಧಿಸಲು ಮುಂದಾಗಿದೆ. ಇದರ ಪರಿಣಾಮವೇ ಮಂಗಳವಾರ ಸಾವಿರಾರು ಮಹಿಳೆಯರು ಬೀದಿಗಿಳಿದು ಸುಪ್ರೀಂಕೋರ್ಟ್‌ ತೀರ್ಪನ್ನು ವಿರೋಧಿಸಿದ್ದು.

“ಮಹಿಳೆಯರು ಶಬರಿಮಲೆ ದೇಗುಲಕ್ಕೆ ಪ್ರವೇಶ ಬಯಸುತ್ತಿರುವುದೇ ಕೇರಳದಲ್ಲಿ ಮಹಾ ಪ್ರವಾಹ ಉಂಟಾಗಲು ಕಾರಣ”, “ಬಿಷಪ್‌ ಫ್ರಾಂಕೋ ವಿರುದ್ಧ ಕೇರಳದ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರದ ಆರೋಪ ಮಾಡಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಉಂಟಾಯಿತು” ಎಂಬ ವಿತಂಡವಾದವನ್ನು ಮಹಿಳಾ ವಿರೋಧಿಗಳು ಪ್ರವಾಹದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದರು. ಒಂದು ವೇಳೆ ಕೇರಳದಲ್ಲಿ ಪ್ರವಾಹ ಉಂಟಾಗುವ ಮೊದಲೇ ಸುಪ್ರೀಂಕೋರ್ಟ್‌ನ ಈ ತೀರ್ಪು ಬಂದಿದ್ದರೆ ಪ್ರವಾಹಕ್ಕೆ ಈ ತೀರ್ಪೇ ಕಾರಣ ಎಂದು ಹಬ್ಬಿಸಲಾಗುತ್ತಿತ್ತು!

ಮಹಿಳೆರ ಮೂಲಕವೇ ಮಹಿಳಾಪರವಾದ ತೀರ್ಪನ್ನು ವಿರೋಧಿಸುವ ವ್ಯವಸ್ಥಿತ ಕೃತ್ಯವನ್ನು ಹಿಂದುತ್ವ ಸಂಘಟನೆಗಳ ಪುರುಷ ಪ್ರಧಾನ ಮನಸ್ಸುಗಳು ಮಾಡುತ್ತಿವೆ. ಮುಟ್ಟು ಹಾಗೂ ಇತರೆ ಜೈವಿಕ ಬದಲಾವಣೆಗಳ ಕಾರಣಕ್ಕೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಮಹಿಳೆಯರನ್ನು ಧಾರ್ಮಿಕ ಆಚರಣೆಗಳಿಂದ ದೂರವೇ ಇಡಲಾಗಿದೆ. ಸೃಷ್ಟಿಕ್ರಿಯೆಗೆ ಕಾರಣವಾಗುವ ಮುಟ್ಟನ್ನು ಮೈಲಿಗೆ ಎಂದು ಬಿಂಬಿಸಿರುವ ಪುರುಷ ಪ್ರಧಾನ ಸಮಾಜ, ಮುಟ್ಟಿನ ಮೂಲವನ್ನೇ ಕೊಳಕು ಎಂದು ಸಾವಿರಾರು ವರ್ಷಗಳಿಂದ ಮಹಿಳೆಯರಲ್ಲಿ ಮೌಢ್ಯ ಬಿತ್ತುತ್ತಾ ಬಂದಿದೆ.

ಇಂಥ ರೂಢಿಗತ ಮೌಢ್ಯಗಳ ಅಡಿಪಾಯವನ್ನೇ ಅಲುಗಾಡಿಸುವಂಥ ತೀರ್ಪನ್ನು ಸುಪ್ರೀಂಕೋರ್ಟ್‌ ನೀಡಿರುವುದರಿಂದ ಸಹಜವಾಗಿಯೇ ಈ ಮೌಢ್ಯ ಬಿತ್ತುತ್ತಾ ಬಂದ ಪುರುಷ ಪ್ರಧಾನ ಸಮಾಜಕ್ಕೆ ಈಗ ಮರ್ಮಾಘಾತವಾದಂತಾಗಿದೆ. ಹೀಗಾಗಿ ಸುಪ್ರೀಂಕೋರ್ಟ್‌ ತೀರ್ಪನ್ನು ವಿರೋಧಿಸಲು ಈಗ ಮಹಿಳೆಯರನ್ನೇ ಗುರಾಣಿಗಳಂತೆ ಮುಂದಿಟ್ಟುಕೊಳ್ಳಲಾಗಿದೆ. ಆದರೆ, ತಮ್ಮನ್ನು ಗುರಾಣಿಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ‘ಅರಿವು’ ಇನ್ನೂ ಬೀದಿಗಿಳಿದ ಈ ಮಹಿಳೆಯರಿಗೆ ಬಂದಂತಿಲ್ಲ.

ಪುರುಷ ಪ್ರಧಾನ ವ್ಯವಸ್ಥೆ ಹಿಂದಿನಿಂದಲೂ ಮಹಿಳೆಯರಲ್ಲಿ ಮೌಢ್ಯ ಬಿತ್ತುತ್ತಾ ಅವರನ್ನು ಶೋಷಣೆ ಮಾಡಿಕೊಂಡೇ ಬಂದಿದೆ. ಈಗ ಕೇರಳದಲ್ಲಿ ನಡೆಯುತ್ತಿರುವ ಮಹಿಳೆರಯ ಪ್ರತಿಭಟನೆಯ ಹಿಂದೆಯೂ ಕೆಲಸ ಮಾಡುತ್ತಿರುವುದು ಜೆಂಡರ್‌ ಪಾಲಿಟಿಕ್ಸ್‌ (ಲಿಂಗ ರಾಜಕಾರಣ). ಮಹಿಳೆಯರನ್ನು ಮುಂದಿಟ್ಟುಕೊಂಡು ಮಹಿಳಾ ಪರವಾದ ತೀರ್ಪನ್ನು ವಿರೋಧಿಸುವ ಹೀನ ಕೆಲಸಕ್ಕೆ ಹಿಂದುತ್ವವಾದಿಗಳು ಮುಂದಾಗಿದ್ದಾರೆ.
- ಕೆ.ಎಸ್‌. ವಿಮಲಾ, ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ

ಎರಡು ವರ್ಷಗಳ ಹಿಂದೆ ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ಶನಿ ಶಿಂಗ್ಣಾಪುರದ ಶನಿ ಶಿಲೆ ಸ್ಪರ್ಶಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಪ್ರತಿಭಟನೆಗೆ ಇಳಿದ್ದರು. ಆಗ ತೃಪ್ತಿ ದೇಸಾಯಿಯನ್ನು ವಿರೋಧಿಸಿದ್ದೂ ಇದೇ ಪುರುಷ ಪ್ರಧಾನ ವ್ಯವಸ್ಥೆಯ ಮೌಢ್ಯಕ್ಕೆ ತುತ್ತಾದಂತಿದ್ದ ಮಹಿಳೆಯರು. ಬಾಂಬೆ ಹೈಕೋರ್ಟ್‌, “ಮಹಿಳೆಗೂ ಧಾರ್ಮಿಕ ಹಕ್ಕಿದೆ. ಅದನ್ನು ರಕ್ಷಿಸುವುದು ಸರಕಾರದ ಕರ್ತವ್ಯ” ಎಂದು ಸರಕಾರದ ಕೆಲಸವನ್ನು ನೆನಪಿಸುವವರೆಗೂ ಶಿಂಗ್ಣಾಪುರದ ಶನಿ ಶಿಲೆಯ ಪೂಜೆಗೆ ಮಹಿಳೆಯರನ್ನು ನಿರ್ಬಂಧಿಸಲಾಗಿತ್ತು.

ಕೇವಲ ಧಾರ್ಮಿಕ ವಿಚಾರಗಳಲ್ಲಿ ಮಾತ್ರವಲ್ಲ ಮಹಿಳಾ ಪರವಾದ ಯಾವುದೇ ಬದಲಾವಣೆಗಳು ಬರುವ ಸಂದರ್ಭದಲ್ಲೂ ಪುರುಷ ಪ್ರಧಾನ ಮನಸ್ಸು ಹಾಗೂ ಹಿಂದುತ್ವ ಶಕ್ತಿಗಳು ಅದನ್ನು ಮಹಿಳೆಯರ ಮೂಲಕವೇ ವಿರೋಧಿಸುವ ನಾಟಕವನ್ನು ಹಿಂದಿನಿಂದಲೂ ಮಾಡಿಕೊಂಡೇ ಬಂದಿವೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ವಿಚಾರ ಬಂದಾಗ ಬಿಜೆಪಿ ಅದನ್ನು ವಿರೋಧಿಸಲು ಗುರಾಣಿಯಂತೆ ಮುಂದಿಟ್ಟುಕೊಂಡಿದ್ದು ಉಮಾಭಾರತಿಯನ್ನು.

ಮಹಿಳೆಯರ ಮೂಲಕವೇ ಮಹಿಳಾ ಪರವಾದ ಬದಲಾವಣೆಗಳನ್ನು ಹಣಿಯುವ ಪ್ರಯತ್ನವನ್ನು ಹಿಂದಿನಿಂದಲೂ ಹಿಂದುತ್ವ ಶಕ್ತಿಗಳು ಮಾಡಿಕೊಂಡೇ ಬರುತ್ತಿವೆ. ಆದರೆ, ತಮ್ಮನ್ನು ತುಳಿಯಲು ತಮ್ಮನ್ನೇ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಎಚ್ಚರ ಇನ್ನೂ ಬಹುತೇಕ ಮಹಿಳೆಯರಲ್ಲಿ ಬಂದಿಲ್ಲ. ಎಚ್ಚರಗೊಳ್ಳದ ಮಟ್ಟಕ್ಕೆ ಮಹಿಳೆಯರನ್ನು ಮೌಢ್ಯದ ಕತ್ತಲಲ್ಲಿ ಇರಿಸಿರುವುದೂ ಇದೇ ಪುರುಷ ಪ್ರಧಾನ ವ್ಯವಸ್ಥೆಯ ಹಿಂದುತ್ವ ಶಕ್ತಿಗಳು. ಧಾರ್ಮಿಕ ನಂಬಿಕೆಯ ಹೆಸರಲ್ಲಿ ತಮ್ಮ ವಿರುದ್ಧ ತಾವೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹೆಣ್ಣುಮಕ್ಕಳಿಗೆ ಇದು ಅರ್ಥವಾಗದೆ ಇರುವುದು ಮಾತ್ರ ದುರಂತ.