ನಾನಾ ಪಾಟೇಕರ್‌ ಬುಡಕ್ಕೆ ಬಂದ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯದ ಆರೋಪ
COVER STORY

ನಾನಾ ಪಾಟೇಕರ್‌ ಬುಡಕ್ಕೆ ಬಂದ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯದ ಆರೋಪ

‘ಹಾರ್ನ್‌ ಒಕೆ ಪ್ಲೀಸ್‌’ ಸಿನಿಮಾದ ಹಾಡೊಂದರ ಚಿತ್ರೀಕರಣದ ಸಂದರ್ಭದಲ್ಲಿ ನಾನಾ ಪಾಟೇಕರ್‌ ತಮ್ಮನ್ನು ಅನುಚಿತವಾಗಿ ಸ್ಪರ್ಷಿಸಿದ್ದಾರೆ ಎಂಬ ಆರೋಪವನ್ನು ತನುಶ್ರೀ ದತ್ತಾ ಮಾಡಿದ್ದಾರೆ

ತಮ್ಮ ರಾಜಕೀಯ ಹೇಳಿಕೆಗಳಿಂದ ಆಗಾಗ ಚರ್ಚೆಯ ಕೇಂದ್ರಕ್ಕೆ ಬರುತ್ತಿದ್ದ ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಈಗಷ್ಟೇ ಹೊರ ಬಿದ್ದಿದೆ. ಟೈಮ್ಸ್‌ ಗ್ರೂಪ್‌ ಒಡೆತನದ ಮ್ಯೂಸಿಕ್‌ ಚಾನಲ್‌ ‘ಝೂಮ್’ಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್‌ ಹಾಗೂ ಇನ್ನೂ ಮೂವರ ಹೆಸರನ್ನು ಉಲ್ಲೇಖಿಸಿ ಗಂಭೀರ ಆರೋಪ ಮಾಡಿದ್ದಾರೆ.

ಕೆಲವು ಸಮಯದ ಹಿಂದೆ #MeToo ಅಭಿಯಾನವೊಂದು ಹಾಲಿವುಡ್‌ನಲ್ಲಿ ಹುಟ್ಟಿಕೊಂಡು ಬಾಲಿವುಡ್‌ ಅಂಗಳಕ್ಕೂ ಬಂದು ನಿಂತಿತ್ತು. ಈ ಸಂದರ್ಭದಲ್ಲಿ ನನ್ನ ವಿರುದ್ಧವೂ ಲೈಂಗಿಕ ದೌರ್ಜನ್ಯಗಳು ನಡೆದಿದೆ ಎಂದು ಹಲವರು ಹೇಳಿಕೊಂಡಿದ್ದರು. ಆದರೆ ಒಂದು ಹೆಜ್ಜೆ ಮುಂದಿಟ್ಟಿರುವ ತನುಶ್ರೀ ದತ್ತಾ ತಮ್ಮ ಮೇಲೆ ದೌರ್ಜನ್ಯ ಎಸಗಿದವರ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

2008ರಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿರುವ ಅವರು, ‘ಹಾರ್ನ್‌ ಒಕೆ ಪ್ಲೀಸ್‌’ (Horn 'Ok' Pleassss) ಸಿನಿಮಾದ ಹಾಡೊಂದರ ಚಿತ್ರೀಕರಣದ ಸಂದರ್ಭದಲ್ಲಿ ನಾನಾ ಪಾಟೇಕರ್‌ ತಮ್ಮನ್ನು ಅನುಚಿತವಾಗಿ ಸ್ಪರ್ಷಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಮತ್ತು ಇದು ತಮ್ಮ ಕಾಂಟ್ರಾಕ್ಟ್‌ನಲ್ಲಿ ಉಲ್ಲೇಖವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

“ನಾನು ಹೆಸರುಗಳನ್ನು ಉಲ್ಲೇಖಿಸಲು ಇಚ್ಚಿಸುತ್ತೇನೆ – ನಟ ನಾನಾ ಪಾಟೇಕರ್‌, ನಿರ್ಮಾಪಕ ಸಮಿ ಸಿದ್ದಿಕಿ, ನಿರ್ದೇಶಕ ರಾಕೇಶ್ ಸರಂಗ್‌ ಮತ್ತು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ. ನಾನಾ ಪಾಟೇಕರ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದಾಗ, ಅವರು ‘ಹಾಡಿನಲ್ಲಿ ಇರುವಂತೆ ನಾನು ನಿಕಟವಾಗಿ ಹೆಜ್ಜೆ ಹಾಕಿದ್ದೇನೆ’ ಎಂದು ಹೇಳಿದರು. ಆದರೆ ಇದನ್ನು ಒಪ್ಪಂದದಲ್ಲಿ ಪ್ರಸ್ತಾಪಿಸಿರಲಿಲ್ಲ. ವಾಸ್ತವದಲ್ಲಿ ಈ ದೃಶ್ಯದಲ್ಲಿ ನಾನೊಬ್ಬಳೇ ಇರಬೇಕಾಗಿತ್ತು,” ಎಂದು ಅವರು ಝೂಮ್‌ ಟಿವಿ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಈ ಘಟನಾವಳಿಗಳ ಬಗ್ಗೆ ಸೆಟ್‌ನಲ್ಲಿ ನಾನು ಧ್ವನಿ ಎತ್ತಿದರೂ ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದವರು ದೂರಿದ್ದಾರೆ. ಜತೆಗೆ ಸಿನಿಮಾದ ಯಾವುದೇ ವ್ಯಕ್ತಿಗಳು ನಾನಾ ಪಾಟೇಕರ್‌ ವರ್ತನೆಯನ್ನು ಖಂಡಿಸಲಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಈ ಬಗ್ಗೆ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ದೂರು ನೀಡಿ ಆತನನ್ನು (ನಾನಾ ಪಾಟೇಕರ್) ನನ್ನಿಂದ ದೂರ ಇರುವಂತೆ ಸೂಚಿಸಲು ಕೇಳಿಕೊಂಡಾಗ ಅವರು ಆ ಬಗ್ಗೆ ಗಮನ ಹರಿಸಲಿಲ್ಲ. ನಾನು ಸಿನಿಮಾ ಉದ್ಯಮಕ್ಕೆ ಹೊಸಬಳಾಗಿದ್ದೆ ಎಂಬ ಕಾರಣಕ್ಕೆ, ಅಗತ್ಯವಾಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನೊಂದಿಗೆ ನಿಕಟವಾಗಿರುವ ದೃಶ್ಯವನ್ನು ಸೆರೆ ಹಿಡಿಯುವುದು ಅವರ ಉದ್ದೇಶವಾಗಿತ್ತು,” ಎಂದು ಕಿಡಿಕಾರಿದ್ದಾರೆ.

ಇನ್ನು ಈ ಬಗ್ಗೆ ನ್ಯೂಸ್‌ 18 ಜತೆ ಮಾತನಾಡಿರುವ ದತ್ತಾ, “ಏನು ನಡೆಯಿತು ಎಂಬುದನ್ನು ಇಡೀ ಉದ್ಯಮ ನೋಡಿದೆ. ಆದರೆ ಯಾರಿಂದಲೂ ಒಂದೇ ಒಂದು ಖಂಡನಾತ್ಮಕ ಪದವೂ ಹೊರಬೀಳಲಿಲ್ಲ. ಇಡೀ ದೇಶದ ಪ್ರತಿ ವ್ಯಕ್ತಿಗೂ ನನ್ನ ಘಟನೆ ಬಗ್ಗೆ ಗೊತ್ತಿದೆ. ಅಲ್ಲದೆ ರಾಷ್ಟ್ರೀಯ ಟಿವಿಯೊಂದರಲ್ಲಿ ಸಂದರ್ಶನ ನೀಡಿ ಮೂರು ದಿನ ಕಳೆದರೂ ಎಲ್ಲರೂ ಮೌನವಾಗಿದ್ದಾರೆ. ಹೀಗಾಗಿ ನನ್ನ ಪ್ರಶ್ನೆ ಎಂದರೆ, ‘ಈ ಆಷಾಡಭೂತಿಗಳನ್ನು ಯಾರು ನಂಬುತ್ತಾರೆ?’ ಇದೇ ವ್ಯಕ್ತಿಗಳು ಮಹಿಳಾ ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ,” ಎಂದು ಹರಿಹಾಯ್ದಿದ್ದಾರೆ.

ಹಾಗೆ ನೋಡಿದರೆ ಈ ಘಟನೆ 2008ರಲ್ಲೇ ಸದ್ದು ಮಾಡಿತ್ತು. ಹೀಗೊಂದು ಆರೋಪ ಕೇಳಿ ಬಂದಾಗ ಪ್ರತಿಕ್ರಿಯೆ ನೀಡಿದ್ದ ನಾನಾ ಪಾಟೇಕರ್‌, “ತನುಶ್ರೀ ನನ್ನ ಮಗಳ ವಯಸ್ಸಿನವಳು. ನನ್ನ ಬಗ್ಗೆ ಅಂತಹ ವಿಷಯವನ್ನು ಹೇಳಲು ಆಕೆಗೆ ಏನಾಯಿತು ಎಂಬುದರ ಬಗ್ಗೆ ಸಣ್ಣ ಸುಳಿವೂ ನನಗಿಲ್ಲ. ನಾನು ಕಳೆದ 35 ವರ್ಷದಿಂದ ಈ ಸಿನಿಮಾ ಉದ್ಯಮದ ಭಾಗವಾಗಿದ್ದೇನೆ. ಮತ್ತು ಈ ಅವಧಿಯಲ್ಲಿ ಯಾರೊಬ್ಬರೂ ನನ್ನ ಬಗ್ಗೆ ಯಾರೂ ಇಲ್ಲಿಯವರೆಗೆ ಈ ರೀತಿ ಮಾತನಾಡಿಲ್ಲ,” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಈ ಘಟನೆ ಬಳಿಕ ತನುಶ್ರೀ ದತ್ತಾ ಐಟಂ ಸಾಂಗ್‌ನಲ್ಲಿ ನಟಿಸಲು ಒಪ್ಪದ ಕಾರಣ ನಿರ್ಮಾಪಕರು ಆಕೆಯ ಜಾಗಕ್ಕೆ ರಾಖಿ ಸಾವಂತ್‌ರನ್ನು ಕರೆ ತಂದಿದ್ದರು. ಬರೋಬ್ಬರಿ 10 ವರ್ಷಗಳ ಹಿಂದೆ ನಡೆದ ಘಟನೆ ಇದೀಗ ಮತ್ತೆ ಸದ್ದು ಮಾಡಿದ್ದು ಪುನಃ ನಾನಾ ಪಾಟೇಕರ್‌ ಸುತ್ತ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.