ಸೋಲಿಗರ ಅನ್ನಕ್ಕೆ ಕನ್ನ: ಕೊಳ್ಳೇಗಾಲದಲ್ಲಿ ಆರು ತಿಂಗಳಿಂದ ಕೊಟ್ಟಿಲ್ಲ ಅಕ್ಕಿ, ಬೇಳೆ
COVER STORY

ಸೋಲಿಗರ ಅನ್ನಕ್ಕೆ ಕನ್ನ: ಕೊಳ್ಳೇಗಾಲದಲ್ಲಿ ಆರು ತಿಂಗಳಿಂದ ಕೊಟ್ಟಿಲ್ಲ ಅಕ್ಕಿ, ಬೇಳೆ

ಆದಿವಾಸಿಗಳಾದ ಸೋಲಿಗರು ಹಾಗೂ ಹಿಂದುಳಿದ ಸಮುದಾಯದ ಉಪ್ಪಲಿಗರು ಹೆಚ್ಚಾಗಿರುವ ಕೊಳ್ಳೇಗಾಲದ ಲೊಕ್ಕನಹಳ್ಳಿ ಹಾಗೂ ಪಾಳ್ಯ ಹೋಬಳಿಗಳಲ್ಲಿ ಕಳೆದ 6 ತಿಂಗಳಿಂದ ಪಡಿತರ ವಿತರಣೆಯಾಗಿಲ್ಲ.

ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಜನ ಸಾಮಾನ್ಯರಲ್ಲಿ ಹೊಸತನದ ನಿರೀಕ್ಷೆಗಳು ಹುಟ್ಟುವುದು ಸಹಜ. ಆದರೆ, ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಈ ನಾಲ್ಕು ತಿಂಗಳಲ್ಲಿ ಅನೇಕರ ನಿರೀಕ್ಷೆಗಳು ಹುಸಿಯಾಗಿವೆ. ನಿರೀಕ್ಷೆಗಳು ಹುಸಿಯಾದರೆ ಸಹಿಸಿಕೊಳ್ಳಬಹುದು, ಆದರೆ ಹೊಸ ಸರಕಾರ ಬಂದ ಮೇಲೆ ತಿನ್ನುವ ಅನ್ನಕ್ಕೇ ಸಂಚಕಾರ ಬಂದರೆ ಬಡಜನರು ಅದನ್ನು ಸಹಿಸಿಕೊಳ್ಳುವುದು ಹೇಗೆ?

ಇಂಥದ್ದೊಂದು ಪರಿಸ್ಥಿತಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಗಡಿ ಹಾಗೂ ಗುಡ್ಡ ಪ್ರದೇಶದ ಪೋಡುಗಳು ಮತ್ತು ಸಣ್ಣ ಹಳ್ಳಿಗಳಲ್ಲಿ ಈಗ ಸೃಷ್ಟಿಯಾಗಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ಎರಡು ತಿಂಗಳು ಮುಂಚೆ ಹಾಗೂ ಹೊಸ ಸರಕಾರ ಬಂದ ನಾಲ್ಕು ತಿಂಗಳ ನಂತರ ಈ ಭಾಗದ ಜನರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಪರಿತರ ವಿತರಣೆ ನಿಂತಿದೆ. ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ, ಪಾಳ್ಯ ಹೋಬಳಿಗಳು ಸೇರಿದಂತೆ ಸೋಲಿಗರು ಹಾಗೂ ಉಪ್ಪಾರ ಜನಾಂಗದ ಬಡಜನರು ಹೆಚ್ಚಾಗಿರುವ ಭಾಗಗಳಲ್ಲಿ ಕಳೆದ ಆರು ತಿಂಗಳಿಂದ ಪಡಿತರ ವಿತರಣೆಯಾಗಿಲ್ಲ.

ಈ ಭಾಗದ ಬಹುತೇಕ ಹಳ್ಳಿಗಳಲ್ಲಿ ಮಾರ್ಚ್‌ ತಿಂಗಳಲ್ಲಿ ಕೊನೆಯ ಬಾರಿಗೆ ಪಡಿತರ ವಿತರಣೆ ಮಾಡಲಾಗಿದೆ. ಏಪ್ರಿಲ್‌ನಿಂದ ಪರಿತರ ವಿತರಣೆಯಾಗಿಲ್ಲ. ಜನ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಳಿದರೆ ಕೊಳ್ಳೇಗಾಲ ತಾಲ್ಲೂಕು ಎಪಿಎಂಸಿಯಿಂದಲೇ ಪಡಿತರ ಬಂದಿಲ್ಲ ಎಂಬ ಉತ್ತರ ಬರುತ್ತಿದೆ. ಈ ಭಾಗದ ಜನರು ಈ ಬಗ್ಗೆ ತಹಶೀಲ್ದಾರ್‌ ಅವರಿಗೂ ದೂರು ನೀಡಿದ್ದಾರೆ. ತಾಲ್ಲೂಕು ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ, ದಪ್ಪ ಚರ್ಮದ ಅಧಿಕಾರಿಗಳಿಗೆ ಸೋಲಿಗರ, ಉಪ್ಪಲಿಗರ ಬವಣೆ ಇನ್ನೂ ಅರಿವಿಗೆ ಬಂದಿಲ್ಲ.

“ಆಗಸ್ಟ್‌ ತಿಂಗಳಲ್ಲಿ ಪ್ರತಿಭಟನೆ ಮಾಡಿದಾಗ ಆ ತಿಂಗಳು ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕಳಿಸಿಕೊಟ್ಟರು. ಪ್ರತಿಭಟನೆ ನಡೆಸಿದ ಗ್ರಾಮಗಳ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಮಾತ್ರ ಪಡಿತರ ಪೂರೈಕೆಯಾಗಿದೆ. ಉಳಿದ ಕಡೆಗಳಲ್ಲಿ ಇನ್ನೂ ಅಕ್ಕಿ, ಬೇಳೆ ಬಂದಿಲ್ಲ. ಆರು ತಿಂಗಳಿಂದ ಪರಿಸ್ಥಿತಿ ಹೀಗೇ ಇದೆ. ಅಕ್ಕಿ, ಬೇಳೆ ಸಿಗದೆ ಜೀವನ ನಡೆಸುವುದೇ ಕಷ್ಟವಾಗುತ್ತಿದೆ” ಎನ್ನುತ್ತಾರೆ ಲೊಕ್ಕನಹಳ್ಳಿ ಭಾಗದ ಸೋಲಿಗರೊಬ್ಬರು.

ಮಾರ್ಚ್‌ ತಿಂಗಳು ಪಡಿತರ ವಿತರಣೆ ಮಾಡಿರುವುದೇ ಕೊನೆ, ಏಪ್ರಿಲ್‌ ತಿಂಗಳಿಂದ ಪಡಿತರ ವಿತರಣೆಯಾಗಿಲ್ಲ
ಮಾರ್ಚ್‌ ತಿಂಗಳು ಪಡಿತರ ವಿತರಣೆ ಮಾಡಿರುವುದೇ ಕೊನೆ, ಏಪ್ರಿಲ್‌ ತಿಂಗಳಿಂದ ಪಡಿತರ ವಿತರಣೆಯಾಗಿಲ್ಲ
/ಸಮಾಚಾರ

“ಮೊದಲೆಲ್ಲಾ ಕಾಡಿನಲ್ಲಿ ಒಂದಿಷ್ಟು ಜಾಗದಲ್ಲಿ ಬೇಸಾಯ ಮಾಡಿಕೊಂಡು ಅನ್ನಕ್ಕೆ ದಾರಿ ಮಾಡಿಕೊಳ್ಳುತ್ತಿದ್ದೆವು. ಸರಕಾರ ಅಕ್ಕಿ ಕೊಡುವುದು ಶುರುವಾದ ಮೇಲೆ ಕಾಡಿನೊಳಗೆ ಬೇಸಾಯ ಮಾಡುವುದಕ್ಕೆ ಅರಣ್ಯಾಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಕಾಡಿನಿಂದ ಜೇನು, ನೆಲ್ಲಿ, ಮರಅಣಬೆ, ಚಕ್ಕೆ ಮುಂತಾದ ಕಿರು ಉತ್ಪನ್ನಗಳ ಸಂಗ್ರಹದಿಂದ ಬರುತ್ತಿದ್ದ ಆದಾಯವೂ ನಿಂತಿದೆ. ಹೀಗಾಗಿ ಕೈಯಲ್ಲಿ ದುಡ್ಡಿಲ್ಲದೆ, ತಿನ್ನಲು ಅನ್ನವಿಲ್ಲದೆ ಹೊಟ್ಟೆಪಾಡಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ” ಎಂಬುದು ಅವರ ಅಳಲು.

ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದ ನೆಪ ಹೇಳಿ ಜಾರಿಕೊಳ್ಳುತ್ತಿದ್ದ ಅಧಿಕಾರಿಗಳು ಈಗ ಉಗ್ರಾಣದಲ್ಲಿ ಅಕ್ಕಿ, ಬೇಳೆಯೇ ಇಲ್ಲ ಎಂಬ ಉತ್ತರ ಕೊಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಧಿಕಾರಿಗಳು ಮಾರಿಕೊಂಡು ಬಡಜನರಿಗೆ ಅನ್ಯಾಯ ಮಾಡುತ್ತಿದ್ದಾರೆ.
- ಲೊಕ್ಕನಹಳ್ಳಿ ಭಾಗದ ನೊಂದ ಗ್ರಾಮಸ್ಥ

“ದಿನದಿಂದ ದಿನಕ್ಕೆ ಕಾಡಿನ ಸ್ವರೂಪವೂ ಬದಲಾಗುತ್ತಿದೆ. ಕಾಡಿನಲ್ಲಿ ಲಾಂಟಾನ ಕಳೆಯೇ ಹೆಚ್ಚಾಗಿ ಕಿರು ಉತ್ಪನ್ನಗಳು ಕಡಿಮೆಯಾಗುತ್ತಿವೆ. ಪರಿಸ್ಥಿತಿ ಹೀಗಿರುವಾಗ ಪ್ರತಿ ತಿಂಗಳ ಅನ್ನಕ್ಕಾಗಿ ನ್ಯಾಯಬೆಲೆ ಅಂಗಡಿಯನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈಗ ಆರು ತಿಂಗಳಿಂದ ಅಕ್ಕಿ, ಬೇಳೆ ನಿಲ್ಲಿಸಿರುವುದರಿಂದ ನಮ್ಮ ಪಾಡು ಹೀನಾಯವಾಗಿದೆ. ಕಾಡಿನಲ್ಲಿ ಮೊದಲಿನಂತೆ ಗೆಡ್ಡೆ ಗೆಣಸೂ ಸಿಗುವುದಿಲ್ಲ. ಮಳೆ ಸರಿಯಾಗಿ ಆಗದೆ ಕುಡಿಯುವ ನೀರಿಗೇ ಸಮಸ್ಯೆ ಇದೆ. ಇದರ ಜತೆಗೆ ಅಕ್ಕಿ, ಬೇಳೆಯೂ ಸಿಗದೆ ಬದುಕುವುದೇ ಕಷ್ಟವಾಗಿದೆ” ಎನ್ನುತ್ತಾರೆ ಅವರು.

“ಕೊಳ್ಳೇಗಾಲ ತಾಲ್ಲೂಕಿನ ಆಹಾರ ಇಲಾಖೆಯ ಉಗ್ರಾಣದಿಂದಲೇ ಅನ್ನಭಾಗ್ಯ ಯೋಜನೆಯ ಅಕ್ಕಿ, ಬೇಳೆಯನ್ನು ಅಧಿಕಾರಿಗಳು ಮಾರಿಕೊಂಡಿರುವ ಅನುಮಾನವಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕೇಳಿದರೆ ಕೊಳ್ಳೇಗಾಲದಿಂದಲೇ ಅಕ್ಕಿ, ಬೇಳೆ ಬರುತ್ತಿಲ್ಲ ಎನ್ನುತ್ತಿದ್ದಾರೆ. ಕೊಳ್ಳೇಗಾಲದಲ್ಲಿ ವಿಚಾರಿಸಿದರೆ ಆಹಾರ ಇಲಾಖೆಯ ಅಧಿಕಾರಿಗಳು ಸರಿಯಾಗಿ ಉತ್ತರಿಸುತ್ತಿಲ್ಲ. ಆರು ತಿಂಗಳಿಂದ ಅಕ್ಕಿ, ಬೇಳೆ ಸಿಗದ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಅವರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ” ಎನ್ನುತ್ತಾರೆ ಪಾಳ್ಯ ಭಾಗದ ಮತ್ತೊಬ್ಬ ಗ್ರಾಮಸ್ಥರು.

ಪಡಿತರ ವಿತರಣೆಯಾಗದ ಬಗ್ಗೆ ಲೊಕ್ಕನಹಳ್ಳಿ ಭಾಗದ ಜನರು ಆಗಸ್ಟ್ ತಿಂಗಳಲ್ಲಿ ಕೊಳ್ಳೇಗಾಲ ತಹಶೀಲ್ದಾರ್‌ ಅವರಿಗೆ ಸಲ್ಲಿಸಿದ್ದ ಮನವಿ ಪತ್ರ
ಪಡಿತರ ವಿತರಣೆಯಾಗದ ಬಗ್ಗೆ ಲೊಕ್ಕನಹಳ್ಳಿ ಭಾಗದ ಜನರು ಆಗಸ್ಟ್ ತಿಂಗಳಲ್ಲಿ ಕೊಳ್ಳೇಗಾಲ ತಹಶೀಲ್ದಾರ್‌ ಅವರಿಗೆ ಸಲ್ಲಿಸಿದ್ದ ಮನವಿ ಪತ್ರ
/ಸಮಾಚಾರ
ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ತೊಂದರೆಯಾಗಿರುವುದು ಈವರೆಗೂ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತನಾಡುತ್ತೇನೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.
- ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ

ಈ ಬಗ್ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ವಲಯದ ಉಪ ವಿಭಾಗಾಧಿಕಾರಿ ಬಿ. ಫೌಜಿಯಾ ತರನ್ನುಮ್‌, “ ಪಡಿತರ ವಿತರಣೆಯಾಗದಿರುವ ದೂರುಗಳ ಕುರಿತು ನಾನು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ನಿವಾರಣೆಯಾಗಲಿದೆ” ಎಂದು ತಿಳಿಸಿದ್ದಾರೆ.

ಪಡಿತರ ವಿತರಣೆಯಲ್ಲಿ ಸಮಸ್ಯೆಯಾಗಿರುವುದನ್ನು ಒಪ್ಪಿಕೊಂಡ ಆಹಾರ ಇಲಾಖೆಯ ಚಾಮರಾಜನಗರ ಜಿಲ್ಲಾ ಉಪ ನಿರ್ದೇಶಕ ಆರ್‌. ರಾಚಪ್ಪ, “ಪಡಿತರ ದಾಸ್ತಾನು ಸಮಸ್ಯೆಯಿಲ್ಲ. ವಿತರಣೆಯಲ್ಲಿ ಲೋಪವಾಗಿರುವುದು ಈಗ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ” ಎಂದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವ ಭರವಸೆಯನ್ನೇನೋ ನೀಡುತ್ತಿದ್ದಾರೆ. ಆದರೆ, ಕಳೆದ ಆರು ತಿಂಗಳಿಂದ ಅಕ್ಕಿ, ಬೇಳೆ ಇಲ್ಲದೆ ಈ ಭಾಗದ ಬಡ ಜನರು, ಆದಿವಾಸಿ ಸೋಲಿಗರು ಪರದಾಡುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಇಂಥ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.