samachara
www.samachara.com
‘ರಫೇಲ್‌ ಡೀಲ್‌ & ಪತ್ನಿಯ ಸಿನಿಮಾ’: ಫ್ರಾನ್ಸ್‌ ಮಾಧ್ಯಮಗಳಿಗೆ ಹೊಲಾಂಡ್‌ ಹೇಳಿದ್ದೇನು?
COVER STORY

‘ರಫೇಲ್‌ ಡೀಲ್‌ & ಪತ್ನಿಯ ಸಿನಿಮಾ’: ಫ್ರಾನ್ಸ್‌ ಮಾಧ್ಯಮಗಳಿಗೆ ಹೊಲಾಂಡ್‌ ಹೇಳಿದ್ದೇನು?

ಜೂಲಿ ಗಯಟ್‌ ಫ್ರೆಂಚ್‌ ಸಿನಿಮಾ ನಟಿ; ಫ್ರಾಂಕೋಯಿಸ್‌ ಹೊಲಾಂಡ್‌ ಪತ್ನಿ. ಭಾರತ ಮತ್ತು ಫ್ರಾನ್ಸ್‌ ನಡುವೆ ರಫೇಲ್‌ ಯುದ್ಧ ವಿಮಾನ ಖರೀದಿಯ ಒಪ್ಪಂದ ನಡೆಯುವುದಕ್ಕೂ ಕೆಲವು ಸಮಯ ಮೊದಲು ಈಕೆಯ ಸಿನಿಮಾಕ್ಕೆ ಅನಿಲ್‌ ಅಂಬಾನಿ ಹಣ ಹೂಡಿದ್ದರು.

Team Samachara

ಫ್ರಾನ್ಸ್‌ನಿಂದ ಭಾರತ ಖರೀದಿಸಲು ಹೊರಟಿರುವ 36 ಡಸಾಲ್ಟ್‌ ರಫೇಲ್‌ ಯುದ್ಧ ವಿಮಾನ ದೇಶದಲ್ಲಿ ವಿವಾದದ ಸ್ವರೂಪ ಪಡೆದು ಹಲವು ಸಮಯ ಕಳೆದಿವೆ.

ಇದೀಗ ಈ ವಿವಾದದ ಸುತ್ತ ಭಾರತ ಮತ್ತು ಫ್ರಾನ್ಸ್‌ ಎರಡೂ ದೇಶದಲ್ಲಿ ಒಂದೊಂದೇ ಬೆಳವಣಿಗೆಗಳು ಆರಂಭವಾಗಿವೆ. ಹೀಗೆ ವಿವಾದ ಹಸಿಯಾಗಿರುವಾಗಲೇ ತಮ್ಮ ಕಾಲದಲ್ಲಿ ನಡೆದ ಡೀಲ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡ್. ಅವರು ನೀಡಿರುವ ಹೇಳಿಕೆಗಳು ಈಗ ಎರಡೂ ದೇಶಗಳಲ್ಲಿ ಬಿರುಗಾಳಿ ಎಬ್ಬಿಸಿವೆ. ಅಷ್ಟಕ್ಕೂ ಹೊಲಾಂಡ್‌ ಹೇಳಿಕೆ ನೀಡಲು ಕಾರಣವಾಗಿದ್ದು ಅವರ ಪತ್ನಿ, ನಟಿ ಜೂಲಿ ಗಯಟ್.

ಜೂಲಿ ಗಯಟ್‌ ಫ್ರೆಂಚ್‌ ಸಿನಿಮಾ ನಟಿ. ಫ್ರಾಂಕೋಯಿಸ್‌ ಹೊಲಾಂಡ್‌ ಪತ್ನಿ. ಭಾರತ ಮತ್ತು ಫ್ರಾನ್ಸ್‌ ನಡುವೆ ರಫೇಲ್‌ ಯುದ್ಧ ವಿಮಾನ ಖರೀದಿಯ ಒಪ್ಪಂದ ನಡೆಯುವುದಕ್ಕೂ ಕೆಲವು ಸಮಯ ಮೊದಲು ಗಯಟ್‌ ಸಿನಿಮಾಕ್ಕೆ ಅನಿಲ್‌ ಅಂಬಾನಿ ಹಣ ಹೂಡಿದ್ದರು. ಇದಾದ ಬಳಿಕ ಭಾರತ ಫ್ರಾನ್ಸ್‌ ನಡುವೆ ಡೀಲ್‌ ಕುದುರಿತ್ತು. ಈ ಡೀಲ್‌ನ್ನು ಅನಿಲ್‌ ಅಂಬಾನಿ ಜೇಬಿಗಿಳಿಸಿಕೊಂಡಿದ್ದರು. ಹೀಗಾಗಿ ಸಿನಿಮಾಗೆ ಹೂಡಿದ ಹಣ, ‘ಹೊಲಾಂಡ್‌ಗೆ ನೀಡಿದ ಕಪ್ಪ’ ಎನ್ನುವ ಚರ್ಚೆ ಭಾರತ ಮತ್ತು ಫ್ರಾನ್ಸ್‌ನಲ್ಲಿ ಆರಂಭವಾಗಿತ್ತು. ಇದೀಗ ಈ ಆರೋಪ ಸುಳ್ಳು ಎಂದಿದ್ದಾರೆ ಫ್ರಾಂಕೋಯಿಸ್‌ ಹೊಲಾಂಡ್‌. ಮತ್ತು ಅದರ ಕಥೆಯೇ ಈ ವರದಿ.

ಟಾಟ್ ಲಾ ಹಟ್:

2016ನ ಜ್ಯೂಲಿ ಗಯಟ್‌ ಅವರ ಸಿನಿಮಾ ನಿರ್ಮಾಣವಾಗುತ್ತಿತ್ತು. ‘ಟಾಟ್‌ ಲಾ ಹಟ್’ ಎಂಬ ಹೆಸರಿನ ಫ್ರೆಂಚ್‌ ಸಿನಿಮಾವದು. ಕೇವ್‌ ಆಡಮ್ಸ್‌ ನಟನೆಯ ಈ ಸಿನಿಮಾ ಎವರೆಸ್ಟ್‌ ಪರ್ವತದಲ್ಲಿ ಸಾವನ್ನಪ್ಪಿದ ಮಾರ್ಕೊ ಸಿಫ್ರೆದಿ ಎಂಬುವವರ ಬದುಕಿನ ನೈಜ ಕತೆಯನ್ನು ಒಳಗೊಂಡಿತ್ತು. 10 ಮಿಲಿಯನ್‌ ಯೂರೋ ವೆಚ್ಚದ ಈ ಸಿನಿಮಾದಲ್ಲಿ ಅನಿಲ್‌ ಅಂಬಾನಿ ಪಾಲು 1.6 ಮಿಲಿಯನ್‌ ಯೂರೋ. ಈ ಸಿನಿಮಾಗೆ ಅನಿಲ್‌ ಅಂಬಾನಿ ಹಣವೇ ಜೀವಸೆಲೆಯಾಗಿತ್ತು. ಈ ಹೂಡಿಕೆ ಬೆನ್ನಿಗೆ ನಡೆದಿದ್ದು ಭಾರತ ಮತ್ತು ಫ್ರಾನ್ಸ್‌ ರಫೇಲ್‌ ಡೀಲ್‌.

ಈ ಡೀಲ್‌ ಮುಂದೆ ಭಾರತದಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿತು. ಪ್ರಮುಖವಾಗಿ ರಿಲಯನ್ಸ್‌ ಗ್ರೂಪ್‌ ಮೇಲೆ ಗಂಭೀರ ಆರೋಪ ಕೇಳಿ ಬಂತು. ವಿಮಾನಯಾನ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಸಂಪಾದಿಸಿದ್ದ ಸರಕಾರಿ ಸ್ವಾಮ್ಯದ ಎಚ್ಎಎಲ್‌ ಕೈನಿಂದ ಡೀಲ್‌ನ್ನು ಕಿತ್ತು ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಯಾವೊಂದು ಅನುಭವವೂ ಇಲ್ಲದ ರಿಲಯನ್ಸ್‌ ಸಂಸ್ಥೆಗೆ ನೀಡಿದ್ದು ಸಹಜವಾಗಿಯೇ ಅನುಮಾನವನ್ನು ಹುಟ್ಟು ಹಾಕಿತ್ತು.

ಈ ಸಂಬಂಧ ಪ್ರತಿಭಟನೆ, ಸರಣಿ ಪತ್ರಿಕಾಗೋಷ್ಠಿಗಳು, ಆರೋಪ-ಪ್ರತ್ಯಾರೋಪಗಳೆಲ್ಲಾ ನಡೆದು ಸದ್ಯ ಕಾಂಗ್ರೆಸ್ ನಾಯಕರು ಗುರುವಾರ ಸಿಎಜಿಗೆ ದೂರು ನೀಡುವಲ್ಲಿವರೆಗೆ ಬಂದು ಮುಟ್ಟಿದೆ ರಫೇಲ್‌ ವಿವಾದ. ದೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಾರತಮ್ಯ ಮೆರೆದಿದ್ದಾರೆ, ಈ ಮೂಲಕ ರಿಲಯನ್ಸ್‌ ಸಂಸ್ಥೆಗೆ ಲಾಭ ದಕ್ಕುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಫೆಬ್ರವರಿ 2017ರಲ್ಲಿ ನಡೆದ ಅನಿಲ್‌ ಅಂಬಾನಿ ಮತ್ತು ಫ್ರಾಂಕೋಯಿಸ್‌ ಹೊಲಾಂಡ್‌ ಭೇಟಿ
ಫೆಬ್ರವರಿ 2017ರಲ್ಲಿ ನಡೆದ ಅನಿಲ್‌ ಅಂಬಾನಿ ಮತ್ತು ಫ್ರಾಂಕೋಯಿಸ್‌ ಹೊಲಾಂಡ್‌ ಭೇಟಿ
/ರಿಲಯನ್ಸ್‌

ಈ ಡೀಲ್‌ನ ನಡೆದ ಸಂದರ್ಭದಲ್ಲೇ ಗಯಟ್‌ ಸಿನಿಮಾಗೆ ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್‌ ಹಣ ಹೂಡಿದ್ದರಿಂದ ಇದು ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಆಗಸ್ಟ್‌ 31ರಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾದ ನಿರ್ದೇಶಕ ಸರ್ಗ್ ಹಜನವಿಷಿಯಸ್‌, “ನಾನು ಹಣ ಪಡೆದೆ, ಇತರರು ರಫೇಲ್‌ ಮಾರಿದರು ಎಂಬುದು ಹಾಸ್ಯಾಸ್ಪದ” ಎಂದಿದ್ದರು. ಸಿನಿಮಾದ ಕೊನೆಯ ಹಂತದಲ್ಲಿ ಭಾರತೀಯರು ಬಂದು ಹಣ ಹೂಡಿದರು ಎಂಬುದಾಗಿ ಅವರು ವಿವರಿಸಿದ್ದಾರೆ.

ಹಾಗೆ ನೋಡಿದರೆ ಜನವರಿ 24, 2016ರಂದು ಫ್ರೆಂಚ್‌ ಸಿನಿಮಾದಲ್ಲಿ ಹೂಡಿಕೆ ಮಾಡುವುದನ್ನು ಅನಿಲ್‌ ಅಂಬಾನಿ ಘೋಷಿಸಿದಾಗ ಯಾರಿಗೂ ಇದರಲ್ಲಿ ವಿಶೇಷವೇನೂ ಕಂಡಿರಲಿಲ್ಲ. ಆದರೆ ಇದರಲ್ಲಿ ಪಾತ್ರಧಾರಿಯಾಗಿ ಹೊಲಾಂಡ್‌ ಪತ್ನಿ ಗಯಟ್‌ ಇದ್ದಿದ್ದು ಮುಂದೆ ವಿವಾದಕ್ಕೆ ಕಾರಣವಾಯಿತು.

ಈ ಸಂಬಂಧ ಫ್ರಾನ್ಸ್‌ ವೆಬ್‌ಸೈಟ್‌ ‘ಮೀಡಿಯಾಪಾರ್ಟ್‌’ ಜತೆ ಮಾತನಾಡಿದ ಹೊಲಾಂಡ್‌, ‘ಅಂಬಾನಿ ಗ್ರೂಪ್‌ ಜತೆ ಸಿನಿಮಾ ನಿರ್ಮಾಣ ಸಂಬಂಧ ಡೀಲ್ ನಡೆದಿರುವುದು ತಮಗೆ ತಿಳಿದೇ ಇರಲಿಲ್ಲ’ ಎಂದಿದ್ದಾರೆ. ಜತೆಗೆ ತಮಗೆ ರಿಲಯನ್ಸ್‌ ಗ್ರೂಪ್‌ ಬಗ್ಗೆ ಏನೂ ಗೊತ್ತೇ ಇಲ್ಲ ಎಂದು ಅವರು ವಿವರಿಸಿದ್ದಾರೆ. ಸಿನಿಮಾಗೆ ರಿಲಯನ್ಸ್‌ ಹಣ ಹೂಡಿದ ಮರುದಿನ ಹೊಲಾಂಡ್‌ ಭಾರತಕ್ಕೆ ಬಂದಿದ್ದರು. ಜನವರಿ 25, 2016ರಂದು ನಡೆದ ಸಭೆಯ ನಂತರ ‘ಯುದ್ಧ ವಿಮಾನಗಳ ಖರೀದಿಗೆ ಎರಡೂ ದೇಶಗಳ ನಡುವೆ ಒಪ್ಪಂದಕ್ಕೆ ಬರಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ನಾನು ಈ ಚರ್ಚೆಯ ಬಗ್ಗೆ ತುಂಬಾ ಉತ್ಸುಕನಾಗಿದ್ದೆ ಈ ಕಾರಣಕ್ಕೆ ಈ ವಿಚಾರದಲ್ಲಿ ನಾನು ಇಬ್ಬರು ಪ್ರಧಾನಿ (ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ನರೇಂದ್ರ ಮೋದಿ) ಗಳ ಜತೆ ಮಾತುಕತೆಗೆ ಮುಂದಾದೆ ಎನ್ನುತ್ತಾರೆ ಹೊಲಾಂಡ್‌. “ಆರಂಭದಲ್ಲಿ 126 ಯುದ್ಧ ವಿಮಾನ ಖರೀದಿಯ ಡೀಲ್‌ ಇದಾಗಿತ್ತು. ಆದರೆ ಮುಂದೆ ಸರಕಾರ ತನ್ನ ನಿರ್ಧಾರ ಬದಲಿಸಿತು. ಇದು ನಮಗೆ ಹೆಚ್ಚೇನು ಆಕರ್ಷಣೀಯವಾಗಿರಲಿಲ್ಲ. ಕಾರಣ ಇದು ಕೇವಲ 36 ಯುದ್ಧ ವಿಮಾನಗಳ ಡೀಲ್‌ ಆಗಿತ್ತು. ಆದರೆ ನಿರ್ಮಾಣಕ್ಕೆ ಫ್ರಾನ್ಸ್‌ನ್ನು ಆಯ್ದುಕೊಂಡಿದ್ದರಿಂದ ಒಂದು ಕಡೆಯಲ್ಲಿ ನಾವು ಪಡೆದುಕೊಂಡಿದ್ದೆವು. ಇನ್ನೊಂದು ಕಡೆಯಲ್ಲಿ ಕಳೆದುಕೊಂಡಿದ್ದೆವು ಅಷ್ಟೇ,” ಎಂದು ವಿವರಿಸುತ್ತಾರೆ ಹೊಲಾಂಡ್.

ರಿಲಯನ್ಸ್‌ ಗ್ರೂಪ್‌ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಇದರಲ್ಲಿ ಹೇಳುವಂತಹದ್ದು ಏನೂ ಇಲ್ಲ’ ಎಂದಿದ್ದಾರೆ. “ಕಂಪನಿಯ ಹೆಸರನ್ನು ಭಾರತ ಸರಕಾರವೇ ಪ್ರಸ್ತಾಪಿಸಿತ್ತು ಮತ್ತು ಡಸಾಲ್ಟ್‌ ಅಂಬಾನಿ ಜೊತೆ ಚರ್ಚೆಗೆ ಮುಂದಾಗಿತ್ತು. ನಮಗೆ ಆಯ್ಕೆ ಇರಲಿಲ್ಲ, ನಮಗೆ ನೀಡಿದ ಸಂಸ್ಥೆಯನ್ನು ನಾವು ಪಡೆದುಕೊಂಡೆವು,” ಎಂದು ಡೀಲ್‌ನ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾರೆ.

“ಹೀಗಾಗಿ ಈ ಗ್ರೂಪ್‌ ನನಗೆ ಯಾವುದೇ ಲಾಭವನ್ನು ವರ್ಗಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜೂಲಿ ಗಯಟ್‌ ಸಿನಿಮಾಕ್ಕೂ ಇದಕ್ಕೂ ಸಂಬಂಧ ಇದೆ ಎಂದು ನಾನು ಕಲ್ಪನೆಯನ್ನೂ ಮಾಡಿಕೊಂಡಿಲ್ಲ,"”ಎಂದು ಸ್ಪಷ್ಟಪಡಿಸಿದ್ದಾರೆ ಹೊಲಾಂಡ್‌.

ಆದರೆ ಈ ಪ್ರತಿಕ್ರಿಯೆ ಭಾರತ ಸರಕಾರ ಮತ್ತು ರಿಲಯನ್ಸ್‌ನ ಹೇಳಿಕೆಗೆ ತದ್ವಿರುದ್ಧವಾಗಿದೆ. ‘ಭಾರತದ ಜತೆಗಾರನನ್ನು ಆಯ್ಕೆ ಮಾಡಿದ್ದು ಡಸಾಲ್ಟ್‌’ ಎಂದು ಸರಕಾರ ಹೇಳಿದರೆ, ರಿಲಯನ್ಸ್ ಗ್ರೂಪ್‌ ಕೂಡ ‘ಡಸಾಲ್ಟ್‌ ತನ್ನ ಜತೆಗಾರ ಕಂಪನಿಯನ್ನು ಆಯ್ಕೆ ಮಾಡುವಲ್ಲಿ ರಕ್ಷಣಾ ಇಲಾಖೆ ಯಾವುದೇ ಪಾತ್ರ ನಿರ್ವಹಿಸಿಲ್ಲ’ ಎಂದು ಹೇಳಿತ್ತು. ಇದೀಗ ಹೊಲಾಂಡ್‌ ಈ ಎರಡೂ ಹೇಳಿಕೆಗಳನ್ನು ತಳ್ಳಿ ಹಾಕಿದ್ದಾರೆ.

ಜತೆಗೆ ಗಯಟ್‌ ಸಿನಿಮಾಕ್ಕೆ ಹಣ ಹೂಡಿಕೆ ಮಾಡುವ ಸಂಬಂಧ ರಿಲಯನ್ಸ್‌ ಗ್ರೂಪ್‌ ಕೇವ್ ಆಡಮ್ಸ್‌ ಜತೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬಂದಿತ್ತು ಎಂದು ಹೊಲಾಂಡ್‌ ಹೇಳಿದ್ದಾರೆ. “ನನ್ನ ಕುಟುಂಬ ‘ವಿಸ್‌ವಿರಸ್‌ ಕ್ಯಾಪಿಟಲ್‌’ ಮೂಲಕ ಸಿನಿಮಾದಲ್ಲಿ ಹೂಡಿಕೆ ಮಾಡುವಂತೆ ರಿಲಯನ್ಸ್‌ನ್ನು ಕೇಳಿಕೊಂಡಿತ್ತು. ಈ ಮನವಿ ಮೇರೆಗೆ ಹೂಡಿಕೆ ಮಾಡಲಾಗಿದೆ,” ಎನ್ನುತ್ತಾರೆ ಗಯಟ್‌.

ಇದೇ ವೇಳೆ ನಮ್ಮ ಸಂಸ್ಥೆಯಲ್ಲಿ ರಿಲಯನ್ಸ್ ಹೂಡಿಕೆ ಮಾಡುವುದು ಇದೇ ಮೊದಲೇನೂ ಅಲ್ಲ ಎನ್ನುತ್ತಾರೆ ‘ವಿಸ್‌ವಿರಸ್‌ ಕ್ಯಾಪಿಟಲ್‌’ ಸ್ಥಾಪಕ ರವಿ ವಿಶ್ವನಾಥನ್. ತಾನು ಅನಿಲ್‌ ಅಂಬಾನಿಯನ್ನು 25 ವರ್ಷಗಳಿಂದ ಬಲ್ಲೆ ಎನ್ನುತ್ತಾರೆ ಅವರು. ಜತೆಗೆ ವರ್ಷಕ್ಕೆ 10 ರಂತೆ ಫ್ರೆಂಚ್‌ ಸಿನಿಮಾಗಳ ನಿರ್ಮಾಣ ಮತ್ತು ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ವಿವರಿಸುತ್ತಾರೆ ಅವರು. ಕೇವ್‌ ಆಡಮ್ಸ್‌ ಜತೆಗೂ ಈ ಹಿಂದೆ ಕೆಲಸ ಮಾಡಿದ್ದೇವೆ. ಈ ಕಾರಣಕ್ಕೆ ಹೂಡಿಕೆಗೆ ಮುಂದಾದೆವು ಎಂಬುದು ಅವರ ವಾದ.

ಇದಲ್ಲದೆ ತಾವು ಗಯಟ್‌ ಅವರಿಗಾಗಲಿ, ಡಸಾಲ್ಟ್‌ ಕಂಪನಿಗಾಗಲೀ ಅನಿಲ್‌ ಅಂಬಾನಿಯನ್ನು ಪರಿಚಯಿಸಿಲ್ಲ ಎನ್ನುತ್ತಾರೆ ರವಿ ವಿಶ್ವನಾಥನ್‌. ಮತ್ತು ಅಂಬಾನಿಗೆ ಆ ಅಗತ್ಯವಿಲ್ಲ ಎಂದು ವಿವರಿಸುತ್ತಾರೆ ಅವರು. ಆದರೆ ಇದಕ್ಕೂ ಮೊದಲು ಫ್ರೆಂಚ್‌ನ ವೆಬ್‌ಸೈಟ್‌ ಒಂದು, ‘ಅಂಬಾನಿ ಫ್ರಾನ್ಸ್‌ನಲ್ಲಿ ಇಳಿದಾಗ ಅವರ ತಂಡದ ಜತೆ ವಿಶ್ವನಾಥನ್‌ ಉಪಸ್ಥಿತರಿದ್ದರು ಮತ್ತು ರಿಲಯನ್ಸ್‌ ಜ್ಯೂಲಿ ಗಯಟ್‌ ಸಿನಿಮಾಕ್ಕೆ ಸಹಾಯ ಮಾಡಲಿದೆ,’ ಎಂದು ಬರೆದಿತ್ತು.

ಹೀಗೆ ಹಲವು ಬೆಳವಣಿಗೆಗಳ ಬಳಿಕ ರಿಲಯನ್ಸ್‌ ಡಸಾಲ್ಟ್‌ ಕಂಪನಿಯ ಜತೆಗಾರನಾಗಿ ಗುರುತಿಸಿಕೊಂಡಿತ್ತು. ರಿಲಯನ್ಸ್‌ ಸಂಸ್ಥೆಯನ್ನು ರಫೇಲ್‌ ಯುದ್ಧ ವಿಮಾನಗಳ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಬೆನ್ನಿಗೆ ಭಾರತ ಮಾತ್ರವಲ್ಲದೆ ಫ್ರಾನ್ಸ್‌ನಲ್ಲೂ ವಿರೋಧಗಳು ವ್ಯಕ್ತವಾಗಿವೆ. “ರಕ್ಷಣಾ ಕ್ಷೇತ್ರದಲ್ಲಿ ಯಾವತ್ತೂ ತೊಡಗಿಸಿಕೊಳ್ಳದ, ಒಂದೂ ವಿಮಾನ ನಿರ್ಮಾಣ ಮಾಡದ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಡಸಾಲ್ಟ್‌ ದೊಡ್ಡ ಔದ್ಯಮಿಕ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ,” ಎನ್ನುತ್ತಾರೆ ಫ್ರಾನ್ಸ್‌ನ ಖ್ಯಾತ ರಕ್ಷಣಾ ವಿಷಯಗಳ ವಿಶ್ಲೇಷಕರು.

ಹೀಗೆ ಡಸಾಲ್ಟ್‌ ರಿಲಯನ್ಸ್‌ ಒಪ್ಪಂದಕ್ಕೆ ದೊಡ್ಡ ಮಟ್ಟದ ಪ್ರತಿರೋಧ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವಂತೆಯೇ ಇದರಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಜಾರಿಕೊಂಡಿದ್ದಾರೆ ಫ್ರಾನ್ಸ್‌ ಮಾಜಿ ಅಧ್ಯಕ್ಷ ಹೊಲಾಂಡ್‌. ಹಾಗೂ ಅವರು ವಿವಾದ ಚಂಡನ್ನು ಭಾರತದ ಸರ್ಕಾರದ ಅಂಗಳಕ್ಕೆ ದಾಟಿಸಿದ್ದಾರೆ. ಇದು ಆರೋಪಕ್ಕೆ ಗುರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಗಾಯಕ್ಕೆ ಉಪ್ಪು ಸುರಿದಂತಾಗಿದೆ.

ಮಾಹಿತಿ ಕೃಪೆ: ಮೀಡಿಯಾಪಾರ್ಟ್‌ (ಫ್ರೆಂಚ್‌); ದಿ ವೈರ್‌ (ಇಂಗ್ಲಿಷ್).