‘ಮೋದಿ ಎಂಬ ಭಾರ’ವನ್ನು ಇಳಿಸಿಕೊಳ್ಳಲು ಹೊರಟಿದೆಯಾ ಆರ್‌ಎಸ್‌ಎಸ್‌?
COVER STORY

‘ಮೋದಿ ಎಂಬ ಭಾರ’ವನ್ನು ಇಳಿಸಿಕೊಳ್ಳಲು ಹೊರಟಿದೆಯಾ ಆರ್‌ಎಸ್‌ಎಸ್‌?

ಒಂದು ಹಂತ ದಾಟಿದಾಗ ಹೆಗಲ ಮೇಲಿನ ಭಾರವನ್ನು ಇಳಿಸಿಕೊಳ್ಳುವುದು ಜಾಣತನ ಮತ್ತು ಮುಂದಿನ ನಡಿಗೆಗೆ ಸಹಾಯಕ. ಸದ್ಯ ಆರ್‌ಎಸ್‌ಎಸ್‌ ನಡೆಗಳನ್ನು ಗಮನಿಸಿದರೆ, ಮೋದಿ ಇಮೇಜ್ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಹೊರಟ ಹಾಗಿದೆ. 

ಅದು ಮೇ. 26, 2014; ಗುಜರಾತ್ ಮೂಲದ ನರೇಂದ್ರ ದಾಮೋದರ ದಾಸ್ ಮೋದಿ ಮುಂಜಾನೆಯೇ ದಿಲ್ಲಿಯ ರಾಜ್‌ಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಹೂ ಹಾಕಿ ಬಂದರು. ನಂತರ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಜೆ ಹೊತ್ತಿಗೆ ಬಾಲಿವುಡ್ ಸ್ಟಾರ್‌ಗಳು, ಕ್ರಿಕೆಟ್ ಸೆಲೆಬ್ರಿಟಿಗಳು, ಉದ್ಯಮಿಪತಿಗಳು ಅವರನ್ನು ಅಭಿನಂದಿಸುವ ಭವ್ಯ ಸಮಾರಂಭ ನಡೆಯಿತು.

ಮಾರನೇ ದಿನ ‘ದಿ ಟೆಲಿಗ್ರಾಫ್’ ತನ್ನ ಒಳಪುಟದಲ್ಲಿ ‘ಬಾಪು ಇನ್‌ ದಿ ಮಾರ್ನಿಂಗ್, ಸಲ್ಲು ಇನ್‌ ದಿ ಇವ್ನಿಂಗ್’ ಅನ್ನೋ ತಲೆ ಬರಹದಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅವತ್ತಿಗೆ ಮೋದಿ ಹೊಂದಿದ್ದ ಜನಪ್ರಿತೆಯ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮೂಲದ ಟೆಲಿಗ್ರಾಫ್ ಪತ್ರಿಕೆಯ ಬರವಣಿಗೆ ಹಲವರಿಗೆ ‘ಹಾರ್ಶ್’ ಅಂತ ಅನ್ನಿಸಿತ್ತು.

ಜನಪ್ರಿಯತೆಯನ್ನು ಬೆನ್ನಿಗಿಟ್ಟುಕೊಂಡು ಮೋದಿ ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನ ಕೋಲ್ಕತ್ತಾ ಮೂಲದ ಟೆಲಿಗ್ರಾಫ್ ಪತ್ರಿಕೆಯ ಒಂದು ವರದಿ. (ಮೇ. 27, 2014). 
ಜನಪ್ರಿಯತೆಯನ್ನು ಬೆನ್ನಿಗಿಟ್ಟುಕೊಂಡು ಮೋದಿ ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನ ಕೋಲ್ಕತ್ತಾ ಮೂಲದ ಟೆಲಿಗ್ರಾಫ್ ಪತ್ರಿಕೆಯ ಒಂದು ವರದಿ. (ಮೇ. 27, 2014). 
/ದಿ ಟೆಲಿಗ್ರಾಫ್ ಇ- ಪೇಪರ್. 

ಈ ಘಟನೆ ನಡೆದು ಇವತ್ತಿಗೆ ಸರಿಯಾಗಿ 1584 ದಿನಗಳು ಕಳೆದಿವೆ. ಹೆಚ್ಚು ಕಡಿಮೆ ನಾಲ್ಕು ವರ್ಷಗಳು. ಒಮ್ಮೆ ಹಿಂತಿರುಗಿ ನೋಡಿದರೆ ದೇಶ ಒಂದು ‘ಆಸಿಡ್ ಟ್ರಿಪ್’ ಮುಗಿಸಿಕೊಂಡು ಬಂದ ಹಾಗೆ ಕಾಣಿಸುತ್ತಿದೆ.

ಮೊದಲ ಒಂದು ವರ್ಷ ಹೊಸ ಯೋಜನೆಗಳ ಘೋಷಣೆ, ಹೊಸ ಆಡಳಿತದ ಭರವಸೆಗಳನ್ನು ಬಿತ್ತುವುದರಲ್ಲಿ ಕಳೆದರು ಪ್ರಧಾನಿ ಮೋದಿ. ದೇಶದ ಬಹುಸಂಖ್ಯಾತ ಜನ ಪ್ರಶ್ನೆಯನ್ನು ಕೇಳದೆಯೇ ಆಶಯಗಳನ್ನು ಇಟ್ಟುಕೊಂಡು ಅವರ ಕಡೆಗೆ ನೋಡುತ್ತಿದ್ದರು. ಎರಡು ಹಾಗೂ ಮೂರನೇ ವರ್ಷಗಳ ಅವಧಿಯಲ್ಲಿ ಚುನಾವಣೆಗಳನ್ನು ಗೆಲ್ಲುವಲ್ಲಿ ಬಿಜೆಪಿ ಬಿಝಿಯಾಗಿತ್ತು. ಒಂದೊಂದು ಜಯಭೇರಿಯನ್ನೂ ಮೋದಿ ಗೆಲುವು ಎಂಬ ಬಿಂಬಿಸಿಕೊಂಡು ಬರಲಾಯಿತು. ಇದನ್ನೂ ಕೂಡ ದೊಡ್ಡ ಸಂಖ್ಯೆಯ ಜನ ಅಭಿಮಾನದಿಂದಲೇ ನೋಡಿದರು.

ಆದರೆ ನಾಲ್ಕನೇ ವರ್ಷದ ಆಡಳಿತಕ್ಕೆ ಕಾಲಿಡುವ ಹೊತ್ತಿಗೆ ‘ಮೋದಿ ಎಂಬ ಆಶಯ’ ನಿಧಾನವಾಗಿ ‘ಮೋದಿ ಎಂಬ ಭ್ರಮನಿರಸನ’ ಅನ್ನಿಸಲು ಶುರುವಾಗಿತ್ತು. ಇವತ್ತಿಗೆ ಮೋದಿ ಎಂಬ ಪದವೇ ಲೇವಡಿಯಾಗಿ ಬದಲಾಗಿ ಹೋಗಿದೆ; ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಜನರ ನಡುವೆ.

ಭಾರತ ಈವರೆಗೆ ಒಟ್ಟು 16 ಪ್ರಧಾನಿಗಳನ್ನು ಕಂಡಿದೆ. ಇದರಲ್ಲಿ 14 ಜನ ಪೂರ್ಣಾವಧಿ ಕಚೇರಿಯನ್ನು ನಿರ್ವಹಿಸಿದರೆ, ಇಬ್ಬರು ಪ್ರಭಾರರಾಗಿ ಕೆಲಸ ಮಾಡಿದ್ದಾರೆ. ಆದರೆ ಅತ್ಯಂತ ಕಡಿಮೆ ಅವಧಿಯಲ್ಲಿ ನರೇಂದ್ರ ಮೋದಿಯಷ್ಟು ಲೇವಡಿಗೆ, ಕುಹಕಕ್ಕೆ ಗುರಿಯಾದ ಮತ್ತೊಬ್ಬ ಪ್ರಧಾನಿ ನಮಗೆ ಸಿಗುವುದಿಲ್ಲ.

ಇದು ಇತ್ತೀಚೆಗೆ ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಹ್ಯಾಶ್ ಟ್ಯಾಗ್ ಕೂಡ. ‘ಕಳ್ಳ ನನ್ನ ಪ್ರಧಾನಿ’ ಎಂಬ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಂದರಲ್ಲಿ ಇವತ್ತು ಕಾಣಿಸುತ್ತಿವೆ. 
ಇದು ಇತ್ತೀಚೆಗೆ ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಹ್ಯಾಶ್ ಟ್ಯಾಗ್ ಕೂಡ. ‘ಕಳ್ಳ ನನ್ನ ಪ್ರಧಾನಿ’ ಎಂಬ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಂದರಲ್ಲಿ ಇವತ್ತು ಕಾಣಿಸುತ್ತಿವೆ. 
/Gearbubble. 

ಯಾಕೆ ಹೀಗಾಯಿತು?

ಯಾಕೆ ಎಂಬುದಕ್ಕೆ ಉತ್ತರ ಸರಳ ಇದೆ. ಆಡಳಿತ ಅವಧಿಯಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ಪ್ರತಿ ನಿರ್ಧಾರದ ಪರಿಣಾಮವನ್ನು ಇವತ್ತು ಅವರು ಎದುರಿಸುತ್ತಿದ್ದಾರೆ. ಅವರಷ್ಟೆ ಅಲ್ಲ, ಅವರನ್ನೇ ಮುಖವಾಣಿ ಮಾಡಿಕೊಂಡು ದೇಶದ ಶ್ರೀಮಂತ ಪಕ್ಷವಾಗಿ ಬೆಳೆದ ಬಿಜೆಪಿ ಕೂಡ ಜನ ವಿರೋಧದ ಬಿಸಿಯನ್ನು ತಾಕಿಸಿಕೊಂಡಿದೆ.

ಅದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿ ಗೆಲ್ಲಿಸಲು ಶತಾಯಗತಾಯ ಪ್ರಯತ್ನ ಪಟ್ಟ ಆರ್‌ಎಸ್‌ಎಸ್‌ ಕೂಡ ‘ಆಡಳಿತ ವಿರೋಧಿ ಅಲೆ’ಯ ಕೇಂದ್ರದಲ್ಲಿ ಬಂದು ನಿಂತಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ದಿಲ್ಲಿಯಲ್ಲಿ ನಡೆದ ಆರ್‌ಎಸ್‌ಎಸ್‌ನ ‘ಭವಿಷ್ಯದ ಭಾರತ’ ಕಾರ್ಯಕ್ರಮದಲ್ಲಿ ಸರಸಂಘ ಚಾಲಕ ಮೋಹನ್ ಭಾಗವತ್ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.

ದಿಲ್ಲಿಯ ಶಕ್ತಿ ಭವನದಲ್ಲಿ ಕಾರ್ಯಕ್ರಮದ ಎರಡನೇ ದಿನ ಮಾತನಾಡಿದ ಮೋಹನ್ ಭಾಗವತ್, “ಇವತ್ತು ಸಮಾಜಿಕ ಕೆಲಸಗಳಿಗೆ ಬರುವ ಹೆಚ್ಚಿನವರ ಅಂತಿಮ ಆಕಾಂಕ್ಷೆ ರಾಜಕೀಯ ಅಧಿಕಾರವಾಗಿದೆ. ಆದರೆ ಸಂಘ ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ರಾಜನೀತಿ ನಮ್ಮ ಅಗತ್ಯ ಅಲ್ಲ. ವ್ಯಕ್ತಿ ನಿರ್ಮಾಣವೇ ನಮ್ಮ ಮೂಲ ಉದ್ದೇಶ,’’ ಎಂದಿದ್ದಾರೆ. ಇದರ ಜತೆಗೆ, ಬಿಜೆಪಿ ಹಾದಿ ಮತ್ತು ಆರ್‌ಎಸ್‌ಎಸ್‌ನ ಭವಿಷ್ಯದ ನಡೆಗಳು ಭಿನ್ನವಾಗಿವೆ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ. ಯಾಕೆ?

“ಕಳೆದ ಲೋಕಸಭಾ ಚುನಾವಣೆಗೂ ಮುನ್ನ ದೇಶದಲ್ಲಿ ಹಿಂದೂ ನಾಯಕರ ಮೇಲೆ ಕೇಸು, ಜೈಲು ಪ್ರಕರಣ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಇದಕ್ಕಾಗಿ ಕಾಂಗ್ರೆಸ್ ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೊರಟಿದ್ದೆವು. ಸಂಘ ಕೂಡ ಇದೇ ಸಂದೇಶ ನೀಡಿತ್ತು,’’ ಎನ್ನುತ್ತಾರೆ ಚಿಕ್ಕಮಗಳೂರಿನ ಭಜರಂಗ ದಳದ ನಾಯಕ ಮಂಜು. ಜತೆಗೆ, ನಾಲ್ಕು ವರ್ಷ ಕಳೆಯುವ ಹೊತ್ತಿಗೆ ಪರಿಸ್ಥಿತಿ ಬದಲಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

“ರಫೇಲ್ ಡೀಲ್‌ನಲ್ಲಿ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಅದರ ಬಗ್ಗೆ ಸಾಮಾನ್ಯ ಜನ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇಂಧನ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಹಳ್ಳಿಗಾಡಿನ ಜನ ಕೂಡ ನಮ್ಮ ಬಳಿ ಇಂಧನ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಈ ವಿಚಾರ ಬಂದಾಗ ನಾವು ಮೌನಕ್ಕೆ ಶರಣಾಗುತ್ತೇವೆ,’’ ಎಂದರು.

ಒಂದು ಕಡೆ ಮೋಹನ್ ಭಾಗವತ್ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಮಾತುಗಳನ್ನು ಆಡುತ್ತಿರುವಾಗ ತಳಮಟ್ಟದ ಸಂಘಪರಿವಾರದ ಪ್ರಾಮಾಣಿಕ ಕಾರ್ಯಕರ್ತರು ಕೇಂದ್ರ ಸರಕಾರದ ನಿರ್ಧಾರಗಳ ಪರಿಣಾಮಗಳನ್ನು ಅದೇ ನೆಲೆಯಲ್ಲಿ ಎದುರು ಗೊಳ್ಳುತ್ತಿದ್ದಾರೆ. “ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಾತ್ರ ಹೆಚ್ಚಿರುವುದಿಲ್ಲ. ಬಿಜೆಪಿಯವರು ಸ್ವಂತ ಶ್ರಮದಿಂದ ಅಧಿಕಾರಕ್ಕೆ ಬರಬೇಕು. ಈ ಸಾರಿಯೂ ನಾವೇ ಕೆಲಸ ಮಾಡಿದರೆ ಸಂಘಕ್ಕೂ ಬಿಜೆಪಿಗೂ ವ್ಯತ್ಯಾಸ ಇರುವುದಿಲ್ಲ,’’ ಎನ್ನುತ್ತಾರೆ ಮಂಜು.

ಸರಸಂಘ ಚಾಲಕರ ಹಾಗೂ ಸಾಮಾನ್ಯ ಕಾರ್ಯಕರ್ತರ ಭಾಷೆ ಬೇರೆಯದೇ ಆದರೂ ಆಶಯಗಳು ಒಂದೇ ರೀತಿಯಲ್ಲಿ ಧ್ವನಿಸುತ್ತಿವೆ.

ಇವುಗಳ ಜತೆಗೆ ಗಮನಿಸಬೇಕಿರುವುದು, ದೇಶದ ರಾಜಕೀಯ ಇತಿಹಾಸದಲ್ಲಿ ಆರ್‌ಎಸ್‌ಎಸ್‌ ಈಗಿನಷ್ಟು ತೀವ್ರ ಟೀಕೆಗೆ ಗುರಿಯಾಗಿದ್ದ ದಿನಗಳು ಕಾಣಸಿಗುವುದಿಲ್ಲ. ಗಾಂಧಿ ಹತ್ಯೆ, ನಂತರದ ನಿಷೇಧದ ಬೆಳವಣಿಗೆಗಳ ನಂತರ ಸಂಘ ತನ್ನ ಬೆಳವಣಿಗೆಯಲ್ಲಿ ಒಂದು ನಿಯಮಿತವನ್ನು ಕಾಯ್ದುಕೊಂಡು ಬಂದಿತ್ತು. ಬಾಬ್ರಿ ಮಸೀದಿ ಧ್ವಂಸದಂತಹ ಘಟನೆಗಳು ನಡೆದಾಗಲೂ ಸಂಘದ ನಾಯಕತ್ವ ಚರ್ಚೆಯಿಂದ ದೂರವೇ ಉಳಿದಿತ್ತು. ಆದರೆ ಮೋದಿ ಪ್ರಧಾನಿಯಾದ ನಂತರ ಈ ದೇಶದ ರಾಜಕೀಯ ಚರ್ಚೆಗಳ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರು ಕಾಣಿಸಿಕೊಳ್ಳುತ್ತಿದೆ. ಅದರ ಎಲ್ಲಾ ಚಟುವಟಿಕೆಗಳನ್ನು ಗೌಣಗೊಳಿಸುವ ಈ ಚರ್ಚೆಗಳು ಬಿಜೆಪಿ ಹಾಗೂ ಮೋದಿ ಬಗೆಗಿನ ವಿರೋಧಗಳಿಗೆ ತಲೆ ಕೊಡಬೇಕಾಗಿ ಬಂದಿದೆ. ಇದನ್ನು ಸಂಘಪರಿವಾರದ ನಾಯಕರು ಖಾಸಗಿ ಮಾತುಕತೆಯಲ್ಲಿ ಒಪ್ಪಿಕೊಳ್ಳುತ್ತಾರೆ ಕೂಡ.

ಮೋದಿ, ಬಿಜೆಪಿ, ರಾಜಕೀಯ ಅಧಿಕಾರಗಳ ಆಚೆಗೆ ಆರ್‌ಎಸ್‌ಎಸ್‌ ಆಲೋಚನೆಗಳು ಇವೆ. ಅವು ಅನುಷ್ಠಾನಗೊಳ್ಳಬೇಕಾದರೆ ಅಧಿಕಾರ ಕೇಂದ್ರದಿಂದ ಅದು ಹೊರಗೆ ಬರಲೇಬೇಕಿದೆ. ಪರಿಸ್ಥಿತಿ ಹೀಗಿರುವಾಗ, ಲೋಕಸಭೆ ಚುನಾವಣೆಯಲ್ಲಿ ಕ್ರೀಯಾಶೀಲ ಪಾಲುದಾರಿಕೆಯಿಂದ ದೂರವೇ ಉಳಿಯುವ ಮೂಲಕ ಆರ್‌ಎಸ್‌ಎಸ್‌ ತನ್ನ ಮೇಲಿನ ‘ಮೋದಿ ಎಂಬ ಭಾರ’ವನ್ನು ಇಳಿಸಿಕೊಳ್ಳುವ ಮನಸ್ಥಿತಿಗೆ ಬಂದಂತೆ ಕಾಣಿಸುತ್ತಿದೆ.