‘ಕ್ಯಾತೆ, ಎಚ್ಚರಿಕೆ, ಹಸ್ತಾಂತರ’: ರಾಘವೇಶ್ವರ ಸ್ವಾಮಿ ತೆಕ್ಕೆಯಿಂದ ಜಾರಿದ ಗೋಕರ್ಣ...
COVER STORY

‘ಕ್ಯಾತೆ, ಎಚ್ಚರಿಕೆ, ಹಸ್ತಾಂತರ’: ರಾಘವೇಶ್ವರ ಸ್ವಾಮಿ ತೆಕ್ಕೆಯಿಂದ ಜಾರಿದ ಗೋಕರ್ಣ...

ದೇವಸ್ಥಾನ ಉಳಿಸಿಕೊಳ್ಳುವ ರಾಘವೇಶ್ವರ ಸ್ವಾಮಿ ಪೀಠಾಧಿಪತಿಯಾಗಿರುವ ರಾಮಚಂದ್ರಪುರ ಮಠದ ಕೊನೆಯ ಯತ್ನವೂ ವಿಫಲವಾಗಿದೆ. ಈ ಮೂಲಕ ದಶಕಗಳ ಕಾಲ ಅನುಭವಿಸಿದ ದೇವಸ್ಥಾನವೊಂದರ ಸುಪರ್ದಿಯನ್ನು ಮಠ ಕಳೆದುಕೊಂಡಂತಾಗಿದೆ. 

ಕಳೆದ 10 ವರ್ಷಗಳಿಂದ ನಡೆಯುತ್ತಿದ್ದ ಹೋರಾಟ, ಕಾನೂನು ಸಮರ ಕೊನೆಗೂ ಅಂತ್ಯವಾಗಿದೆ. ಗೋಕರ್ಣದ ಸಂಸ್ಥಾನ ಮಹಾಬಲೇಶ್ವರ ದೇವಸ್ಥಾನ ಸರಕಾರದ ಸುಪರ್ದಿಗೆ ಮರಳಿದೆ. ದೇವಸ್ಥಾನ ಉಳಿಸಿಕೊಳ್ಳುವ ರಾಘವೇಶ್ವರ ಸ್ವಾಮಿ ಪೀಠಾಧಿಪತಿಯಾಗಿರುವ ರಾಮಚಂದ್ರಪುರ ಮಠದ ಕೊನೆಯ ಯತ್ನವೂ ವಿಫಲವಾಗಿದೆ.

ಕೆಲವು ದಿನಗಳ ಹಿಂದೆ, ರಾಮಚಂದ್ರಾಪುರ ಮಠದ ಅಧಿಕೃತ ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ, ‘ಗೋಕರ್ಣ ದೇವಸ್ಥಾನ ನಮ್ಮ ಬಳಿಯೇ ಇದೆ’ ಎಂದು ಹೇಳಿಕೊಂಡಿದ್ದರು.

ಬುಧವಾರ ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಹಾಜರಿದ್ದು ಆಡಳಿತವನ್ನು ವಹಿಸಿಕೊಡುವಂತೆ ದೇವಸ್ಥಾನದ ಆಡಳಿತಾಧಿಕಾರಿಯವರಿಗೆ ನಿನ್ನೆಯಷ್ಟೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್. ಎಸ್‌. ನಕುಲ್‌ ಪತ್ರ ಬರೆದಿದ್ದರು. ಅದರಂತೆ ಇಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಬಿಗಿ ಭದ್ರತೆಯಲ್ಲಿ ಆಗಮಿಸಿದರು. ಆದರೆ ‘ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಲು ಸುಪ್ರೀಂ ಕೋರ್ಟ್‌ನಲ್ಲಿ ತಡೆ ಇದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಮಠದ ಪರ ವಕೀಲರಾದ ಶಂಭು ಹೆಗಡೆ ವಾದಿಸಿದರು.

ಇದಕ್ಕೆ ಸೊಪ್ಪು ಹಾಕದ ಜಿಲ್ಲಾಧಿಕಾರಿ, ‘ನಮಗೆ ಹೈಕೋರ್ಟ್‌ನ ಆದೇಶ ಇದೆ. ಮತ್ತು ಸುಪ್ರೀಂ ಕೋರ್ಟ್‌ ಕೂಡ ಹೈಕೋರ್ಟ್‌ ಆದೇಶದಂತೆ ಮುಂದುವರಿಯುವಂತೆ ಸೂಚಿಸಿದೆ. ಈ ಕುರಿತು ಅಡ್ವೊಕೇಟ್‌ ಜನರಲ್‌ ಅವರು ಅಭಿಪ್ರಾಯವನ್ನು ನೀಡಿದ್ದು ಆ ಪ್ರಕಾರ ಕೂಡಲೇ ದೇವಸ್ಥಾನವನ್ನು ಸುಪರ್ದಿಗೆ ತೆಗೆದುಕೊಳ್ಳುವಂತೆ ಸರ್ಕಾರದಿಂದ ಆದೇಶ ಬಂದಿದೆ’ ಎಂದು ಬಿಸಿ ಮುಟ್ಟಿಸಿದರು.

ಹೀಗಿದ್ದೂ ಮಠದ ಕಡೆಯವರು ತಕರಾರು ತೆಗೆದಾಗ, ‘ಶಾಂತ ರೀತಿಯಿಂದ ಹಸ್ತಾಂತರ ಮಾಡಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಬಲವಂತವಾಗಿ ವಶಕ್ಕೆ ಪಡೆಯಬೇಕಾಗುತ್ತದೆ,’ ಎಂದು ಎಚ್ಚರಿಸಿದರು. ಇದಾದ ಬಳಿಕ ದೇವಸ್ಥಾನದ ಆಡಳಿತವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ‘ಸಮಾಚಾರ’ಕ್ಕೆ ತಿಳಿಸಿದರು. ಇಡೀ ಪ್ರಕ್ರಿಯೆ ವಿಡಿಯೋ ಚಿತ್ರೀಕರಣವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ದೇವಸ್ಥಾನವನ್ನು ವಶಕ್ಕೆ ಪಡೆದುಕೊಂಡ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌.ಎಸ್. ನಕುಲ್‌. 
ದೇವಸ್ಥಾನವನ್ನು ವಶಕ್ಕೆ ಪಡೆದುಕೊಂಡ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌.ಎಸ್. ನಕುಲ್‌. 

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ನಕುಲ್, “ಗೋಕರ್ಣ ದೇವಸ್ಥಾನದ ಆಡಳಿತದ ಹಸ್ತಾಂತರವನ್ನು ಪಡೆದುಕೊಂಡಿದ್ದೇವೆ. ಮಾನ್ಯ ಹೈಕೋರ್ಟ್‌ ಆದೇಶದಂತೆ ಮತ್ತು ತದ ನಂತರ ಸುಪ್ರೀಂ ಕೋರ್ಟ್‌ ಆದೇಶದಂತೆ ಮತ್ತು ನಿನ್ನೆ ಸಂಜೆ ನಮಗೆ ಮುಜುರಾಯಿ ಇಲಾಖೆಯಿಂದ ಕೂಡ ದೇವಸ್ಥಾನವನ್ನು ಸುಪರ್ದಿಗೆ ತೆಗೆದುಕೊಳ್ಳಲು ಸರಕಾರಿ ಆದೇಶದಂತೆ ಪ್ರಕ್ರಿಯೆ ಮುಗಿಸಿದ್ದೇವೆ. ಅದರಂತೆ ನಾವು ಇಂದು ಬೆಳಿಗ್ಗೆ ದೇವಸ್ಥಾನವನ್ನು ನಮ್ಮ ಸುಪರ್ದಿಗೆ ಪಡೆದುಕೊಂಡಿದ್ದೇವೆ. ಇಲ್ಲಿರುವ ಬೆಳ್ಳಿ, ಚಿನ್ನ ಮತ್ತು ಇತರ ಆಭರಣಗಳನ್ನು ಪರಿಶೀಲನೆ ಮಾಡಿ ವಶಕ್ಕೆ ಪಡೆದುಕೊಳ್ಳಲಿದ್ದೇವೆ,” ಎಂದು ತಿಳಿಸಿದರು.

ಇನ್ನು ಮೇಲುಸ್ತುವಾರಿ ಸಮಿತಿಯ ಬಗ್ಗೆ ವಿವರಣೆ ನೀಡಿದ ಅವರು, “ಮೆಲುಸ್ತುವಾರಿ ಸಮಿತಿಯ ಅಧ್ಯಕ್ಷನಾಗಿ ನಾನು ಇರುತ್ತೇನೆ. ಉತ್ತರ ಕನ್ನಡ ಜಿಲ್ಲೆ ಎಸ್ಪಿ, ಕುಮಟಾ ಎಸಿ ಮತ್ತು ಇಬ್ಬರು ಉಪಾಧಿವಂತರು ಮತ್ತು ಇಬ್ಬರು ಗಣ್ಯರನ್ನು ಸಮಿತಿಗೆ ನೇಮಕ ಮಾಡುವಂತೆ ಹೈಕೋರ್ಟ್‌ ಅದೇಶ ನೀಡಿತ್ತು. ಅದರಂತೆ ನಾನು ಮೇಲುಸ್ತುವಾರಿ ಸಮಿತಿ ಅಧ್ಯಕ್ಷನಾಗಿ ಇದನ್ನು ವಶಕ್ಕೆ ಪಡೆದುಕೊಂಡಿದ್ದೇನೆ. ಸಮಿತಿಗೆ ಸದಸ್ಯರನ್ನು ಸದ್ಯದಲ್ಲೇ ನೇಮಿಸಲಾಗುವುದು,” ಎಂದು ತಿಳಿಸಿದರು.

ಕೊನೆಯ ಯತ್ನವೂ ವಿಫಲ:

2008ರ ಆಗಸ್ಟ್‌ 12ರಂದು ಗೋಕರ್ಣದ ದೇವಸ್ಥಾನದ ಆಡಳಿತವನ್ನು ಅಂದಿನ ಬಿ.ಎಸ್. ಯಡಿಯೂರಪ್ಪ ಸರಕಾರ ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟಿತ್ತು. ಇದರ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಉಪಾಧಿವಂತರು ಮತ್ತು ಸ್ಥಳೀಯರ ಪ್ರಯತ್ನದ ಫಲವಾಗಿ ಆಗಸ್ಟ್‌ 10, 2018ರಂದು ದೇವಸ್ಥಾನವನ್ನು ಮರಳಿ ಸರಕಾರ ವಶಕ್ಕೆ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿತ್ತು. ಸೆಪ್ಟೆಂಬರ್‌ 10ರಂದು ದೇವಸ್ಥಾನವನ್ನು ವಶಕ್ಕೆ ಪಡೆದುಕೊಳ್ಳುವಂತೆ ಹೈಕೋರ್ಟ್‌ ಆದೇಶದಲ್ಲಿ ತಿಳಿಸಿತ್ತು.

ವಿವಾದಿತ ಸಂಸ್ಥಾನ ಮಹಾಬಲೇಶ್ವರ ದೇವಸ್ಥಾನದ ಭವ್ಯ ಗೋಪುರ. 
ವಿವಾದಿತ ಸಂಸ್ಥಾನ ಮಹಾಬಲೇಶ್ವರ ದೇವಸ್ಥಾನದ ಭವ್ಯ ಗೋಪುರ. 

ಈ ಆದೇಶ ಪ್ರಶ್ನಿಸಿ ರಾಮಚಂದ್ರಾಪುರ ಮಠ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಮೇಲ್ಮನವಿ ಪುರಸ್ಕರಿಸಿದ ಸರ್ವೋಚ್ಛ ನ್ಯಾಯಾಲಯ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತ್ತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಗೊಂದಲಕ್ಕೆ ಕಾರಣವಾಗಿತ್ತು. ಮಠದ ಕಡೆಯವರು ದೇವಸ್ಥಾನ ನಮ್ಮಲ್ಲೇ ಉಳಿಯಲಿದೆ ಎಂದು ವಾದಿಸಿದರೆ, ಉಪಾಧಿವಂತರು ದೇವಸ್ಥಾನ ವಶಕ್ಕೆ ಪಡೆಯಲು ಯಾವುದೇ ಅಡ್ಡಿ ಇಲ್ಲ ಎಂದು ವಾದಿಸಿದ್ದರು.

ಹೀಗಾಗಿ ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆಯುವಲ್ಲಿ ವಿಳಂಬವಾಗಿತ್ತು. ಇದೀಗ ಸೆಪ್ಟೆಂಬರ್‌ 19ನೇ ತಾರೀಕು ದೇವಸ್ಥಾನವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇದಕ್ಕೆ ತಡೆ ನೀಡುವಂತೆ ಕೋರಿ ಇಂದು ಮಠದ ವಕೀಲರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸಿವಂತೆ ಅವರು ಕೋರಿಕೊಂಡಿದ್ದರು. ಆದರೆ ‘ತುರ್ತು ವಿಚಾರಣೆ ಸಾಧ್ಯವಿಲ್ಲ. ಮುಂದಿನವಾರ ಬನ್ನಿ’ ಎಂದು ಕೋರ್ಟ್‌ ಮೌಖಿಕ ಆದೇಶ ನೀಡುವುದರೊಂದಿಗೆ 10 ವರ್ಷಗಳ ಬಳಿಕ ಗೋಕರ್ಣ ದೇವಸ್ಥಾನ ರಾಘವೇಶ್ವರ ಸ್ವಾಮಿ ಕೈಯಿಂದ ಜಾರಿ ಸರಕಾರದ ವಶಕ್ಕೆ ಬಿದ್ದಿದೆ.

ದೇವಸ್ಥಾನದಲ್ಲಿ ರಾಮಚಂದ್ರಾಪುರ ಮಠದ ಆಡಳಿತ ಕೊನೆಯಾಗುತ್ತಿದ್ದಂತೆ ಉಪಾಧಿವಂತರು ಮತ್ತು ಸ್ಥಳೀಯರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಸಂಭ್ರಮಾಚರಣೆ ನಡೆಸಿದರು. ಕೊನೆಯ ಕಾನೂನು ಹೋರಾಟವೂ ವಿಫಲವಾಗಿದ್ದರಿಂದ ಜಿ.ಕೆ.ಹೆಗಡೆ ಮತ್ತು ಮಠದವರು ದೇವಸ್ಥಾನದಿಂದ ಪೆಚ್ಚು ಮೊರೆ ಹಾಕಿಕೊಂಡು ಜಾಗ ಖಾಲಿ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಜಿಲ್ಲಾಧಿಕಾರಿ ನಡೆದುಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿರುವ ಶಂಭು ಶರ್ಮಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.