ಮಳೆಯೇನೋ ಅವಾಂತರ ಸೃಷ್ಟಿಸುತ್ತಿದೆ; ಆದರೆ, ಬೆಂಗಳೂರಿಗರು ಏನು ಮಾಡುತ್ತಿದ್ದಾರೆ?
COVER STORY

ಮಳೆಯೇನೋ ಅವಾಂತರ ಸೃಷ್ಟಿಸುತ್ತಿದೆ; ಆದರೆ, ಬೆಂಗಳೂರಿಗರು ಏನು ಮಾಡುತ್ತಿದ್ದಾರೆ?

ಒಂದು ಸಣ್ಣ ಮಳೆಗೂ ಹೆದರುವ ಸ್ಥಿತಿಯಲ್ಲಿ ಈಗ ಬೆಂಗಳೂರಿದೆ. ಅವಾಂತರಕ್ಕೆಲ್ಲಾ ಮಳೆಯನ್ನೇ ದೂಷಿಸುವ ಬದಲು ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆಯೂ ಜನರು ಯೋಚಿಸಬೇಕಿದೆ.

ಸೋಮವಾರ ರಾತ್ರಿ ಬೆಂಗಳೂರು ನಗರದ ಬಹುತೇಕ ರಸ್ತೆಗಳೆಲ್ಲಾ ಹೊಳೆಗಳಾಗಿದ್ದವು. ಸುಮಾರು ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ ಹಾಗೂ ತಗ್ಗು ಪ್ರದೇಶಗಳು ಕೆರೆಗಳಾಗಿದ್ದವು. ಇದಕ್ಕೆಲ್ಲಾ ಕಾರಣ ಒಂದು ರಾತ್ರಿ ಸುರಿದ ಮಳೆ. ಬೆಂಗಳೂರಿನಲ್ಲಿ ಸುಮಾರಾದ ಮಳೆ ಸುರಿದಾಗೆಲ್ಲಾ ದೊಡ್ಡ ಸಮಸ್ಯೆಯಾಗಲು ಕಾರಣ ನೀರುಗಾಲುವೆಗಳ ಅಸಮರ್ಪಕ ನಿರ್ವಹಣೆ, ರಾಜಾ ಕಾಲುವೆಗಳ ಒತ್ತುವರಿ ಹಾಗೂ ಮಳೆ ನೀರು ಸಂಗ್ರಹದ ಬಗ್ಗೆ ಬೆಂಗಳೂರಿಗರಿಗೆ ಮನಸ್ಸಿಲ್ಲದಿರುವುದು.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಪ್ರಮಾಣ 25.4 ಮಿ.ಮೀ. ಒಂದೇ ದಿನ ಇಷ್ಟು ಪ್ರಮಾಣದ ಮಳೆ ಸುರಿದಿರುವುದರಿಂದ ಸಮಸ್ಯೆಯಾಗುವುದು ಸ್ವಾಭಾವಿಕವೇ. ಆದರೆ, ಸೆಪ್ಟೆಂಬರ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯು ಸುಮಾರು ತಿಂಗಳ ಹಿಂದೆಯೇ ಎಚ್ಚರಿಸಿತ್ತು. ಭಾರೀ ಮಳೆಗೂ ಮುನ್ನಾ ಚರಂಡಿ, ನೀರುಗಾಲುವೆಗಳ ಹೂಳೆತ್ತುವ ಹಾಗೂ ರಾಜಾ ಕಾಲುವೆಗಳ ಒತ್ತುವರಿಯನ್ನು ಪೂರ್ತಿಯಾಗಿ ತೆರವುಗೊಳಿಸುವ ಕೆಲಸವನ್ನು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಮಾಡಲಿಲ್ಲ. ಹೀಗಾಗಿ ಸೋಮವಾರ ಒಂದು ರಾತ್ರಿಯ ಮಳೆಯಿಂದ ಬಹುತೇಕ ಭಾಗಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.

ಸಣ್ಣ ಮಳೆ ಬಂದರೂ ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ, ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತದೆ. ರಸ್ತೆ ಮೇಲೆ ಬಿದ್ದ ನೀರು ಸರಿಯಾಗಿ ಹರಿದು ಸೇರುವಂತೆ ಚರಂಡಿಗಳನ್ನು ನಿರ್ಮಿಸುವುದನ್ನು ಬಿಬಿಎಂಪಿ ಕಲಿತೇ ಇಲ್ಲ. ಮಳೆ ನೀರನ್ನು ವ್ಯವಸ್ಥಿತವಾಗಿ ಕೆರೆಗಳಿಗೆ ಹರಿಸುವ ಸ್ಪಷ್ಟ ಯೋಜನೆಯೇ ಬೆಂಗಳೂರಿನಲ್ಲಿಲ್ಲ. ಕೆರೆಗಳು ಹಾಗೂ ಕೆರೆಗಳಿಗೆ ನೀರು ಹರಿಯುತ್ತಿದ್ದ ಕಾಲುವೆಗಳ ಜಾಗದಲ್ಲಿ ಈಗ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ಎದ್ದು ನಿಂತಿವೆ. ಈ ಹಿಂದೆ ಹಲವು ಬಾರಿ ರಾಜಾ ಕಾಲುವೆ ಒತ್ತುವರಿ ತೆರವು ನಾಟಕ ನಡೆಸಿರುವ ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಈಗ ಆ ವಿಷಯವನ್ನೇ ಮರೆತು ಕುಳಿತಿದೆ.

Also read: ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

ಕಟ್ಟಡ ನಿರ್ಮಾಣದ ವೇಳೆ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆಯನ್ನೇ ನಡೆಸದೆ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅನುಮತಿ ನೀಡುತ್ತಿರುವುದು ಹಾಗೂ ಅರ್ಧ ಅಡಿಯನ್ನೂ ಬಿಡದೆ ಒತ್ತೊತ್ತಾಗಿ ಮನೆ ಕಟ್ಟಿಕೊಳ್ಳುವ ಜನರ ಅತಿಯಾಸೆಯೂ ನಗರದ ವೈಪರೀತ್ಯಗಳಿಗೆ ಪ್ರತ್ಯಕ್ಷ ಕಾರಣದಂತಿದೆ. ಬಿದ್ದ ಮಳೆ ಕಾಂಕ್ರೀಟ್‌ ಕಟ್ಟಡಗಳ ಮೇಲಿಂದ ಹರಿದು ನೇರವಾಗಿ ಡಾಂಬರ್‌ ರಸ್ತೆ ಮೇಲೆ ಉಕ್ಕಿ ಹರಿದು ಚರಂಡಿಗಳನ್ನು ಸೇರುತ್ತದೆ. ಚರಂಡಿಗಳು ಉಕ್ಕಿ ರಾಜಾ ಕಾಲುವೆಗೆ ಮಳೆ ನೀರನ್ನು ಸೇರಿಸುತ್ತವೆ. ಬೆಂಗಳೂರಿನಲ್ಲಿ ಬಿದ್ದ ಮಳೆ ನೀರು ರಾಜಾ ಕಾಲುವೆ ಮೂಲಕ ಕಾವೇರಿ ನದಿ ಸೇರಿ ಅಲ್ಲಿಂದ ತಮಿಳುನಾಡು ಸೇರುತ್ತಿದೆ. ಆದರೆ, ಬೆಂಗಳೂರಿನಲ್ಲಿ ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಮನಸ್ಸು ಹೆಚ್ಚಿನ ಜನರಿಗಿಲ್ಲ.

ಕಾಗದದ ಮೇಲಷ್ಟೇ ಉಳಿದ ಮಳೆ ನೀರು ಸಂಗ್ರಹ:

ದಶಕದ ಹಿಂದೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಕಾವೇರಿ 3 ಮತ್ತು 4ನೇ ಹಂತದ ನೀರು ಪೂರೈಕೆ ಯೋಜನೆ ಆಗಿನ್ನೂ ಪೂರ್ತಿಯಾಗಿರಲಿಲ್ಲ. ಹೀಗಾಗಿ ಬೆಂಗಳೂರಿನ ನೀರಿನ ಸಮಸ್ಯೆ ಪರಿಹಾರಕ್ಕೆ ಮಳೆ ನೀರು ಸಂಗ್ರಹದ ಮೊರೆ ಹೋಗಿದ್ದ ಬೆಂಗಳೂರು ಜಲ ಮಂಡಳಿ ಮಳೆ ನೀರು ಸಂಗ್ರಹವನ್ನು ಕಡ್ಡಾಯ ಮಾಡಿತ್ತು. ಆದರೆ, ಈ ನಿಯಮ ಕಾಗದದ ಮೇಲಷ್ಟೇ ಉಳಿದುಕೊಂಡಿದೆ.

2009ರಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯ ಎಂಬ ನಿಯಮವನ್ನು ಜಲಮಂಡಳಿ ಜಾರಿಗೆ ತಂದಿತ್ತು. ಹಳೆಯ 60X40 ಅಡಿ ವಿಸ್ತೀರ್ಣದ ಕಟ್ಟಡಗಳು ಹಾಗೂ ಹೊಸದಾಗಿ ನಿರ್ಮಿಸುವ 30X40 ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವುದು ಕಡ್ಡಾಯ ಎಂಬುದು ನಿಯಮ. ಈ ನಿಯಮ ಉಲ್ಲಂಘಿಸಿದರೆ ನೀರಿನ ಬಿಲ್‌ನ ಶೇಕಡ 25ರಷ್ಟು ದಂಡ ವಿಧಿಸಲು ನಿಯಮದಲ್ಲಿ ಅವಕಾಶವಿದೆ. ಆದರೆ, ಆರಂಭದಲ್ಲಿ ಸದ್ದು ಮಾಡಿದ್ದ ಈ ನಿಯಮ ನಂತರದ ದಿನಗಳಲ್ಲಿ ಮರೆಗೆ ಸರಿಯಿತು. ಕಾವೇರಿ 3 ಮತ್ತು 4ನೇ ಹಂತದ ನೀರು ಪೂರೈಕೆ ಯೋಜನೆ ಮುಗಿದು ಬೆಂಗಳೂರಿಗೆ ಕಾವೇರಿ ನದಿಯಿಂದ ಹೆಚ್ಚಿನ ನೀರು ಲಭ್ಯವಾಗುತ್ತಿರುವಾಗ ಮಳೆ ನೀರು ಸಂಗ್ರಹ ಯೋಜನೆಯನ್ನೇ ಜಲಮಂಡಳಿ ಮರೆತಿದೆ.

“ಬೆಂಗಳೂರಿನಲ್ಲಿ ಕಾಲುವೆ, ಕೆರೆಗಳ ಸಂಪರ್ಕ ವ್ಯವಸ್ಥೆ ಸರಿಯಾಗಿದ್ದರೆ ಹಾಗೂ ಮಳೆ ನೀರು ಸಂಗ್ರಹಕ್ಕೆ ಜನರು ಸರಿಯಾಗಿ ಮನಸ್ಸು ಮಾಡಿದ್ದರೆ ಭಾರೀ ಮಳೆ ಎಂಬುದು ಬೆಂಗಳೂರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಕೆರೆಗಳು ಹಾಗೂ ನೀರುಗಾಲುವೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮಳೆ ನೀರು ಸಂಗ್ರಹಣೆಯ ಬಗ್ಗೆ ನಿಗಾ ವಹಿಸುವ ವ್ಯವಸ್ಥೆಯನ್ನೇ ಜಲಮಂಡಳಿ ಮರೆತಿದೆ. ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಜನ ಜಾಗೃತರಾಗುತ್ತಿಲ್ಲ. ಬೆಂಗಳೂರು ದೊಡ್ಡದಾಗಿ ಬೆಳೆಯುತ್ತಿರುವುದರಿಂದ ಇಲ್ಲಿನ ಸಮಸ್ಯೆಗಳೂ ದೊಡ್ದದಾಗುತ್ತಿವೆ” ಎನ್ನುತ್ತಾರೆ ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆಯ ರಾಜ್ಯ ಸಂಚಾಲಕ ಎಂ. ಈಶ್ವರಪ್ಪ.

“ಒಂದು ಕಡೆ ಎಲ್ಲವನ್ನೂ ಸರಕಾರವೇ ಮಾಡಬೇಕು ಎಂಬ ಮನಸ್ಥಿತಿಯ ಜನರು ಹಾಗೂ ಸಮಸ್ಯೆ ದೊಡ್ಡದಾದಾಗ ಯೋಜನೆಗಳನ್ನು ರೂಪಿಸಿ ಅದರಿಂದ ಹಣ ಹೊಡೆಯುವುದು ಹೇಗೆಂದು ನೋಡುವ ಅಧಿಕಾರಿಗಳು ಈಗ ಹೆಚ್ಚಾಗುತ್ತಿದ್ದಾರೆ. ಇದರಿಂದ ದೂರದೃಷ್ಟಿಯ ಯೋಜನೆಗಳು ಜಾರಿಗೆ ಬರುತ್ತಿಲ್ಲ. ಸಮುದಾಯದ ಸಹಯೋಗದಲ್ಲಿ ಸುಸ್ಥಿರ ಅಭಿವೃದ್ಧಿ ಎಂಬುದು ಈಗ ಜನರಿಗೂ ಬೇಡ, ಅಧಿಕಾರಿಗಳಿಗೂ ಬೇಡ ಎಂಬಂತಾಗಿದೆ” ಎಂದು ಬೇಸರಿಸುತ್ತಾರೆ ಅವರು.

ಸೂರಿನ ಮೇಲೆ ಬೀಳುವ ನೀರನ್ನು ಹಿಡಿದಿಟ್ಟುಕೊಳ್ಳುವ ಮನಸ್ಸು ಮಾಡದ, ಮಳೆಯಿಂದ ಸಮಸ್ಯೆಯಾದಾಗ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲೂ ಯತ್ನಿಸದ ಜನ ಸಾಮಾನ್ಯರು ದಿನದಿಂದ ದಿನಕ್ಕೆ ಸಮಸ್ಯೆಯ ಬಗ್ಗೆ ದೂರುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಿರುವಂತಿದೆ. ಇದಕ್ಕೆ ಉದಾಹರಣೆ ಎಂದರೆ ಸೋಮವಾರ ರಾತ್ರಿ ಮಳೆಯಿಂದ ಸಾಕಷ್ಟು ಅವಾಂತರವಾಗಿದ್ದರೂ ಬಿಬಿಎಂಪಿಯ ನಿಯಂತ್ರಣ ಕೊಠಡಿಗೆ ಬಂದಿರುವ ಕರೆಗಳ ಸಂಖ್ಯೆ ಕೇವಲ ಎರಡು! ಜಡ್ಡುಗಟ್ಟಿದ ಅಧಿಕಾರಿಗಳಿಗೂ ಬೇಕಾಗಿರುವುದು ಇಂಥ ‘ಶ್ರೀ’ಸಾಮಾನ್ಯರೇ. ಹಾಗಾದರೆ ಜನ ಎಚ್ಚೆತ್ತುಕೊಳ್ಳುವುದು ಯಾವಾಗ?

ಮಳೆ ಅವಾಂತರ ಹಾಗೂ ಮಳೆ ನೀರು ಸಂಗ್ರಹದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮತ್ತು ಜಲಮಂಡಳಿಯ ಮಳೆ ನೀರು ಸಂಗ್ರಹ ವಿಭಾಗದ ಉಪ ಮುಖ್ಯ ಅಭಿಯಂತರ ಮಧುಸೂದನ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.