samachara
www.samachara.com
ವಿಕೋಪ ಪೀಡಿತ ಜಿಲ್ಲೆಯ ದಕ್ಷ ಅಧಿಕಾರಿಣಿ ಶ್ರೀ ವಿದ್ಯಾ; ವರ್ಗಾವಣೆಗೆ ಆರಂಭಗೊಂಡಿದೆ ಲಾಬಿ
COVER STORY

ವಿಕೋಪ ಪೀಡಿತ ಜಿಲ್ಲೆಯ ದಕ್ಷ ಅಧಿಕಾರಿಣಿ ಶ್ರೀ ವಿದ್ಯಾ; ವರ್ಗಾವಣೆಗೆ ಆರಂಭಗೊಂಡಿದೆ ಲಾಬಿ

ಟಿಂಬರ್‌ ಲಾಬಿ ಜಿಲ್ಲಾಧಿಕಾರಿ ಶ್ರೀವಿದ್ಯಾ ವಿರುದ್ಧ ಮುಗಿಬಿದ್ದಿದೆ. ಇದಕ್ಕೆ ಮರಳು ಮಾಫಿಯಾ ಮಂದಿ ಮತ್ತು ರಿವರ್‌ ರಾಫ್ಟಿಂಗ್‌ ಸುಲಿಗೆಕೋರರೂ ಕೈ ಜೋಡಿಸಿದ್ದು ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಪ್ರಯತ್ನಿಸುತ್ತಿವೆ.

ವಸಂತ ಕೊಡಗು

ವಸಂತ ಕೊಡಗು

ಪ್ರಾಕೃತಿಕ ವಿಕೋಪ ಪೀಡಿತ ಕೊಡಗಿನಲ್ಲಿ ಕಳೆದ 9 ತಿಂಗಳಿನಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ. ಸದ್ಯ ಅವರನ್ನು ವರ್ಗಾವಣೆ ಮಾಡಲು ಹಲವು ಲಾಬಿಗಳು ಯತ್ನಿಸುತ್ತಿವೆ ಎಂಬ ಸುದ್ದಿ ಜಿಲ್ಲೆಯಲ್ಲಿ ದಟ್ಟವಾಗಿ ಹರಡಿದೆ. ಈ ಲಾಬಿಗಳು ಯಾವುವು ಎಂದು ಹುಡುಕಿಕೊಂಡು ಹೊರಟರೆ ಹಲವು ಪರಿಸರ ವಿರೋಧಿ ಶಕ್ತಿಗಳು ಕಾಣಸಿಗುತ್ತವೆ.

ಕಳದ ತಿಂಗಳು ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆ ಹಾಗೂ ಗುಡ್ಡ ಕುಸಿತದ ಪರಿಣಾಮಗಳಿಗೆ ಇಡೀ ರಾಜ್ಯವೇ ಸಾಕ್ಷಿಯಾಗಿತ್ತು. ಜತೆಗೆ, ಸಾಂತ್ವನದ ನೆರವು ಕೂಡ ಹರಿದು ಬಂದಿತ್ತು. ಸದ್ಯ ಪುಟ್ಟ ಜಿಲ್ಲೆ ಪ್ರಕೃತಿ ವಿಕೋಪದ ನಂತರ ಮೊದಲಿನ ಸ್ಥಿತಿಗೆ ಮರಳುವ ಪ್ರಕ್ರಿಯೆಯಲ್ಲಿದೆ. ಸ್ಥಳೀಯ ರಾಜಕೀಯಗಳ ಒತ್ತಡಕ್ಕೆ ಮಣಿಯದೇ ವಿಕೋಪ ನಿರ್ವಹಣೆ ಹಾಗೂ ಪುನರ್‌ವಸತಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ. ಅವರ ವೃತ್ತಿಪರತೆಯೇ ಅವರಿಗೆ ಮುಳುವಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

ಜಿಲ್ಲಾಧಿಕಾರಿ ಶ್ರೀವಿದ್ಯಾ:

ಸರಿಯಾಗಿ 9 ತಿಂಗಳ ಹಿಂದೆ ಕೊಡಗಿಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದವರು ಶ್ರೀವಿದ್ಯಾ. ಕೇರಳ ಮೂಲದ 2010ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಇವರು. ಪತಿ ಕೂಡ ಐಪಿಎಸ್ ಅಧಿಕಾರಿಯಾಗಿದ್ದು, ಕೇರಳ ಪೊಲೀಸ್ ಇಲಾಖೆಯಲ್ಲಿದ್ದಾರೆ.

ಇಂಥಹದ್ದೊಂದು ಹಿನ್ನೆಲೆಯನ್ನಿಟ್ಟುಕೊಂಡು ಜಿಲ್ಲೆಗೆ ಬಂದ ಶ್ರೀ ವಿದ್ಯಾ ಮೊದಲ ದಿನದಿಂದಲೂ ತಾವು ಕಚೇರಿಯಲ್ಲಿ ಕುರ್ಚಿ ಬಿಸಿ ಮಾಡುವ ಅಧಿಕಾರಿ ಅಲ್ಲ ಎಂದು ಸಾಬೀತು ಪಡಿಸಿದವರು. ಜಿಲ್ಲೆಯ ಉದ್ದಗಲಕ್ಕೂ ಪಾದರಸದಂತೆ ಓಡಾಡಿ, ಗಂಟೆಗಳ ಪರಿವೆ ಇಲ್ಲದೆ ಕೆಲಸ ಮಾಡುವ ಮೂಲಕ ಜನರಿಂದ ‘ಉತ್ತಮ ಹಾಗೂ ದಕ್ಷ ಅಧಿಕಾರಿ’ ಎಂದೇ ಹೆಸರು ಪಡೆದುಕೊಂಡಿದ್ದಾರೆ.

“ಅವರು ಇರುವುದೇ ಹಾಗೆ. ಬೆಳಿಗ್ಗೆ 10 ಘಂಟೆಗೂ ಮುನ್ನ ಕಚೇರಿಗೆ ಆಗಮಿಸಿದರೆ ಒಮ್ಮೊಮ್ಮೆ ಅವರು ರಾತ್ರಿ 10 ಗಂಟೆಯ ತನಕವೂ ಕೆಲಸ ಮಾಡಿದ್ದಿದೆ,” ಎನ್ನುತ್ತಾರೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು. ಅವರು ಬಂದ ನಂತರ ಜಿಲ್ಲಾಡಳಿತ ಭವನದ ಎಲ್ಲ ಅಧಿಕಾರಿಗಳೂ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆ. ಹೀಗೊಂದು ಪರಿರ್ತನೆಗೆ ನಾಂದಿ ಹಾಡಿದ ಜಿಲ್ಲಾಧಿಕಾರಿಯನ್ನು ತಾನು ನೋಡಿದ್ದು ಇದೇ ಮೊದಲು ಎನ್ನುತ್ತಾರೆ ನಿವೃತ್ತಿಯ ಅಂಚಿನಲ್ಲಿರುವ ಇಲ್ಲಿನ ಹಿರಿಯ ಗುಮಾಸ್ತರೊಬ್ಬರು.

ರಿವರ್‌ ರಾಫ್ಟಿಂಗ್‌ಗೆ ಬ್ರೇಕ್ :

ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ. 
ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ. 

ಜಿಲ್ಲಾಧಿಕಾರಿಯಾಗಿ ಕೊಡಗಿಗೆ ಕಾಲಿಟ್ಟ ಶ್ರೀವಿದ್ಯಾ ತಮ್ಮ ಮೊದಲ ಅಧಿಕಾರವನ್ನು ಬಳಸಿದ್ದು ದುಬಾರೆಯಲ್ಲಿ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಅದಾಗಲೇ ಎಗ್ಗಿಲ್ಲದೆ ನಡೆಯುತ್ತಿದ್ದ ರಿವರ್ ರಾಫ್ಟಿಂಗ್‌ಗೆ ಅಂಕುಶ ಹಾಕಿದರು. ಇದೆಲ್ಲಾ ನಡೆದಿದ್ದು 2018ರ ಮಾರ್ಚ್‌ನಲ್ಲಿ. ಇದಕ್ಕೆ ಹಿನ್ನೆಲೆಯಾಗಿ ನಡೆದ ಘಟನೆಯೊಂದು ಕಾರಣವಾಗಿತ್ತು. ಮಾರ್ಚ್ ತಿಂಗಳಿನಲ್ಲಿ ರಿವರ್ ರಾಫ್ಟರ್‌ ಕೆಲಸಗಾರರು ಮತ್ತು ಆಂಧ್ರ ಪ್ರದೇಶದಿಂದ ಬಂದಿದ್ದ ಪ್ರವಾಸಿಗರ ನಡುವೆ ಘರ್ಷಣೆ ಸಂಭವಿಸಿ ಒರ್ವ ಪ್ರವಾಸಿಗ ಮೃತಪಟ್ಟಿದ್ದ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಶ್ರೀವಿದ್ಯಾ ಇಲ್ಲಿ ಪ್ರವಾಸಿಗರಿಂದ ಹಣ ಕಮಾಯಿಸುತ್ತಿದ್ದ, ಸೂಕ್ತ ದಾಖಲಾತಿಗಳಿಲ್ಲದ ಸುಮಾರು 40 ರಿಂದ 50 ರಾಫ್ಟಿಂಗ್‌ ಬೋಟ್‌ಗಳನ್ನು ವಶಕ್ಕೆ ಪಡೆದಿದ್ದರು. ಯಾವುದೇ ಇಲಾಖೆಗಳ ಅನುಮತಿ ಪಡೆಯದೇ ರಾಫ್ಟಿಂಗ್ ನಡೆಸುತ್ತಿರುವುದನ್ನು ಪತ್ತೆ ಮಾಡಿದ ಅವರು ತಮ್ಮ ಅಧಿಕಾರ ಬಳಸಿ ಅವುಗಳನ್ನು ಸ್ಥಗಿತಗೊಳಿಸಿದ್ದರು.

ಆಗ ಶುರುವಾಗಿತ್ತು ಜಿಲ್ಲಾಧಿಕಾರಿ ವರ್ಗಾವಣೆಯ ಮೊದಲ ಯತ್ನ. ರಿವರ್ ರಾಫ್ಟಿಂಗ್‌ನ್ನೇ ಉದ್ಯಮ ಮಾಡಿಕೊಂಡ ಪ್ರಭಾವಿ ಮುಖಂಡರೊಬ್ಬರು ಆಗ ರಾಫ್ಟಿಂಗ್‌ ಪುನರಾರಂಭಿಸಲು ಶ್ರೀವಿದ್ಯಾ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಆದರೆ ಇದಕ್ಕೆ ಬಗ್ಗದಿದ್ದಾಗ ಜಿಲ್ಲಾಧಿಕಾರಿಗಳ ಆದೇಶದ ವಿರುದ್ದ ಹೈಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಇದಿನ್ನೂ ವಿಚಾರಣೆಯ ಹಂತದಲ್ಲಿದೆ.

ಇದರ ನಡುವೆಯೇ ಸರಕಾರಿ ನಿಯಮಗಳಿಗೆ ಕಟ್ಟು ಬಿದ್ದರು ಶ್ರೀವಿದ್ಯಾ. ನಾನಾ ಇಲಾಖೆಗಳ ಅನುಮತಿ ಪಡೆದ ನಂತರ ಕಾನೂನು ಬದ್ದವಾಗಿ ರಾಫ್ಟಿಂಗ್‌ ನಡೆಸಲು ಅವಕಾಶ ನೀಡುವುದಾಗಿ ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ. ರಾ. ಮಹೇಶ್ ಮಧ್ಯ ಪ್ರವೇಶದಿಂದಾಗಿ ರಾಫ್ಟಿಂಗ್‌ ನಿಷೇಧ ಹಿಂಪಡೆಯಲಾಗಿತ್ತು. ಆದರೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಇನ್ನೂ ಅನುಮತಿ ನೀಡದ ಕಾರಣ ರಾಫ್ಟಿಂಗ್ ಇನ್ನೂ ಅರಂಭಗೊಂಡಿಲ್ಲ.

ಈ ಲಾಬಿಯ ಮಂದಿ ಕೇವಲ 3-4 ಬೋಟ್ ಗಳನ್ನು ಇಟ್ಟುಕೊಂಡು ಪ್ರವಾಸಿಗರಿಂದ ಕನಿಷ್ಟ ಪಕ್ಷ 800 ರೂಪಾಯಿಗಳಿಂದ 1200 ರೂಪಾಯಿಗಳವರೆಗೆ ಸುಲಿಗೆ ಮಾಡುತ್ತಾರೆ. ಹೀಗಿದ್ದೂ ಕನಿಷ್ಠ ಜೀವರಕ್ಷಕ ಉಪಕರಣಗಳ ಬಳಕೆಯೂ ಮಾಡುತ್ತಿಲ್ಲ. ಇವರೀಗ ತಮ್ಮ ಆದಾಯಕ್ಕೆ ಹೊಡೆತ ಬಿದ್ದಿರುವುದರಿಂದ ಹೇಗಾದರೂ ಮಾಡಿ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಬೇಕು ಎಂದು ಯತ್ನಿಸುತ್ತಲೇ ಇದ್ದಾರೆ.

ಮರಳು ಮಾಫಿಯಾಗೆ ಕಡಿವಾಣ:

ಇದು ಒಂದು ಕಥೆಯಾದರೆ ಇನ್ನೊಂದು ಕಡೆ ಮರಳು ಮಾಫಿಯಾ ಕೂಡ ಜಿಲ್ಲಾಧಿಕಾರಿ ಎತ್ತಂಗಡಿಗೆ ಕೈ ಹಾಕಿ ಹಲವು ಸಮಯವೇ ಕಳೆದಿದೆ. ಜಿಲ್ಲಾಧಿಕಾರಿಯಾಗಿ ಕೊಡಗಿಗೆ ಬಂದಿದ್ದ ಶ್ರೀವಿದ್ಯಾ ಅನೇಕ ಕಡೆಗಳಲ್ಲಿ ಎಗ್ಗು ಸಿಗ್ಗಿಲ್ಲದೆ ನಡೆಯುತಿದ್ದ ಅಕ್ರಮ ಮರಳು ಸಾಗಾಟ ದಂಧೆಯ ಮೇಲೆ ಮುಗಿಬಿದ್ದಿದ್ದರು. ಅನೇಕ ಕಡೆಗಳಲ್ಲಿ ತಾವೇ ಖುದ್ದಾಗಿ ಅಧಿಕಾರಿಗಳೊಂದಿಗೆ ತೆರಳಿ ದಾಳಿ ಮಾಡಿ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದರಿಂದ ಮರಳು ದಂಧೆಗೆ ಕಡಿವಾಣ ಬಿದ್ದಿತ್ತು. ಇದು ದಂಧೆಯ ಪ್ರಭಾವಿಗಳು ಮತ್ತು ರಾಜಕೀಯ ಮುಖಂಡರ ಕಣ್ಣು ಕೆಂಪಗಾಗಿಸಿತ್ತು.

ಈ ಪಟ್ಟಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವುದು ಟಿಂಬರ್‌ ಲಾಬಿ. ಕೊಡಗು ಅರಣ್ಯ ಸಂಪತ್ತಿಗೆ ಹೆಸರಾಗಿದ್ದು ಇಲ್ಲಿಂದ ಪ್ರತಿ ನಿತ್ಯ ಹಲವು ಲಾರಿಗಳು ಮರಗಳನ್ನು ಹೊತ್ತು ಹೊರ ಜಿಲ್ಲೆಗಳಿಗೆ, ಪಕ್ಕದ ಕೇರಳ ರಾಜ್ಯಗಳಿಗೆ ತೆರಳುತ್ತವೆ. ಇದೀಗ ಕೊಡಗಿನಲ್ಲಿ ಕಳೆದ ತಿಂಗಳು ಸುರಿದ ಭೀಕರ ಮಳೆ ಹಾಗೂ ಭೂ ಕುಸಿತದಿಂದ ಇಲ್ಲಿನ ರಸ್ತೆ ವ್ಯವಸ್ಥೆಯೇ ಹದಗೆಟ್ಟಿದೆ. ಈ ನಡುವೆಯೂ ಲೋಡಿನ ಲಾರಿಗಳ ಓಡಾಟ ನಿಂತಿರಲಿಲ್ಲ. 15- 20 ಟನ್ ಹೊತ್ತು 6 ಚಕ್ರಗಳ ಲಾರಿಗಳು ಅಳಿದುಳಿದ ರಸ್ತೆಗಳನ್ನೇ ಕಿತ್ತು ಹಾಕುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಕ್ಟೋಬರ್ 29ರ ವರೆಗೆ ಮರದ ಲಾರಿಗಳು ಮತ್ತು ಮರಳು ಲಾರಿಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಈ ಆದೇಶ ಹೊರ ಬಿದ್ದ ಬೆನ್ನಿಗೆ ಟಿಂಬರ್‌ ಲಾಬಿ ಜಿಲ್ಲಾಧಿಕಾರಿ ವಿರುದ್ಧ ಮುಗಿ ಬಿದ್ದಿದೆ. ಇದಕ್ಕೆ ಮರಳು ಮಾಫಿಯಾ ಮಂದಿ ಮತ್ತು ರಿವರ್‌ ರಾಫ್ಟಿಂಗ್‌ ಸುಲಿಗೆಕೋರರೂ ಕೈ ಜೋಡಿಸಿದ್ದು ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಶತ ಪ್ರಯತ್ನ ನಡೆಸುತ್ತಿವೆ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಈ ವರ್ಗಾವಣೆ ಪ್ರಯತ್ನದಲ್ಲಿ ಉಸ್ತುವಾರಿ ಸಚಿವರ ಆಪ್ತರೂ ಪಾಲುದಾರರಾಗಿದ್ದಾರೆ ಎಂಬ ಆರೋಪಗಳಿವೆ. ಆದರೆ ದಕ್ಷ ಅಧಿಕಾರಿಯ ವರ್ಗಾವಣೆಗೆ ಜಿಲ್ಲೆಯಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಲಿದೆ.

ಕೊಡಗು ಇವತ್ತು ಇರುವ ಪರಿಸ್ಥಿತಿಯಲ್ಲಿ ಒಬ್ಬರು ದಕ್ಷ ಅಧಿಕಾರಿಯ ಅಗತ್ಯವಂತೂ ಇದೆ. ವಿಕೋಪ ನಿರ್ವಹಣೆ ಹಾಗೂ ಜಿಲ್ಲೆಯ ಪುನರ್‌ ನಿರ್ಮಾಣಕ್ಕಾಗಿ ಶ್ರೀ ವಿದ್ಯಾ ಇನ್ನಷ್ಟು ಕಾಲ ಕೊಡಗಿನಲ್ಲಿ ಉಳಿಯಬೇಕಿದೆ.