ಸಂಕಷ್ಟದಲ್ಲಿ ಐಎಲ್‌&ಎಫ್‌ಎಸ್‌; ನಮ್ಮ ಮೆಟ್ರೋಗೆ ತಟ್ಟಿದ ಬಿಸಿ
COVER STORY

ಸಂಕಷ್ಟದಲ್ಲಿ ಐಎಲ್‌&ಎಫ್‌ಎಸ್‌; ನಮ್ಮ ಮೆಟ್ರೋಗೆ ತಟ್ಟಿದ ಬಿಸಿ

ನಮ್ಮ ಮೆಟ್ರೋದ ಕಾಮಗಾರಿಗಳು ಮೊದಲೇ ಆಮೆಗತಿಯಲ್ಲಿ ಸಾಗುವುದಕ್ಕೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೀಗ ಐಎಲ್‌&ಎಫ್‌ಎಸ್‌ನ ಸಂಕಷ್ಟದ ನಂತರ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ ಮೆಟ್ರೋದ ಪರಿಸ್ಥಿತಿ.

ಇನ್ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆಂಡ್‌ ಫೈನಾನ್ಸ್‌ ಸರ್ವಿಸಸ್‌ (ಐಎಲ್‌&ಎಫ್‌ಎಸ್‌) ಗ್ರೂಪ್ ಸಾಲದ ಸುಳಿಯಲ್ಲಿ ಸಿಲುಕಿದೆ. ಇದು ಬೆಂಗಳೂರಿನ ನಮ್ಮ ಮೆಟ್ರೋದ ಮೇಲೂ ಪರಿಣಾಮ ಬೀರಿದೆ. ನಮ್ಮ ಮೆಟ್ರೋದ ಎರಡು ಗುತ್ತಿಗೆಗಳನ್ನು ‘ಐಎಲ್‌&ಎಫ್‌ಎಸ್‌’ನ ಇಂಜಿನಿಯರಿಂಗ್‌ ಆಂಡ್‌ ಕನ್‌ಸ್ಟ್ರಕ್ಷನ್‌ ಕಂಪನಿ ಪಡೆದುಕೊಂಡಿತ್ತು. ಇದೀಗ ಹಣವಿಲ್ಲದೆ ಕಂಪನಿ ಒದ್ದಾಡುತ್ತಿದ್ದು ಅದರ ಪರಿಣಾಮ ಮೆಟ್ರೋ ಕಾಮಗಾರಿ ಮೇಲಾಗಿದೆ.

ನಮ್ಮ ಮೆಟ್ರೋದ ಕಾಮಗಾರಿಗಳು ಮೊದಲೇ ಆಮೆಗತಿಯಲ್ಲಿ ಸಾಗುವುದಕ್ಕೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೀಗ ಐಎಲ್‌&ಎಫ್‌ಎಸ್‌ನ ಸಂಕಷ್ಟದ ನಂತರ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ ಮೆಟ್ರೋದ ಪರಿಸ್ಥಿತಿ.

ಮೈಸೂರು ರಸ್ತೆ ನಿಲ್ದಾಣದಿಂದ-ಕೆಂಗೇರಿವರೆಗಿನ ಕಾಮಗಾರಿ ಮತ್ತು ಔಟರ್‌ ರಿಂಗ್‌ ರೋಡ್‌ನಲ್ಲಿ ಕೆ.ಆರ್‌.ಪುರಂನಿಂದ ಸಿಲ್ಕ್‌ ಬೋರ್ಡ್‌ವರೆಗಿನ ಕಾಮಗಾರಿಯನ್ನು ಕಂಪನಿ ಪಡೆದುಕೊಂಡಿದೆ. ಏಪ್ರಿಲ್‌ 2015ರಲ್ಲಿ ಮೈಸೂರು ರಸ್ತೆ ನಿಲ್ದಾಣದಿಂದ ಪಟ್ಟಣಗೆರೆ (ರೀಚ್‌ 2ಎ) ವರೆಗಿನ 3.95 ಕಿಲೋಮೀಟರ್‌ ಉದ್ದದ ಮೇಲ್ದರ್ಜೆಗೇರಿಸಿದ ಟ್ರಾಕ್‌ ನಿರ್ಮಾಣ ಮತ್ತು ನಿಲ್ದಾಣಗಳ ನಿರ್ಮಾಣದ ಗುತ್ತಿಗೆಯನ್ನು ಐಎಲ್‌&ಎಫ್‌ಎಸ್‌ ಪಡೆದುಕೊಂಡಿತ್ತು. 327 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ಪ್ರಕಾರ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ ಮತ್ತು ಪಟ್ಟಣಗೆರೆ ನಿಲ್ದಾಣಗಳನ್ನೂ ಕಂಪನಿ ನಿರ್ಮಿಸಬೇಕಾಗಿತ್ತು.

ಅಂದುಕೊಂಡಂತೆ ನಡೆದಿದ್ದರೆ 2015ರ ಏಪ್ರಿಲ್‌ನಿಂದ 27 ತಿಂಗಳುಗಳ ಅವಧಿಯಲ್ಲಿ ಈ ಯೋಜನೆಯನ್ನು ಐಎಲ್‌&ಎಫ್‌ಎಸ್‌ ಮುಗಿಸಿ ಕೊಡಬೇಕಾಗಿತ್ತು. ಆದರೆ ಹಲವು ಗಡುವುಗಳನ್ನು ದಾಟಿ ಇನ್ನೂ ಕಾಮಗಾರಿ ಮುಗಿದಿಲ್ಲ. ಈ ಕಾರಣಕ್ಕೆ ಬಿಎಂಆರ್‌ಸಿಎಲ್‌ ಒಂದು ಕೋಟಿ ರೂಪಾಯಿಗಳ ದಂಡವನ್ನೂ ಕಂಪನಿ ಮೇಲೆ ಹಾಕಿತ್ತು. ಹೀಗಿದ್ದೂ ಕಾಮಗಾರಿ ಇನ್ನೂ ಮುಗಿದಿಲ್ಲ. ಆದರೆ ಇದು ಅಂತಿಮ ಹಂತದಲ್ಲಿದ್ದು ಕಾಮಗಾರಿ ಮುಗಿಯಲಿದೆ ಎಂಬ ಆಶಾಭಾವನೆಯಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳಿದ್ದಾರೆ.

ಸಾಲದ ಸುಳಿಯಲ್ಲಿರುವ  ಇನ್ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆಂಡ್‌ ಫೈನಾನ್ಸ್‌ ಸರ್ವಿಸಸ್‌ (ಐಎಲ್‌&ಎಫ್‌ಎಸ್‌)
ಸಾಲದ ಸುಳಿಯಲ್ಲಿರುವ ಇನ್ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆಂಡ್‌ ಫೈನಾನ್ಸ್‌ ಸರ್ವಿಸಸ್‌ (ಐಎಲ್‌&ಎಫ್‌ಎಸ್‌)
/ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಇದರ ಕಥೆ ಹೀಗಾದರೆ ಇನ್ನೊಂದು ಯೋಜನೆ ಇನ್ನೂ ಆರಂಭವೇ ಆಗಿಲ್ಲ. ಔಟರ್‌ ರಿಂಗ್‌ ರೋಡ್‌ನ ಸಿಲ್ಕ್‌ ಬೋರ್ಡ್‌ ಮತ್ತು ಕೆ.ಆರ್‌.ಪುರಂ ನಡುವಿನ 17 ಕಿಲೋ ಮೀಟರ್ ಅಂತರದ ಯೋಜನೆಯನ್ನು ಮೂರು ವರ್ಷಗಳ ಹಿಂದೆ ಪ್ರಸ್ತಾಪ ಮಾಡಲಾಗಿತ್ತು. ಹೀಗಿದ್ದೂ ಇದರಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಿಲ್ಲ.

ಈ ಯೋಜನೆಯಲ್ಲಿ ಕಳೆದ ಮೇನಲ್ಲಿ ಒಟ್ಟು ಮೂರು ಭಾಗಗಳನ್ನು ಮಾಡಿ ಮೂರು ಟೆಂಡರ್‌ಗಳನ್ನು ಕರೆಯಲಾಗಿತ್ತು. ಸಿಲ್ಕ್‌ ಬೋರ್ಡ್‌-ಬೆಳ್ಳಂದೂರು, ಬೆಳ್ಳಂದೂರು-ದೊಡ್ಡನೆಕುಂಡಿ ಮತ್ತು ದೊಡ್ಡನೆಕುಂಡಿ – ಕೆ.ಆರ್‌.ಪುರಂ ನಡುವಿನ ಯೋಜನೆಗಳನ್ನು ವಿಭಾಗ ಮಾಡಲಾಗಿತ್ತು. ಇದರ ನಿರ್ಮಾಣಕ್ಕೆ ಒಟ್ಟು ಆರು ಕಂಪನಿಗಳು ಮುಂದೆ ಬಂದಿದ್ದವು. ಅದರಲ್ಲಿ ಒಂದನ್ನು ನಂತರ ಕೈ ಬಿಟ್ಟಿದ್ದರಿಂದ 5 ಕಂಪನಿಗಳು ಬಿಡ್‌ನಲ್ಲಿ ಉಳಿದಿದ್ದವು.

ಈ ಯೋಜನೆ ಸಂಬಂಧ ಜುಲೈನಲ್ಲಿ ಫೈನಾನ್ಸಿಯಲ್‌ ಬಿಡ್‌ ಆರಂಭವಾಗಬೇಕಿತ್ತು. ಆದರೆ ಬಿಡ್‌ ಇನ್ನೂ ತೆರೆದಿಲ್ಲ. ಆಂತರಿಕ ಮೂಲಗಳ ಮಾಹಿತಿ ಪ್ರಕಾರ ಪ್ಯಾಕೇಜ್‌ 1 (ಸಿಲ್ಕ್‌ ಬೋರ್ಡ್‌-ಬೆಳ್ಳಂದೂರು) ನಡುವಿನ ಯೋಜನೆಗೆ ಐಎಲ್‌&ಎಫ್‌ಎಸ್‌ ಕಡಿಮೆ ಮೊತ್ತಕ್ಕೆ ಬಿಡ್‌ ಸಲ್ಲಿಸಿತ್ತು. ಉಳಿದೆಲ್ಲಾ ಕಂಪನಿಗಳು ತೀರಾ ಹೆಚ್ಚು ಮೊತ್ತಕ್ಕೆ ಬಿಡ್‌ ನೀಡಿದ್ದರಿಂದ ಯೋಜನೆಯನ್ನು ಐಎಲ್‌&ಎಫ್‌ಎಸ್‌ಗೆ ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿತ್ತು. ಇದೀಗ ಕಂಪನಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ಐಎಲ್‌&ಎಫ್‌ಎಸ್‌ಗೆ ವರ್ಕಿಂಗ್‌ ಆರ್ಡರ್‌ ನೀಡಿಲ್ಲ. ಐಎಫ್‌&ಎಸ್‌ಎಲ್‌ ಸಾಲದು ಸುಳಿಗೆ ಸಿಲುಕುತ್ತಿದ್ದಂತೆ ಪ್ಯಾಕೇಜ್‌ 2 (ಬೆಳ್ಳಂದೂರು-ದೊಡ್ಡನೆಕುಂಡಿ) ಮತ್ತು ಪ್ಯಾಕೇಜ್‌ 3 (ದೊಡ್ಡನೆಕುಂಡಿ – ಕೆ.ಆರ್‌.ಪುರಂ)ರ ಫೈನಾನ್ಶಿಯಲ್‌ ಬಿಡ್‌ ಕೂಡ ಆರಂಭಿಸಿಲ್ಲ ಎಂದು ‘ಎಕನಾಮಿಕ್ಸ್‌ ಟೈಮ್ಸ್‌’ ವರದಿ ಮಾಡಿದೆ.

ಹೀಗೆ ಸುಮಾರು 88,000 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿರುವ ಮುಂಬೈ ಮೂಲದ ಐಎಲ್‌&ಎಫ್‌ಎಸ್‌ನ ಪರಿಣಾಮಗಳು ಬೆಂಗಳೂರಿನ ನಮ್ಮ ಮೆಟ್ರೋದ ಮೇಲೂ ಆಗುತ್ತಿವೆ. ಇದು ಮೊದಲೇ ನಿಧಾನಗತಿಯ ಕಾಮಗಾರಿಗೆ ಹೆಸರಾದ ಮೆಟ್ರೋದ ಯೋಜನೆಗಳನ್ನು ಮತ್ತಷ್ಟು ವಿಳಂಬಗೊಳಿಸುತ್ತಿವೆ. ಪರಿಣಾಮ ಟ್ರಾಫಿಕ್‌ ಮುಕ್ತಿಯ ಕನಸು ಕಂಡಿದ್ದ ಹೊರ ವರ್ತುಲ ರಸ್ತೆಯ ಹಲವಾರು ಐಟಿ ಕಂಪನಿಗಳ ಲಕ್ಷಾಂತರ ನೌಕರರು ಅದೇ ಕಿರಿಕಿರಿಯನ್ನು ಇನ್ನಷ್ಟು ವರ್ಷ ಅನುಭವಿಸಬೇಕಾಗಿದೆ.

Also read: ‘ಜನರ ಮೇಲೆ ಭಾರ’: ಸಾಲದ ಸುಳಿಯಲ್ಲಿರುವ ಕಂಪನಿಯನ್ನು ಕೇಂದ್ರ ರಕ್ಷಿಸಲು ಹೊರಟಿದ್ದೇಕೆ?