samachara
www.samachara.com
‘ಆಯುಷ್ಮಾನ್ ಭಾರತ್’: ಮೋದಿ ಸರಕಾರದ ಮತ್ತೊಂದು ತೋಪು ಯೋಜನೆ ಅಷ್ಟೆ!
COVER STORY

‘ಆಯುಷ್ಮಾನ್ ಭಾರತ್’: ಮೋದಿ ಸರಕಾರದ ಮತ್ತೊಂದು ತೋಪು ಯೋಜನೆ ಅಷ್ಟೆ!

ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಮತ್ತು ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಗಮನಾರ್ಹ ಏರಿಕೆ ಸಾಧ್ಯವಾಗದ ಹೊರತು ‘ಆಯುಷ್ಮಾನ್‌ ಭಾರತ್‌’ ಇನ್ನೊಂದು ತೋಪೆದ್ದು ಹೋಗುವ ಯೋಜನೆ ಅಷ್ಟೇ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ನವೆಂಬರ್‌ 8, 2016. ‘ನೋಟ್‌ ಬ್ಯಾನ್‌’ ಘೋಷಣೆ ಮಾಡಿದ್ದರು ಪ್ರಧಾನಿ ನರೇಂದ್ರ ಮೋದಿ. ಮರುದಿನ ನವೆಂಬರ್ 9ರಂದು ಇದು ‘ವಿಫಲ ಯೋಜನೆ’ ಎಂಬ ವರದಿ ಮುಂದಿಟ್ಟಿತ್ತು ‘ಸಮಾಚಾರ’. ಅವತ್ತಿಗೆ ‘ಸಮಾಚಾರ’ದ ಈ ನಿಲುವನ್ನು ಹಲವರು ಟೀಕಿಸಿದ್ದರು. ಇದಾಗಿ ಬರೋಬ್ಬರಿ ಒಂದು ಮುಕ್ಕಾಲು ವರ್ಷದ ನಂತರ ತನಗೆ ಮರಳಿರುವ ಹಣದ ವಿವರವನ್ನು ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಜನರ ಮುಂದಿಟ್ಟಿದೆ. ಈ ವಿವರಗಳು ‘ಡಿಮಾನಟೈಸೇಷನ್‌’ ವಿಫಲವಾಗಿರುವುದನ್ನು ಸ್ಪಷ್ಟವಾಗಿ ಹೇಳಿವೆ.

ಇದೀಗ ‘ಮೋದಿ ಕೇರ್‌’ ಎಂಬ ಅಡ್ಡ ಹೆಸರಿನೊಂದಿಗೆ ‘ಆಯುಷ್ಮಾನ್‌ ಭಾರತ್‌’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್‌ನಲ್ಲಿ ಚಾಲನೆ ನೀಡಿದ್ದಾರೆ. ಇದು ಕೂಡ ಮತ್ತೊಂದು ತೋಪೆದ್ದು ಹೋಗುವ ಯೋಜನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆ ಎಂಬುದನ್ನು ಇಲ್ಲಿ ವಿವರವಾಗಿ ಮುಂದಿಡುವ ಪ್ರಯತ್ನ ಮಾಡಲಾಗಿದೆ.

ಇದು ಆಯುಷ್ಮಾನ್‌ ಭಾರತ್‌:

ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ಸೇವೆ ನೀಡುವ ಜಗತ್ತಿನ ಅತೀ ದೊಡ್ಡ ಆರೋಗ್ಯ ಯೋಜನೆ ‘ಆಯುಷ್ಮಾನ್‌ ಭಾರತ್‌’ ಎಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾದ ಗ್ರಾಮೀಣ ಭಾಗದ 8.03 ಕೋಟಿ ಕುಟುಂಬಗಳು ಮತ್ತು ನಗರ ಪ್ರದೇಶದ 2.33 ಕೋಟಿ ಬಡ ಕುಟುಂಬಗಳಿಗೆ ಇದರ ಸೌಲಭ್ಯ ಸಿಗಲಿದೆ. ಯೋಜನೆ ಪ್ರಕಾರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆ ದೊರಕಲಿದೆ. ಇದಕ್ಕಾಗಿ ಪ್ರತಿ ಕುಟುಂಬ ವರ್ಷಕ್ಕೆ 1 ಸಾವಿರ ರೂಪಾಯಿಯ ಪ್ರೀಮಿಯಂ ತುಂಬಬೇಕು ಎಂಬ ಪ್ರಾಥಮಿಕ ಮಾಹಿತಿ ಹೇಳುತ್ತಿದೆ.

ಆದರೆ ಯೋಜನೆ ಘೋಷಣೆ ಬೆನ್ನಿಗೆ ಇದರ ಬಗ್ಗೆ ಹಲವು ತಜ್ಞರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಮೊದಲಿಗರು ಆರೋಗ್ಯ ಸೇವೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ಕೇರಳದ ಹಣಕಾಸು ಸಚಿವ ಟಿ. ಎಂ. ಥಾಮಸ್‌ ಐಸಾಕ್‌. ಅವರು ‘ಆಯುಷ್ಮಾನ್‌ ಭಾರತ್‌ ಯೋಜನೆ ದೊಡ್ಡ ತಮಾಷೆ’ ಎಂದು ಕರೆದಿದ್ದಾರೆ. ಮತ್ತು ಅವರು ಮುಂದಿಡುತ್ತಿರುವ ಅಂಕಿ ಅಂಶಗಳು ವಾಸ್ತವಕ್ಕೆ ಹತ್ತಿರವಾಗಿವೆ.

ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್‌ ಐಸಾಕ್‌. 
ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್‌ ಐಸಾಕ್‌. 
/ಇಂಡಿಯನ್‌ ಎಕ್ಸ್‌ಪ್ರೆಸ್

ಹಲವು ಪುಸ್ತಕಗಳನ್ನು ಬರೆದಿರುವ, ಡೆವಲಪ್‌ಮೆಂಟ್‌ ಸ್ಟಡೀಸ್‌ ಮೇಲೆ ವಿಶೇಷ ಅಧ್ಯಯನದ ಹಿನ್ನೆಲೆ ಇರುವ ಐಸಾಕ್ ಹಲವು ತೌಲನಿಕ ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ. ಸದ್ಯ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿಯಲ್ಲಿ ಭಾರತದಲ್ಲಿ 1.20 ಕೋಟಿ ಜನರು ವಿಮೆ ಕ್ಲೇಮ್‌ ಮಾಡಿದ್ದಾರೆ. ಇದರಲ್ಲಿ 53 ಲಕ್ಷ ಜನರು ಕೇರಳದವರು. “ದೇಶದ ಜನಸಂಖ್ಯೆಯ ಕೇವಲ ಶೇಕಡಾ 3ರಷ್ಟಿರುವ ಕೇರಳಿಗರು ಯೋಜನೆಯ ಶೇಕಡಾ 42 ಫಲಾನುಭವಿಗಳಾಗಿದ್ದಾರೆ. ಅಂದರೆ ದೇಶದಲ್ಲಿ ಯೋಜನೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು,” ಎಂದು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹೇಗೆ ಜಾರಿಗೊಳಿಸುತ್ತಾರೆ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಸದ್ಯದ ಯೋಜನೆಯಲ್ಲಿ 1,250 ರೂಪಾಯಿ ಪ್ರೀಮಿಯಂ ಮೊತ್ತ ತುಂಬಿದರೆ ನಿಮಗೆ 30,000 ರೂಪಾಯಿಗಳ ವಿಮೆ ಸಿಗುತ್ತದೆ. “ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ 1,110 ರೂಪಾಯಿಗಳ ಪ್ರೀಮಿಯಂಗೆ 5 ಲಕ್ಷ ರೂಪಾಯಿಗಳ ವಿಮೆ ಸಿಗಲಿದೆ ಎನ್ನುತ್ತಿದ್ದಾರೆ. ಇಷ್ಟು ಸಣ್ಣ ಪ್ರೀಮಿಯಂಗೆ ಇಷ್ಟೊಂದು ದೊಡ್ಡ ಮಟ್ಟದ ಲಾಭ ಸಿಗಲು ಹೇಗೆ ಸಾಧ್ಯ?” ಎಂದು ಕೇಳುತ್ತಿದ್ದಾರೆ ಥಾಮಸ್‌ ಐಸಾಕ್.

“ನೀವು (ಸರಕಾರ) ಹಣವನ್ನು ಪಾವತಿಸಬೇಕಾಗಿಲ್ಲ ಎಂದು ಊಹಿಸಿಕೊಂಡರೆ ಮಾತ್ರ ಈ ರೀತಿಯ ಮಾದರಿಯ ಯೋಜನೆಯನ್ನು ನಿರ್ವಹಿಸಬಹುದು,” ಎಂದವರು ಕಿಡಿಕಾರಿದ್ದಾರೆ. ಜತೆಗೆ ಯೋಜನೆಯ ಶೇಕಡಾ 40 ರಷ್ಟು ಹಣವನ್ನು ರಾಜ್ಯ ಸರಕಾರಗಳು ಪಾವತಿಸಬೇಕು ಎಂಬ ನಿಯಮವನ್ನೂ ಮುಂದಿಡಲಾಗಿದೆ. “5 ಲಕ್ಷಗಳ ವಿಮೆಗೆ ರಾಜ್ಯ ಸರಕಾರ ಕನಿಷ್ಠ 5,000 ದಿಂದ 6,000 ಕೋಟಿ ಹಣ ನೀಡಬೇಕಾಗುತ್ತದೆ. ಇಷ್ಟು ದೊಡ್ಡ ಮೊತ್ತದ ಹಣ ಪಾವತಿಸಿ, ನಮಗೆ ಬೇಕಾದಂತೆ ಯೋಜನೆಯನ್ನು ವಿನ್ಯಾಸಗೊಳಿಸುವ ಆಯ್ಕೆ ಇಲ್ಲದೇ ಹೋದಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಮುರಿದು ಬೀಳಲಿದೆ. ಇದು ಹಾಸ್ಯಾಸ್ಪದ,” ಎಂದವರು ಎಚ್ಚರಿಕೆ ನೀಡಿದ್ದಾರೆ. ‘ಆರೋಗ್ಯ ಎನ್ನುವುದು ರಾಜ್ಯದ ವಿಷಯ. ರಾಜ್ಯದ ಬೇಡಿಕೆಗಳಿಗೆ ತಕ್ಕಂತೆ ಆರೋಗ್ಯ ಯೋಜನೆಗಳನ್ನು ವಿನ್ಯಾಸಗೊಳಿಸುವ ಆಯ್ಕೆಯನ್ನು ರಾಜ್ಯಗಳಿಗೇ ನೀಡಬೇಕು’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಅಂದ ಹಾಗೆ, ಈ ಯೋಜನೆಗೆ ಐದು ರಾಜ್ಯಗಳು ಕೈ ಜೋಡಿಸಿಲ್ಲ. ಅವುಗಳಲ್ಲಿ ಕೇರಳವೂ ಒಂದು. ತೆಲಂಗಾಣ, ಒಡಿಶಾ, ದೆಹಲಿ, ಪಂಜಾಬ್‌ ಯೋಜನೆಗೆ ಕೈ ಜೋಡಿಸದ ಇತರ ರಾಜ್ಯಗಳಾಗಿವೆ. ಇದರಲ್ಲಿ ದೆಹಲಿ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳಿಗೆ ಜಾಗತಿಕ ಮನ್ನಣೆ ಗಳಿಸಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಹಳೆ ಯೋಜನೆಗೆ ಹೊಸ ಲೇಪ

ಯೋಜನೆಯ ಜಾರಿಯ ಸವಾಲು ಮತ್ತು ಅದರಲ್ಲಿ ಅಡಗಿರುವ ಅಪಾಯವನ್ನು ಓರ್ವ ಹಣಕಾಸು ಸಚಿವರಾಗಿ ಥಾಮಸ್‌ ಐಸಾಕ್‌ ಮುಂದಿಟ್ಟರೆ ಯೋಜನೆಯ ಒಳಸುಳಿಗಳನ್ನು ತೆರೆದಿಟ್ಟಿದ್ದಾರೆ ರಾಂಚಿ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕ ಜೀನ್‌ ಡ್ರೆಝ್.

ಖ್ಯಾತ ಆರ್ಥಿಕ ತಜ್ಞ, ಸಾಮಾಜಿಕ ಹೋರಾಟಗಾರ ಜೀನ್‌ ಡ್ರೆಝ್
ಖ್ಯಾತ ಆರ್ಥಿಕ ತಜ್ಞ, ಸಾಮಾಜಿಕ ಹೋರಾಟಗಾರ ಜೀನ್‌ ಡ್ರೆಝ್
/ಕ್ಯಾಚ್‌ ನ್ಯೂಸ್‌

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಅವೈ)ನಲ್ಲಿ ಎರಡು ಉಪ ಯೋಜನೆಗಳಿವೆ. ಅದರಲ್ಲಿ ಒಂದು ಆಯುಷ್ಮಾನ್‌ ಭಾರತ. ಇನ್ನೊಂದು 1,50,000 ಆರೋಗ್ಯ ಮತ್ತು ಕ್ಷೇಮಧಾಮಗಳ ನಿರ್ಮಾಣ. ಸದ್ಯ ದೇಶದಲ್ಲಿ 2,300 ಇಂಥಹ ಕ್ಷೇಮಧಾಮಗಳಿದ್ದು ಇವುಗಳ ಸಂಖ್ಯೆಯನ್ನು 1.5 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. “ಇದಕ್ಕಾಗಿ 2018-19ರ ಬಜೆಟ್‌ನಲ್ಲಿ ಮೀಟಲಿಟ್ಟ ಹಣ 1200 ಕೋಟಿ ರೂಪಾಯಿ. ಅಂದರೆ ಪ್ರತಿ ಧಾಮಕ್ಕೆ 80,000 ರೂಪಾಯಿ! ನಿಜವಾಗಿ ಹೇಳಬೇಕೆಂದರೆ ಇದು ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ರೂಪ ಅಷ್ಟೇ,” ಎನ್ನುತ್ತಾರೆ ಜೀನ್‌ ಡ್ರೆಝ್. ವಾಸ್ತವದಲ್ಲಿ ಇಷ್ಟು ಸಣ್ಣ ಮೊತ್ತಕ್ಕೆ ಇವತ್ತಿನ ವೆಚ್ಚಗಳಲ್ಲಿ ಸಾಮಾನ್ಯ ಗಾತ್ರದ ಒಂದು ಕೋಣೆಯನ್ನೂ ಕಟ್ಟಲು ಸಾಧ್ಯವಿಲ್ಲ.

2018-19ರಲ್ಲಿ ಪಿಎಂಜೆಎವೈಗೆ 2,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಹಿಂದಿನ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ 1,000 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಇದೀಗ ಹಳೆಯ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಹೊಸ ಯೋಜನೆಯಲ್ಲಿ ವಿಲೀನವಾಗಿದ್ದು ಹೊಸ ಯೋಜನೆಗೆ ಕೇವಲ 2,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. “10 ಕೋಟಿ ಕುಟುಂಬಗಳಿಗೆ 5 ಲಕ್ಷ ರೂಪಾಯಿವರೆಗಿನ ವಿಮೆ ನೀಡುವುದಾಗಿ ಹೇಳಲಾಗಿದೆ. ಒಂದೊಮ್ಮೆ ಫಲಾನುಭವಿಗಳು 5 ಲಕ್ಷ ರೂಪಾಯಿಗಳಲ್ಲಿ ಕೇವಲ ಶೇಕಡಾ 1ರಷ್ಟು ಹಣವನ್ನು ವರ್ಷವೊಂದಕ್ಕೆ ಖರ್ಚು ಮಾಡಿದರೂ ಯೋಜನೆಯ ವೆಚ್ಚ 50,000 ಕೋಟಿ ರೂಪಾಯಿ ದಾಟಲಿದೆ,” ಎಂಬ ಲೆಕ್ಕಾಚಾರವನ್ನು ಮುಂದಿಡುತ್ತಾರೆ ಜೀನ್‌ ಡ್ರೆಝ್.

ಇತ್ತೀಚಿನ ನೀತಿ ಆಯೋಗದ ಸಭೆಯಲ್ಲಿ ಮುಂದಿನ ವರ್ಷಗಳಲ್ಲಿ ಪಿಎಂಜೆಎವೈ ಬಜೆಟನ್ನು 10,000 ಕೋಟಿಗೆ ಏರಿಸಬೇಕು ಎಂದು ತಜ್ಞರು ಒತ್ತಾಯಿಸಿದ್ದರು. ಹೀಗಿದ್ದೂ ಇಷ್ಟು ದೊಡ್ಡ ಪ್ರಮಾಣದ ಜನರಿಗೆ ಇದು ಕೋಳಿ ಹೊಟ್ಟೆಗೆ ಹಾಕಿದ ಅಹಾರ ಮಾತ್ರ ಎನ್ನುತ್ತಾರೆ ಅವರು. ಇದರಿಂದ ಪ್ರತೀ ಕುಟುಂಬದ ವ್ಯಕ್ತಿಯೊಬ್ಬನಿಗೆ ವರ್ಷಕ್ಕೆ 200 ರೂಪಾಯಿ ಅಥವಾ ಕುಟುಂಬಕ್ಕೆ 1,000 ರೂಪಾಯಿ ಆಸುಪಾಸಿನ ಸೌಲಭ್ಯ ಸಿಗಬಹುದು ಅಷ್ಟೇ ಎಂದು ವಿವರಿಸುತ್ತಾರೆ ಡ್ರೆಝ್. ಒಂದೊಮ್ಮೆ ಜನರು ಕಟ್ಟುವ ಪ್ರೀಮಿಯಂ ಮೊತ್ತವನ್ನು ಪರಿಗಣಿಸಿದರೂ ಈ ಹಣ ದುಪ್ಪಟ್ಟಾಗಬಹುದು ಅಷ್ಟೇ. ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

‘ದಿ ವೈರ್‌’ಗೆ ಬರೆದಿರುವ ವಿಶೇಷ ಲೇಖನದಲ್ಲಿ ಅವರು ‘ಆಯುಷ್ಮಾನ್‌ ಭಾರತ್’ ಜಗತ್ತಿನ ಅತೀ ದೊಡ್ಡ ಯೋಜನೆ ಎಂಬ ಪದ ಬಳಕೆಯೂ ಸರಿಯಲ್ಲ ಎಂದು ವಾದಿಸಿದ್ದಾರೆ. 50 ಕೋಟಿ ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂಬ ಕಾರಣಕ್ಕೆ ಜಗತ್ತಿನ ಅತೀ ದೊಡ್ಡ ಆರೋಗ್ಯ ಯೋಜನೆ ಎನ್ನಲಾಗುತ್ತಿದೆ. ಆದರೆ ಪ್ರತಿ ವ್ಯಕ್ತಿಗೆ ಮೀಸಲಿಟ್ಟಿರುವ ಹಣದ ಪಾಲು ತೀರಾ ಕಡಿಮೆ ಎನ್ನುತ್ತಾರೆ ಅವರು. ಇದಕ್ಕೆ ಹೋಲಿಸಿದರೆ ಚೀನಾದ ಆರೋಗ್ಯ ಯೋಜನೆಯಲ್ಲಿ ಹಣದ ಪ್ರಮಾಣ ಐದು ಪಟ್ಟು ದೊಡ್ಡದಾಗಿದೆ. ಭಾರತಕ್ಕಿಂತ ಈ ಯೋಜನೆ ಬೃಹತ್ತಾಗಿದೆ ಎಂಬುದು ಜೀನ್‌ ಡ್ರೆಝ್ ಅಧ್ಯಯನ ನೀಡುವ ಮಾಹಿತಿ.

‘ಪುಸ್ತಕದ ಬದನೆಕಾಯಿ’ ಹಿಂದಿನ ಲೆಕ್ಕಾಚಾರ:

ಹೀಗೆ ಉಪಯೋಗಕ್ಕೆ ಬರದ ‘ಪುಸ್ತಕದ ಬದನೆಕಾಯಿ’ಯಂತೆ ಉಳಿಯಬಹುದಾದ ಆಯುಷ್ಮಾನ್ ಭಾರತ್‌ ಯೋಜನೆ ಕಾಣದ ಕೈಗಳಿಗೆ ಲಾಭ ತಂದುಕೊಡುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ ಡ್ರೆಜ್‌. ಆರೋಗ್ಯ ಕ್ಷೇತ್ರದಲ್ಲಿ ಈ ಯೋಜನೆ ಮಾಡುವ ಸಾಧನೆ ತೀರಾ ಕಡಿಮೆ ಎಂಬ ಅನುಮಾನಗಳು ನನಗಿವೆ ಎಂದಿರುವ ಅವರು, “ಈ ಯೋಜನೆ ಮೂಲಕ ಖಾಸಗಿ ಸಂಸ್ಥೆಗಳಿಗೆ ಆರೋಗ್ಯಕ್ಕೆ ಸಂಬಂಧಿತ ಡಾಟಾಗಳ ಬೆಳೆ ತೆಗೆಯಲು ಸಾಧ್ಯವಾಗುತ್ತದೆ,” ಎಂದವರು ಎಚ್ಚರಿಸಿದ್ದಾರೆ.

ಖಾಸಗಿಯವರು ಲಾಭದಾಯಕ ಯೋಜನೆಯೊಂದನ್ನು ಅಭಿವೃದ್ಧಿಪಡಿಸಲು ಬೇಕಾದ ಅಗತ್ಯ ಮಾಹಿತಿಯನ್ನು ಸರಕಾರದ ಯೋಜನೆಗಳ ಹೆಸರಿನಲ್ಲಿ ಪಡೆದುಕೊಳ್ಳಲು ‘ಆಯುಷ್ಮಾನ್‌ ಭಾರತ್‌’ ವೇದಿಕೆ ಸೃಷ್ಟಿಸಿದಂತೆ ಕಾಣಿಸುತ್ತಿದೆ ಎಂದವರು ಅನುಮಾನಿಸಿದ್ದಾರೆ. “ಒಂದೊಮ್ಮೆ ಇದು ನಿಜವೇ ಆಗಿದ್ದರೆ ಯೋಜನೆಯನ್ನು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಲಾಭದ ವಿಚಾರಕ್ಕೆ ಬಂದಾಗ ಮಾತ್ರ ಯೋಜನೆ ಚಿಕ್ಕದಾಗಿರಲಿದೆ. ಹೆಚ್ಚಿನ ಜನರನ್ನು ತಲುಪುವುದು ಚುನಾವಣೆಯಲ್ಲಿ ಮತ ಗಳಿಸಲೂ ಉಪಯೋಗವಾಗಲಿದೆ,” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಜೀನ್‌ ಡ್ರೆಝ್.

ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಹಲವು ಅಭಿವೃದ್ಧಿಶೀಲ ದೇಶಗಳಲ್ಲಿ ‘ಯುನಿವರ್ಸಲ್‌ ಹೆಲ್ತ್ ಕೇರ್‌’ ಯೋಜನೆಗಳಿವೆ. ತಡವಾಗಿಯಾದರೂ ಈ ಸಾಲಿಗೆ ಭಾರತ ಸೇರಿದೆ ಎಂಬುದಷ್ಟೇ ಈ ಹೊತ್ತಿನ ಖುಷಿಯ ವಿಚಾರ. ಆದರೆ ಇದರ ಬಗ್ಗೆ ಇನ್ನೂ ಗಂಭೀರ ಚರ್ಚೆಗಳು ನಡೆಯಬೇಕಾಗಿವೆ. ಆಗ ಮಾತ್ರ ಯಶಸ್ವೀ ಯೋಜನೆಯೊಂದು ಕಾರ್ಯಗತಗೊಳ್ಳಲು ಸಾಧ್ಯ. ಆದರೆ ಮೋದಿ ಭಜನೆಯಲ್ಲೇ ಕಳೆಯುವ ಭಕ್ತರು ಮತ್ತು ಮಾಧ್ಯಮಗಳಿಂದ ಇದನ್ನು ಸದ್ಯಕ್ಕೆ ನಿರೀಕ್ಷಿಸುವುದು ಕಷ್ಟ. ಜತೆಗೆ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಮತ್ತು ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಗಮನಾರ್ಹ ಏರಿಕೆ ಸಾಧ್ಯವಾಗದ ಹೊರತು ‘ಆಯುಷ್ಮಾನ್‌ ಭಾರತ್‌’ ಇನ್ನೊಂದು ತೋಪೆದ್ದು ಹೋಗುವ ಯೋಜನೆ ಅಷ್ಟೇ.