ಮೋದಿ ಹೇಳಿದ್ದು ಹಸಿ ಸುಳ್ಳು; ಭಾರತದಲ್ಲಿ ಬಿಗಡಾಯಿಸಿದೆ ನಿರುದ್ಯೋಗ ಸಮಸ್ಯೆ
COVER STORY

ಮೋದಿ ಹೇಳಿದ್ದು ಹಸಿ ಸುಳ್ಳು; ಭಾರತದಲ್ಲಿ ಬಿಗಡಾಯಿಸಿದೆ ನಿರುದ್ಯೋಗ ಸಮಸ್ಯೆ

ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿಯ ಬಗ್ಗೆ ಹೇಳಿದ್ದೆಲ್ಲಾ ಸುಳ್ಳು ಎಂಬುದನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ವರದಿ ಸಾಬೀತು ಮಾಡಿದೆ.

ಇದೇ ವರ್ಷದ ಜುಲೈ 20ರಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದ ವೇಳೆ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದ್ದರು. ಆದರೆ, ಅಂದು ಮೋದಿ ಹೇಳಿದ್ದು ಹಸಿ ಸುಳ್ಳು ಎಂಬುದು ಇತ್ತೀಚಿನ ಅಧ್ಯಯನ ವರದಿಯೊಂದರಿಂದ ಬಯಲಾಗಿದೆ.

“ಭಾರತದಲ್ಲಿ ಈಗ ನಿರುದ್ಯೋಗ ಸಮಸ್ಯೆ ತೀರಾ ಹೆಚ್ಚಾಗಿದೆ. ಕಳೆದ 20 ವರ್ಷಗಳಲ್ಲೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಕಾಲಘಟ್ಟ ಇದು” ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸುಸ್ಥಿರ ಉದ್ಯೋಗ ಕೇಂದ್ರ (ಸಿಎಸ್‌ಇ) ನಡೆಸಿರುವ ಅಧ್ಯಯನ ವರದಿ ಹೇಳಿದೆ. ಈ ಮೂಲಕ ಮೋದಿ ಲೋಕಸಭೆಯಲ್ಲಿ ಹೇಳಿದ್ದು ಹಸಿ ಸುಳ್ಳು ಎಂಬುದು ಸಾಬೀತಾಗಿದೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ್ದ ಮೋದಿ, “ಸ್ವತಂತ್ರ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ ಕಳೆದ ವರ್ಷ ದೇಶದಲ್ಲಿ ಕಳೆದ ವರ್ಷ ಒಂದು ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ” ಎಂದು ಹೇಳಿದ್ದರು. ಆದರೆ, ಸಮೀಕ್ಷೆ ನಡೆಸಿದ ಆ ‘ಸ್ವತಂತ್ರ ಸಂಸ್ಥೆ’ ಯಾವುದು, ಉದ್ಯೋಗ ಸೃಷ್ಟಿಯ ನಿಖರ ಅಂಕಿ ಸಂಖ್ಯೆಗಳೇನು ಎಂಬುದನ್ನು ಮೋದಿ ಹೇಳಿರಲಿಲ್ಲ.

ಭಾರತದ ಉದ್ಯೋಗ ಸೃಷ್ಟಿಯ ಸ್ಥಿತಿಗತಿಗಳನ್ನು ಬಿಚ್ಚಿಟ್ಟಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವರದಿಯು, “ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2015ರ ವೇಳೆಗೆ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇಕಡ 5ರಷ್ಟಿತ್ತು. ಈಗ ಯುವಜನರ ನಿರುದ್ಯೋಗದ ಪ್ರಮಾಣ ಶೇಕಡ 16ರಷ್ಟಿದೆ. ಇಂಥ ನಿರುದ್ಯೋಗ ಪ್ರಮಾಣವು ಕಳೆದ 20 ವರ್ಷಗಳಲ್ಲೇ ಅತಿ ಹೆಚ್ಚು” ಎಂದು ಹೇಳಿದೆ.

“ನಿರುದ್ಯೋಗ ಸಮಸ್ಯೆಯ ಜತೆಗೆ ಸೂಕ್ತ ಕೌಶಲಕ್ಕೆ ಸೂಕ್ತ ಉದ್ಯೋಗ ಇಲ್ಲದಿರುವುದು ಹಾಗೂ ಕಡಿಮೆ ಸಂಬಳಕ್ಕೆ ಹೆಚ್ಚಿನ ಜನ ದುಡಿಯುತ್ತಿರುವುದು ದೇಶದ ಬಹುದೊಡ್ಡ ಸಮಸ್ಯೆಯಾಗಿ ಬಾಧಿಸುತ್ತಿವೆ. ದೇಶದಲ್ಲಿ ಶೇಕಡ 82ರಷ್ಟು ಪುರುಷರು ಹಾಗೂ 92ರಷ್ಟು ಮಹಿಳೆಯರು ತಿಂಗಳಿಗೆ 10 ಸಾವಿರ ರೂಪಾಯಿಗಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ” ಎಂದು ವರದಿ ಹೇಳಿದೆ.

“ದೇಶದ ಜಿಡಿಪಿ ಹೆಚ್ಚಳ ಉದ್ಯೋಗ ಸೃಷ್ಟಿಯ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಿಲ್ಲ. ಶೇಕಡ 10ರಷ್ಟು ಜಿಡಿಪಿ ಹೆಚ್ಚಳಕ್ಕೆ ಶೇಕಡ 1ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ” ಎಂದಿದೆ ವರದಿ.

ವಿದ್ಯಾವಂತ ನಿರುದ್ಯೋಗಿಗಳ ಹೆಚ್ಚಳ:

“ದೇಶದಲ್ಲಿ ಸಾಕ್ಷರ ಪ್ರಮಾಣ ಹೆಚ್ಚುತ್ತಿದೆ. ಆದರೆ, ಇದರ ಜತೆಗೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ವ್ಯಾಸಂಗ ಮುಗಿಸಿ ಶಿಕ್ಷಣ ಸಂಸ್ಥೆಗಳಿಂದ ಹೊರ ಬರುವ ಪದವೀಧರರಿಗೆ ಸರಿಯಾದ ಕೆಲಸ ಸಿಗುತ್ತಿಲ್ಲ. ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗಿರುವುದು ದೇಶದಲ್ಲೆಡೆ ಹೊರನೋಟಕ್ಕೇ ಗೋಚರಿಸುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ತುಂಬಾ ಹೆಚ್ಚಿದೆ. ಛತ್ತೀಸ್‌ಗಡ, ಗುಜರಾತ್‌ ಮತ್ತು ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ” ಎಂದು ವರದಿ ತಿಳಿಸಿದೆ.

“ಕಳೆದ ಒಂದು ದಶಕದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಾಗಿದೆ. ಶಾಲೆಗಳಲ್ಲಿ ದಾಖಲಾತಿ ಏರಿಕೆ ಹಾಗೂ ಶಿಕ್ಷಣ ಪೂರೈಸಿ ಹೊರ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಈ ವಿದ್ಯಾವಂತ ಯುವಜನರ ಪ್ರಮಾಣಕ್ಕೆ ತಕ್ಕಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ. ಕೆಲವು ಶಿಕ್ಷಿತ ಯುವಜನರು ಏನೋ ಕಲಿತು ಇನ್ಯಾವುದೋ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ, ಹಲವರು ತಮಗೆ ಸೂಕ್ತವಾದ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ” ಎನ್ನುತ್ತಾರೆ ಅಧ್ಯಯನದ ನೇತೃತ್ವ ವಹಿಸಿದ್ದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಅಮಿತ್‌ ಬೋಸ್ಲೆ.

“ನಿರುದ್ಯೋಗ ಸಮಸ್ಯೆಯ ಜತೆಗೆ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಕಡಿಮೆ ಸಂಬಳ. 2015ರಲ್ಲಿ ದೇಶದಲ್ಲಿ ಒಟ್ಟು ಶೇಕಡ 67ರಷ್ಟು ಕುಟುಂಬಗಳ ತಿಂಗಳ ಆದಾಯ 10 ಸಾವಿರಕ್ಕಿಂತಲೂ ಕಡಿಮೆ ಇತ್ತು. ಇದು ಕಾರ್ಮಿಕನೊಬ್ಬನ ಕನಿಷ್ಠ ವೇತನಕ್ಕಿಂತಲೂ ಕಡಿಮೆ. ಕೇಂದ್ರ ಸರಕಾರದ ಏಳನೇ ವೇತನ ಆಯೋಗದ ಪ್ರಕಾರ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 18 ಸಾವಿರ ರೂಪಾಯಿ ವೇತನ ಸಿಗಬೇಕು. ಆದರೆ, ಉತ್ಪಾದನಾ ವಲಯದಲ್ಲಿ ಶೇಕಡ 90ರಷ್ಟು ಕಾರ್ಮಿಕರು ವೇತನ ಆಯೋಗ ಹೇಳಿರುವುದಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಇನ್ನು ಅಸಂಘಟಿತ ವಲಯದಲ್ಲಿ ತುಂಬಾ ಕಡಿಮೆ ಸಂಬಳಕ್ಕೆ ಜನ ದುಡಿಯುತ್ತಿದ್ದಾರೆ” ಎಂದು ವರದಿ ಹೇಳಿದೆ.

“1970 ಮತ್ತು 1980ರ ನಡುವಿನಲ್ಲಿ ಜಿಡಿಪಿ ಶೇಕಡ 3ರಿಂದ 4ರಷ್ಟು ಹೆಚ್ಚಾಗಿತ್ತು. ಆ ಅವಧಿಯ ವಾರ್ಷಿಕ ಉದ್ಯೋಗ ಹೆಚ್ಚಳ ಶೇಕಡ 2ರಷ್ಟಿತ್ತು. 1990 ಹಾಗೂ 2000ರ ವೇಳೆಗೆ ಜಿಡಿಪಿ ಶೇಕಡ 7ರಷ್ಟು ಹೆಚ್ಚಾಗಿತ್ತು. ಆದರೆ, ಉದ್ಯೋಗ ಹೆಚ್ಚಳದ ಪ್ರಮಾಣ ಶೇಕಡ 1ಕ್ಕಿಂತಲೂ ಕಡಿಮೆ ಇತ್ತು. 2011 ಮತ್ತು 2015ರ ಅವಧಿಯಲ್ಲಿ ಜಿಪಿಡಿ 6.8ರಷ್ಟು ಬೆಳವಣಿಗೆ ಕಂಡಿದ್ದರೆ, ಉದ್ಯೋಗ ಸೃಷ್ಟಿಯಾಗಿರುವುದು 0.6ರಷ್ಟು ಮಾತ್ರ. ಈಗಿನ ಜಿಡಿಪಿ ಹೆಚ್ಚಳದಿಂದ ಶೇಕಡ 0.1ಕ್ಕಿಂತಲೂ ಕಡಿಮೆ ಉದ್ಯೋಗ ಸೃಷ್ಟಿಯಾಗಿದೆ” ಎಂದು ವರದಿ ಹೇಳಿದೆ.

ದೇಶದಲ್ಲಿ ನಿಜಕ್ಕೂ ಉದ್ಯೋಗ ಸೃಷ್ಟಿಯಾಗಿರುವ ಪ್ರಮಾಣ ಎಷ್ಟು ಎಂಬುದನ್ನು ಈ ವರದಿ ಬಹಿರಂಗಗೊಳಿಸಿದೆ. ಈ ವರದಿಗಾಗಿ ಅಧ್ಯಯನ ತಂಡವು ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಹಾಗೂ ಕಾರ್ಮಿಕ ಇಲಾಖೆಯಿಂದ ಅಂಕಿಅಂಶದ ಮಾಹಿತಿ ಸಂಗ್ರಹಿಸಿದೆ. ‘ದುಬಾರಿ ಪ್ರಧಾನಿ’ ಎನಿಸಿರುವ ಮೋದಿ ಉದ್ಯೋಗ ಸೃಷ್ಟಿ ಕುರಿತು ಹೇಳಿದ್ದು ಎಷ್ಟು ನಿಜ, ಎಷ್ಟು ಸುಳ್ಳು ಎಂಬುದನ್ನು ಈಗ ನೀವೇ ನಿರ್ಧಾರ ಮಾಡಿ.