samachara
www.samachara.com
ದೆಹಲಿಯಲ್ಲಿ ರೈತರ ರಕ್ತದೋಕುಳಿ: ಮಣ್ಣಿನ ಮಕ್ಕಳ ಮೇಲೆ ಪೊಲೀಸರ ದೌರ್ಜನ್ಯದ ಭಯಾನಕ ಚಿತ್ರಗಳು
COVER STORY

ದೆಹಲಿಯಲ್ಲಿ ರೈತರ ರಕ್ತದೋಕುಳಿ: ಮಣ್ಣಿನ ಮಕ್ಕಳ ಮೇಲೆ ಪೊಲೀಸರ ದೌರ್ಜನ್ಯದ ಭಯಾನಕ ಚಿತ್ರಗಳು

ಗದ್ದೆಗಳಲ್ಲಿ ರಕ್ತ ಬಸಿದು ತಿನ್ನುವ ಅಕ್ಕಿಯನ್ನು ರೈತರು ಬೆಳೆಯುತ್ತಾರೆ. ಆದರೆ ವಿಪರ್ಯಾಸವೆಂದರೆ ಗದ್ದೆಗಳಲ್ಲಿ ಮಾತ್ರವಲ್ಲದೆ ದೆಹಲಿಯ ರಸ್ತೆಗಳಲ್ಲೂ ಇವರು ರಕ್ತವನ್ನು ಬಸಿಯಬೇಕಾಗಿದೆ.

Team Samachara

ಅಹಿಂಸೆಯ ಪ್ರವರ್ತಕ ಮಹಾತ್ಮ ಗಾಂಧಿ ಜಯಂತಿ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ನೆತ್ತರು ಹರಿದಿದೆ. ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸಿ ದೇಶದ ಶಕ್ತಿ ಕೇಂದ್ರದತ್ತ ಧಾವಿಸುತ್ತಿದ್ದ ರೈತರ ಮೇಲೆ ಮುಗಿಬಿದ್ದ ಪೊಲೀಸರು ಮತ್ತು ಸಿಆರ್‌ಪಿಎಫ್‌ ಪಡೆಗಳು ಉತ್ತರ ಪ್ರದೇಶ-ದೆಹಲಿ ಗಡಿಯ ರಸ್ತೆಯಲ್ಲಿ ರಕ್ತದೋಕುಳಿ ಹರಿಸಿದ್ದಾರೆ.

ಸೆಪ್ಟೆಂಬರ್‌ 23ರಂದು ಉತ್ತರ ಪ್ರದೇಶದ ಹರಿದ್ವಾರದಲ್ಲಿರುವ ತಿಕೈಟ್‌ ಘಾಟ್‌ನಿಂದ ದಿಲ್ಲಿಯ ರಾಜ್‌ಘಾಟ್‌ಗೆ 11 ಬೇಡಿಕೆಗಳನ್ನು ಹೊತ್ತು ರೈತರು ಪ್ರತಿಭಟನೆ ಹೊರಟಿದ್ದರು. ಇವರು ಇಂದು ರಾಷ್ಟ್ರೀಯ ಹೆದ್ದಾರಿ 24ಕ್ಕೆ ಆಗಮಿಸುತ್ತಲೇ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿಗಳು ತಡೆದು ನಿಲ್ಲಿಸಲು ಹೊರಟರು. ರೈತರನ್ನು ಹೊತ್ತು ಬಂದಿದ್ದ ಟ್ರ್ಯಾಕ್ಟರ್‌ಗಳು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ ಸಮೀಪಿಸುತ್ತಿದ್ದಂತೆ ಭದ್ರತಾ ಪಡೆಗಳು ಅಶ್ರುವಾಯು, ಜಲಫಿರಂಗಿ ಹಾರಿಸಿದ್ದಲ್ಲದೆ ರೈತರ ಮೇಲೆ ಮುಗಿ ಬಿದ್ದಿದ್ದಾರೆ. ಘಟನೆಯಲ್ಲಿ ಹಲವು ರೈತರು ಗಾಯಗೊಂಡಿದ್ದಾರೆ.

ದೆಹಲಿಯಲ್ಲಿ ರೈತರ ರಕ್ತದೋಕುಳಿ: ಮಣ್ಣಿನ ಮಕ್ಕಳ ಮೇಲೆ ಪೊಲೀಸರ ದೌರ್ಜನ್ಯದ ಭಯಾನಕ ಚಿತ್ರಗಳು

ಸ್ವಾಮಿನಾಥನ್‌ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು, ಡೀಸೆಲ್‌ ಬೆಲೆ ಇಳಿಕೆ ಮಾಡಬೇಕು, ಸಾಲ ಮನ್ನಾ, ಕಬ್ಬು ಬಾಕಿ ಪಾವತಿಸಬೇಕು ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್‌ ವಾಹನಗಳ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೇರಿದ್ದ ನಿಷೇಧ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಕಿಸಾನ್‌ ಕ್ರಾಂತಿ ಯಾತ್ರಾ ಹೆಸರಿನಲ್ಲಿ ‘ಕಿಸಾನ್ ಸಂಘರ್ಷ ಸಮಿತಿ’ ರೈತರು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು. ಅ. 2ರಂದು ರಾಜಧಾನಿಗೆ ಶಾಂತಿಯುತ ಮೆರವಣಿಗೆ ಹೊರಟಿದ್ದ ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಸೆಕ್ಷನ್ 144 ಜಾರಿಗೆ ತಂದಿದ್ದರು. ಆದರೆ ಇದನ್ನು ಲೆಕ್ಕಿಸದೆ ಮುಂದುವರಿದ ರೈತರಿಗೆ ಗಾಂಧಿ ಸ್ಮಾರಕಕ್ಕೆ ತೆರಳುವ ಮಾರ್ಗ ಮಧ್ಯೆ ಪೊಲೀಸರ ಹಿಂಸಾಚಾರ ಎದುರಾಗಿದೆ.

ಈ ಸಂದರ್ಭ ಮಾತನಾಡಿದ ರೈತ ಮುಖಂಡ ದುಶ್ಯಂತ್‌, “ಗದ್ದೆಗಳಲ್ಲಿ ರಕ್ತ ಬಸಿದು ನೀವು ತಿನ್ನುವ ಅಕ್ಕಿಯನ್ನು ರೈತರು ಬೆಳೆಯುತ್ತಾರೆ. ರೈತರಿಗೆ ರಾಜಧಾನಿಗೆ ಪ್ರವೇಶ ಇಲ್ಲ ಅಂದರೆ ಏನರ್ಥ? ರಾಜಧಾನಿಗೆ ಬರಬೇಡಿ ಅಂದರೆ ರೈತರು ಮತ್ತೆಲ್ಲಿ ಪೇಶಾವರಕ್ಕೆ ಹೋಗಿ ನ್ಯಾಯ ಕೇಳಬೇಕಾ?” ಎಂದು ಕಿಡಿಕಾರಿದ್ದಾರೆ. ಆದರೆ ವಿಪರ್ಯಾಸವೆಂದರೆ ಗದ್ದೆಗಳಲ್ಲಿ ಮಾತ್ರವಲ್ಲದೆ ದೆಹಲಿಯ ರಸ್ತೆಗಳಲ್ಲೂ ಇವರು ರಕ್ತವನ್ನು ಬಸಿಯಬೇಕಾಗಿದೆ.

ದೆಹಲಿಯಲ್ಲಿ ರೈತರ ರಕ್ತದೋಕುಳಿ: ಮಣ್ಣಿನ ಮಕ್ಕಳ ಮೇಲೆ ಪೊಲೀಸರ ದೌರ್ಜನ್ಯದ ಭಯಾನಕ ಚಿತ್ರಗಳು

ದಿಲ್ಲಿ ಹಾಗೂ ಗಾಝಿಯಾಬಾದ್ ಹೆದ್ದಾರಿಯಲ್ಲಿ ರೈತರ ಮೇಲೆ ಪ್ರಹಾರ ಆರಂಭವಾಗುತ್ತಿದ್ದಂತೆ ಹಲವು ರಾಜಕೀಯ ಮುಖಂಡರು ರೈತರಿಗೆ ಬೆಂಬಲ ಸೂಚಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘಟನೆಯನ್ನು ಖಂಡಿಸಿದ್ದು, ‘ರೈತರನ್ನು ರಾಜಧಾನಿಗೆ ಬರದಂತೆ ತಡೆಯುವುದು ತಪ್ಪು’ ಎಂದಿದ್ದಲ್ಲದೆ, ‘ರೈತರ ಜತೆಗೆ ನಾವಿದ್ದೇವೆ’ ಎಂದು ತಿಳಿಸಿದ್ದಾರೆ.

ಸರಕಾರ ರೈತರ ಸಮಸ್ಯೆಗಳನ್ನು ಬಗೆಹರಿಸದೆ ಇರುವಾಗ ಅವರು ಪ್ರತಿಭಟನೆ ನಡೆಸುವುದು ಸಹಜ ಎಂದು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ. ಅವರೂ ಕೂಡ ರೈತರ ‘ಕಿಸಾನ್ ಕ್ರಾಂತಿ ಪಾದಯಾತ್ರೆ’ಗೆ ಬೆಂಬಲ ಸೂಚಿಸಿದ್ದಾರೆ. ಸಿಪಿಐಎಂ ನಾಯಕ ಸೀತಾರಾಮ್‌ ಯೆಚೂರಿ ಮಾತನಾಡಿದ್ದು, “ಮೋದಿ ಸರಕಾರ ರೈತ ವಿರೋಧಿ ಎಂಬುದು ಸಾಬೀತಾಗಿದೆ. ಸರಕಾರ ರೈತರ ಸಮಸ್ಯೆಯನ್ನು ಬಗೆಹರಿಸುವ ಬದಲು ಅವರನ್ನು ಇನ್ನಷ್ಟು ಸಾಲದ ಸುಳಿಗೆ ಮತ್ತು ಒತ್ತಡದ ಆತ್ಮಹತ್ಯೆಗೆ ದೂಡುತ್ತಿದೆ,” ಎಂದವರು ದೂರಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್‌ ಸುರ್ಜೇವಾಲ ಸರಕಾರದ ವಿರುದ್ಧ ಹರಿಹಾಯ್ದಿದ್ದು ರೈತರ ಮೇಲೆ ಹಲ್ಲೆ ಮಾಡಿರುವುದು “ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಮಾನವೀಯ, ಅನ್ಯಾಯ ಮತ್ತು ಅಕ್ಷಮ್ಯದ ನಡೆ,” ಎಂದಿದ್ದಾರೆ.

ದೆಹಲಿಯಲ್ಲಿ ರೈತರ ರಕ್ತದೋಕುಳಿ: ಮಣ್ಣಿನ ಮಕ್ಕಳ ಮೇಲೆ ಪೊಲೀಸರ ದೌರ್ಜನ್ಯದ ಭಯಾನಕ ಚಿತ್ರಗಳು

ಸರಕಾರದ ಭರವಸೆಗೆ ಬಗ್ಗದ ರೈತರು

ಸಂಜೆ ವೇಳೆಗೆ ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಕೇಂದ್ರ ಕೃಷಿ ಸಚಿವರ ರಾಧಾ ಮೋಹನ್‌ ಸಿಂಗ್‌ ಅವರ ಜತೆ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಸಭೆ ನಡೆಸಿದರು. ರೈತರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಚರ್ಚೆ ನಡೆಸಿದರು. ನಂತರ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ದೆಹಲಿ ಯುಪಿ ಗಡಿಯಲ್ಲಿರುವ ರೈತರ ಜತೆ ಸಂವಾದ ನಡೆಸಿ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಳ್ಳಲಾಗುವುದು ಎಂದು ಹೇಳಿದರು.

ಆದರೆ ಇದಕ್ಕೆ ಬಗ್ಗದ ರೈತರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ತಿಕೈಟ್‌, “ಸರಕಾರದ ಭರವಸೆಯನ್ನು ರೈತರು ಒಪ್ಪಿಕೊಳ್ಳುವುದಿಲ್ಲ. ಫ್ರತಿಭಟನೆಯನ್ನು ರೈತರು ಮುಂದುವರಿಸಲಿದ್ದಾರೆ,” ಎಂದು ಹೇಳಿದ್ದಾರೆ. “11 ಪ್ರಮುಖ ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿದೆ. ಉಳಿದ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಸರಕಾರ ಹೇಳಿದೆ. ಮುಖ್ಯವಾಗಿ ಸಾಲ ಮನ್ನಾ ಹಾಗೂ ಸ್ವಾಮಿನಾಥನ್‌ ವರದಿ ಜಾರಿಗೆ ಸರಕಾರ ಒಪ್ಪಿಲ್ಲ. ಸಾಲಮನ್ನಾ ಹಣಕಾಸಿನ ವಿಷಯವಾಗಿರುವುದರಿಂದ ಈಗಲೇ ತೀರ್ಮಾನಕ್ಕೆ ಬರುವುದು ಸಾಧ್ಯವಿಲ್ಲ ಎಂದು ಸರಕಾರ ಹೇಳಿದೆ” ಎಂದು ಬಿಕೆಯು ವಕ್ತಾರ ಯುಧ್‌ವೀರ್‌ ಸಿಂಗ್‌ ತಿಳಿಸಿದ್ದಾರೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಮುಂದಿನ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ.

ಚಿತ್ರ ಕೃಪೆ: ದಿ ಹಿಂದೂ, ಇಂಡಿಯನ್‌ ಎಕ್ಸ್‌ಪ್ರೆಸ್, ಟೈಮ್ಸ್‌ ಆಫ್‌ ಇಂಡಿಯಾ, ನ್ಯಾಷನಲ್‌ ಹೆರಾಲ್ಡ್‌, ಹಿಂದೂಸ್ಥಾನ್‌ ಟೈಮ್ಸ್‌