samachara
www.samachara.com
ಅನ್ನದಾತರ ಮೇಲೆ ಪ್ರಹಾರ: ನಿಜ ಹೇಳಿ, ರೈತರು ಮುಂದಿಟ್ಟ ಈ ಬೇಡಿಕೆಗಳಲ್ಲಿ ತಪ್ಪೇನಿದೆ?
COVER STORY

ಅನ್ನದಾತರ ಮೇಲೆ ಪ್ರಹಾರ: ನಿಜ ಹೇಳಿ, ರೈತರು ಮುಂದಿಟ್ಟ ಈ ಬೇಡಿಕೆಗಳಲ್ಲಿ ತಪ್ಪೇನಿದೆ?

ರೈತರ ಸಮಸ್ಯೆಗಳನ್ನು ಮೂಲದಲ್ಲೇ ಪರಿಹರಿಸುವ ಮನಸ್ಸು ಈಗ ಸರಕಾರಗಳಿಗೆ ಇದ್ದಂತಿಲ್ಲ. ಹೀಗಾಗಿ ರೈತರು ತಮ್ಮ ಬೇಡಿಕೆಗಳನ್ನು ಹೊತ್ತು ರಾಜಧಾನಿಗೇ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Team Samachara

ರಾಷ್ಟ್ರ ರಾಜಧಾನಿ ದೆಹಲಿಗೆ ರೈತರು ಬರದಂತೆ ತಡೆಯಲು ಪೊಲೀಸರು ದೆಹಲಿ- ಉತ್ತರ ಪ್ರದೇಶದ ಗಡಿಯ ಹೆದ್ದಾರಿಯಲ್ಲಿ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್‌ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಸುಮಾರು 70 ಸಾವಿರ ಮಂದಿ ರೈತರು ದೆಹಲಿಯತ್ತ ನುಗ್ಗಿ ಬರುತ್ತಿದ್ದಾರೆ.

‘ಕಿಸಾನ್‌ ಕ್ರಾಂತಿ ಯಾತ್ರೆ’ ಹೆಸರಿನಲ್ಲಿ ಸೆಪ್ಟೆಂಬರ್‌ 23ರಂದು ಹರಿದ್ವಾರದಲ್ಲಿ ಆರಂಭವಾದ ರೈತ ಹೋರಾಟ ಅಕ್ಟೋಬರ್‌ 1ರಂದು ಘಾಜಿಯಾಬಾದ್‌ನಲ್ಲಿ ತಲುಪಿತ್ತು. ಅಕ್ಟೋಬರ್‌ 2ರ ಬೆಳಿಗ್ಗೆ ದೆಹಲಿಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು. ಆದರೆ, ದೆಹಲಿ ಗೇಟ್‌ನಲ್ಲೇ ರೈತರನ್ನು ತಡೆದಿರುವ ಪೊಲೀಸರು ಜಲಫಿರಂಗಿ, ಅಶ್ರುವಾಯು ಸಿಡಿಸಿ ರೈತರನ್ನು ದೆಹಲಿ ಪ್ರವೇಶಿಸದಂತೆ ಮಾಡುವ ಪ್ರಯತ್ನ ಮುಂದುವರಿಸಿದ್ದಾರೆ.

15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿರುವ ರೈತರು ಈ ಬೇಡಿಕೆಗಳನ್ನು ಈಡೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿ ರ್ಯಾಲಿ ನಡೆಸಿದ್ದಾರೆ. ಈ ಬೇಡಿಕೆಗಳ ಪೈಕಿ ಕಬ್ಬು ಬೆಳೆಗಾರರ ಸಂಕಷ್ಟ ಪ್ರಮುಖವಾದುದು.

Also read: ಗಾಂಧಿ ಜಯಂತಿ ದಿನವೇ ರೈತರ ವಿರುದ್ಧ ತಿರುಗಿ ಬಿದ್ದ ಸರಕಾರ; ದಿಲ್ಲಿ ಪ್ರವೇಶಿದಂತೆ ಹೆದ್ದಾರಿಯಲ್ಲೇ ಪ್ರಹಾರ

ಬಾಕಿ ಉಳಿದ ರೈತರ ಕಬ್ಬಿನ ಹಣ:

ಉತ್ತರ ಪ್ರದೇಶದಲ್ಲಿ ಈ ಬಾರಿಯ ಕಬ್ಬು ಕಟಾವಾಗಿ ಸಕ್ಕರೆ ಕಾರ್ಖಾನೆ ಸೇರಿ ಮೂರು ತಿಂಗಳು ಕಳೆದರೂ ಕಬ್ಬಿನ ಬಾಕಿ ಹಣ ರೈತರ ಕೈಸೇರಿಲ್ಲ. ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ 10,000 ಕೋಟಿ ರೂಪಾಯಿ ಕಬ್ಬಿನ ಬಾಕಿ ಉಳಿಸಿಕೊಂಡಿವೆ.

ಭಾರತದಲ್ಲಿ 2017-18ರ ಕೃಷಿ ವರ್ಷದಲ್ಲಿ 32 ದಶಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗಿದೆ. ಆದರೆ, ಬೇಡಿಕೆ ಇರುವುದು ಕೇವಲ 25 ದಶಲಕ್ಷ ಟನ್‌ ಮಾತ್ರ. ಇದರಿಂದ ಸಕ್ಕರೆ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ವಾದಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣವನ್ನು ಬಾಕಿ ಉಳಿಸಿಕೊಂಡಿವೆ.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎರಡು ವಾರಗಳಲ್ಲಿ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣ ಸಂದಾಯ ಮಾಡಿಸುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದರು. ಉತ್ತರ ಪ್ರದೇಶದಲ್ಲೇನೋ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ರೈತರಿಗೆ ಬರಬೇಕಾದ ಬಾಕಿ ಹಣ ಮಾತ್ರ ಬರಲಿಲ್ಲ.

ಉತ್ತರ ಪ್ರದೇಶ ಸರಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸಹಕಾರ ಸಂಘಗಳ ಸಕ್ಕರೆ ಕಾರ್ಖಾನೆಗಳು 1,177 ಕೋಟಿ ರೂಪಾಯಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳು 9,406 ಕೋಟಿ ರೂಪಾಯಿ ರೈತರಿಗೆ ಕೊಡಬೇಕಾದ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿವೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದ ಕಬ್ಬು ಬೆಳೆಗಾರರ ಪ್ರತಿಭಟನೆಗಳು ಹೆಚ್ಚಾದ ಸಂದರ್ಭದಲ್ಲಿ ಜೂನ್‌ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ರೈತರಿಗಾಗಿ 7000 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್‌ ಘೋಷಿಸಿದ್ದರು.

ಈ 7000 ಕೋಟಿ ರೂಪಾಯಿ ಪರಿಹಾರದ ರೂಪದಲ್ಲಿ ತಮ್ಮ ಕೈ ಸೇರಬಹುದು ಎಂದು ನಂಬಿದ್ದ ರೈತರಿಗೆ ಈವರೆಗೆ ಬಿಡಿಗಾಸೂ ಸಿಕ್ಕಿಲ್ಲ. “ವಿಶೇಷ ಪ್ಯಾಕೇಜ್‌ನಿಂದ ಕಬ್ಬಿನ ಬಾಕಿ ಹಣ ಸಂದಾಯವಾಗಲಿದೆ ಎಂದು ಕೆಲವು ಬಿಜೆಪಿ ನಾಯಕರು ನಮ್ಮನ್ನು ಮೂರ್ಖರನ್ನಾಗಿಸಿದ್ದರು. ಆದರೆ, 7000 ಕೋಟಿ ರೂಪಾಯಿ ಎಥೆನಾಲ್‌ ಉತ್ಪಾದಿಸುವ ಕಾರ್ಖಾನೆಗಳನ್ನು ಆರಂಭಿಸಲು ಮೀಸಲಿಡಲಾಗಿದೆ ಎನ್ನುತ್ತಿದ್ದಾರೆ. ಯಾವಾಗ ಆ ಎಥೆನಾಲ್‌ ಕಾರ್ಖಾನೆಗಳು ಆರಂಭವಾಗುತ್ತವೆಯೋ ದೇವರಿಗೇ ಗೊತ್ತು” ಎನ್ನುತ್ತಾರೆ ಮೀರಟ್‌ನ ರೈತ ಪ್ರದೀಪ್‌ ಗುರ್ಜಾರ್‌.

ಎಲ್ಲ ಬೆಳೆಗಳಿಗೂ ಬೇಕು ವಿಮೆ:

ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂದರ್ಭ ಭಾರತದಲ್ಲಿ ಮಾಮೂಲು. ಹೀಗಾಗಿ ಎಲ್ಲಾ ಬೆಳೆಗಳಿಗೂ ವಿಮೆಗೆ ಅವಕಾಶ ನೀಡಬೇಕು. ವಿಮೆಯ ಕಂತನ್ನು ಸರಕಾರವೇ ಪಾವತಿಸಬೇಕು ಎಂಬ ಬೇಡಿಕೆಯನ್ನು ರೈತರು ಕೇಂದ್ರ ಸರಕಾರದ ಮುಂದೆ ಇಟ್ಟಿದ್ದಾರೆ.

‘ಎನ್‌ಜಿಟಿ ನಿಷೇಧ ತೆರವುಗೊಳಿಸಿ’

ರಾಷ್ಟ್ರೀಯ ರಾಜಧಾನಿ ವಲಯ (ಎನ್‌ಸಿಆರ್‌) ವ್ಯಾಪ್ತಿಯಲ್ಲಿ ಹತ್ತು ವರ್ಷಕ್ಕಿಂತ ಹಳೆಯ ಡೀಸೆಲ್‌ ವಾಹನಗಳ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಹೇರಿರುವ ನಿಷೇಧದಿಂದ ರೈತರ ಟ್ರಾಕ್ಟರ್‌ಗಳಿಗೆ ವಿನಾಯಿತಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಒಂದು ವೇಳೆ ಎನ್‌ಜಿಟಿ ಆದೇಶವನ್ನು ರೈತರು ಪಾಲಿಸಲೇಬೇಕು ಎಂದಾದರೆ ಹೊಸ ಟ್ರಾಕ್ಟರ್‌ಗಳನ್ನು ಕೊಳ್ಳಲು ಸರಕಾರ ಪರಿಹಾರ ರೂಪದಲ್ಲಿ ಹಣ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಡೀಸೆಲ್‌ ಬೆಲೆ ಏರಿಕೆಯ ಬಿಸಿ ರೈತರಿಗೆ ನೇರವಾಗಿ ತಟ್ಟಿದೆ. ಟ್ರಾಕ್ಟರ್‌, ಡೀಸೆಲ್‌ ಪಂಪ್‌ಗಳು, ಕೃಷಿ ಉಪಕರಣಗಳಿಗೆ ಡೀಸೆಲ್‌ ಬಳಸುವ ರೈತರು ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನ್ಯಾಯಯುತವಾಗಿ ಏರಿಸದ ಸರಕಾರ ಡೀಸೆಲ್‌ ಬೆಲೆ ಏರಿಕೆಯ ಮೂಲಕ ರೈತರನ್ನು ಶೋಷಿಸುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ರಸಗೊಬ್ಬರಗಳ ಬೆಲೆಗಳು ಕೂಡಾ ಹೆಚ್ಚುತ್ತಿದ್ದು ಈ ಬೆಲೆ ಏರಿಕೆ ಮೇಲೆ ಕಡಿವಾಣ ಹಾಕಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ರೈತರು ದೂರಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಉಚಿತ ವಿದ್ಯುತ್‌:

ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೆ ಬಂದ ಮೇಲೆ ಗ್ರಾಮೀಣ ಭಾಗದ ಹಾಗೂ ಕೊಳವೆಬಾವಿಗೆ ಬಳಕೆಯಾಗುವ ವಿದ್ಯುತ್‌ ದರ ಏರಿಕೆ ಮಾಡುವ ನಿರ್ಧಾರದಿಂದ ರೈತರು ಕಂಗಾಲಾಗಿದ್ದಾರೆ. “ನಮ್ಮ ಹಳ್ಳಿಗಳಲ್ಲಿ ನಾಲ್ಕರಿಂದ ಐದು ಗಂಟೆಯಷ್ಟು ಮಾತ್ರ ಕರೆಂಟ್‌ ಇರುತ್ತದೆ. ಆದರೆ, ಕರೆಂಟ್‌ ಬಿಲ್‌ 250ರಿಂದ 1000 ರೂಪಾಯಿವರಗೆ ಹೆಚ್ಚಾಗಿದೆ. ಸರಕಾರ ಕನಿಷ್ಠ 14 ಗಂಟೆಯಾದರೂ ಕರೆಂಟ್‌ ಪೂರೈಕೆ ಮಾಡಬೇಕು ಇಲ್ಲವೇ ದರ ಇಳಿಕೆ ಮಾಡಬೇಕು. ಕೃಷಿ ಉದ್ದೇಶದ ಎಲ್ಲಾ ಚಟುವಟಿಕೆಗಳಿಗೂ ಸರಕಾರ ಉಚಿತವಾಗಿ ವಿದ್ಯುತ್‌ ನೀಡಬೇಕು” ಎಂಬುದು ರೈತರ ಆಗ್ರಹ.

ಸ್ವಾಮಿನಾಥನ್ ವರದಿ ಜಾರಿಗೊಳಿಸಿ:

2014ರ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎಂ.ಎಸ್‌. ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಭರವಸೆ ನೀಡಿತ್ತು. ಆದರೆ, ಮತ್ತೊಂದು ಲೋಕಸಭಾ ಚುನಾವಣೆಗೆ ತಯಾರಾಗುತ್ತಿರುವ ಬಿಜೆಪಿ ಹಿಂದೆ ನೀಡಿದ್ದ ಭರವಸೆಯನ್ನೇ ಮರೆತಂತಿದೆ.

ರೈತರು ಬೆಳೆದ ಬೆಳೆಗಳ ಸಂಪೂರ್ಣ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇಕಡ 50ರಷ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂದು ಸ್ವಾಮಿನಾಥನ್‌ ವರದಿ ಶಿಫಾರಸು ಮಾಡಿತ್ತು. ಆದರೆ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದಾಗಿ ಹೇಳುತ್ತಿರುವ ಸರಕಾರ ಉತ್ಪಾದನಾ ವೆಚ್ಚದ ಲೆಕ್ಕಾಚಾರದಲ್ಲಿ ವೈಜ್ಞಾನಿಕ ವಿಧಾನವನ್ನೇ ಅಳವಡಿಸಿಕೊಂಡಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ಉತ್ಪಾದನಾ ವೆಚ್ಚದ ಲೆಕ್ಕಾಚಾರದ ಮೇಲೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂಬುದು ರೈತರ ಒತ್ತಾಯ.

Also read: ಚುನಾವಣೆ ಸಮೀಪದಲ್ಲಿ ‘ಕನಿಷ್ಠ ಬೆಂಬಲ ಬೆಲೆ’ ಎಂಬ ರೈತನ ಮೂಗಿಗೆ ತುಪ್ಪ ಸವರುವ ತಂತ್ರ!

ರೈತರಿಗೆ ಕನಿಷ್ಠ 5000 ವೃದ್ಧಾಪ್ಯ ವೇತನ:

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೃಷಿ ಕೂಲಿ ಕಾರ್ಮಿಕರನ್ನು ಸೇರಿಸಬೇಕು. ಕೃಷಿ ಕೂಲಿ ಕಾರ್ಮಿಕರಿಗೂ ಉದ್ಯೋಗ ಭದ್ರತೆ ಸಿಗುವಂತೆ ಸರಕಾರ ಕಾನೂನು ತಿದ್ದುಪಡಿ ಮಾಡಬೇಕು ಎಂಬುದು ರೈತರ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. 60 ವರ್ಷ ದಾಟಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕನಿಷ್ಠ 5000 ವೃದ್ಧಾಪ್ಯ ವೇತನ ನೀಡಬೇಕು. ಎರಡು ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಇರುವ ರೈತರ ಎಲ್ಲಾ ಸಾಲವನ್ನೂ ಮನ್ನಾ ಮಾಡಬೇಕು.

ಇಷ್ಟೆಲ್ಲಾ ಬೇಡಿಕೆಗಳೊಂದಿಗೆ ರೈತರು ದೆಹಲಿಗೆ ಲಗ್ಗೆ ಇಟ್ಟಿದ್ದಾರೆ. ರೈತರ ಕಷ್ಟ ಕೇಳಬೇಕಿದ್ದ ಸರಕಾರ ಬಲ ಪ್ರಯೋಗಕ್ಕೆ ಮುಂದಾಗಿದೆ. ಕೊನೇ ಪಕ್ಷ ಮನೆಗೆ ಬೆಂಕಿ ಬಿದ್ದಾಗಲಾದರೂ ಬಾವಿ ತೋಡಲು ಹೊರಟಿರುವ ಕೇಂದ್ರ ಸರಕಾರ ಕೇಂದ್ರ ಗೃಹ ಸಚಿವ ಹಾಗೂ ಕೃಷಿ ಸಚಿವರ ಜತೆಗೆ ರೈತ ಮುಖಂಡರ ಸಭೆ ನಡೆಸುವ ಪ್ರಯತ್ನದಲ್ಲಿದೆ.