samachara
www.samachara.com
‘ಮೈಸೂರಿನಿಂದ ಐಎಂಎಫ್‌ವರೆಗೆ’: ಅಂತಾರಾಷ್ಟ್ರೀಯ ಹುದ್ದೆಗೇರಿದ ಮೊದಲ ಕನ್ನಡತಿ ಗೀತಾ ಗೋಪಿನಾಥ್!
COVER STORY

‘ಮೈಸೂರಿನಿಂದ ಐಎಂಎಫ್‌ವರೆಗೆ’: ಅಂತಾರಾಷ್ಟ್ರೀಯ ಹುದ್ದೆಗೇರಿದ ಮೊದಲ ಕನ್ನಡತಿ ಗೀತಾ ಗೋಪಿನಾಥ್!

ಕೇರಳದ ಆರ್ಥಿಕ ಸಲಹೆಗಾರರಾಗಿದ್ದ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಈ ಕಾರಣಕ್ಕೆ ಗೀತಾ ಗೋಪಿನಾಥ್‌ ಆಗಾಗ ಸುದ್ದಿ ಕೇಂದ್ರದತ್ತ ಸುಳಿದಾಡುತ್ತಿದ್ದರು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಮೈಸೂರು ಮೂಲದ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ನಂತರ ಈ ಹುದ್ದೆ ಅಲಂಕರಿಸುತ್ತಿರುವ ಎರಡನೇ ಭಾರತೀಯ ಮೂಲದ ವ್ಯಕ್ತಿ ಇವರಾಗಿದ್ದಾರೆ. ಗೀತಾರನ್ನು ಸಂಶೋಧನಾ ಇಲಾಖೆಯ ನಿರ್ದೇಶಕರನ್ನಾಗಿಯೂ ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ನೇಮಕ ಮಾಡಿದ್ದಾರೆ.

ಸದ್ಯಕ್ಕೆ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರದ
ಪ್ರಾಧ್ಯಾಪಕರಾಗಿರುವ ಗೀತಾ ಗೋಪಿನಾಥ್‌ ಫ್ರಧಾನಿ ನರೇಂದ್ರ ಮೋದಿ ನಡೆಯನ್ನು ಟೀಕಿಸುತ್ತಾ ಬಂದವರಲ್ಲಿ ಪ್ರಮುಖರು. ಅದರಲ್ಲೂ ಡಿಮಾನಟೈಸೇಷನ್ ನಿರ್ಧಾರವನ್ನು ಅವರು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಆರಂಭದಲ್ಲಿ ಮೋದಿ ನಡೆಯನ್ನು ‘ಧೈರ್ಯದ ನಡೆ’ ಎಂದು ಕರೆದಿದ್ದ ಅವರು ದಿನ ಕಳೆದಂತೆ ಜನರು ಭ್ರಮನ ನಿರಸನಗೊಂಡಿದ್ದಾರೆ ಎಂದು ಆರೋಪಿಸಿದ್ದರು. ಒಬ್ಬನೇ ಒಬ್ಬ ಮ್ಯಾಕ್ರೊ ಎಕಾನಾಮಿಸ್ಟ್‌ ಈ ನಿರ್ಧಾರ (ಅಮಾನ್ಯೀಕರಣ) ಸರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಜರೆದಿದ್ದರು. ಹೊಸ ನೋಟುಗಳ ಬೇಡಿಕೆಯನ್ನು ಪೂರೈಸಲು ಸರಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದರು. ಜತೆಗೆ ದೇಶದಲ್ಲಿ ಸುಧಾರಣಾ ನೀತಿಗಳನ್ನು ನಿಧಾನಗತಿಯಲ್ಲಿ ಅನುಷ್ಠಾನಕ್ಕೆ ತರುತ್ತಿರುವುದರ ಬಗ್ಗೆಯೂ ಅವರು ಅಸಮಧಾನ ವ್ಯಕ್ತಪಡಿಸಿದ್ದರು.

ಮೈಸೂರಿನಿಂದ ಐಎಂಎಫ್‌ಗೆ:

ಜಾಗತಿಕ ಆರ್ಥಿಕ ಕ್ಷೇತ್ರದ ಮುಂಚೂಣಿ ಹೆಸರುಗಳಲ್ಲಿ ಒಂದಾದ ಗೀತಾ ಗೋಪಿನಾಥ್‌ ಹುಟ್ಟಿದ್ದು ನಮ್ಮದೇ ಕರ್ನಾಟಕದ ಮೈಸೂರಿನಲ್ಲಿ. ಟಿವಿ ಗೋಪಿನಾಥ್‌ ಇವರ ತಂದೆ ಮತ್ತು ತಾಯಿ ವಿಸಿ ವಿಜಯಲಕ್ಷ್ಮೀ. ಗೀತಾ ಅವರ ಅಜ್ಜ ಗೋವಿಂದನ್‌ ನಂಬಿಯಾರ್‌ ಕೇರಳದ ಖ್ಯಾತ ಕಮ್ಯೂನಿಸ್ಟ್‌ ನಾಯಕ ಟಿಸಿ ನಾರಾಯಣನ್‌ ನಂಬಿಯಾರ್‌ ಸಂಬಂಧಿಕರಾಗಿದ್ದರು.

ಎಳವೆಯಲ್ಲೇ ಆರ್ಟ್ಸ್‌ ವಿಷಯದಲ್ಲಿ ಆಸಕ್ತಿ ತಾಳಿ ದೆಹಲಿಯ ಲೇಡಿ ಶ್ರೀರಾಮ್‌ ಕಾಲೇಜ್‌ ಆಫ್‌ ವುಮನ್‌ನಿಂದ ಬಿಎ ಪದವಿ ಪಡೆದು ಹೊರ ಬಿದ್ದರು. ಅವರು 1990-91ರಲ್ಲಿ ಬಿಎ ಮುಗಿಸುವ ಹೊತ್ತಿಗೆ ದೇಶ ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿತ್ತು. ಹೀಗಾಗಿ ಅರ್ಥಶಾಸ್ತ್ರ ವಿಷಯದ ಬಗ್ಗೆ ಅಧ್ಯಯನ ಮಾಡಬೇಕು ಎಂದು ನಿರ್ಧಿರಿಸಿದ ಗೀತಾ ನೇರ ಹೋಗಿ ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಸೇರಿಕೊಂಡರು. ಅಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಮುಂದೆ ವಾಷಿಂಗ್ಟನ್‌ ಯುನಿವರ್ಸಿಟಿ ಸೇರಿ ಎಂಎ ಪದವಿ ಪಡೆದುಕೊಂಡರು. ಪ್ರತಿಷ್ಠಿತ ಪ್ರಿನ್ಸ್‌ಟನ್‌ ವಿವಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಿದರು. ಇದರ ನಡುವೆಯೇ ಅವರು ಮದುವೆಯಾದರು. ಅವರ ಪತಿ ಇಕ್ಬಾಲ್‌ ಸಿಂಗ್‌ ಧಲಿವಾಲ್ ಮೆಸಾಚುಸೆಟ್ಸ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಅರ್ಥಶಾಸ್ತ್ರ ವಿಭಾಗದಲ್ಲಿ ಸದ್ಯ ಪ್ರಾಧ್ಯಾಪಕರಾಗಿದ್ದಾರೆ.

ತಮ್ಮ ಅಧ್ಯಯನ ಮುಗಿಸಿದ ನಂತರ ಹಲವು ಉನ್ನತ ಹುದ್ದೆಗಳಿಗೆ ಗೀತಾ ಗೋಪಿನಾಥ್‌ ನೇಮಕಗೊಂಡರು. ಅದರಲ್ಲೂ ಅಮರ್ತ್ಯಸೇನ್‌ ನಂತರ ಮೊದಲ ಬಾರಿಗೆ ಹಾರ್ವರ್ಡ್‌ ಯುನಿವರ್ಸಿಟಿಯ ಆರ್ಥಿಕ ವಿಭಾಗಕ್ಕೆ ಭಾರತೀಯ ಮೂಲದ ಪ್ರಾಧ್ಯಾಪಕರಾಗಿ ಗೀತಾ ಗೋಪಿನಾಥ್‌ ನೇಮಕಗೊಂಡರು. ಇದರ ಜತೆಗೆ ಪ್ರತಿಷ್ಠಿತ ನ್ಯಾಷನಲ್‌ ಬ್ಯೂರೋ ಆಫ್ ಎಕನಾಮಿಕ್‌ ರೀಸರ್ಚ್‌ನಲ್ಲಿ ಅವರು ‘ಅಂತರಾಷ್ಟ್ರೀಯ ಹಣಕಾಸು ಮತ್ತು ಮೈಕ್ರೋಎಕನಾಮಿಕ್ಸ್‌ ಯೋಜನೆ’ಯ ಸಹ ನಿರ್ದೇಶಕಿಯೂ ಆಗಿದ್ದಾರೆ. ಇದಿಷ್ಟಲ್ಲದೆ ಅಂತರಾಷ್ಟ್ರೀಯ ಹಣಕಾಸು ವಲಯದ ಹಲವು ಪ್ರಮುಖ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಿದ್ದಾರೆ.

ಇದೆಲ್ಲದರ ನಡುವೆ 2017ರಲ್ಲಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಆರ್ಥಿಕ ಸಲೆಹಾರರಾಗಿ ನೇಮಕಗೊಂಡು ಎಲ್ಲರ ಹುಬ್ಬೇರಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಗೀತಾ, “ಕೇರಳ ನನ್ನ ತವರು, ನನ್ನ ತಂದೆ ಕಣ್ಣೂರು ಜಿಲ್ಲೆಯ ಮಾಯಿಲ್ ಮತ್ತು ನನ್ನ ತಾಯಿ ಕುಟ್ಟಿಯಟ್ಟೂರಿನವರು. ಕೇರಳದ ಅಭಿವೃದ್ಧಿಗೆ ನನ್ನ ಕೌಶಲ್ಯ ಮತ್ತು ಪ್ರಯತ್ನಗಳನ್ನು ಕೊಡುಗೆಯಾಗಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ವಿನೀತಳಾಗಿದ್ದೇನೆ,” ಎಂದಿದ್ದರು. ಕೇರಳದ ಆರ್ಥಿಕ ಸಲಹೆಗಾರರಾಗಿದ್ದ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಈ ಕಾರಣಕ್ಕೆ ಗೀತಾ ಗೋಪಿನಾಥ್‌ ಆಗಾಗ ಸುದ್ದಿ ಕೇಂದ್ರದತ್ತ ಸುಳಿದಾಡುತ್ತಿದ್ದರು.

ಅದರಲ್ಲೂ ರಘುರಾಮ್‌ ರಾಜನ್‌ ಅವರನ್ನು ಆರ್‌ಬಿಐ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಗೀತಾ ಗೋಪಿನಾಥ್‌ ವಿರೋಧ ವ್ಯಕ್ತಪಡಿಸಿದ್ದರು. ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ ಬರೆದಿದ್ದ ಲೇಖನದಲ್ಲಿ ಅವರು ರಾಜನ್‌ರನ್ನು ಎರಡನೇ ಅವಧಿಗೆ ಮುಂದುವರಿಸದಿರುವ ತೀರ್ಮಾನ ಆಘಾತ ತಂದಿದೆ ಎಂದಿದ್ದರು.

ಇದೇ ಗೋಪಿನಾಥ್‌ ಇವತ್ತು ರಾಜನ್‌ ನಂತರ ಐಎಂಎಫ್‌ನ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ಏರಿದ್ದಾರೆ. ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮೊದಲ ಮಹಿಳಾ ಆರ್ಥಿಕ ತಜ್ಞೆ ಅವರಾಗಿದ್ದಾರೆ. ಅವರ ನೇಮಕವನ್ನು ಘೋಷಣೆ ಮಾಡಿರುವ ಕ್ರಿಸ್ಟಿನ್‌ ಲಗಾರ್ಡ್‌ “ಗೀತಾ ಪ್ರಪಂಚದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದು, ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆ, ಬೌದ್ಧಿಕ ನಾಯಕತ್ವದ ದಾಖಲೆಗಳು ಮತ್ತು ವ್ಯಾಪಕ ಅಂತರರಾಷ್ಟ್ರೀಯ ಅನುಭವಗಳನ್ನು ಹೊಂದಿದ್ದಾರೆ,” ಎಂದು ಹೊಗಳಿದ್ದಾರೆ.

ಹೀಗೆ ಮೈಸೂರಿನಿಂದ ಹೊರಟ ಗೀತಾ ಪಯಣ ಅಮೆರಿಕಾ ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ಐಎಂಎಫ್‌ ಕೇಂದ್ರ ಕಚೇರಿ ತಲುಪಿದೆ.