samachara
www.samachara.com
ಗಾಂಧಿ ಜಯಂತಿ ದಿನವೇ ರೈತರ ವಿರುದ್ಧ ತಿರುಗಿ ಬಿದ್ದ ಸರಕಾರ; ದಿಲ್ಲಿ  ಪ್ರವೇಶಿದಂತೆ ಹೆದ್ದಾರಿಯಲ್ಲೇ ಪ್ರಹಾರ
COVER STORY

ಗಾಂಧಿ ಜಯಂತಿ ದಿನವೇ ರೈತರ ವಿರುದ್ಧ ತಿರುಗಿ ಬಿದ್ದ ಸರಕಾರ; ದಿಲ್ಲಿ ಪ್ರವೇಶಿದಂತೆ ಹೆದ್ದಾರಿಯಲ್ಲೇ ಪ್ರಹಾರ

ರೈತರನ್ನು ಹೊತ್ತು ಬಂದಿದ್ದ ಟ್ರ್ಯಾಕ್ಟರ್‌ಗಳು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ ಸಮೀಪಿಸುತ್ತಿದ್ದಂತೆ ಜಲಫಿರಂಗಿ ಹಾರಿಸಲು ಭದ್ರತಾ ಪಡೆಗಳು ಮುಂದಾದವು.

ಇತ್ತ ಇಡೀ ದೇಶ ಗಾಂಧಿ ಜಯಂತಿ ನೆಪದಲ್ಲಿ ಅಹಿಂಸೆಯ ಜಪ ಮಾಡುತ್ತಿದ್ದರೆ, ಅತ್ತ ರಾಜಧಾನಿ ದಿಲ್ಲಿಯಲ್ಲಿ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಹರಿದ್ವಾರದಿಂದ ದಿಲ್ಲಿಯ ರಾಜ್‌ಘಾಟ್‌ಗೆ ಹೊರಟಿದ್ದ ಪ್ರತಿಭಟನೆ ರಾಷ್ಟ್ರೀಯ ಹೆದ್ದಾರಿ 24ಕ್ಕೆ ಆಗಮಿಸುತ್ತಲೇ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿಗಳು ತಡೆದು ನಿಲ್ಲಿಸಲು ಹೊರಟರು. ರೈತರನ್ನು ಹೊತ್ತು ಬಂದಿದ್ದ ಟ್ರ್ಯಾಕ್ಟರ್‌ಗಳು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ ಸಮೀಪಿಸುತ್ತಿದ್ದಂತೆ ಜಲಫಿರಂಗಿ ಹಾರಿಸಲು ಭದ್ರತಾ ಪಡೆಗಳು ಮುಂದಾದವು. ಜತೆಗೆ, ಟಿಯರ್‌ ಗ್ಯಾಸ್ ಕೂಡ ಬಳಸಲಾಯಿತು. ಈ ಸಮಯದಲ್ಲಿ ನೂರಾರು ರೈತರು ಗಾಯಗೊಂಡಿರುವ ಸಾಧ್ಯತೆಗಳಿದ್ದು, ಸ್ಪಷ್ಟ ಚಿತ್ರಣ ಇನ್ನಷ್ಟೆ ಹೊರಬೀಳಬೇಕಿದೆ.

ದೇಶದ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮೇಲೆ ಪೊಲೀಸ್ ಹಾಗೂ ಆರ್‌ಪಿಎಫ್‌ ಪ್ರಹಾರ ಆರಂಭಿಸಿವೆ. ಅಲ್ಲಿನ ಪರಿಸ್ಥಿತಿ ಹೀಗಿದೆ. ಭಾರತೀಯ ಕಿಸಾನ್...

Posted by samachara.com on Monday, October 1, 2018

ಅಂದಹಾಗೆ, ಇದೇ ಹೆದ್ದಾರಿಯನ್ನು ಪ್ರಧಾನಿ ಮೋದಿ ಕೆಲವು ತಿಂಗಳುಗಳ ಕೆಳಗೆ ಅದ್ದೂರಿ ಸಮಾರಂಭದಲ್ಲಿ ಉದ್ಘಾಟನೆ ಮಾಡಿದ್ದರು. ಇದೀಗ ರೈತರ ಮೇಲೆ ಭದ್ರತಾ ಪಡೆಗಳ ನಡೆಸಿದ ಪ್ರಹಾರಕ್ಕೆ ಸಾಕ್ಷಿಯಾಗಿದೆ.

ನಾನಾ ಬೇಡಿಕೆಗಳನ್ನು ಇಟ್ಟುಕೊಂಡಿದ್ದ ರೈತರು ‘ಕಿಸಾನ್ ಸಂಘರ್ಷ ಸಮಿತಿ’ ನೇತೃತ್ವದಲ್ಲಿ ಅ. 2ರಂದು ರಾಜಧಾನಿಗೆ ಶಾಂತಿಯುತ ಮೆರವಣಿಗೆ ಹಮ್ಮಿಕೊಂಡಿದ್ದವು. ಮುಂಜಾನೆ ಸಾವಿರಾರು ಸಂಖ್ಯೆಯ ಜಾಥ ಗಮನಿಸಿದ ದಿಲ್ಲಿ ಪೊಲೀಸರು ರಾಜಧಾನಿ ಪ್ರವೇಶಿಸದಂತೆ ಸೆಕ್ಷನ್ 144 ಜಾರಿಗೆ ತಂದಿದ್ದರು. ಆದರೆ ಇದನ್ನು ಲೆಕ್ಕಿಸದ ರೈತರು ಗಾಂಧಿ ಸ್ಮಾರಕಕ್ಕೆ ತೆರಳುವ ಮಾರ್ಗ ಮಧ್ಯೆ ಪೊಲೀಸರ ಹಿಂಸಾಚಾರಕ್ಕೆ ಈಡಾಗಿದ್ದಾರೆ.

ಒಂದು ಕಡೆ ರೈತರ ಮೇಲೆ ಜಲ ಫಿರಂಗಿ, ಟಿಯರ್ ಗ್ಯಾಸ್‌ ಬಳಸುತ್ತಿದ್ದರೆ, ರಾಷ್ಟ್ರೀಯ ವಾಹಿನಿಗಳು, ‘ಕಾನೂನು ಉಲ್ಲಂಘಿಸಿದ ರೈತರು’ ಎಂದು ಸುದ್ದಿ ಭಿತ್ತರಿಸಲು ಆರಂಭಿಸಿದವು. ಈ ಸಮಯದಲ್ಲಿ ‘ಇಂಡಿಯಾ ಟುಡೆ’ ವಾಹಿನಿಯ ವಾರ್ತಾ ವಾಚಕಿ ಹಾಗೂ ಕಿಸಾನ್ ಸಂಘರ್ಷ ಸಮಿತಿಯ ಸಂಚಾಲಕ ದುಶ್ಯಂತ್ ನಾಗರ್ ಜತೆ ನಡೆದ ಸಂಭಾಷಣೆ ಹೀಗಿತ್ತು;

ನಿರೂಪಕಿ: ನೀವು ಕಾನೂನು ಉಲ್ಲಂಘಿಸಿ ದಿಲ್ಲಿಗೆ ಬರಲು ಹೊರಟಿದ್ದೀರಿ. ಇದು ತಪ್ಪಲ್ಲವಾ?

ದುಶ್ಯಂತ್: ಮೇಡಂ, ರೈತರು ಮನೆಯನ್ನು ಬಿಟ್ಟು ದಿಲ್ಲಿಗೆ ಯಾಕೆ ಬರಲು ಹೊರಟರು ಎಂಬುದನ್ನು ಮೊದಲು ನೋಡಿ. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ. ಅವರು ಗದ್ದೆಗಳಲ್ಲಿ ರಕ್ತ ಬಸಿದು ನೀವು ತಿನ್ನುವ ಅಕ್ಕಿಯನ್ನು ಬೆಳೆಯುತ್ತಾರೆ. ರೈತರಿಗೆ ರಾಜಧಾನಿಗೆ ಪ್ರವೇಶ ಇಲ್ಲ ಅಂದರೆ ಏನರ್ಥ? ರಾಜಧಾನಿಗೆ ಬರಬೇಡಿ ಅಂದರೆ ರೈತರು ಮತ್ತೆಲ್ಲಿ ಪೇಶಾವರಕ್ಕೆ ಹೋಗಿ ನ್ಯಾಯ ಕೇಳಬೇಕಾ? ನೀವು ಸರಕಾರದ ವಕ್ತಾರರಂತೆ ವರ್ತಿಸುತ್ತಿದ್ದೀರ. ದಯವಿಟ್ಟು ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಿ.

ರೈತರಿಗೆ ಬೆಂಬಲ:

ದಿಲ್ಲಿ ಹಾಗೂ ಗಾಝಿಯಾಬಾದ್ ಹೆದ್ದಾರಿಯಲ್ಲಿ ರೈತರ ಮೇಲೆ ಪ್ರಹಾರ ಆರಂಭವಾಗುತ್ತಿದ್ದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘಟನೆಯನ್ನು ಖಂಡಿಸಿದರು. ‘ರೈತರನ್ನು ರಾಜಧಾನಿಗೆ ಬರದಂತೆ ತಡೆಯುವುದು ತಪ್ಪು’ ಎಂದ ಅವರು, ರೈತರ ಜತೆಗೆ ನಾವಿದ್ದೇವೆ ಎಂದು ತಿಳಿಸಿದರು.

ಸರಕಾರ ರೈತರ ಸಮಸ್ಯೆಗಳನ್ನು ಬಗೆಹರಿಸದೆ ಇರುವಾಗ ಅವರು ಪ್ರತಿಭಟನೆ ನಡೆಸುವುದು ಸಹಜ ಎಂದು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ. ಅವರೂ ಕೂಡ ರೈತರ ‘ಕಿಸಾನ್ ಕ್ರಾಂತಿ ಪಾದಯಾತ್ರೆ’ಗೆ ಬೆಂಬಲ ಸೂಚಿಸಿದರು.

Also read: ಅನ್ನದಾತರ ಮೇಲೆ ಪ್ರಹಾರ: ನಿಜ ಹೇಳಿ, ರೈತರು ಮುಂದಿಟ್ಟ ಈ ಬೇಡಿಕೆಗಳಲ್ಲಿ ತಪ್ಪೇನಿದೆ?