samachara
www.samachara.com
‘ಚಾಂಪಿಯನ್ಸ್ ಆಫ್‌ ದ ಅರ್ಥ್’: ಪ್ರಶಸ್ತಿ, ವಾಸ್ತವದ ವ್ಯಂಗ್ಯ & ಮೋದಿ ಮೀಡಿಯಾ ಮ್ಯಾನೇಜ್‌ಮೆಂಟ್‌
COVER STORY

‘ಚಾಂಪಿಯನ್ಸ್ ಆಫ್‌ ದ ಅರ್ಥ್’: ಪ್ರಶಸ್ತಿ, ವಾಸ್ತವದ ವ್ಯಂಗ್ಯ & ಮೋದಿ ಮೀಡಿಯಾ ಮ್ಯಾನೇಜ್‌ಮೆಂಟ್‌

ಪರಿಸರ ವಿಚಾರದಲ್ಲಿ ಕಾಂಗ್ರೆಸ್‌ ನಡೆ ಕೆಟ್ಟದಾಗಿತ್ತು. ಬಿಜೆಪಿಯದ್ದು ಅದಕ್ಕಿಂತಲೂ ಕೆಟ್ಟದಾಗಿದೆ ಎನ್ನುತ್ತಾರೆ ಸಂಶೋಧಕ ಆಶೀಷ್ ಕೊಠಾರಿ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ‘ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌ ಪ್ರಶಸ್ತಿ’ ಪಡೆದಿದ್ದಾರೆ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ)‘ವು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಚಾಂಪಿಯನ್ಸ್‌ ಆಫ್‌ ದ ಅರ್ಥ್’ ಪ್ರಶಸ್ತಿ ನೀಡಿದೆ.

‘ಪಾಲಿಸಿ ಲೀಡರ್‌ಶಿಪ್‌’ ವಿಭಾಗದಲ್ಲಿ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ರನ್‌ ಜತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಸ್ವೀಕರಿಸಲಿದ್ದು ಈಗಾಗಲೇ ಈ ಸಂಬಂಧ ‘ಡಂಗುರ ಸಾರುವ’ ಕೆಲಸಕ್ಕೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಇಂದಿನ ದೇಶದ ಪ್ರಮುಖ ಪತ್ರಿಕೆಗಳ ಮುಖಪುಟವನ್ನು ನರೇಂದ್ರ ಮೋದಿ ಹಾಗೂ ಈ ಪ್ರಶಸ್ತಿ ಅಲಂಕರಿಸಿವೆ.

ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರಿಸರದ ನಾಯಕತ್ವ, ಅವರ ನೇತೃತ್ವದಲ್ಲಿ 2022ರ ವೇಳೆಗೆ ದೇಶದಲ್ಲಿ ಎಲ್ಲಾ ಏಕ-ಬಳಕೆಯ ಪ್ಲ್ಯಾಸ್ಟಿಕ್‌ಗಳನ್ನು ತೊಡೆದುಹಾಕುವ ಪ್ರತಿಜ್ಞೆ, ಜತೆಗೆ ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಅವರು ನೀಡಿದ ಬೆಂಬಲ ಮತ್ತು ಸೌರ ವಿದ್ಯುತ್‌ ಹೆಚ್ಚಳಕ್ಕೆ ಜಾಗತಿಕ ಪಾಲುದಾರಿಕೆಯ ನಿರ್ಧಾರಕ್ಕಾಗಿ ಈ ಪ್ರಶಸ್ತಿ ನೀಡುತ್ತಿರುವುದಾಗಿ ಯುಎನ್‌ಇಪಿ ಹೇಳಿದೆ.

ಚುನಾವಣಾ ವರ್ಷದಲ್ಲಿ ನೀಡಿದ ಈ ಪ್ರಶಸ್ತಿಯನ್ನು ಮೋದಿ ಸರಕಾರ ತುಸು ಹೆಚ್ಚೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಆದರೆ ಆಳಕ್ಕಿಳಿದರೆ (ಕ್ಷಮಿಸಿ) ಈ ಪ್ರಶಸ್ತಿಯ ಬಂಡವಾಳ ಬಯಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಈ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯನ್ನು ಫ್ರಾನ್ಸ್‌ ಅಧ್ಯಕ್ಷರ ಜತೆ ಅವರು ಹಂಚಿಕೊಂಡಿದ್ದಾರೆ. ಜತೆಗೆ ಈ ಪ್ರಶಸ್ತಿ ಪಡೆಯುತ್ತಿರುವ ಮೊದಲಿಗರೂ ಪ್ರಧಾನಿ ನರೇಂದ್ರ ಮೋದಿಯಲ್ಲ. ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಎಚ್‌.ಇ. ಮೊಹಮ್ಮದ್‌ ನಶೀದ್‌, ಇಂಡೋನೇಷ್ಯಾ ಮಾಜಿ ಅಧ್ಯಕ್ಷ ಎಚ್‌.ಇ. ಸುಸಿಲೋ ಬಾಂಬ್ಯಾಗ್‌ ಯುಧೊಯೊನೊ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಕೂಡ ಈ ಪ್ರಶಸ್ತಿ ಪಡೆದಿದ್ದಾರೆ.

ಭಾರತೀಯರಿಗೂ ಈ ಪ್ರಶಸ್ತಿ ಹೊಸದಲ್ಲ. ಎಂಟ್ರಪ್ರಿರಿಯಲ್‌ ವಿಷನ್‌ ವಿಭಾಗದಲ್ಲಿ 2009ರಲ್ಲಿ ತುಳಸಿ ತಂತಿ, 2010ರಲ್ಲಿ ವಿನೋದ್‌ ಖೋಸ್ಲಾ, ಜತೆಗೆ ಇದೇ ವರ್ಷ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಪ್ರಶಸ್ತಿ ಬಂದಿದೆ. 2013ರಲ್ಲಿ ವಿಜ್ಞಾನ ಮತ್ತು ಅನ್ವೇಷಣೆ ವಿಭಾಗದಲ್ಲಿ ಭಾರತದ ವೀರಭದ್ರನ್‌ ರಾಮನಾಥನ್ ಇದೇ ವಿಶ್ವಸಂಸ್ಥೆಯ ‘ಪರಿಸರ ಕಾರ್ಯಕ್ರಮ’ದ ಪ್ರಶಸ್ತಿ ಪಡೆದಿದ್ದಾರೆ. ಆದರೆ ಅವರು ಯಾರೂ ಪಡೆದುಕೊಳ್ಳದ ಮತ್ತು ಪಡೆಯಲು ಯತ್ನಿಸದ ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಪಡೆದುಕೊಳ್ಳುತ್ತಿದ್ದಾರೆ. ಯಾಕೆ?

2013ರಲ್ಲಿ ‘ಚಾಂಪಿಯನ್ಸ್‌ ಆಫ್ ದಿ ಅರ್ಥ್’ ಪ್ರಶಸ್ತಿ ಪಡೆದಿದ್ದ ವೀರಭದ್ರನ್‌ ರಾಮನಾಥನ್
2013ರಲ್ಲಿ ‘ಚಾಂಪಿಯನ್ಸ್‌ ಆಫ್ ದಿ ಅರ್ಥ್’ ಪ್ರಶಸ್ತಿ ಪಡೆದಿದ್ದ ವೀರಭದ್ರನ್‌ ರಾಮನಾಥನ್

ಹಾಸ್ಯಾಸ್ಪದ:

ಇದು ಒಂದು ಕಥೆಯಾದರೆ ಇತ್ತ ಪ್ರಧಾನಿ ನರೇಂದ್ರ ಮೋದಿ ಸಂಭ್ರಮಾಚರಣೆಯಲ್ಲಿರುವಾಗಲೇ ಅವರ ವಿರುದ್ಧ ತಿರುಗಿ ಬಿದ್ದಿರುವ ಪರಿಸರವಾದಿಗಳು ಪ್ರಶಸ್ತಿ ಬಂದಿರಿವುದು ಹಾಸ್ಯಾಸ್ಪದ ಬೆಳವಣಿಗೆ ಎಂದು ಕರೆದಿದ್ದಾರೆ. ಪರಿಸರಕ್ಕೆ ಸಂಬಂಧಿಸಿದಂತೆ ಮೋದಿಯ ಬದ್ಧತೆಯ ಬಗೆಗಿನ ಅಂತಾರಾಷ್ಟ್ರೀಯ ಗ್ರಹಿಕೆ ಮತ್ತು ತಳಮಟ್ಟದಲ್ಲಿ ಅವರ ಸರ್ಕಾರದ ನೀತಿಗಳ ನಡುವೆ ದೊಟ್ಟ ಕಂದಕವಿದೆ ಎಂದಿದ್ದಾರೆ.

ಉದಾಹರಣೆ ವಾರಣಾಸಿಯಲ್ಲಿ ಗಂಗಾ ತಟದಲ್ಲಿರುವ ದೇಶದಲ್ಲಿರುವ ಏಕೈಕ ಆಮೆ ವನ್ಯಜೀವಿ ಅಭಯಾರಣ್ಯವನ್ನು ಪ್ರಶ್ನಾರ್ಹ ರೀತಿಯಲ್ಲಿ ಇದೇ ವಾರ ಡಿನೋಟಿಫಿಕೇಶನ್‌ ಮಾಡಲಾಯಿತು. ಹೊಸ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಲು ಒಳನಾಡು ಜಲ ಸಾರಿಗೆ ಸ್ಥಾಪಿಸಲು ಹೀಗೊಂದು ಡಿನೋಟಿಫಿಕೇಷನ್‌ ಮಾಡಲಾಯಿತು ಎಂದು ದೂರುತ್ತಾರೆ ಬರಹಗಾರ ಬಹರ್‌ ದತ್ತಾ.

ಇದಲ್ಲದೆ ‘ವಿಜ್ಞಾನ ಮತ್ತು ಪರಿಸರ ಕೇಂದ್ರ’ವು ಮೋದಿ ಸರಕಾರದ ನೀತಿಗಳನ್ನು ಟೀಕಿಸುತ್ತಾ ಬಂದಿದೆ. ಭಾರತದ ಕೈಗಾರಿಕೊದ್ಯಮಿಗಳ ಒಕ್ಕೂಟ ನೀಡಿದ 60 ಬೇಡಿಕೆಗಳನ್ನು ಮೋದಿ ಸರಕಾರ ಒಪ್ಪಿಕೊಂಡು ಜಾರಿಗೆ ತಂದಿದೆ. ಇವುಗಳು ಪರಿಸರಕ್ಕೆ ವಿರೋಧವಾಗಿದೆ ಎಂಬುದು ಅದರ ವಾದ. ಕೈಗಾರಿಕಾ ಯೋಜನೆಗಳಿಗೆ ಸುಲಭವಾಗಿ ವನ್ಯಜೀವಿ ಪರವಾನಿಗೆಗಳನ್ನು ನೀಡುವುದು, ರಾಷ್ಟ್ರೀಯ ಅರಣ್ಯ ನೀತಿಯ ಕರಡನ್ನು ಸಿದ್ಧಪಡಿಸಿದ್ದು ಅರಣ್ಯಕ್ಕೆ ಸಂಬಂಧಿಸಿದ ಉದ್ಯಮಗಳನ್ನು ಇದು ಉತ್ತೇಜಿಸುವಂತಿದೆ ಎಂಬ ಅದು ಕಿಡಿಕಾರಿದೆ.

ಇದಲ್ಲದೆ ‘ಕರಾವಳಿ ನಿಯಂತ್ರಣ ವಲಯ’ದ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದ್ದು ಇದು ಕರಾವಳಿ ಭದ್ರತೆಯನ್ನು ಕಡಿತಗೊಳಿಸಿದೆ ಎನ್ನುವ ಗಂಭೀರ ಆರೋಪಗಳಿವೆ. ಇವೆಲ್ಲದರ ಒಟ್ಟು ಸ್ವರೂಪ ಎಂಬಂತೆ ಎನ್ವಿರಾನ್‌ಮೆಂಟಲ್ ಪರ್ಫಾರ್ಮೆನ್ಸ್‌ ಇಂಡೆಕ್ಸ್‌ 2018ರ ಶ್ರೇಯಾಂಕದಲ್ಲಿ ಭಾರತ 180 ದೇಶಗಳಲ್ಲಿ 177ನೇ ಸ್ಥಾನ ಪಡೆದಿದೆ. 2016ರಲ್ಲಿ ಇದ್ದ 141ನೇ ಸ್ಥಾನದಿಂದ 36 ಸ್ಥಾನ ಕುಸಿತ ಕಂಡು ಪಟ್ಟಿಯಲ್ಲಿ ಕೆಳಗಿನಿಂದ ನಾಲ್ಕನೇ ರ್ಯಾಂಕಿಂಗ್‌ನಲ್ಲಿದೆ!

ವೈರುಧ್ಯಗಳು:

ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿಗೆ ಇಂಥಹದ್ದೊಂದು ಪ್ರಶಸ್ತಿ ನೀಡಲು ಹಳ್ಳಿಗಳಿಗೆ ವಿದ್ಯುದೀಕರಣ ಮಾಡಿರುವುದು ಮತ್ತು ಸ್ವಚ್ಛ ಭಾರತ ಯಶಸ್ವಿಯಾಗಿರುವುದೂ ಕಾರಣ ಎನ್ನುತ್ತಾರೆ ಯುಎನ್‌ಇಪಿ ಮುಖ್ಯಸ್ಥ ಎರಿಕ್‌ ಸೋಲೆಮ್‌. ಆದರೆ ಅದೇ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಬಾರತಕ್ಕೆ ಭೇಟಿ ನೀಡಿದ ನಂತರ ‘ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಪ್ರಧಾನಿ ಮೋದಿ ಸರಕಾರದ ಯೋಜನೆ ಯಶಸ್ವಿಯಾಗಿಲ್ಲ. ಮತ್ತು ಸರಿಯಾಗಿ ಕೆಲಸ ಮಾಡುತ್ತಿಲ್ಲ,’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪರಿಸರ ಸಂಶೋಧಕ ಕಂಚಿ ಕೊಹ್ಲಿ, “ಭಾರತವನ್ನು ಚಾಂಪಿಯನ್ ಆಫ್‌ ಅರ್ಥ್‌ ಎಂದು ಪರಿಗಣಿಸಿರುವುದು ಮತ್ತು ಪ್ರಧಾನ ಮಂತ್ರಿಯನ್ನು ಪ್ರಶಸ್ತಿ ವಿಜೇತರಾಗಿ ಘೋಷಿಸಿರುವುದು ದೊಡ್ಡ ವ್ಯಂಗ್ಯ,” ಎಂದು ಕರೆದಿದ್ದಾರೆ. ದೇಶ ನೀರಿನ ತೀವ್ರ ಕೊರತೆ ಮತ್ತು ವಾಯು ಗುಣಮಟ್ಟ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಅಂತರ್ಜಲ ಒತ್ತಡ ಮತ್ತು ಭೂಮಿಯ ಬಳಕೆಯ ಬಗ್ಗೆ ಸಂಘರ್ಷಗಳು ನಡೆಯುತ್ತಿವೆ. ಇವುಗಳೆಲ್ಲವೂ ಜೀವನ ಮತ್ತು ಜನರ ಜೀವನೋಪಾಯದ ಮೇಲೆ ಪ್ರಭಾವ ಬೀರುತ್ತಿವೆ. ಇಂತಹ ಹೊತ್ತಲ್ಲಿ ಈ ಪ್ರಶಸ್ತಿ ಬಂದಿದೆ. ಅನೇಕ ಪರಿಸರ ಕಾನೂನುಗಳು ಈಗಾಗಲೇ ದುರ್ಬಲಗೊಂಡಿವೆ ಅಥವಾ ವ್ಯವಹಾರವನ್ನು ಸುಲಭವಾಗಿ (ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌) ಮಾಡುವ ಕಾರಣ ಮುಂದಿಟ್ಟು ಅವುಗಳ ತಿದ್ದುಪಡಿ ಪ್ರಕ್ರಿಯೆ ಜಾರಿಯಲ್ಲಿದೆ. ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ನ ನಿಷೇಧ, ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ವಿಸ್ತರಣೆಯನ್ನು ಪರಿಸರ ನ್ಯಾಯಕ್ಕೆ ಸಂಬಂಧಿಸಿದ ಇತರ ಹಲವು ನಿರ್ಧಾರಗಳ ಜತೆಗಿಟ್ಟು ನೋಡಬೇಕು,” ಎಂದವರು ಕಿಡಿಕಾರಿದ್ದಾರೆ.

ಪರಿಸರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಡೆ ಕೆಟ್ಟದಾಗಿತ್ತು. ಆದರೆ ಬಿಜೆಪಿಯದ್ದು ಅದಕ್ಕಿಂತಲೂ ಕೆಟ್ಟದಾಗಿದೆ ಎನ್ನುತ್ತಾರೆ ಕಲ್ಪವೃಕ್ಷ ಪುಣೆಯ ಸಂಶೋಧಕ ಆಶೀಷ್ ಕೊಠಾರಿ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ‘ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌ ಪ್ರಶಸ್ತಿ’ ಪಡೆದಿದ್ದಾರೆ. ಮತ್ತದಕ್ಕೆ ವಿಪರೀತ ಪ್ರಚಾರವನ್ನು ಪಡೆಯುವ ಸನ್ನಾಹದಲ್ಲಿದ್ದಾರೆ. ಇದಕ್ಕೆ ಕನ್ನಡದಲ್ಲಿರುವ ಸುಂದರ ಪದ ವೈರುಧ್ಯ!

ಪೂರಕ ಮಾಹಿತಿ: ದಿ ವೈರ್‌