samachara
www.samachara.com
‘ನಿತ್ಯ ಸತ್ಯ’: 2010ರಲ್ಲಿ ಕಾಮಿಸ್ವಾಮಿ; 2018ರಲ್ಲಿ ಫೇಸ್‌ಬುಕ್‌ನಲ್ಲಿ ಸೈಂಟಿಫಿಕ್ ‘ನುಡಿ ಸಿರಿ’!
COVER STORY

‘ನಿತ್ಯ ಸತ್ಯ’: 2010ರಲ್ಲಿ ಕಾಮಿಸ್ವಾಮಿ; 2018ರಲ್ಲಿ ಫೇಸ್‌ಬುಕ್‌ನಲ್ಲಿ ಸೈಂಟಿಫಿಕ್ ‘ನುಡಿ ಸಿರಿ’!

ತನ್ನ ರೀತಿಯಲ್ಲೇ ಅತ್ಯಾಚಾರ ಪ್ರಕರಣಗಳ ಆರೋಪ ಹೊತ್ತವರಿಗೆ ಇದೇ ಮಾಧ್ಯಮಗಳು ‘ಕಾಮಿ ಸ್ವಾಮಿ’ ಎಂದು ಕರೆಯದೆ, ತನಗೆ ಮಾತ್ರವೇ ಪಟ್ಟ ಕಟ್ಟಿದ್ದರ ಬಗೆಗೆ ಮೊದಲಿನಿಂದಲೂ ಅಸಮಾಧಾನ ಇದೆ. ಅದರ ಪರಿಣಾಮ ಈ ಬೆಳವಣಿಗೆ.

Team Samachara

ಮಾರ್ಚ್ 2, 2010ರಲ್ಲಿ ಅದೊಂದು ರಾಸಲೀಲೆಯ ದೃಶ್ಯಾವಳಿ ಹೊರಗೆ ಬೀಳುವವರೆಗೆ ಸ್ವಾಮಿ ನಿತ್ಯಾನಂದ ಅಥವಾ ಪರಮಹಂಸ ನಿತ್ಯಾನಂದ ಹೆಸರು ಜನಮಾನಸದಲ್ಲಿನ್ನೂ ಪ್ರಚಲಿತಕ್ಕೆ ಬಂದಿರಲಿಲ್ಲ.

ಕರ್ನಾಟಕದಲ್ಲಿ 24/7 ನ್ಯೂಸ್ ಚಾನಲ್‌ಗಳು ಹೊಸ ಎತ್ತರವನ್ನು ಮುಟ್ಟಿದ್ದ ಕಾಲಘಟ್ಟ ಅದು. ತಮಿಳುನಾಡು ಮೂಲದ ಸನ್‌ ನೆಟ್‌ವರ್ಕ್‌ ನಿತ್ಯಾನಂದ ಸ್ವಾಮಿ ಹಾಗೂ ನಟಿ ರಂಜಿತಾ ಒಟ್ಟಿಗಿದ್ದ ದೃಶ್ಯಗಳನ್ನು ಬಿತ್ತರಿಸಿತ್ತು. ಅದು ಮುಂದಿನ ಎರಡು ವರ್ಷಗಳ ಕಾಲ ಬಿಡದಿ ಆಶ್ರಮವನ್ನು ಕೇಂದ್ರವಾಗಿಟ್ಟುಕೊಂಡು ನಡೆದ ನಾನಾ ಬೆಳವಣಿಗೆಗಳಿಗೆ ಮುನ್ನುಡಿ ಬರೆಯಿತು.

ಸ್ವಾಮಿ ನಿತ್ಯಾನಂದ ಮೂಲದ ಹೆಸರು ಎ. ರಾಜಶೇಖರನ್. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಈತ ಹುಟ್ಟಿದ ಇಸವಿಗಳ ಬಗೆಗೆ ಗೊಂದಲವನ್ನು ಕಾಯ್ದುಕೊಂಡು ಬರಲಾಗಿದೆ. ಆಶ್ರಮದ ಪಕ್ಕದ ಗ್ರಾಮಸ್ಥರ ಪ್ರಕಾರ, “ಚಿಕ್ಕ ಸ್ವಾಮಿ ನಡೆದುಕೊಂಡು ಬಂದು ಬಿಡದಿಯ ಬಳಿ ಬೆಳೆದಿದ್ದ ಅರಳಿ ಮರದ ಕೆಳಗೆ ವಾಸ್ತವ್ಯ ಹೂಡಿದ್ದರು. ಯಾರಾದರೂ ಖಾಯಿಲೆ ಎಂದು ಬಂದರೆ ತಮ್ಮ ಶಕ್ತಿಯಿಂದ ಗುಣಪಡಿಸುತ್ತಿದ್ದರು. ಕೊನೆಗೇ ಅದೇ ಅರಳಿ ಮರದ ಜಾಗದಲ್ಲಿ ಆಶ್ರಮವೊಂದನ್ನು ಕಟ್ಟಿದರು.”

ಇವತ್ತು ಧ್ಯಾನ ಪೀಠಂ ಹೆಸರಿನ ಆಶ್ರಮ ಕೋಟ್ಯಾಂತರ ರೂಪಾಯಿ ಬಾಳುತ್ತದೆ. ಶಾಲೆಯೊಂದು ಇದೇ ಆಶ್ರಮದ ಒಳಗೆ ನಡೆಯುತ್ತಿದೆ. ನೂರಾರು ಅನುಯಾಯಿಗಳು ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಇಲ್ಲಿ ದಿನಚರಿ ಆರಂಭಿಸುತ್ತಾರೆ. ಇದೇ ರೀತಿ ದೇಶ- ವಿದೇಶಗಳಲ್ಲಿ ನಿತ್ಯಾನಂದ ಆಶ್ರಮಗಳಿವೆ. ಇವತ್ತಿಗೆ ನಿತ್ಯಾನಂದ ಆಶ್ರಮದ ಒಟ್ಟು ಮೌಲ್ಯ ಸಾವಿರಾರು ಕೋಟಿಯಲ್ಲಿದೆ. ಇಷ್ಟೆಲ್ಲಾ ಇದ್ದರೂ, 2010ರಲ್ಲಿ ಮಾಧ್ಯಮಗಳು ಕಟ್ಟಿದ ‘ಕಾಮಿ ಸ್ವಾಮಿ’ ಪಟ್ಟವನ್ನು ಕಳಚಿಕೊಳ್ಳುವ ಅನಿವಾರ್ಯತೆಯಲ್ಲಿ ನಿತ್ಯಾನಂದ ಇವತ್ತು ಬಂದು ನಿಂತ ಹಾಗಿದೆ.

ರಾಸಲೀಲೆ, ಬಂಧನ, ಬಿಡುಗಡೆ ತಂದೆ ಶವದ ಮೇಲಿನ ನೃತ್ಯದ ನಂತರ ನಿತ್ಯಾನಂದ ಈಗೊಂದಿಷ್ಟು ವರ್ಷಗಳಿಂದ ‘ನಾಪತ್ತೆ’ಯಾಗಿದ್ದರು. ಅತ್ಯಾಚಾರ ಆರೋಪ ಪ್ರಕರಣ, ಸಿಐಡಿ ತನಿಖೆ, ಹೊಸ ಆರೋಪಗಳು, ಹೊಸ ಕೇಸುಗಳು, ಕಾನೂನು ಹೋರಾಟಗಳಲ್ಲಿ ನಿತ್ಯಾನಂದ ಸುಮಾರು 8 ವರ್ಷ ಕಳೆಯಬೇಕಾಯಿತು. ಈ ಅವಧಿಯಲ್ಲಿ ಹೊರ ಪ್ರಪಂಚಕ್ಕೆ ನಿತ್ಯಾನಂದ ಕಣ್ಮರೆಯಾದರೂ, ಅವರ ಆಶ್ರಮದ ಸಾರ್ವಜನಿಕ ಸಂಪರ್ಕ ವಿಭಾಗ, ನಿತ್ಯಾನಂದ ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿದ್ದ ಕಾನೂನು ಹೋರಾಟಗಳ ಮಾಹಿತಿಯನ್ನು ಮಾಧ್ಯಮಗಳಿಗೆ ತಲುಪಿಸುತ್ತಲೇ ಇತ್ತು. ಬಹುತೇಕ ಪ್ರಕರಣಗಳಲ್ಲಿ ನಿತ್ಯಾನಂದ ಸ್ವಾಮಿಯೇ ಗೆದ್ದಿದ್ದರಿಂದ, ಅದಾಗಲೇ ‘ಕಾಮಿ ಸ್ವಾಮಿ’ ಎಂಬ ಪಟ್ಟ ಕಟ್ಟಿದ್ದ ಮಾಧ್ಯಮಗಳಲ್ಲಿ ಅದು ಸುದ್ದಿಯಾಗಲಿಲ್ಲ.

ಮಾದ್ಯಮಗಳ ‘ಕಾಮಿ ಸ್ವಾಮಿ’ ಪಟ್ಟ ಹಾಗೂ ನಿತ್ಯಾನಂದ ಪಿಆರ್‌. 
ಮಾದ್ಯಮಗಳ ‘ಕಾಮಿ ಸ್ವಾಮಿ’ ಪಟ್ಟ ಹಾಗೂ ನಿತ್ಯಾನಂದ ಪಿಆರ್‌. 

ನಿತ್ಯಾನಂದ ಯಾವತ್ತೂ ಸಾಂಪ್ರದಾಯಿಕ ಮಾಧ್ಯಮಗಳನ್ನು ನಂಬಿದ ಸ್ವಾಮಿಯಲ್ಲ. ತನ್ನ ರೀತಿಯಲ್ಲೇ ಕರ್ನಾಟಕದಲ್ಲಿ ಮಠ, ಆಶ್ರಮಗಳನ್ನು ಕಟ್ಟಿಕೊಂಡ, ತನ್ನ ರೀತಿಯಲ್ಲೇ ಅತ್ಯಾಚಾರ ಪ್ರಕರಣಗಳ ಆರೋಪ ಹೊತ್ತವರಿಗೆ ಇದೇ ಮಾಧ್ಯಮಗಳು ‘ಕಾಮಿ ಸ್ವಾಮಿ’ ಎಂದು ಕರೆಯದೆ, ತನಗೆ ಮಾತ್ರವೇ ಪಟ್ಟ ಕಟ್ಟಿದ್ದರ ಬಗೆಗೆ ಮೊದಲಿನಿಂದಲೂ ಅಸಮಾಧಾನ ಇದೆ. ಅದರ ಪರಿಣಾಮ, ಈಗ ಸಾಂಪ್ರದಾಯಿಕ ಮಾಧ್ಯಮಗಳನ್ನು ದಾಟಿ, ಸಾಮಾಜಿಕ ಜಾಲತಾಣಗಳಿಗೆ ನಿತ್ಯಾನಂದ ಎಂಟ್ರಿ ಕೊಟ್ಟ ಹಾಗಿದೆ.

ಕಳೆದ ಕೆಲವು ದಿನಗಳ ಅಂತರದಲ್ಲಿ ನಿತ್ಯಾನಂದ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುವ ವಿಡಿಯೋಗಳು ಅಪ್‌ಲೋಡ್‌ ಆಗುತ್ತಿವೆ. ಅವುಗಳು ಹೊಂದಿರುವ ವಿಲಕ್ಷಣ, ತರ್ಕರಹಿತ ಕಂಟೆಂಟ್ ಕಾರಣಕ್ಕೆ ಗಮನ ಸೆಳೆಯುತ್ತಿವೆ.

ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ!! ಬೆಂಗಳೂರು: ಮಾಡರ್ನ್ ಸ್ವಾಮೀಜಿ ಎಂದೇ ಹೆಸರಾದ ಬಿಡದಿಯ ಸ್ವಾಮಿ ನಿತ್ಯಾನಂದ, ಹೊಸ...

Posted by Vijaya Taranga on Thursday, September 20, 2018

“ಪರಮಹಂಸ ನಿತ್ಯಾನಂದ ಕೇವಲ ಸ್ವಾಮಿ ಮಾತ್ರ ಅಲ್ಲ. ಅವರೊಬ್ಬರು ಅವತಾರ ಪುರುಷರು. ದಿವ್ಯ ಶಕ್ತಿಗಳು ಅವರ ಬಳಿ ಇವೆ. ನಮ್ಮ ಜತೆ ಮಾತನಾಡದೆ ನಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಮೌನವಾಗಿಯೇ ಅವರು ನಮ್ಮ ಜತೆ ಸಂಭಾಷಣೆ ನಡೆಸುತ್ತಾರೆ. ಹೀಗಾಗಿ ಅವರ ಮಾತುಗಳನ್ನು ಜನರಿಗೆ ತಲುಪಿಸಲು ವ್ಯವಸ್ಥೆ ಮಾಡಿದ್ದೇವೆ. ಈಗ ಯಾರೋ ಅವುಗಳನ್ನು ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಿದ್ದಾರೆ,’’ ಎನ್ನುತ್ತಾರೆ ನಿತ್ಯಾನಂದ ಆಶ್ರಮದಲ್ಲಿ ಮಾಧ್ಯಮಗಳ ಹೊಣೆಗಾರಿಕೆ ವಹಿಸಿಕೊಂಡಿರುವ ಅನುಯಾಯಿಯೊಬ್ಬರು.

2010ಕ್ಕೆ ಹೋಲಿಸಿದರೆ ನಿತ್ಯಾನಂದ ಸುತ್ತ ಕೋರಂ ಬದಲಾದ ಸೂಚನೆಯನ್ನು ಈ ವಿಡಿಯೋಗಳು ನೀಡುತ್ತಿವೆ. ಪ್ರತಿ ಮಾತಿನ ಹಿನ್ನೆಲೆಯಲ್ಲಿ ತಾಳ ಮೇಳಗಳು ಕೇಳಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಪ್ರಾಣಿಗಳು ಇಂಗ್ಲಿಷ್, ತಮಿಳು ಭಾಷೆಯಲ್ಲಿ ಮಾತನಾಡಲು ಸಾಫ್ಟ್‌ವೇರ್ ಕಂಡುಹಿಡಿದ್ದೇನೆ, ವಿಜ್ಞಾನದ ಫಾರ್ಮುಲಾಗಳು ತಪ್ಪು, ಡೆಂಗ್ಯು ಜ್ವರ ಬರದಂತೆ ತಡೆಯಲು ಬೇವಿನಸೊಪ್ಪು ಬಳಸಬೇಕು ಎಂಬಂತಹ ಅಸಂಬದ್ಧ ವಿಚಾರಗಳು ನಿತ್ಯಾನಂದ ಮಾತುಗಳು ಇಲ್ಲಿ ಸಿಗುತ್ತಿವೆ.

ಅಂತಿಮವಾಗಿ ನಿತ್ಯಾನಂದ ಸ್ವಾಮಿ ಏನನ್ನು ಹೇಳುತ್ತಾರೆ, ಏನನ್ನು ಸಾಧಿಸಿ ತೋರಿಸುತ್ತಾರೆ ಎಂಬುದಕ್ಕಿಂತ ಕಳೆದು ಹೋಗಿರುವ ಸಾಮಾಜಿಕ ವೇದಿಕೆಯನ್ನು ಕಟ್ಟುವ ಹೊಸ ಪ್ರಯತ್ನವೊಂದು ಈ ವಿಡಿಯೋಗಳ ಮೂಲಕ ಆರಂಭವಾದಂತಿದೆ. ಯಾವ ಸಾಧನವೂ ಇಲ್ಲದೆ, ಜನರ ಮನಸ್ಸನ್ನು ತಲುಪಲು ಸಾಧ್ಯ ಎಂದು ಹೇಳಿಕೊಳ್ಳುವ ಸ್ವಾಮಿ, ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಲುಪುವ ಹೊಸ ಪ್ರಯತ್ನದ ಮುನ್ಸೂಚನೆ ಇದು.