ಸ್ವಲ್ಪ ಕಹಿ- ಸ್ವಲ್ಪ ಸಿಹಿ: ನ್ಯಾ. ದೀಪಕ್‌ ಮಿಶ್ರಾ ನಿವೃತ್ತಿ
COVER STORY

ಸ್ವಲ್ಪ ಕಹಿ- ಸ್ವಲ್ಪ ಸಿಹಿ: ನ್ಯಾ. ದೀಪಕ್‌ ಮಿಶ್ರಾ ನಿವೃತ್ತಿ

ಒಂದಷ್ಟು ವಿವಾದ, ಹಲವು ಆರೋಪಗಳ ಜತೆ ಜತೆಗೆ ಹಲವು ಮಹತ್ವದ ತೀರ್ಪುಗಳ ಕಾರಣಕ್ಕೆ ನ್ಯಾ. ಮಿಶ್ರಾ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮದೇ ಆದ ಹೆಸರನ್ನು ಉಳಿಸಿ ಹೋಗಲಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್‌ ಮಿಶ್ರಾ ಸೋಮವಾರ ಕೊನೆಯ ಕಲಾಪವನ್ನು ನಿರ್ವಹಿಸಿದರು. ಅವರು ಮಂಗಳವಾರ ನಿವೃತ್ತರಾಗಲಿದ್ದು, ಗಾಂಧಿ ಜಯಂತಿ ಪ್ರಯುಕ್ತ ರಜೆ ಇರುವುದರಿಂದ ಇಂದೇ ಅವರು ಕೊನೆಯ ವಿಚಾರಣೆ ನಡೆಸಿದರು. ಬುಧವಾರದಿಂದ ನ್ಯಾ. ರಂಜನ್‌ ಗೊಗೋಯಿ ಮುಖ್ಯ ನ್ಯಾಯಮೂರ್ತಿ ಹುದ್ದೆ ವಹಿಸಿಕೊಳ್ಳಲಿದ್ದಾರೆ.

ನ್ಯಾಯಮೂರ್ತಿಗಳಾದ ಗೊಗೋಯಿ ಮತ್ತು ಎ.ಎಂ. ಖನ್ವಿಲ್ಕರ್‌ ಸದಸ್ಯರಾಗಿದ್ದ ತ್ರಿ ಸದಸ್ಯ ಪೀಠದಲ್ಲಿ ಕುಳಿತು ಅವರು ತಮ್ಮ ಕೊನೆಯ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ, ‘25 ನಿಮಿಷಗಳ ವಿಚಾರಣೆ ನಂತರ ವಿವರಣೆ ನೀಡುವ ವೇಳೆ ನ್ಯಾ. ಮಿಶ್ರಾ ಭಾವುಕರಾಗಿದ್ದರು,’ ಎಂದು ಪಿಟಿಐ ವರದಿ ಮಾಡಿದೆ. ವಿಚಾರಣೆ ನಂತರ ವಕೀಲರೊಬ್ಬರು “ತುಮ್‌ ಜಿಯೋ ಹಜರೋನ್‌ ಸಾಲ್‌” ಎಂಬ ಹಿಂದಿ ಹಾಡು ಹಾಡಲು ಆರಂಭಿಸಿದರು. ಆದರೆ ಹಾಡನ್ನು ಅರ್ಧದಲ್ಲೇ ತಡೆದ ದೀಪಕ್‌ ಮಿಶ್ರಾ, "ನಾನೀಗ ನನ್ನ ಹೃದಯದಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ. ನಾನು ನನ್ನ ತಲೆಯಿಂದ ಸಂಜೆ ಪ್ರತಿಕ್ರಿಯೆ ನೀಡುತ್ತೇನೆ,” ಎಂದರು.

ಈ ಮೂಲಕ ನ್ಯಾಯದಾನ ನೀಡುವ ತಮ್ಮ ಪಯಣವನ್ನು ಅವರು ಅಂತ್ಯಗೊಳಿಸಿದರು. ಪಯಣದುದ್ದಕ್ಕೂ ವಿವಾದ, ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂಥಹ ಆದೇಶಗಳ ಮೂಲಕ ಸದ್ದು ಮಾಡಿದವರು ನ್ಯಾ. ದೀಪಕ್‌ ಮಿಶ್ರಾ. ಅವರ ಅವಧಿಯಲ್ಲಿ ಹಲವು ಬೆಳವಣಿಗೆಗಳು ನಡೆದಿದ್ದವು. ಸಿಜೆಐ ಅವರ ಪ್ರಕರಣಗಳ ಹಂಚಿಕೆ ಸರಿಯಿಲ್ಲ ಎಂದು ಆರೋಪಿಸಿ ನ್ಯಾ. ಜೆ. ಚೆಲಮೇಶ್ವರ್‌ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದ್ದರು. ಭಾರತದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಇಂತದ್ದೊಂದು ಬೆಳವಣಿಗೆ ನಡೆದಿತ್ತು. ಕೆಲವು ಪ್ರಕರಣಗಳಲ್ಲಿಯೂ ಮಿಶ್ರಾ ಹೆಸರು ಥಳುಕು ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ ಮಹಾಭಿಯೋಗಕ್ಕೆ ಮುಂದಾಗಿತ್ತು.

ಇಷ್ಟೆಲ್ಲಾ ಹಿನ್ನೆಲೆಯಿದ್ದ ನ್ಯಾ. ಮಿಶ್ರಾ ಮಾತ್ರ ಕೊನೆಯ ಹದಿನೈದು ದಿನಗಳಲ್ಲಿ ಸುಪ್ರಿಂ ಕೋರ್ಟ್‌ನ್ನು ಸುದ್ದಿ ಕೇಂದ್ರಕ್ಕೆ ತಂದು ನಿಲ್ಲಸಿದರು. ಅವರು ನೀಡಿದ ಸಾಲು ಸಾಲು ನ್ಯಾಯದಾನಗಳು ದೇಶದಲ್ಲಿ ಸದ್ದು ಮಾಡಿದ್ದವು. ಲೈಂಗಿಕ ಅಲ್ಪಸಂಖ್ಯಾತರಿಗೆ ಹಲವು ವರ್ಷಗಳ ಹೋರಾಟಕ್ಕೆ ಸುಪ್ರಿಂ ಕೋರ್ಟ್ ಅಸ್ತು ಎಂದಿತು. ಆಧಾರ್‌ಗೆ ಸಂವಿಧಾನದ ಮಾನ್ಯತೆ ನೀಡಿತು. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕಾನೂನಾತ್ಮಕ ವಾತಾವರಣ ಸೃಷ್ಟಿಸಿತು. ಅಕ್ರಮ ಸಂಬಂಧ ತಪ್ಪಲ್ಲ ಎನ್ನುವ ಮೂಲಕ ಹೊಸ ಕಾಲಮಾನದಲ್ಲಿ ವೈವಾಹಿಕ ಸಂಬಂಧಗಳನ್ನು ವಿಶ್ಲೇಷಣೆಗೆ ಒಳಪಡಿಸಿತು. ಮೀಸಲಾತಿ ವಿಚಾರದಲ್ಲಿ ಹೊಸ ಕೆನೆಪದರವನ್ನು ಗುರುತಿಸಿತು. ಅದೆಲ್ಲಕ್ಕಿಂತ ಹೆಚ್ಚಾಗಿ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿತು. ಇವುಗಳ ಜತೆಗೆ ಅಯೋಧ್ಯೆ ವಿಚಾರದಲ್ಲಿ ಪ್ರಾರ್ಥನೆಗೆ ಅವಕಾಶ ನೀಡದೆ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಪೀಠದಲ್ಲಿಯೂ ನ್ಯಾ. ದೀಪಕ್ ಮಿಶ್ರಾ ಇದ್ದರು.

ಡಿ. 19, 1997ರಲ್ಲಿ ನ್ಯಾ. ದೀಪಕ್ ಮಿಶ್ರಾ ಪೂರ್ಣಪ್ರಮಾಣದಲ್ಲಿ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದರು. 2009ರಲ್ಲಿ ಪಾಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾದರು. 2010ರಲ್ಲಿ ದಿಲ್ಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2011ರಲ್ಲಿ ಅವರು ಸುಪ್ರಿಂ ಕೋರ್ಟ್‌ ನ್ಯಾಯಾಧೀಶರಾಗಿ ಹೊಣೆ ಹೊತ್ತುಕೊಂಡರು. ಮುಂದೆ, ಆ. 28, 2017ರಲ್ಲಿ ಅವರು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀರಿಸಿದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ 7 ವರ್ಷಗಳ ಕಾಲ ನ್ಯಾಯಮೂರ್ತಿ ಹುದ್ದೆ ನಿಭಾಯಿಸಿ ನ್ಯಾ. ಮಿಶ್ರಾ ನಿವೃತ್ತರಾಗುತ್ತಿದ್ದಾರೆ. ಒಂದಷ್ಟು ವಿವಾದ, ಹಲವು ಆರೋಪಗಳ ಜತೆ ಜತೆಗೆ ಹಲವು ಮಹತ್ವದ ತೀರ್ಪುಗಳ ಕಾರಣಕ್ಕೆ ನ್ಯಾ. ಮಿಶ್ರಾ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮದೇ ಆದ ಹೆಸರನ್ನು ಉಳಿಸಿ ಹೋಗಲಿದ್ದಾರೆ.