samachara
www.samachara.com
ಸಾವಿನ ಸಂಖ್ಯೆ 1,234ಕ್ಕೆ ಏರಿಕೆ: ಮನ ಕಲಕುತ್ತಿವೆ ಇಂಡೋನೇಷ್ಯಾದ ಈ ಚಿತ್ರಗಳು
COVER STORY

ಸಾವಿನ ಸಂಖ್ಯೆ 1,234ಕ್ಕೆ ಏರಿಕೆ: ಮನ ಕಲಕುತ್ತಿವೆ ಇಂಡೋನೇಷ್ಯಾದ ಈ ಚಿತ್ರಗಳು

ಪ್ರಾಕೃತಿಕ ವಿಕೋಪಕ್ಕೆ ಗುರಿಯಾದ ಇಂಡೋನೇಷ್ಯಾದ ಚಿತ್ರಗಳು, ಡ್ರೋನ್‌ ವಿಡಿಯೋಗಳು ಈಗಷ್ಟೇ ಹೊರ ಬರುತ್ತಿದ್ದು ವಿಕೋಪದ ಭೀಕರತೆಯನ್ನು ಸಾರುತ್ತಿವೆ. ಜತೆಗೆ ಎಂಥವರ ಮನಸ್ಸನ್ನೂ ಕಲಕುವಂತಿವೆ.

Team Samachara

ಇಂಡೋನೇಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಸತ್ತವರ ಅಧಿಕೃತ ಸಂಖ್ಯೆ 844ರಿಂದ 1,234ಕ್ಕೆ ಏರಿಕೆಯಾಗಿದೆ.

ಇಂಡೋನೇಷ್ಯಾದಲ್ಲಿ ಶುಕ್ರವಾರ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸುಲವೆಸಿ ದ್ವೀಪದಲ್ಲಿರುವ ಪಾಲು ಎಂಬ ನಗರದಿಂದ 77 ಕಿಲೋಮೀಟರ್‌ ದೂರದಲ್ಲಿ ಭೂಕಂಪದ ಕೇಂದ್ರವಿತ್ತು. ಭೂಕಂಪದ ಬೆನ್ನಿಗೆ ಸುಲವೆಸಿ ದ್ವೀಪದ ತೀರಕ್ಕೆ ಸುಮಾರು 6 ಮೀಟರ್‌ ಎತ್ತರದ ಸುನಾಮಿ ಅಲೆಗಳು ಬಂದು ಅಪ್ಪಳಿಸಿವೆ. ಅಲೆಗಳ ಅಬ್ಬರಕ್ಕೆ ಸುಮಾರು 3.5 ಲಕ್ಷ ಜನರು ವಾಸವಾಗಿರುವ ಪಾಲು ದ್ವೀಪ ಸಂಪೂರ್ಣ ನೆಲಕಚ್ಚಿದೆ.

ಪರಿಸ್ಥಿತಿ ತೀವ್ರತೆ ಯಾವ ಮಟ್ಟಕ್ಕೆ ಇದೆ ಎಂದರೆ ರಕ್ಷಣಾ ಕಾರ್ಯಕ್ಕೂ ಜನರು ಇಲ್ಲದಂತಾಗಿದೆ. ಹೀಗಾಗಿ ಕುಸಿದ ಕಟ್ಟಡ, ಚೆಲ್ಲಾಪಿಲ್ಲಿಯಾದ ಅವಶೇಷಗಳಡಿ ಬದುಕುಳಿದವರಿಗೆ ಹುಡುಕಾಟ ನಡೆಸಲು ಹೊರಗಿನಿಂದ ಜನರು ಬರಬೇಕಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭೂಕಂಪ ಮತ್ತು ಸುನಾಮಿಗೆ ಪೊಲೀಸ್‌ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಯೂ ತುತ್ತಾಗಿದ್ದು ಎಲ್ಲರೂ ಸಂತ್ರಸ್ತರ ಸ್ಥಾನದಲ್ಲಿ ನಿಂತಿದ್ದಾರೆ. ಹೀಗಾಗಿ ಸಾಮಾನ್ಯ ಜನರನ್ನು ರಕ್ಷಣೆ ಮಾಡುವವರು ಯಾರೂ ಇಲ್ಲವಾಗಿದ್ದಾರೆ.

ಸಾವಿನ ಸಂಖ್ಯೆ 1,234ಕ್ಕೆ ಏರಿಕೆ: ಮನ ಕಲಕುತ್ತಿವೆ ಇಂಡೋನೇಷ್ಯಾದ ಈ ಚಿತ್ರಗಳು

ಕುಸಿದಿರುವ ರಸ್ತೆ, ಕೊಚ್ಚಿ ಹೋಗಿರುವ ದಾರಿಯಿಂದಾಗಿ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಕ್ಲಿಷ್ಟಕರವಾಗಿದೆ. ಸದ್ಯಕ್ಕೆ ವಿಕೋಪದಿಂದ ಸುಮಾರು 2 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಇವರೆಲ್ಲರಿಗೂ ತುರ್ತು ನೆರವು ಬೇಕಾಗಿದೆ. ಚರ್ಚ್‌ ಒಂದರಲ್ಲೇ 34 ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಇಂಡೋನೇಷ್ಯಾದ ರೆಡ್‌ಕ್ರಾಸ್‌ ಸಂಸ್ಥೆ ವಕ್ತಾರರು ಹೇಳಿದ್ದಾರೆ. ಈ ಚರ್ಚ್‌ನಲ್ಲಿದ್ದ ಇನ್ನೂ ಸುಮಾರು 50 ಮಕ್ಕಳು ನಾಪತ್ತೆಯಾಗಿದ್ದಾರೆ.

ಇನ್ನೂ ಹಲವು ವಿಕೋಪ ಪೀಡಿತ ಪ್ರದೇಶಗಳಿಗೆ ರಕ್ಷಣಾ ಸಿಬ್ಬಂದಿ ತಲುಪಿಲ್ಲ. ಜತೆಗೆ ಉಳಿದ ಸ್ಥಳಗಳಲ್ಲಿಯೂ ಸಿಬ್ಬಂದಿ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಇನ್ನೂ ಸರಿಯಾಗಿ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯ ಮತ್ತಷ್ಟು ಹೆಚ್ಚಾಗುವ ಅಪಾಯ ಇದೆ. ಮನೆಗಳು, ಕಾರು, ಮರ, ಎಲ್ಲವೂ ಕೊಚ್ಚಿಕೊಂಡು ಬಂದು ಒಂದೇ ಸ್ಥಳದಲ್ಲಿ ಗುಡ್ಡೆ ಬಿದ್ದಿದ್ದು ಇವುಗಳ ಅಡಿಯಿಂದ ಸತ್ತವರ ಹೆಣ ಹೊರತೆಗೆಯಬೇಕಾಗಿದೆ. ಪಾಲು ನಗರದಲ್ಲಿ ಇದೇ ರೀತಿ ಒಂದೇ ಕಡೆ 1,700 ಕ್ಕೂ ಅಧಿಕ ಮನೆಗಳು ನಾಶವಾಗಿದ್ದು ಇವುಗಳ ಅಡಿಯಲ್ಲಿ ಹಲವಾರು ಜನ ಸಮಾಧಿಯಾಗಿರಬಹುದು ಎಂದುಕೊಳ್ಳಲಾಗಿದೆ.

ಸಾವಿನ ಸಂಖ್ಯೆ 1,234ಕ್ಕೆ ಏರಿಕೆ: ಮನ ಕಲಕುತ್ತಿವೆ ಇಂಡೋನೇಷ್ಯಾದ ಈ ಚಿತ್ರಗಳು

ಇದು ಪಾಲುವಿನ ಕಥೆಯಾದರೆ ಇದರ ಪಕ್ಕದಲ್ಲಿರುವ ಇನ್ನೊಂದು ನಗರ ಡೊಂಗಾಲ ಕೂಡ ಸುನಾಮಿ ಹೊಡೆತಕ್ಕೆ ಸಿಲುಕಿದ್ದು ಇಲ್ಲಿನ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ಅಲ್ಲಿಗೆ ಈಗಷ್ಟೇ ರಕ್ಷಣಾ ಸಿಬ್ಬಂದಿ ತಲುಪಿದ್ದು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಮತ್ತು ಸಾವನ್ನಪ್ಪಿದವರ ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದೆ. ಇಲ್ಲಿ ನಡೆದಿರುವ ಹಾನಿಯ ಪೂರ್ಣ ಚಿತ್ರಣ ಇನ್ನೂ ಸರಿಯಾಗಿ ಸಿಕ್ಕಿಲ್ಲ.

ಒಂದು ಕಡೆ ಸಾವಿಗೀಡಾದವರ ಕುಟುಂಬದವರ ಗೋಳು ಮುಗಿಲು ಮುಟ್ಟಿದ್ದರೆ ಇನ್ನೊಂದು ಕಡೆ ಬದುಕುಳಿದವರು ತಿನ್ನಲು ಆಹಾರ, ನೀರು ಇಲ್ಲದೆ ಒದ್ದಾಡುತ್ತಿದ್ದಾರೆ. ಇದಕ್ಕಾಗಿ ಇದ್ದ ಬದ್ದ ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡುತ್ತಿದ್ದಾರೆ. ಇವರನ್ನು ತಡೆಯುವುದು ಅಲ್ಲಿನ ಪೊಲೀಸರಿಗೆ ತಲೆ ನೋವಾಗಿದೆ.

ಆಸ್ಪತ್ರೆಗಳೂ ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ಆಕಾಶದ ಅಡಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿದ್ದು ಅಧ್ಯಕ್ಷ ಜೋಕೋಮ ವಿಡೋಡೋ ನೆರವು ನೀಡುವಂತೆ ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ಮನವಿ ಮೇರೆಗೆ ಅಮೆರಿಕಾ, ಚೀನಾ ಮತ್ತು ಯುರೋಪಿಯನ್‌ ಒಕ್ಕೂಟಗಳು ಸೇರಿದಂತೆ 10 ದೇಶಗಳು ನೆರವಿನ ಹಸ್ತ ಚಾಚಿವೆ.

ಪ್ರಾಕೃತಿಕ ವಿಕೋಪಕ್ಕೆ ಗುರಿಯಾದ ಇಂಡೋನೇಷ್ಯಾದ ಚಿತ್ರಗಳು, ಡ್ರೋನ್‌ ವಿಡಿಯೋಗಳು ಈಗಷ್ಟೇ ಹೊರ ಬರುತ್ತಿದ್ದು ವಿಕೋಪದ ಭೀಕರತೆಯನ್ನು ಸಾರುತ್ತಿವೆ. ಜತೆಗೆ ಎಂಥವರ ಮನಸ್ಸನ್ನೂ ಕಲಕುವಂತಿವೆ.

ಸಾವಿನ ಸಂಖ್ಯೆ 1,234ಕ್ಕೆ ಏರಿಕೆ: ಮನ ಕಲಕುತ್ತಿವೆ ಇಂಡೋನೇಷ್ಯಾದ ಈ ಚಿತ್ರಗಳು

ಚಿತ್ರ ಕೃಪೆ: ಬಿಬಿಸಿ, ಸಿಎನ್‌ಎನ್‌