samachara
www.samachara.com
‘ಒನ್ ಲೈನರ್ ರಾಜಕಾರಣ’: ತಂದೆ ಹಾದಿಯಲ್ಲಿ ಮಗ; ದಂಗೆ ಎಂಬ ನೆಪ; ದಾರಿ ತಪ್ಪಿದ ಬಿಜೆಪಿ
COVER STORY

‘ಒನ್ ಲೈನರ್ ರಾಜಕಾರಣ’: ತಂದೆ ಹಾದಿಯಲ್ಲಿ ಮಗ; ದಂಗೆ ಎಂಬ ನೆಪ; ದಾರಿ ತಪ್ಪಿದ ಬಿಜೆಪಿ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗುರುವಾರ ಹಾಸನದಲ್ಲಿ ‘ಪ್ರತಿ ಪಕ್ಷದ ವಿರುದ್ಧ ದಂಗೆ ಎಬ್ಬಿಸಲು ಜನರಿಗೆ ನೀಡಿದ ಕರೆ’ ಅಗತ್ಯಕ್ಕಿಂತ ಹೆಚ್ಚೇ ಉದ್ವೇಗಗಳನ್ನು ಹುಟ್ಟುಹಾಕಿದೆ.

Team Samachara

ರಾಜಕಾರಣಿಗಳ ಒಂದು ಮಾತು ಕೆಲವೊಮ್ಮೆ; ದಿನದ ಎಲ್ಲಾ ಬೆಳವಣಿಗೆಗಳನ್ನು ನುಂಗಿ ಹಾಕುತ್ತದೆ. ಕರ್ನಾಟಕದಲ್ಲಿ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ, ಎಚ್. ಡಿ. ದೇವೇಗೌಡ. ಅಗತ್ಯ ಬಿದ್ದಾಗಲೆಲ್ಲಾ ಅವರು 'ಎಲ್ಲೆ ಮೀರಿ' ಮಾತನಾಡುತ್ತಾರೆ. ಒಂದು ದಿನ ತಮ್ಮ ಹೇಳಿಕೆ ಸುತ್ತ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಸುತ್ತವಂತೆ ನೋಡಿಕೊಳ್ಳುತ್ತಾರೆ.

ಈಗ ಅವರ ಮಗ, ರಾಜ್ಯದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡ ಅದೇ ಹಾದಿಯನ್ನು ಹಿಡಿದ ಸುಳಿವು ನೀಡುತ್ತಿದ್ದಾರೆ. ಗುರುವಾರ ಅವರು ಹಾಸನದಲ್ಲಿ 'ಪ್ರತಿ ಪಕ್ಷದ ವಿರುದ್ಧ ದಂಗೆ ಎಬ್ಬಿಸಲು ಜನರಿಗೆ ನೀಡಿದ ಕರೆ’ ಅಗತ್ಯಕ್ಕಿಂತ ಹೆಚ್ಚೇ ಉದ್ವೇಗಗಳನ್ನು ಹುಟ್ಟುಹಾಕಿದೆ. ಬುಧವಾರ ರಾತ್ರಿಯೇ ಮುಗಿಯಬೇಕಿದ್ದ ‘ರಾಜಕೀಯ ಬಿಕ್ಕಟ್ಟಿನ’ ಬೆಳವಣಿಗೆ ಗುರುವಾರ ಹೊಸ ಅವತಾರ ತಾಳಲು ಇದು ಸಹಾಯ ಮಾಡಿದೆ.

ಇಷ್ಟಕ್ಕೂ ಕುಮಾರಸ್ವಾಮಿ ಹೇಳಿದ್ದೇನು?:

ರಾಜ್ಯದ ಜನ ದಂಗೆ ಏಳಲು ಕರೆ ಕೊಡ್ತೀನಿ..ಮುಖ್ಯಮಂತ್ರಿ ಶ್ರೀಹೆಚ್.ಡಿ.ಕುಮಾರಸ್ವಾಮಿ...

Posted by R Prakash jds on Thursday, September 20, 2018

ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, “ಯಡಿಯೂರಪ್ಪನವರಿಗೆ ಒಂದು ಮಾತು ಹೇಳುತ್ತೇನೆ. ಇದೇ ರೀತಿ ಸರಕಾರ ನಡೆಸಲು ಡಿಸ್ಟರ್ಬ್‌ ಮಾಡುತ್ತಾ ಹೋದರೆ, ರಾಜ್ಯದ ಜನರಿಗೆ ದಂಗೆ ಏಳಲು ನಾನೇ ಕರೆ ನೀಡುತ್ತೇನೆ,’’ ಎಂದರು. ಹೆಚ್ಚು ಕಡಿಮೆ ಇದೇ ಮಾತುಗಳನ್ನು ಕಾವೇರಿ ನೀರಾವರಿ ನಿಗಮದ ನೀರಾವರಿ ಯೋಜನೆಗಳ ಶಂಕುಸ್ಥಾಪನಾ ಸಭೆಯಲ್ಲೂ ಹೇಳಿದರು.

ಮೊದಲೇ ‘ರಾಜಕೀಯ ದಂಗಲ್’ ರೂಪ ಪಡೆದುಕೊಂಡಿದ್ದ ರಾಜಕೀಯ ಬೆಳವಣಿಗೆಗಳ ನಡುವೆ ಇದೊಂದು ಹೇಳಿಕೆ ಉಳಿದೆಲ್ಲಾ ಬೆಳವಣಿಗೆಗಳನ್ನು ಹಿಂದಿಕ್ಕಿತು. ಪ್ರತಿಪಕ್ಷ ಬಿಜೆಪಿ ಸಿಎಂ ಬಾಯಲ್ಲಿ ‘ದಂಗೆ’ ಪದ ಕೇಳುತ್ತಲೇ ಅಪಾರ್ಥ ಮಾಡಿಕೊಂಡಿತು. ಜತೆಗೆ ಸಿಎಂ ಹೇಳಿಕೆ ಬೆನ್ನಲ್ಲೇ ಮಿತ್ರ ಪಕ್ಷ ಕಾಂಗ್ರೆಸ್‌ ಕಾರ್ಯಕರ್ತರು ಯಡಿಯೂರಪ್ಪ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದು ಬಿಜೆಪಿ ಆಕ್ರೋಶಕ್ಕೆ ತುಪ್ಪ ಸುರಿಯಿತು. ಘಟನೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ‘ಇದು ಗೂಂಡಾವರ್ತನೆ’ ಎಂದು ಹಣೆಪಟ್ಟಿ ಹಚ್ಚಿದರು. ಬೆನ್ನಿಗೆ ಬಿಜೆಪಿ ಟ್ರಾಲ್‌ ಪೇಜ್‌ಗಳು, ಪ್ರಧಾನಿ ಮೋದಿ ಬಳಗಗಳು ಇದೇ ದಾಟಿಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಶುರುಮಾಡಿದವು. ಒಂದಷ್ಟು ಬಿಜೆಪಿ ನಾಯಕರು ‘ರಾಜ್ಯ ಸರಕಾರ ಆಂತರಿಕ ಯುದ್ಧಕ್ಕೆ ಪ್ರಾಯೋಜಕತ್ವ ನೀಡುತ್ತಿದೆ; ಮಧ್ಯಪ್ರವೇಶಿಸಿ’ ಎಂದು ರಾಷ್ಟ್ರಪತಿಗೆ ಮೊರೆ ಇಟ್ಟರು. ಸಿಎಂ ರಾಜೀನಾಮೆಗೆ ಒತ್ತಾಯಿಸಿದರು. ಒಟ್ಟಾರೆ, ಹತಾಶೆ, ಪ್ರಚೋದನೆ ಎಂಬ ಆಲೋಚನೆಗಳ ಆಚೆಗೆ ಪ್ರತಿಕ್ರಿಯೆಗಳು ಬೆಳೆಯಲಿಲ್ಲ.

ದಂಗೆ ಎಬ್ಬಿಸುವುದು; ಹಾಗಂದರೇನು?
ದಂಗೆ ಎಬ್ಬಿಸಲು ಕರೆ ನೀಡುವುದು ಶಿಕ್ಷಾರ್ಹ. ಆದರೆ ಯಾರ ವಿರುದ್ಧ ಎಂಬುದನ್ನು ಐಪಿಸಿ ಸೆಕ್ಷನ್ 121ರಿಂದ 123ರವೆಗೆ ವಿವರಿಸಲಾಗಿದೆ. ‘ಭಾರತ ಸರಕಾರ’ದ ವಿರುದ್ಧ; ದಂಗೆ(ಯುದ್ಧ)ಗೆ ಕರೆ ನೀಡುವುದು, ಅದಕ್ಕಾಗಿ ಸಂಚು ರೂಪಿಸುವುದು, ಶಸ್ತ್ರಗಳನ್ನು ಸಂಗ್ರಹಿಸುವುದು, ನೀಲನಕ್ಷೆಗಳನ್ನು ತಯಾರಿಸುವುದನ್ನು ಅಪರಾಧ ಎಂದು ಕರೆಯಲಾಗುತ್ತದೆ. ಬಿಟ್ಟರೆ ಎಲ್ಲಿಯೂ ಪ್ರತಿಪಕ್ಷದ ವಿರುದ್ಧ ದಂಗೆಗೆ ಕರೆ ನೀಡಬಾರದು ಎಂದು ಕಾನೂನು ಹೇಳಿಲ್ಲ.

“ಇನ್ ಫ್ಯಾಕ್ಟ್ ಪಕ್ಷದೊಳಗೆ ನಡೆಯುವ ಆಂತರಿಕ ದಂಗೆಗಳು ಕಾನೂನು ಬದ್ಧ ಮತ್ತು ಪ್ರಜಾಪ್ರಭುತ್ವದ ಅಗತ್ಯಗಳು. ಪ್ರತಿಪಕ್ಷದ ವಿರುದ್ಧ ದಂಗೆಗೆ ಕರೆ ನೀಡುವುದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ ದಂಗೆಗೆ ಕರೆ ನೀಡಿದ ನಂತರ ನಡೆಯುವ ಬೆಳವಣಿಗೆಗಳು ಅಪರಾಧದ ಚೌಕಟ್ಟಿನೊಳಗಿದ್ದರೆ ಕಾನೂನು ಕ್ರಮ ಜರುಗಿಸಲೇಬೇಕಾಗುತ್ತದೆ,’’ ಎಂದು ವ್ಯಾಖ್ಯಾನಿಸುತ್ತಾರೆ ಹೈಕೋರ್ಟ್ ವಕೀಲ ಜೆ. ಡಿ. ಕಾಶೀನಾಥ್.

ದಿನದ ಅಂತ್ಯಕ್ಕೆ ಬೆಳಗ್ಗೆಯಿಂದ ನಡೆದ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ‘ದಂಗೆ’ ಎಂಬುದು ಒಂದು ನೆಪ ಅಷ್ಟೆ. ಆದರೆ, ಇಂತಹ ಬೆಳವಣಿಗೆಗಳು ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ರಾಜಕಾರಣ ತಯಾರಾಗುತ್ತಿರುವ ಸೂಚನೆ ಕೂಡ ಎಂಬುದು ಗಮನಾರ್ಹ. ಜತೆಗೆ, ಇಂತಹ ‘ಒನ್‌ ಲೈನರ್‌’ಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಮುನ್ಸೂಚನೆಯೊಂದು ಸಿಕ್ಕಂತಾಗಿದೆ.