‘ಜನರ ಮೇಲೆ ಭಾರ’: ಸಾಲದ ಸುಳಿಯಲ್ಲಿರುವ ಕಂಪನಿಯನ್ನು ಕೇಂದ್ರ ರಕ್ಷಿಸಲು ಹೊರಟಿದ್ದೇಕೆ?
COVER STORY

‘ಜನರ ಮೇಲೆ ಭಾರ’: ಸಾಲದ ಸುಳಿಯಲ್ಲಿರುವ ಕಂಪನಿಯನ್ನು ಕೇಂದ್ರ ರಕ್ಷಿಸಲು ಹೊರಟಿದ್ದೇಕೆ?

ಐಎಲ್‌&ಎಫ್‌ಎಸ್‌ ಗ್ರೂಪ್ 88,000 ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿದ್ದು ಇದನ್ನು ಮೇಲಕ್ಕೆತ್ತಲು ಪ್ರಧಾನಿ ನರೇಂದ್ರ ಮೋದಿ ಇಟ್ಟಿರುವ ನಡೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆಂಡ್‌ ಫೈನಾನ್ಸ್‌ ಸರ್ವಿಸಸ್‌ (ಐಎಲ್‌&ಎಫ್‌ಎಸ್‌) ಗ್ರೂಪ್ ಸಾಲದ ಸುಳಿಯಲ್ಲಿ ಸಿಲುಕಿದೆ. ಸುಮಾರು 88,000 ಕೋಟಿ ರೂಪಾಯಿ ಸಾಲದಲ್ಲಿ ಕಂಪನಿ ಮುಳುಗಿದ್ದು ಇದನ್ನು ಮೇಲಕ್ಕೆತ್ತಲು ಪ್ರಧಾನಿ ನರೇಂದ್ರ ಮೋದಿ ಇಟ್ಟಿರುವ ನಡೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣವಾಗಿದೆ.

ಐಎಲ್‌&ಎಫ್ಎಸ್‌ ಸಂಕೀರ್ಣವಾದ ಕಾರ್ಯಾಚರಣೆ ವ್ಯವಸ್ಥೆಯನ್ನು ಹೊಂದಿದ್ದು ಇದು ದೇಶದ ಬೃಹತ್‌ ಮೂಲ ಸೌಕರ್ಯ ಯೋಜನೆಗಳಿಗೆ ಹಣ ಹೂಡುತ್ತದೆ. ಜತಗೆ ಬೃಹತ್‌ ಯಂತ್ರಗಳನ್ನು ಬಾಡಿಗೆಗೂ ನೀಡುವ ಉದ್ಯಮವನ್ನು ನಡೆಸಿಕೊಂಡು ಬಂದಿದೆ. ಸದರಿ ಸಂಸ್ಥೆಯೀಗ ಭಾರೀ ಸಾಲದ ಸುಳಿಯಲ್ಲಿ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಕಂಪನಿಯನ್ನು ಮೇಲಕೆತ್ತಲು ಮೂರು ಸಂಸ್ಥೆಗಳು ಹಣ ಹೂಡಲು ಮುಂದೆ ಬಂದಿವೆ. ಅದರಲ್ಲಿ ಒರಿಕ್ಸ್‌ ಕಾರ್ಪ್‌ ಮತ್ತು ಸಾರ್ವಜನಿಕ ರಂಗದ ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಲ್‌ಐಸಿ) ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಗಳು ಸೇರಿವೆ.

ಈ ಹಿನ್ನೆಲೆಯಲ್ಲಿ ಕಂಪನಿಯನ್ನು ಉಳಿಸಿಕೊಳ್ಳಲು ಜನರ ಹಣವನ್ನು ಮೋದಿ ವ್ಯಯಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಈ ಸಂಬಂಧ ಟ್ಟೀಟ್‌ ಮಾಡಿರುವ ಅವರು ‘ಲೈಟ್‌, ಕ್ಯಾಮೆರಾ, ಸ್ಕ್ಯಾಮ್‌’ ಎಂಬ ತಲೆ ಬರಹದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “2007ರಲ್ಲಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಕಂಪನಿಗೆ 70,000 ಕೋಟಿ ಮೊತ್ತದ ‘ಗಿಫ್ಟ್‌ ಸಿಟಿ’ ಯೋಜನೆಯನ್ನು ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಈ ಸಂಬಂಧ ಯಾವುದೇ ಕೆಲಸಗಳು ನಡೆದಿಲ್ಲ. ಇದೀಗ 2018ರಲ್ಲಿ ಸಾರ್ವಜನಿಕರ ಹಣವನ್ನು ಹೂಡಿಕೆ ಮಾಡಿ ಕಂಪನಿಯನ್ನು ಉಳಿಸಿಕೊಳ್ಳಲು ಹೊರಟಿದಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.

“ಭಾರತದ ಜನರಿಗೆ ಎಲ್‌ಐಸಿ ಮೇಲೆ ನಂಬಿಕೆ ಇದೆ. ಪ್ರತಿ ಪೈಸೆ ಪೈಸೆಯನ್ನೂ ಉಳಿಸಿ ಜನರು ಎಲ್‌ಐಸಿ ಪಾಲಿಸಿಗಳನ್ನು ಕೊಂಡುಕೊಳ್ಳುತ್ತಾರೆ. ವಂಚಕ ಕಂಪನಿಗಳನ್ನು ಉಳಿಸಿಕೊಳ್ಳಲು ಅವರ ಈ ದುಡ್ಡನ್ನು ಯಾಕೆ ಬಳಸಬೇಕು?” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. IL&FS ಅಂದರೆ ‘ಐ ಲವ್‌ ಫೈನಾನ್ಸಿಯಲ್‌ ಸ್ಕ್ಯಾಮ್ಸ್‌’ ಎಂದು ಕರೆದಿರುವ ರಾಹುಲ್‌ ಗಾಂಧಿ, ಕಂಪನಿಯ ಅಡಿಟ್‌ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿ 42,000 ಕೋಟಿ ರೂಪಾಯಿ ಹಣವನ್ನು ವಿತರಣೆ ಮಾಡಿದೆ. ಈ ಬಗ್ಗೆ ಗಂಭೀರ ಸ್ವರೂಪದ ಅನುಮಾನಗಳಿದ್ದು ಈ ಸಂಬಂಧ ನ್ಯಾಯಯುತ ಆಡಿಟ್ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಸ್ತಿ ಮಾರಾಟಕ್ಕೆ ಕಂಪನಿ ನಿರ್ಧಾರ

ಇದೇ ವೇಳೆ ಹಗರಣದ ಆರೋಪ, ಸಾಲದ ಸುಳಿಯಲ್ಲಿ ಸಿಲುಕಿರುವ ಕಂಪನಿ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ಮರು ಪಾವತಿ ಮಾಡುವುದಾಗಿ ಶನಿವಾರ ಹೇಳಿದೆ. ಮುಖ್ಯವಾಗಿ ತಕ್ಷಣಕ್ಕೆ ಸಂಸ್ಥೆ ‘ಸ್ಮಾಲ್‌ ಇಂಡಸ್ಟೀಸ್ ಡೆವಲಪ್‌ಮೆಂಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಐಡಿಬಿಐ)‘ಗೆ 1,000 ಕೋಟಿಗಳ ಸುಸ್ತಿ ಸಾಲ ಪಾವತಿಸಬೇಕಿದೆ. ಇದನ್ನು ಮರುಪಾವತಿ ಮಾಡಲು ಮುಂಬೈನ ಪ್ರತಿಷ್ಠಿತ ಸ್ಥಳದಲ್ಲಿರುವ ತನ್ನ ಕೇಂದ್ರ ಕಚೇರಿಯನ್ನೇ ಮಾರಾಟ ಮಾಡಲು ಕಂಪನಿ ಮುಂದಾಗಿದೆ. ಸದ್ಯ ಇದಕ್ಕೆ 1,300 ರಿಂದ 1,500 ಕೋಟಿ ರೂಪಾಯಿ ಮೌಲ್ಯವಿದೆ ಎಂದು ಅಂದಾಜು ಮಾಡಲಾಗಿದೆ.

ಮುಂಬೈನ ಬಾಂದ್ರಾ-ಕುರ್ಲಾದಲ್ಲಿರುವ ಐಎಲ್‌&ಎಫ್‌ಎಸ್‌ ಕೇಂದ್ರ ಕಚೇರಿ
ಮುಂಬೈನ ಬಾಂದ್ರಾ-ಕುರ್ಲಾದಲ್ಲಿರುವ ಐಎಲ್‌&ಎಫ್‌ಎಸ್‌ ಕೇಂದ್ರ ಕಚೇರಿ
/ವಿಕಿಪೀಡಿಯಾ

ಇನ್ನು ಇತ್ತೀಚೆಗೆ ತನ್ನ ನೌಕರರಿಗೆ ಪತ್ರ ಬರೆದಿದ್ದ ಕಂಪನಿ ಸಂಸ್ಥೆಯ 16,000 ಕೋಟಿ ರೂಪಾಯಿ ಹಣ ವಿವಿಧ ವ್ಯಾಜ್ಯಗಳಲ್ಲಿದೆ ಎಂದು ಹೇಳಿತ್ತು. ಒಟ್ಟು ಕಂಪನಿ 88,000 ಕೋಟಿ ರೂಪಾಯಿ ಸಾಲದಲ್ಲಿದ್ದು ಇದರಲ್ಲಿ 52,000 ಕೋಟಿ ರೂಪಾಯಿ ಮೊತ್ತ ವಿಶೇಷ ವಾಹನಗಳ ಮೇಲೆ ಹೂಡಿಕೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ವಿದ್ಯುತ್‌ ಕಂಪನಿಗಳಿಗೆ ಸಂಬಂಧಿಸಿದ ವಿಶೇಷ ವಾಹನಗಳು ಇವಾಗಿವೆ.

ತನ್ನ ಮೇಲಿರುವ ಬೃಹತ್‌ ಭಾರವನ್ನು ಕಳಚಿಕೊಳ್ಳಲು ಸದ್ಯ ಕಂಪನಿಯು ತನ್ನ ಬಳಿಯಿರುವ ರಸ್ತೆ ಮತ್ತು ವಿದ್ಯುತ್‌ ಯೋಜನೆಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ 25 ಯೋಜನೆಗಳನ್ನು ಗುರುತಿಸಿದೆ. ಇವುಗಳ ಮೂಲಕ 30,000 ಕೋಟಿ ರೂಪಾಯಿ ಹಣ ಸಂಗ್ರಹಿಸಿ ಸಾಲ ಮರುಪಾವತಿ ಮಾಡುವ ಯೋಜನೆ ಕಂಪನಿ ಮುಂದಿದೆ ಎಂದು ಮೂಲಗಳು ತಿಳಿಸಿವೆ.

ಇದರ ಜತೆಗೆ ತನ್ನ ಷೇರುದಾರರಾದ ಎಲ್‌ಐಸಿಯಿಂದ 2,000 ಕೋಟಿ ರೂಪಾಯಿ ಮತ್ತು ಎಸ್‌ಬಿಐನಿಂದ 1,000 ಕೋಟಿ ರೂಪಾಯಿ ಹೂಡಿಕೆಯನ್ನು ಪಡೆದುಕೊಳ್ಳಲು ಕಂಪನಿ ನಿರ್ಧರಿಸಿದೆ. ಹೀಗೆ ಒಟ್ಟು 3,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಕಂಪನಿಯ ಇನ್ನೊಂದು ಗುರಿಯಾಗಿದೆ.

ಒಂದೊಮ್ಮೆ ಈ ಎಲ್ಲಾ ಯೋಜನೆಗಳು ಯಶಸ್ವಿಯಾದರೂ ಕಂಪನಿ ದೊಡ್ಡ ಮೊತ್ತದ ಸಾಲವನ್ನು ಉಳಿಸಿಕೊಳ್ಳಲಿದೆ. ಇದನ್ನು ಕಂಪನಿ ಹೇಗೆ ಮರುಪಾವತಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಇದು ಸಾಧ್ಯವಾಗದೇ ಇದ್ದಲ್ಲಿ ಕಂಪನಿಯ ಪತನ ಒಟ್ಟಾರೆ ಆರ್ಥಿಕ ವಲಯದ ಮೇಲೆ ಪರಿಣಾಮ ಬೀರಲಿದೆ. ಇದು ಸದ್ಯಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಡುವೆ ಕೇಂದ್ರ ಸರಕಾರ ಕಂಪನಿಯ ನಿರ್ದೇಶಕರ ಮಂಡಳಿಯನ್ನು ಸೂಪರ್ ಸೀಡ್ ಮಾಡಲು ಹೊರಟಿದೆ ಎಂಬ ಸುದ್ದಿ ಹೊರಬಿದ್ದಿದೆ. ಸಹಜವಾಗಿಯೇ ದೊಡ್ಡ ಪ್ರಮಾಣದ ನಷ್ಟದಲ್ಲಿರುವ ಕಂಒನಿಯನ್ನು ಸಾರ್ವಜನಿಕರ ಹಣದಲ್ಲಿ ಎತ್ತಿನಿಲ್ಲಿಸಲು ಹೊರಟ ಕೇಂದ್ರದ ನಡೆ ಅನುಮಾನಗಳಿಗೆ ಕಾರಣವಾಗಿದೆ.