ಪ್ರತಿದಿನ ಟ್ರಿಪ್‌ ಕಡಿತ: ಬಿಎಂಟಿಸಿಗೆ ಎದುರಾಗಿದೆಯೇ ನಷ್ಟದ ಭೀತಿ?
COVER STORY

ಪ್ರತಿದಿನ ಟ್ರಿಪ್‌ ಕಡಿತ: ಬಿಎಂಟಿಸಿಗೆ ಎದುರಾಗಿದೆಯೇ ನಷ್ಟದ ಭೀತಿ?

ಬೆಂಗಳೂರಿನ ಮುಖ್ಯ ಸಾರಿಗೆ ವ್ಯವಸ್ಥೆಯಾಗಿರುವ ಬಿಎಂಟಿಸಿ ಕಡಿಮೆ ಆದಾಯದ ಕಾರಣ ನೀಡಿ ಕೆಲವು ಡಿಪೊಗಳ ಟ್ರಿಪ್‌ಗಳನ್ನೇ ಕಡಿತಗೊಳಿಸುತ್ತಿದೆ.

ಬೆಂಗಳೂರಿನ ಜನ ಸಾಮಾನ್ಯರ ಸಾರಿಗೆ ವ್ಯವಸ್ಥೆ ಎನಿಸಿರುವ ಬಿಎಂಟಿಸಿ ನಷ್ಟದ ಹಾದಿ ಹಿಡಿಯುತ್ತಿದೆಯೇ? ಹೀಗೊಂದು ಪ್ರಶ್ನೆ ಈಗ ಬಿಎಂಟಿಸಿ ಒಳಗಿರುವ ನೌಕರರನ್ನೇ ಕಾಡುತ್ತಿದೆ. ಬಿಎಂಟಿಸಿ ಡಿಪೊಗಳಲ್ಲಿ ಟ್ರಿಪ್‌ಗಳನ್ನು ಕಡಿತಗೊಳಿಸುತ್ತಿರುವುದು ಇದಕ್ಕೆ ಕಾರಣ.

ಕಡಿಮೆ ಆದಾಯದ ಕಾರಣ ನೀಡಿ ಪ್ರತಿ ಡಿಪೊದಲ್ಲೂ ದಿನಕ್ಕೆ ಸುಮಾರು 10ರಿಂದ 15 ಟ್ರಿಪ್‌ಗಳನ್ನು ರದ್ದು ಮಾಡಲಾಗುತ್ತಿದೆ ಎಂಬ ದೂರು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರದ್ದು. ಟ್ರಿಪ್‌ ರದ್ದು ಮಾಡುತ್ತಿರುವುದರಿಂದ ಸಾಕಷ್ಟು ಚಾಲಕ ಮತ್ತು ನಿರ್ವಾಹಕರು ರಜೆ ಹಾಕಿ ಮನೆಗೆ ಹೋಗುವಂಥ ಪರಿಸ್ಥಿತಿಯನ್ನು ಬಿಎಂಟಿಸಿ ನಿರ್ಮಿಸಿದೆ.

“ಪ್ರತಿದಿನ ಬೆಳಿಗ್ಗೆ ಡಿಪೊಗೆ ಹೋದರೆ ಡಿಪೊ ವ್ಯವಸ್ಥಾಪಕರು ಟ್ರಿಪ್‌ ಕ್ಯಾನ್ಸಲ್‌ ಮಾಡಿರುತ್ತಾರೆ. ಕೆಲವು ಮಾರ್ಗಗಳಲ್ಲಿ ಆದಾಯ ಇಲ್ಲದ ಕಾರಣ ನೀಡಿ ಟ್ರಿಪ್‌ ಕ್ಯಾನ್ಸಲ್‌ ಮಾಡುತ್ತಾರೆ. ಆದರೆ, ಬೇರೆ ಮಾರ್ಗಕ್ಕೆ ಚಾಲಕ ಮತ್ತು ನಿರ್ವಾಹಕರನ್ನು ಕಳಿಸದೆ ರಜೆ ತೆಗೆದುಕೊಳ್ಳುವಂತೆ ಒತ್ತಡ ಹಾಕುತ್ತಾರೆ. ರಜೆ ತೆಗೆದುಕೊಳ್ಳದಿದ್ದರೆ ಟ್ರಿಪ್‌ ಇಲ್ಲದ ಕಾರಣ ನೀಡಿ ಗೈರು ಹಾಜರಿ ಎಂದು ನಮೂದಿಸುತ್ತಿದ್ದಾರೆ” ಎನ್ನುತ್ತಾರೆ ಯಶವಂತಪುರ ಡಿಪೊದ ನಿರ್ವಾಹಕರೊಬ್ಬರು.

ಚಾಲಕ ಮತ್ತು ನಿರ್ವಾಹಕರನ್ನು ಬಿಟ್ಟು ಬಿಎಂಟಿಸಿಯ ಯಾವುದೇ ಸಿಬ್ಬಂದಿ ಕಚೇರಿಗೆ ಬಂದರೆ ಅವರು ಹಾಜರಾತಿ ಸಿಗುತ್ತದೆ. ಆದರೆ, ಚಾಲಕ ಮತ್ತು ನಿರ್ವಾಹಕರು ಟ್ರಿಪ್‌ಗೆ ಹೋದರೆ ಮಾತ್ರ ಹಾಜರಾತಿ. ಈಗ ಟ್ರಿಪ್‌ ರದ್ದು ಮಾಡುತ್ತಿರುವುದರಿಂದ ಬಹುತೇಕ ಚಾಲಕ ಮತ್ತು ನಿರ್ವಾಹಕರು ಡಿಪೊಗೆ ಬಂದರೂ ಅನಿವಾರ್ಯವಾಗಿ ರಜೆ ಹಾಕಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಚಾಲಕ ಹಾಗೂ ನಿರ್ವಾಹಕರು ಸರಿಯಾಗಿ ಕಾರ್ಯಾಚರಣೆ ಮಾಡದ ಕಾರಣದಿಂದ ಕೆಲವು ಮಾರ್ಗಗಳಲ್ಲಿ ಆದಾಯ ತಗ್ಗುತ್ತಿದೆ ಎಂಬ ಕಾರಣಕ್ಕೆ ಕೆಲವು ಡಿಪೊಗಳ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಕೆಲವು ಬಸ್‌ ನಿಲ್ದಾಣಗಳಲ್ಲಿ ನಿಂತು ಕಾರ್ಯಾಚರಣೆ ಪರಿಶೀಲನೆ ನಡೆಸಿದ್ದರು. ಆದರೆ, ಈಗ ಕಡಿಮೆ ಆದಾಯದ ನೆಪವೊಡ್ಡಿ ಕೆಲವು ಮಾರ್ಗಗಳಲ್ಲಿ ಟ್ರಿಪ್‌ಗಳನ್ನೇ ಕಡಿತಗೊಳಿಸುತ್ತಿರುವುದರಿಂದ ಚಾಲಕ ಹಾಗೂ ನಿರ್ವಾಹಕರಿಗೆ ತೊಂದರೆಯಾಗುವ ಜತೆಗೆ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.

Also read: ಬಿಎಂಟಿಸಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರ

“ಮೆಟ್ರೊ ಬಂದ ಮೇಲೆ ಬಿಎಂಟಿಸಿಯಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೆಟ್ರೊ ಇರುವ ಮಾರ್ಗಗಳಲ್ಲಿ ಟ್ರಿಪ್‌ ಕಡಿತಗೊಳಿಸಿದರೆ ಅದಕ್ಕೆ ತರ್ಕವಿದೆ. ಟ್ರಿಪ್‌ ಕಡಿತಗೊಳಿಸಿದ್ದಕ್ಕೆ ಪರ್ಯಾಯವಾಗಿ ಮೆಟ್ರೊ ಮಾರ್ಗ ಇಲ್ಲದ ಕಡೆಗಳಲ್ಲಿ ಕಡಿತಗೊಳಿಸಿದ ಟ್ರಿಪ್‌ನ ಹೆಚ್ಚುವರಿ ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಬೇಕು. ಅದನ್ನು ಬಿಟ್ಟು ಟ್ರಿಪ್‌ ಕಡಿತಗೊಳಿಸಿ ಚಾಲಕ ಮತ್ತು ನಿರ್ವಾಹಕರಿಗೆ ರಜೆ ಹಾಕಿ ಹೋಗಿ ಎಂದು ಹೇಳುತ್ತಿರುವುದು ಸರಿಯಲ್ಲ” ಎನ್ನುತ್ತಾರೆ ನಿರ್ವಾಹಕರೊಬ್ಬರು.

ಬೆಂಗಳೂರಿನಲ್ಲಿ 45 ಡಿಪೊಗಳಿಂದ ಬಸ್‌ ಕಾರ್ಯಾಚರಣೆ ನಡೆಯುತ್ತಿದೆ. ಟ್ರಿಪ್‌ ಕಡಿತದಿಂದ ಕಡಿಮೆ ಆದಾಯದಿಂದ ಆಗುತ್ತಿರುವ ನಷ್ಟಕ್ಕೆ ಬ್ರೇಕ್‌ ಹಾಕುವ ಮಾರ್ಗವನ್ನು ಬಿಎಂಟಿಸಿ ಅನುಸರಿಸುತ್ತಿರುವಂತಿದೆ. ಆದರೆ, ಚಾಲಕ, ನಿರ್ವಾಹಕ ಹಾಗೂ ಸಾಮಾನ್ಯ ಪ್ರಯಾಣಿಕರನ್ನು ಬಿಎಂಟಿಸಿ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಟ್ರಿಪ್‌ ಕಡಿತದಿಂದ ಸಿಬ್ಬಂದಿಯ ಮೇಲಾಗುವ ಪರಿಣಾಮಗಳ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಯೋಚಿಸಿದಂತಿಲ್ಲ.

ಯಾವುದೇ ಡಿಪೊಗಳಲ್ಲಿ ಸರಿಯಾದ ಕಾರಣವಿಲ್ಲದೆ ಟ್ರಿಪ್‌ ಕಡಿತ ಮಾಡುವುದಿಲ್ಲ. ಕೆಲವೊಮ್ಮೆ ಬಸ್‌ಗಳು ಬರುವುದು ತಡವಾಗಿರುತ್ತದೆ. ಕೆಲವು ಮಾರ್ಗಗಳಿಗೆ ಹೋಗಲು ಚಾಲಕರು, ನಿರ್ವಾಹಕರು ನಿರಾಕರಿಸಿರುತ್ತಾರೆ. ಇಂತಹ ಕಡೆಗಳಲ್ಲಿ ಟ್ರಿಪ್‌ ಕಡಿತವಾಗಿರುತ್ತದೆ. ಆದರೆ, ಕಡಿಮೆ ಆದಾಯದ ಕಾರಣದಿಂದ ಎಲ್ಲೂ ಟ್ರಿಪ್‌ ಕಡಿತ ಮಾಡುತ್ತಿಲ್ಲ. ಬಿಎಂಟಿಸಿ ನಷ್ಟದಲ್ಲೇನೂ ಇಲ್ಲ.
- ಕೆ.ಆರ್‌. ವಿಶ್ವನಾಥ್‌, ಮುಖ್ಯ ಸಂಚಾರ ವ್ಯವಸ್ಥಾಪಕ, ಕಾರ್ಯಾಚರಣೆ ವಿಭಾಗ, ಬಿಎಂಟಿಸಿ

ಮೆಟ್ರೊ ಹಾಗೂ ಕ್ಯಾಬ್‌ಗಳು ಬಂದ ಮೇಲೆ ಬಿಎಂಟಿಸಿ ಮೇಲೆ ಬೆಂಗಳೂರಿನ ಒಂದು ವರ್ಗ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸಿದೆ. ಆದರೆ, ಬಸ್‌ ಪಾಸ್‌ ಪಡೆದು ಓಡಾಡುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳನ್ನು ಬಿಎಂಟಿಸಿ ಗಮನದಲ್ಲಿ ಇಟ್ಟುಕೊಂಡಂತೆ ಕಾಣುತ್ತಿಲ್ಲ. ಈ ಪ್ರಯಾಣಿಕರು ಹಣಕೊಟ್ಟೇ ಪಾಸ್‌ ಪಡೆದು ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ ಎಂಬುದನ್ನು ಬಿಎಂಟಿಸಿ ಉದ್ದೇಶಪೂರ್ವಕವಾಗಿ ಮರೆತಂತೆ ಕಾಣುತ್ತಿದೆ.

“ಟಿಕೆಟ್‌ ಪಡೆದು ಓಡಾಡುವವರು ಮಾತ್ರ ಬಿಎಂಟಿಸಿಗೆ ಆದಾಯ ಎಂದು ಹಿರಿಯ ಅಧಿಕಾರಿಗಳು ಭಾವಿಸಿದಂತಿದೆ. ಪಾಸ್‌ಗಳ ಮಾರಾಟದಿಂದಲೂ ಬಿಎಂಟಿಸಿಗೆ ಆದಾಯ ಬರುತ್ತಿದೆ. ಬಿಎಂಟಿಸಿಯಲ್ಲಿ ಹೆಚ್ಚು ಓಡಾಡುವವರು ಪಾಸ್‌ಗಳನ್ನು ಪಡೆದೇ ಓಡಾಡುತ್ತಿದ್ದಾರೆ. ತಿಂಗಳ ಪಾಸ್‌ ಹಾಗೂ ವಿದ್ಯಾರ್ಥಿ ಪಾಸ್‌ಗಳಿಂದ ಬಿಎಂಟಿಸಿ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದೆ. ಹೀಗಿರುವಾಗ ನಿತ್ಯದ ಆದಾಯ ಕಡಿಮೆ ಎಂಬ ಕಾರಣ ನೀಡಿ ಟ್ರಿಪ್‌ ಕಡಿತ ಮಾಡುವುದು ಸರಿಯಲ್ಲ” ಎಂಬುದು ನಿತ್ಯ ಬಿಎಂಟಿಸಿ ಬಸ್‌ ಬಳಸುವ ರೂಪೇಶ್‌ ಅವರ ಅಭಿಪ್ರಾಯ.

ಇತ್ತೀಚೆಗೆ ಬಸ್‌ ಟಿಕೆಟ್‌ ದರ ಏರಿಕೆ ಸಂದರ್ಭದಲ್ಲಿ ಬಿಎಂಟಿಸಿ ಸದ್ಯ 200 ಕೋಟಿ ರೂಪಾಯಿ ನಷ್ಟ ಎದುರಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ, ದರ ಏರಿಕೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಾತ್ಕಾಲಿಕ ತಡೆ ಒಡ್ಡಿದ್ದಾರೆ. ಹೀಗಾಗಿ ನಷ್ಟದ ಭೀತಿಯಿಂದ ಬಿಎಂಟಿಸಿ ಟ್ರಿಪ್‌ಗಳ ಕಡಿತಕ್ಕೆ ಮುಂದಾಗಿರುವಂತಿದೆ. ಆದರೆ, ಟ್ರಿಪ್‌ ಕಡಿತಕ್ಕೆ ತಾಂತ್ರಿಕ ಕಾರಣ ಹೇಳುತ್ತಿರುವ ಹಿರಿಯ ಅಧಿಕಾರಿಗಳು ನಷ್ಟದ ಕಾರಣವನ್ನು ನಿರಾಕರಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಹಾಗೂ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.