samachara
www.samachara.com
‘ಕನಕಪುರ ಬ್ಯಾಂಕ್ ಆಫ್ ಡಿಕೆಎಸ್‌’: ಸಾಲ ಕೊಡೋದ್ರಲ್ಲಿ ಎತ್ತಿದ ಕೈ ಸಚಿವ ಡಿ. ಕೆ. ಶಿವಕುಮಾರ್!
COVER STORY

‘ಕನಕಪುರ ಬ್ಯಾಂಕ್ ಆಫ್ ಡಿಕೆಎಸ್‌’: ಸಾಲ ಕೊಡೋದ್ರಲ್ಲಿ ಎತ್ತಿದ ಕೈ ಸಚಿವ ಡಿ. ಕೆ. ಶಿವಕುಮಾರ್!

ದೇಶದ ಶ್ರೀಮಂತ ಶಾಸಕರ ಪೈಕಿ ಒಬ್ಬರಾದ ಡಿಕೆಎಸ್‌ ವ್ಯವಹಾರಗಳೇ ಸಾಲ ನೀಡುವ ಮೇಲೆ ನಿಂತಿದೆ ಎಂಬುದು ಗಮನಾರ್ಹ. ಹೇಳಿಕೊಳ್ಳಲು ಸರಿಯಾದ್ದೊಂದು ಉದ್ಯಮ ಇಲ್ಲದಿದ್ದರೂ, ಡಿ. ಕೆ. ಶಿವಕುಮಾರ್ ಕೋಟ್ಯಾಂತರ ರೂಪಾಯಿ ಒಡೆಯರು!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದ ಚರ್ಚೆಯಲ್ಲಿರುವ ಹೆಸರು ಡಿ. ಕೆ. ಶಿವಕುಮಾರ್. ಇನ್ನೇನು ಡಿಕೆಎಸ್‌ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಲೇವಾದೇವಿ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಶಿವಕುಮಾರ್‌ ಮತ್ತು ಐವರ ವಿರುದ್ಧ ತೆರಿಗೆ ವಂಚನೆ ಹಾಗೂ ಹವಾಲಾ ಹಣ ಸಾಗಣೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದಿಷ್ಟು ಈಗಾಗಲೇ ಹೊರಗೆ ಸದ್ದು ಮಾಡುತ್ತಿರುವ ಸುದ್ದಿ. ಇನ್ನಷ್ಟು ಆಳಕ್ಕಿಳಿದರೆ ಬೆಂಗಳೂರು ಹೊರವಲಯದ ಪುಟ್ಟ ಕೃಷಿ ಕುಟುಂಬದಿಂದ ಬಂದ ವ್ಯಕ್ತಿ, ದೇಶದ ಶ್ರೀಮಂತ ಶಾಸಕ ಅನ್ನಿಸಿಕೊಂಡಿದ್ದು ಹೇಗೆ? ಅವರ ವ್ಯವಹಾರಗಳು ಹೇಗಿವೆ? ಎಂಬಿತ್ಯಾದಿ ಕುತೂಹಲಕಾರಿ ವಿಚಾರಗಳು ಹೊರಬೀಳುತ್ತವೆ.

2018ರ ವಿಧಾನಭೆ ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್‌ನಲ್ಲಿ 840 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದವರು ಡಿ. ಕೆ. ಶಿವಕುಮಾರ್‌. 22ರ ಹರೆಯದ ಮಗಳ ಹೆಸರಿನಲ್ಲಿಯೇ ಸುಮಾರು 107 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಘೋಷಿಸಿದ್ದರು ಶಿವಕುಮಾರ್. ಇದರ ಬಗ್ಗೆ ಈ ಹಿಂದೆಯೇ ‘ಸಮಾಚಾರ’ ವಿವರವಾದ ವರದಿ ನೀಡಿತ್ತು.

ಡಿಕೆಎಸ್‌ ಅಧಿಕೃತವಾಗಿ ಘೋಷಿಸಿಕೊಂಡ ವ್ಯವಹಾರಗಳನ್ನು ಗಮನಿಸಿದರೆ, ಸಾಲದ ಮೇಲೆಯೇ ಹೆಚ್ಚು ವಹಿವಾಟುಗಳು ನಡೆದಿರುವುದು ಗಮನ ಸೆಳೆಯುತ್ತದೆ. ಕುಟುಂಬದಿಂದ ಹಿಡಿದು, ಹೊರಗೆ ಉದ್ಯಮಗಳವರೆಗೆ ಡಿ. ಕೆ. ಶಿವಕುಮಾರ್ ನೂರಾರು ಕೋಟಿ ರೂಪಾಯಿಗಳನ್ನು ಸಾಲದ ರೂಪದಲ್ಲಿ ನೀಡಿದ್ದಾರೆ. ಅದು ಮತ್ತೊಂದು ಕುತೂಹಲಕಾರಿ ಕತೆ.

ಇದು ಡಿಕೆಎಸ್‌ ಬ್ಯಾಂಕ್:

ಡಿ. ಕೆ. ಶಿವಕುಮಾರ್‌ ಅದೆಷ್ಟು ಜನರಿಗೆ ಸಾಲ ನೀಡಿದ್ದಾರೆ ಎಂದು ಪಟ್ಟಿ ಮಾಡುವುದೇ ಕಷ್ಟ. ಅಷ್ಟೊಂದು ಜನ ಡಿಕೆಎಸ್‌ ಕಡೆಯಿಂದ ಸಾಲ ಪಡೆದವರ ಪಟ್ಟಿಯಲ್ಲಿದ್ದಾರೆ. ಅದರಲ್ಲಿ 1 ಕೋಟಿ ರೂಪಾಯಿಯೇ ಸಣ್ಣ ಮೊತ್ತ. ಕಡಿಮೆ ಮೊತ್ತದ ಸಾಲಗಳನ್ನು ಬಿಟ್ಟು ನೋಡಿದರೂ, ಸಾಲ ಪಡೆದವರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಈ ಪಟ್ಟಿಯಲ್ಲಿ ಹಲವು ಅಚ್ಚರಿಯ, ಹುಬ್ಬೇರಿಸುವ ಹೆಸರುಗಳೂ ಕಂಡು ಬರುತ್ತವೆ.

ತಮ್ಮ ಪುತ್ರಿ ಐಶ್ವರ್ಯಾಗೆ 11.32 ಕೋಟಿ ರೂ., ತಂದೆ ಡಿ. ಕೆ. ಕೆಂಪೇಗೌಡರಿಗೆ 5.06 ಕೋಟಿ ರೂ. ಮತ್ತು ತಾಯಿ ಗೌರಮ್ಮನವರಿಗೆ 22.11 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಡಿ. ಕೆ. ಶಿವಕುಮಾರ್‌. ಡಿ.ಕೆ. ಸುರೇಶ್‌ಗೆ ಬರೋಬ್ಬರಿ 11.34 ಕೋಟಿ ರೂಪಾಯಿ ಸಾಲ ನೀಡಿರುವ ಅವರು, ಕುಣಿಗಲ್‌ ಕಾಂಗ್ರೆಸ್‌ ಶಾಸಕರ ಪತ್ನಿ ಡಾ. ಸುಮಾ ರಂಗನಾಥ್‌ ಅವರಿಗೂ 1.03 ಕೋಟಿ ರೂಪಾಯಿ ಕಡ ಕೊಟ್ಟಿದ್ದಾರೆ. ಇನ್ನು, ಪತ್ನಿ ಉಷಾ ಶಿವಕುಮಾರ್‌ ಮಾತ್ರ ಸ್ವತಃ ಪತಿಗೆ 2.60 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಇದು ಕುಟುಂಬದೊಳಗಿನ ಸಾಲದ ಕತೆಯಾದರೆ, ಹೊರಗಿನ ಸಾಲಗಾರರ ಪಟ್ಟಿ ಬೇರೆಯದೇ ಇದೆ.

ಪಿಜೆಬಿ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ 1.25 ಕೋಟಿ ಮತ್ತು ಡಬ್ಲ್ಯೂಐಪಿ ಗ್ಲೋಬಲ್‌ ಮಾಲ್ಸ್‌ಗೆ 3.86 ಕೋಟಿ ರೂಪಾಯಿ, ಎನ್‌. ಚಂದ್ರಶೇಖರ್‌ಗೆ 3.41 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಜತೆಗೆ, ಸಾಲ ನೀಡಿರುವ ಪಟ್ಟಿಯಲ್ಲಿ ಹಲವು ಕಂಪನಿಗಳ ಹೆಸರುಗಳು ಕಾಣಿಸುತ್ತವೆ. ಅದರಲ್ಲೊಂದು ‘ಧವನಂ’.

ಅದು ಧವನಂ ಉದ್ಯಮ:

ಡಿ. ಕೆ. ಶಿವಕುಮಾರ್ ಮೇಲೆ ಐಟಿ ದಾಳಿಯಾದ ಸಂದರ್ಭ ‘ಧವನಂ ಜ್ಯುವೆಲ್ಲರ್ಸ್‌’ ಮಳಿಗೆಗಳ ಮೇಲೂ ದಾಳಿ, ಪರಿಶೀಲನೆ ನಡೆದಿತ್ತು. ಅಸಲಿಗೆ ಧವನಂ ಜ್ಯುವೆಲ್ಲರ್ಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ನಿರ್ದೇಶಕರೇನೂ ಆಗಿಲ್ಲ. ಅವರ ಕುಟುಂಬಸ್ಥರೂ ಈ ಕಂಪನಿಗಳಲ್ಲಿ ಇಲ್ಲ. ಹಾಗಿದ್ದರೆ ಇಲ್ಲೇಕೆ ಡಿಕೆಶಿ ಹೆಸರು ಥಳಕು ಹಾಕಿಕೊಂಡಿತು? ಟ್ವಿಸ್ಟ್‌ ಇರುವುದೇ ಇಲ್ಲಿ.

ಆಗಸ್ಟ್‌ 2, 2017ರಲ್ಲಿ ಡಿ. ಕೆ. ಶಿವಕುಮಾರ್‌ ಮನೆ ಮೇಲೆ ನಡೆದಿದ್ದ ಐಟಿ ದಾಳಿಯ ದೃಶ್ಯ. 
ಆಗಸ್ಟ್‌ 2, 2017ರಲ್ಲಿ ಡಿ. ಕೆ. ಶಿವಕುಮಾರ್‌ ಮನೆ ಮೇಲೆ ನಡೆದಿದ್ದ ಐಟಿ ದಾಳಿಯ ದೃಶ್ಯ. 

ಧವನಂ ಕನ್ಸ್‌ಸ್ಟ್ರಕ್ಷನ್ ಪೈವೇಟ್‌ ಲಿ.ಗೆ ಡಿ. ಕೆ. ಶಿವಕುಮಾರ್‌ 31.66 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಈ ಕಂಪನಿ ಯಾರದ್ದು ಎಂದು ಹುಡುಕಿಕೊಂಡು ಹೊರಟರೆ ಮೂವರು ನಿರ್ದೇಶಕರು ಕಾಣ ಸಿಗುತ್ತಾರೆ. ಅವರೇ ಅರವಿಂದ ವೆಂಕಟನಾರಾಯಣ ಸೆಟ್ಟಿ ಧವನಂ, ಹರೀಶ್ ವೆಂಕಟನಾರಾಯಣ ಸೆಟ್ಟಿ ಧವನಂ ಮತ್ತು ರವೀಂದ್ರನಾಥ್‌ ವೆಂಕಟನಾರಾಯಣ ಸೆಟ್ಟಿ ಧವನಂ.

ಈ ಧವನಂ ಕುಟುಂಬಸ್ಥರ ಹೆಸರಿನಲ್ಲಿ ಒಟ್ಟು 7 ಕಂಪನಿಗಳಿವೆ. ಇದರಲ್ಲಿ ಕೌಸ್ತುಭ ಪ್ರಾಜೆಕ್ಟ್ಸ್‌ ಪ್ರೈ. ಲಿ.ಗೆ 50.42 ಲಕ್ಷ ರೂ. ಸಾಲ, ಅಮೆಥಿಸ್ಟ್‌ ಹಾಸ್ಪಿಟಾಲಿಟಿ ಪ್ರೈವೇಟ್‌ ಲಿಮಿಟೆಡ್‌ಗೆ ಶಿವಕುಮಾರ್ 60 ಲಕ್ಷ ಮತ್ತು ಪತ್ನಿ ಉಷಾ 91 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಇದೇ ಧವನಂ ಕುಟುಂಬಕ್ಕೆ ಸೇರಿದ ಉದ್ಯಮವೇ ಧವನಂ ಜ್ಯುವೆಲ್ಲರ್ಸ್‌. ಇದರಲ್ಲಿ ಡಿ.ಕೆ.ಶಿವಕುಮಾರ್ ಬೇನಾಮಿ ಹೂಡಿಕೆಗಳನ್ನು ಮಾಡಿರಬಹುದು ಎಂಬ ಅನುಮಾನಗಳಿವೆ. ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸುತ್ತಿದೆ.

ಇನ್ನು ಡಿ.ಕೆ. ಸುರೇಶ್‌ ಒಡೆತನದ ಮೈಸೂರು ಫೀಡ್ಸ್‌ ಪ್ರೈವೇಟ್‌ ಲಿ.ಗೆ 10 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ ಡಿ.ಕೆ. ಶಿವಕುಮಾರ್‌. ಈ ಸಾಲಗಳೆಲ್ಲಾ ಸೇರಿ ತನ್ನ ಹೆಸರಿನಲ್ಲಿ 70.94 ಕೋಟಿ ರೂಪಾಯಿ ಮತ್ತು ಪತ್ನಿ ಉಷಾ ಶಿವಕುಮಾರ್‌ ಹೆಸರಲ್ಲಿ 25.04 ಕೋಟಿ ರೂಪಾಯಿ ಚರಾಸ್ಥಿ ಘೋಷಿಸಿಕೊಂಡಿದ್ದಾರೆ. ಪತಿ-ಪತ್ನಿ ಸುಮಾರು 96 ಕೋಟಿ ರೂಪಾಯಿ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದರೆ, ಅದರಲ್ಲಿ ಹೆಚ್ಚಿನ ಪಾಲು ಅಂದರೆ ಸುಮಾರು 84 ಕೋಟಿ ರೂಪಾಯಿಗಳಷ್ಟನ್ನು ಸಾಲ ರೂಪದಲ್ಲೇ ನೀಡಲಾಗಿದೆ!

ನೂರಾರು ಜಮೀನು, ಫ್ಲ್ಯಾಟ್‌ ಮತ್ತು ಇತರ...

ಚರಾಸ್ತಿಗಳ ಕತೆ ಹೀಗಾದರೆ ಸ್ಥಿರಾಸ್ತಿಗಳ ಕತೆ ಇದಕ್ಕಿಂತ ಘೋರವಾಗಿದ್ದು ಬೆಚ್ಚಿ ಬೀಳಿಸುವಂತಿದೆ. ಒಟ್ಟು 22 ಕೃಷಿ ಜಮೀನುಗಳನ್ನು ಡಿ. ಕೆ. ಶಿವಕುಮಾರ್ ಹೊಂದಿದ್ದಾರೆ. ಅದರಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿರುವ ಜಮೀನಿನ ಬೆಲೆ 5 ಕೋಟಿ ರೂಪಾಯಿ ಎಂದು ಅವರೇ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. 20 ಕೃಷಿಯೇತರ ಜಮೀನುಗಳನ್ನು ಅವರು ಹೊಂದಿದ್ದಾರೆ. ಇದರಲ್ಲಿ 12 ಜಮೀನುಗಳು ಕೋಟಿ ಬೆಲೆಬಾಳುತ್ತವೆ. ಬೆಂಗಳೂರಿನ ಗೋಪಾಲಪುರದ ಹಲವು ಜಮೀನುಗಳನ್ನು ಅವರು ಹೊಂದಿದ್ದು ಇದರಲ್ಲಿ ಮೂರು ಜಮೀನುಗಳ ಬೆಲೆ ಕ್ರಮವಾಗಿ 40.63 ಕೋಟಿ ರೂ., 166.72 ಕೋಟಿ ರೂ., ಮತ್ತು 179 ಕೋಟಿ ರೂ., ಎಂದು ನಮೂದಿಸಿದ್ದಾರೆ ಡಿ.ಕೆ. ಶಿವಕುಮಾರ್‌.

ಕೆಂಗೇರಿ ಹೋಬಳಿಯ ಪಂತರಪಾಳ್ಯದಲ್ಲಿ ಅವರಿಗೆ 14.59 ಕೋಟಿ ರೂ. ಮತ್ತು 48.52 ಕೋಟಿ ರೂ. ಮೌಲ್ಯದ ಇನ್ನೆರಡು ಜಮೀನುಗಳಿವೆ. ಪತ್ನಿ ಉಷಾ ಬಳಿಯಲ್ಲೂ ಇದೇ ರೀತಿ 4 ಕೃಷಿಯೇತರ ಜಮೀನುಗಳಿವೆ. ಮಗಳ ಬಳಿಯಲ್ಲಿರುವ ತಲಾ 12 ಕೋಟಿ ರೂಪಾಯಿ ಮೌಲ್ಯದ ಜಮೀನುಗಳು ಸೇರಿ ಒಟ್ಟು 510 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಜಮೀನುಗಳ ಒಡೆಯರಾಗಿದ್ದಾರೆ ಡಿ.ಕೆ. ಶಿವಕುಮಾರ್.

ಜಮೀನುಗಳ ಕಥೆ ಹೀಗಾದರೆ ಡಿ.ಕೆ. ಶಿವಕುಮಾರ್‌ ಬಳಿಯಲ್ಲಿ 1 ವಾಣಿಜ್ಯ ಸಂಕೀರ್ಣ ಮತ್ತು ಪತ್ನಿ ಹೆಸರಲ್ಲಿ 28 ವಾಣಿಜ್ಯ ಸಂಕೀರ್ಣಗಳಿವೆ. ಇವುಗಳು ಎಂಬೆಸಿ ಸ್ಕ್ವೇರ್‌, ಮಡಿವಾಳ ಕಮರ್ಷಿಯಲ್‌ ಪ್ಲಾಜಾ, ಟಿಎನ್‌ಆರ್‌ ಇನಿಝಿಯೋದಂಥ ಪ್ರಮುಖ ಕಟ್ಟಡಗಳಲ್ಲಿವೆ. 55 ಫ್ಲ್ಯಾಟ್‌ಗಳು ಸಚಿವರ ಹೆಸರಿನಲ್ಲಿದ್ದರೆ ಪತ್ನಿ ಹೆಸರಲ್ಲಿ 4 ಫ್ಲ್ಯಾಟ್‌ಗಳಿವೆ. ಡಿಕೆಶಿ ದೆಹಲಿಯಲ್ಲಿ ಮೂರು ಮನೆಗಳನ್ನು ಹೊಂದಿದ್ದರೆ ಉಳಿದವು ಬೆನ್ನಿಗಾನಹಳ್ಳಿಯ ‘ಪುರ್ವ ಎಂಐಡಿ ಟೌನ್‌’ನಲ್ಲಿವೆ. ಪುತ್ರಿ ಐಶ್ವರ್ಯಾ ಹೆಸರಿನಲ್ಲೂ ಒಂದು ಫ್ಲ್ಯಾಟ್‌ ಇದ್ದು, ಒಟ್ಟು ಫ್ಲ್ಯಾಟ್‌ಗಳ ಮೌಲ್ಯ 103.28 ಕೋಟಿ ರೂಪಾಯಿ ಎಂದು ಅವರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಇನ್ನು ಶೋಭಾ ಇಂದ್ರಪ್ರಸ್ತದಲ್ಲಿ ಪತಿ-ಪತ್ನಿ ಮೂರು ಫ್ಲ್ಯಾಟ್‌ ಹೊಂದಿದ್ದಾರೆ.

ಇದೇ ವೇಳೆ ಡಿ. ಕೆ. ಶಿವಕುಮಾರ್ ಅವರಿಗೆ 107.57 ಕೋಟಿ ರೂಪಾಯಿ ಸಾಲವಿದ್ದರೆ, ಪತ್ನಿಗೆ 44.56 ಕೋಟಿ ರೂಪಾಯಿ ಮತ್ತು ಪುತ್ರಿ ಐಶ್ವರ್ಯಾಗೆ 81.92 ಕೋಟಿ ರೂಪಾಯಿ ಸಾಲವಿದೆ.

ವಿಶೇಷ ಅಂದರೆ, ಡಿ. ಕೆ. ಶಿವಕುಮಾರ್ ಈವರೆಗೆ ಘೋಷಿಸಿಕೊಂಡ ಆಸ್ತಿಯಲ್ಲಿ ಸಾಲ ನೀಡಿದ್ದೇ ಹೆಚ್ಚು. ಅದು ಬಿಟ್ಟರೆ, ಅವರ ಹೆಸರಿನಲ್ಲಿ ನಡೆಯುತ್ತಿರುವ ಉದ್ಯಮಗಳು ಎಲ್ಲಿಯೂ ಕಣ್ಣಿಗೆ ಬೀಳುವುದಿಲ್ಲ. “ನಾನೇನು ಕದ್ದಿಲ್ಲ,” ಎಂಬುದು ಸಚಿವ ಡಿ. ಕೆ. ಶಿವಕುಮಾರ್ ಅವರ ಸರಳ, ಸಾಮಾನ್ಯ ಸಮಜಾಯಿಷಿ. ಕದಿಯದೇ, ಸಾಲ ಕೊಟ್ಟು ಈ ಪ್ರಮಾಣದಲ್ಲಿ ಅಧಿಕೃತವಾಗಿಯೇ ಆಸ್ತಿ ಮಾಡಬಹುದು ಎಂದಾದರೆ, ಸಾಲ ನೀಡಲು ಹಣದ ಮೂಲ ಹೇಗೆ ಸೃಷ್ಟಿಯಾಗುತ್ತದೆ ಎಂಬುದು ಪ್ರಶ್ನೆ.