ಜಡ್ಜ್‌ ಆಫ್‌ ದಿ ಸೀಸನ್: ಸುಪ್ರಿಂ ಕೋರ್ಟ್‌ನ ಭಿನ್ನ ಹಾದಿಯ ಪಯಣಿಗ ಡಿ. ವೈ. ಚಂದ್ರಚೂಡ್!
COVER STORY

ಜಡ್ಜ್‌ ಆಫ್‌ ದಿ ಸೀಸನ್: ಸುಪ್ರಿಂ ಕೋರ್ಟ್‌ನ ಭಿನ್ನ ಹಾದಿಯ ಪಯಣಿಗ ಡಿ. ವೈ. ಚಂದ್ರಚೂಡ್!

ಒಂದರ ಹಿಂದೆ ಒಂದರಂತೆ ಐತಿಹಾಸಿಕ ಆದೇಶಗಳನ್ನು ಸುಪ್ರಿಂ ಕೋರ್ಟ್ ನೀಡುತ್ತಿದೆ. ಈ ಎಲ್ಲಾ ಆದೇಶಗಳಲ್ಲೂ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ನ್ಯಾ. ಡಿ. ವೈ. ಚಂದ್ರಚೂಡ್‌. ಯಾರಿವರು? ಪರಿಚಯ ಇಲ್ಲಿದೆ. 

ಸುಪ್ರೀಂ ಕೋರ್ಟ್‌ನಿಂದ ಒಂದೊಂದೆ ಬಾಂಬ್‌ಶೆಲ್ ತೀರ್ಪುಗಳು ಹೋರ ಬೀಳುತ್ತಿವೆ. ಮೊದಲಿಗೆ ಐಪಿಸಿ ಸೆಕ್ಷನ್‌ 377 ಪಕ್ಕಕ್ಕಿಟ್ಟ ಸರ್ವೋಚ್ಛ ನ್ಯಾಯಾಲಯ, ಸಲಿಂಗ ಕಾಮ ಅಪರಾಧವಲ್ಲ ಎದು ಸಾರಿತು. ಬೆನ್ನಿಗೆ ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರಿಂ ಕೋರ್ಟ್‌ ಖಾಸಗಿ ಸಂಸ್ಥೆಗಳಿಗೆ ಇದರ ಮಾಹಿತಿ ನೀಡಲು ಸರಕಾರಕ್ಕೆ ನಿರ್ಬಂಧ ವಿಧಿಸಿತ್ತು. ಬಳಿಕ ವ್ಯಭಿಚಾರ ಅಪರಾಧವಲ್ಲ ಎಂದು ಸಾರಿತು. ಇದಾದ ನಂತರ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಮುಕ್ತ ಅವಕಾಶವನ್ನೂ ನೀಡಿತು. ಕೊನೆಗೆ ಐವರು ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನವನ್ನು ನಾಲ್ಕು ವಾರಗಳ ಕಾಲ ಮುಂದೂಡಿತು…

ಹೀಗೆ ಕಳೆದ ಎರಡು ವಾರಗಳಿಂದ ಸುಪ್ರೀಂ ಕೋರ್ಟ್‌ ಸುದ್ದಿ ಕೇಂದ್ರದಿಂದ ಪಕ್ಕಕ್ಕೆ ಸರಿಯುತ್ತಿಲ್ಲ.

ಈ ಎಲ್ಲಾ ಆದೇಶಗಳಲ್ಲೂ ಪ್ರಮುಖವಾಗಿ ಕೇಳಿ ಬಂದ ಹೆಸರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌. ಸೆಕ್ಷನ್‌ 377ರ ತೀರ್ಪಿನ ಬಗ್ಗೆಯೂ ಅವರು, ಈ ವಿಷಯವನ್ನು ಕೋರ್ಟ್‌ನ ಪರಿಮಿತಿಗೆ ಬಿಟ್ಟಿದ್ದಕ್ಕೆ ಸರಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಶಬರಿಮಲೆಯ ತೀರ್ಪು ನೀಡುತ್ತಾ ‘ದೇವರಿಗೆ ಸಾಂವಿಧಾನಿಕ ಹಕ್ಕಿಲ್ಲ. ಅದಿರುವುದು ಮನುಷ್ಯರಿಗೆ ಮಾತ್ರ’ ಎಂದು ಖಾರವಾದ ಆದೇಶ ನೀಡಿದ್ದರು. ಇನ್ನು ಐವರು ಸಾಮಾಜಿಕ ಕಾರ್ಯಕರ್ತರ ಬಂಧನದ ಸಂದರ್ಭದಲ್ಲಿಯೂ ಚಂದ್ರಚೂಡ್ ಭಿನ್ನ ರಾಗ ಹಾಡಿದ್ದರು. ಅವರು ಈ ಬಂಧನಗಳ ಸಂಬಂಧ ಸುಪ್ರೀಂ ಕೋರ್ಟ್‌ ನಿರ್ದೇಶನದಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದಿದ್ದರು. ಅದರಲ್ಲೂ ಅವರು ವ್ಯಭಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಆಧಾರ್‌ ತೀರ್ಪಿನಲ್ಲಿ ವಿಭಿನ್ನ ತೀರ್ಪು ನೀಡಿದ್ದ ನ್ಯಾ. ಚಂದ್ರಚೂಡ್‌, ‘ಆಧಾರ್‌ನಲ್ಲಿ ಗಂಭೀರ ಸಮಸ್ಯೆಗಳಿವೆ. ಇದೊಂದು ಸಂವಿಧಾನದ ಮೇಲೆ ನಡೆದ ಹಗರಣ ಮತ್ತು ಕಾನೂನಿಗೆ ವಿರುದ್ಧ’ ಎಂದಿದ್ದರು.

ಯಾರಿವರು ಎಂದು ಹುಡುಕಿಕೊಂಡು ಹೊರಟರೆ, ಸರ್ವೋಚ್ಛ ನ್ಯಾಯಾಲಯದ ಭಿನ್ನ ಹಾದಿಯ ಪಯಣಿಗರೊಬ್ಬರ ಪರಿಚಯವಾಗುತ್ತದೆ.

ನ್ಯಾ. ಚಂದ್ರಚೂಡ್ ತಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ವೈ. ವಿ. ಚಂದ್ರಚೂಡ್‌. ಅವರು ಸೆಕ್ಷನ್‌ 497ನ್ನು ಎತ್ತಿ ಹಿಡಿದಿದ್ದರು. ಆದರೆ ಮೊನ್ನೆ ಡಿ. ವೈ. ಚಂದ್ರಚೂಡ್‌ ಅಪ್ಪನ ಆದೇಶವನ್ನೇ ಬದಲಾಯಿಸಿ ತೀರ್ಪು ನೀಡಿದ್ದರು. ಅವರು ನೀಡಿದ ತೀರ್ಪುಗಳನ್ನು ಕೆದಕಿದರೆ ಇಂತಹ ಹಲವು ಸಂದರ್ಭಗಳು ಬಂದಿವೆ. ಈ ಸಮಯದಲ್ಲೆಲ್ಲಾ ಅವರು ತಮ್ಮ ತಂದೆಯ ಆದೇಶವನ್ನೇ ‘ದೋಷಪೂರಿತ’ ಎಂದು ಕರೆಯಲೂ ಹಿಂಜರಿದವರಲ್ಲ.

ನ್ಯಾ. ವೈ. ವಿ.ಚಂದ್ರಚೂಡ್‌, ಹಾಲಿ ಸುಪ್ರೀಂ ಕೋರ್ಟ್‌ ನ್ಯಾ. ಡಿ.ವೈ. ಚಂದ್ರಚೂಡ್‌ ತಂದೆ. 
ನ್ಯಾ. ವೈ. ವಿ.ಚಂದ್ರಚೂಡ್‌, ಹಾಲಿ ಸುಪ್ರೀಂ ಕೋರ್ಟ್‌ ನ್ಯಾ. ಡಿ.ವೈ. ಚಂದ್ರಚೂಡ್‌ ತಂದೆ. 
/ದಿ ಹಿಂದೂ

ಚಂದ್ರಚೂಡ್‌ ಅವರ ತಂದೆಯೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಅದರಲ್ಲೂ ಅತಿ ಹೆಚ್ಚಿನ ಅವಧಿಗೆ ಸಿಜೆಐ ಹುದ್ದೆ ನಿಭಾಯಿಸಿದವರು ಅವರು. ಚಂದ್ರಚೂಡ್‌ ತಾಯಿ ಶಾಸ್ತೀಯ ಸಂಗೀತಗಾರ್ತಿಯಾಗಿದ್ದರು. ಹೀಗೊಂದು ನ್ಯಾಯಾಂಗ ಹಿನ್ನೆಲೆಯಿಂದ ಬಂದ ಚಂದ್ರಚೂಡ್‌ ಆದೇಶಗಳು ಮತ್ತು ಅಭಿಪ್ರಾಯಗಳು ಇವತ್ತು ದೇಶದಲ್ಲಿ ಸದ್ದು ಮಾಡುತ್ತಿವೆ.

ಚಂದ್ರಚೂಡ್ ಹುಟ್ಟಿದ್ದು 11 ನವೆಂಬರ್‌ 1959ರಲ್ಲಿ. ಮುಂಬೈನಲ್ಲಿ ಆರಂಭಿಕ ವಿದ್ಯಾಭ್ಯಾಸದ ನಂತರ ದೆಹಲಿಯಲ್ಲಿ ಉನ್ನತ ವ್ಯಾಸಾಂಗ ಮತ್ತು ಎಲ್‌ಎಲ್‌ಬಿ ಪದವಿ ಪಡೆದರು. ಬಳಿಕ, ವಿದೇಶಕ್ಕೆ ಹಾರಿ ಹಾರ್ವರ್ಡ್‌ ಯುನಿವರ್ಸಿಟಿಯಿಂದ ಎಲ್‌ಎಲ್‌ಎಂ ಪದವಿ ಪಡೆದು ಭಾರತಕ್ಕೆ ವಾಪಸಾದರು.

ವಿದೇಶದಿಂದ ಬಂದವರೇ ಕಾನೂನು ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಅದಕ್ಕೂ ಮೊದಲು ದೆಹಲಿಯಲ್ಲಿರುವಾಗಲೇ 1982ರಲ್ಲಿ ಅವರು ಕೆಲವು ಅವಧಿಗೆ ಜೂನಿಯರ್‌ ವಕೀಲರಾಗಿ ಕೆಲಸ ಮಾಡಿದ್ದರು. ಈ ವೇಳೆ ಅವರು ಖ್ಯಾತ ವಕೀಲ ಫಾಲಿ ಸ್ಯಾಮ್‌ ನಾರಿಮನ್‌ ಅವರಿಗೆ ಸಹಾಯಕರೂ ಆಗಿದ್ದರು. ಹಲವು ವರ್ಷಗಳ ವಕೀಲಿ ಅಭ್ಯಾಸದ ನಂತರ ಜೂನ್‌ 1998ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದವರೇ ಅಲ್ಲಿಂದ ನೇರವಾಗಿ ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡರು. ಮುಂದೆ ಜಡ್ಜ್ ಹುದ್ದೆಯ ಪಯಣ ಆರಂಭವಾಯಿತು. 29 ಮಾರ್ಚ್‌ 2000ನೇ ಇಸವಿಯಲ್ಲಿ ಅವರು ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಅಲ್ಲಿಂದ 31 ಅಕ್ಟೋಬರ್‌ 2013ನೇ ಇಸವಿಯಲ್ಲಿ ಅಲಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ವರ್ಗವಾದರು.

ಮುಂದಿನದು ಸುಪ್ರೀಂ ಕೋರ್ಟ್‌ನ ಹಾದಿ. ಎರಡು ವರ್ಷಗಳ ಹಿಂದೆ 13 ಮೇ 2016ರಂದು ಸುಪ್ರೀಂ ಕೋರ್ಟ್‌ಗೆ ಆಗಮಿಸಿದ ನ್ಯಾ. ಡಿ. ವೈ. ಚಂದ್ರಚೂಡ್‌ ಹೊಸ ಶಕೆಯನ್ನೇ ಆರಂಭಿಸಿದರು. ಸದ್ಯ ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ಬಂದು ಕೇವಲ 28 ತಿಂಗಳು ಕಳೆದಿದ್ದು ಈ ಅವಧಿಯಲ್ಲೇ ಹಲವು ಬಾರಿ ಸದ್ದು ಮಾಡಿದ್ದಾರೆ.

ಖಾಸಗಿತನ ಮೂಲಭೂತ ಹಕ್ಕು ಎಂದು ಐತಿಹಾಸಿಕ ಆದೇಶ ನೀಡಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿಯೂ ಅವರು ಓರ್ವ ಸದಸ್ಯರಾಗಿದ್ದರು. ಸದ್ಯ 58ನೇ ವಯಸ್ಸಿನವರಾಗಿರುವ ಚಂದ್ರಚೂಡ್‌ ಹೆಚ್ಚಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪೀಠದಲ್ಲೇ ಕಾಣಿಸಿಕೊಂಡಿದ್ದಾರೆ. ಹೀಗಿದ್ದೂ ಅವರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಾಂವಿಧಾನಿಕ ಕಾನೂನು, ಮಾನವ ಹಕ್ಕುಗಳು, ಲಿಂಗ ಸಮಾನತೆ ವಿಚಾರದಲ್ಲಿ ಅವರು ನೀಡಿರುವ ತೀರ್ಪುಗಳು ಗಮನಾರ್ಹವಾಗಿವೆ. ಅದರಲ್ಲೂ ಸೂಕ್ಷ್ಮ ವಿಚಾರಗಳಲ್ಲಿ ಅವರು ಮುಕ್ತ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ನ್ಯಾಯಾಂಗದ ಸ್ವತಂತ್ರ್ಯವನ್ನು ಪೂರ್ಣವಾಗಿ ಬಳಸಿಕೊಂಡು ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಮುಂದಿನ ಮುಖ್ಯ ನ್ಯಾಯಮೂರ್ತಿ ರೇಸ್‌ನಲ್ಲಿರುವ ಅವರು 9 ನವೆಂಬರ್‌ 2022ರಿಂದ ನವೆಂಬರ್‌ 2024ರವರಗೆ ಅವರು ದೇಶದ ನ್ಯಾಯಾಂಗದ ಅತ್ಯುನ್ನತ ಹುದ್ದೆಗೆ ಏರಲಿದ್ದಾರೆ. ಸದ್ಯ ದೇಶದ ಜನರು ನಿವೃತ್ತಿಯಾಗಿರುವ ನ್ಯಾ. ಜೆ. ಚೆಲಮೇಶ್ವರ್‌ ಜಾಗದಲ್ಲಿ ಚಂದ್ರಚೂಡ್‌ ಅವರನ್ನು ಕಾಣುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿದ್ದಷ್ಟು ದಿನ ತಮ್ಮ ಭಿನ್ನ ನಡವಳಿಕೆಗಳಿಂದ ಚೆಲಮೇಶ್ವರ್‌ ಗುರುತಿಸಿಕೊಂಡಿದ್ದರು. ಅದೇ ಹಾದಿಯಲ್ಲಿ ಚಂದ್ರಚೂಡ್‌ ಕೂಡ ಕಾಣಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿರುವುದು ಎಂದರೆ ಸಾಮಾನ್ಯವಾಗಿ ಬಿಝಿ ಕೆಲಸ ಎಂಬ ಅಭಿಪ್ರಾಯಗಳಿವೆ. ಹಲವು ಅಧ್ಯಯನಗಳೂ ಇದನ್ನು ಪುರಸ್ಕರಿಸಿವೆ. ಇದರ ಮಧ್ಯೆಯೂ ಹಲವು ವಿದೇಶಿ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರಾಗಿದ್ದಾರೆ ನ್ಯಾ. ಚಂದ್ರಚೂಡ್‌. ಹಲವು ಸಂದರ್ಭದಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಬರಹಗಳಿಗೆ ಅವರು ಲೇಖನಿ ಹಿಡಿದಿದ್ದಾರೆ.

ಹೀಗೆ ವಿಭಿನ್ನ ಹಿನ್ನೆಲೆಯ ನ್ಯಾ. ಚಂದ್ರಚೂಡ್‌ ತಮ್ಮ ಭಿನ್ನ ಅಭಿಪ್ರಾಯ, ತೀರ್ಪುಗಳ ಮೂಲಕ ಕೋರ್ಟ್‌ ಹಾಲ್‌ನಾಚೆಗೂ ಗಮನ ಸೆಳೆಯುತ್ತಿದ್ದಾರೆ. ಇದೇ ವೇಳೆ ಅವರ ಕಣ್ಣಲ್ಲಿ ಭಾರತದ ನ್ಯಾಯಾಂಗದ ಸುಧಾರಣೆಯ ದಿನಗಳನ್ನೂ ಜನರು ಕಾಣುತ್ತಿದ್ದಾರೆ.