samachara
www.samachara.com
 ಕಲಬುರ್ಗಿಯಲ್ಲಿ ಹಳ್ಳ ಹಿಡಿದ ನಿಮ್ಝ್‌ ಯೋಜನೆ; ‘ಅಸ್ಥಿರ’ ನಾಟಕದಲ್ಲಿ ಬಿಝಿಯಾಗಿದೆ  ಸರಕಾರ!
COVER STORY

ಕಲಬುರ್ಗಿಯಲ್ಲಿ ಹಳ್ಳ ಹಿಡಿದ ನಿಮ್ಝ್‌ ಯೋಜನೆ; ‘ಅಸ್ಥಿರ’ ನಾಟಕದಲ್ಲಿ ಬಿಝಿಯಾಗಿದೆ ಸರಕಾರ!

2 ನಿಮ್ಝ್‌ಗಳನ್ನು ಕಳೆದುಕೊಂಡಿರುವ ರಾಜ್ಯದಲ್ಲಿ ಉಳಿದ 2 ನಿಮ್ಝ್‌ಗಳ ಸ್ಥಾಪನೆಗಾದರೂ ಸರಕಾರ ಆಸಕ್ತಿ ತೋರಬೇಕಿತ್ತು. ಆದರೆ, ಜನಪ್ರತಿನಿಧಿಗಳು ಸದ್ಯ ಸರಕಾರ ಅಸ್ಥಿರಗೊಳಿಸುವ ನಾಟಕದಲ್ಲಿ ಬಿಸಿಯಾಗಿದ್ದಾರೆ.

ದಯಾನಂದ

ದಯಾನಂದ

‘ಹಿಂದುಳಿದ ಪ್ರದೇಶ’ ಎಂಬ ಹಣೆಪಟ್ಟಿಯನ್ನು ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಶಾಶ್ವತವಾಗಿ ಅಂಟಿಸುವ ಬಯಕೆ ರಾಜ್ಯ ಸರಕಾರಕ್ಕೆ ಇದ್ದಂತಿದೆ. ಹೈದರಾಬಾದ್‌ ಕರ್ನಾಟಕದ ಕಲಬುರ್ಗಿಯಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಝ್‌) ಯೋಜನೆ ಜಾರಿ ಬಗ್ಗೆ ಸರಕಾರ ಜಾಣ ಮೌನ ವಹಿಸಿರುವುದೇ ಇದಕ್ಕೊಂದು ತಾಜಾ ಉದಾಹರಣೆ. ಕೇಂದ್ರ ಸರಕಾರ ನಿಮ್ಝ್‌ ಯೋಜನೆಯಡಿ ಕಲಬುರ್ಗಿಯನ್ನು ಗುರುತಿಸಿ ನಾಲ್ಕು ವರ್ಷವಾದರೂ ರಾಜ್ಯ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಯೋಜನೆಯ ಜಾರಿಗೆ ಮನಸ್ಸು ಮಾಡುತ್ತಿಲ್ಲ.

ಒಂದು ದಶಕದಲ್ಲಿ ಉತ್ಪಾದನಾ ವಲಯದಿಂದ ಶೇಕಡ 25ರಷ್ಟು ಜಿಡಿಪಿ ಹೆಚ್ಚಳ ಹಾಗೂ 10 ಕೋಟಿ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ 2011ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಉತ್ಪಾದನಾ ನೀತಿಯ (ಎನ್‌ಎಂಪಿ) ಅಡಿಯಲ್ಲಿ ಕೇಂದ್ರ ಸರಕಾರ ನಿಮ್ಝ್‌ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ನಿಮ್ಝ್‌ ವಲಯಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿತ್ತು.

ರಾಜ್ಯದ ದಕ್ಷಿಣ ಭಾಗದ ತುಮಕೂರು, ಕೋಲಾರ ಮತ್ತು ಉತ್ತರ ಭಾಗದ ಬೀದರ್‌ ಹಾಗೂ ಕಲಬುರ್ಗಿಯಲ್ಲಿ ನಿಮ್ಝ್‌ ಸ್ಥಾಪನೆಗೆ ಕೇಂದ್ರ ಸರಕಾರ ಮುಂದಾಗಿತ್ತು. ಆದರೆ, ಕೋಲಾರ ಹಾಗೂ ಬೀದರ್‌ನಲ್ಲಿ ನಿಮ್ಝ್‌ ಸ್ಥಾಪನೆಗೆ ರಾಜ್ಯ ಸರಕಾರ ಆಗ ಆಸಕ್ತಿ ತೋರದ ಕಾರಣ ಈ ಎರಡೂ ಜಿಲ್ಲೆಗಳ ನಿಮ್ಝ್‌ ಪ್ರಸ್ತಾವ ಹಳ್ಳ ಹಿಡಿಯಿತು. ಕೊನೆಗೆ ತುಮಕೂರು ಮತ್ತು ಕಲಬುರ್ಗಿಯಲ್ಲಿ ಮಾತ್ರ ನಿಮ್ಝ್‌ ಸ್ಥಾಪನೆಯ ಯೋಜನೆ ಉಳಿದುಕೊಂಡಿತ್ತು.

ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲೇ ನಿಮ್ಝ್‌ ಯೋಜನೆಯಡಿ ಟೂಲ್ಸ್‌ ಪಾರ್ಕ್‌ ನಿರ್ಮಾಣಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಕಲಬುರ್ಗಿಯಲ್ಲಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ನಡೆದಿಲ್ಲ. ರಾಜ್ಯ ಸರಕಾರ ಯೋಜನೆಯ ಡೆವಲಪ್‌ಮೆಂಟ್‌ ಪ್ಲಾನ್‌ ಹಾಗೂ ಒಪ್ಪಂದ ಪತ್ರವನ್ನೇ ಕೇಂದ್ರಕ್ಕೆ ಸಲ್ಲಿಸಿಲ್ಲ.

ನಿಮ್ಝ್‌ ಸ್ಥಾಪನೆಗಾಗಿ ನಾಲ್ಕು ವರ್ಷದ ಹಿಂದೆಯೇ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನಲ್ಲಿ ಸುಮಾರು 13 ಸಾವಿರ ಎಕರೆ ಸ್ವಾಧೀನಕ್ಕಾಗಿ ಭೂಮಿ ಗುರುತಿಸಲಾಗಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಈವರೆಗೂ ಆರಂಭವಾಗಿಲ್ಲ. ನಿಮ್ಝ್‌ ಸ್ಥಾಪನೆಯಿಂದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉತ್ಪಾದನಾ ವಲಯ ಬೆಳೆಯುವುದರ ಜತೆಗೆ 2 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆದರೆ, ನಿಮ್ಝ್‌ ಸ್ಥಾಪನೆ ಈ ಭಾಗದ ಜನಪ್ರತಿನಿಧಿಗಳಿಗೇ ಬೇಕಾಗಿಲ್ಲ ಎಂಬ ದೂರು ಈ ಭಾಗದ ಉದ್ಯಮಿಗಳದ್ದು.

ದೇಶದ ಒಟ್ಟು 16 ಕಡೆಗಳಲ್ಲಿ ನಿಮ್ಝ್‌ ಸ್ಥಾಪಿಸಲು ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಈ ಪೈಕಿ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆ, ತೆಲಂಗಾಣದ ಮೇದಕ್‌ ಜಿಲ್ಲೆ ಮತ್ತು ಒಡಿಶಾದ ಕಳಿಂಗನಗರಗಳಲ್ಲಿ ನಿಮ್ಝ್‌ ಸ್ಥಾಪನೆಗೆ ಕೇಂದ್ರ ಸರಕಾರ ಅಂತಿಮ ಒಪ್ಪಿಗೆ ನೀಡಿದೆ. ಕರ್ನಾಟಕದ ನಿಮ್ಝ್‌ಗಳೂ ಸೇರಿದಂತೆ ಉಳಿದ 13 ಕಡೆಗಳಲ್ಲಿ ಯೋಜನೆ ಜಾರಿಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ನೆರೆಯ ರಾಜ್ಯಗಳು ಯೋಜನೆ ಜಾರಿ ವಿಚಾರದಲ್ಲಿ ಉತ್ಸುಕತೆ ತೋರುತ್ತಿದ್ದರೆ, ರಾಜ್ಯ ಸರಕಾರ ಈ ವಿಚಾರದಲ್ಲಿ ಇನ್ನೂ ತೂಕಡಿಸುತ್ತಿದೆ.

“ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಎಷ್ಟಿದೆ ಎಂಬುದಕ್ಕೆ ನಿಮ್ಝ್‌ ಯೋಜನೆ ಹಳ್ಳ ಹಿಡಿದಿರುವುದೇ ಸಾಕ್ಷಿ. ಈ ಭಾಗ ಆರ್ಥಿಕವಾಗಿ, ಔದ್ಯೋಗಿಕವಾಗಿ ಮುಂದವರಿಯವುದು ಇಲ್ಲಿನ ಜನಪ್ರತಿನಿಧಿಗಳಿಗಾಗಲೀ, ರಾಜ್ಯ ಸರಕಾರಕ್ಕಾಗಲೀ ಬೇಕಾಗಿಲ್ಲ. ಹೀಗಾಗಿ ನಿಮ್ಝ್‌ ಯೋಜನೆ ಇಲ್ಲಿ ಇನ್ನೂ ಮರೀಚಿಕೆಯಾಗಿದೆ” ಎನ್ನುತ್ತಾರೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ)ಯ ಅಧ್ಯಕ್ಷ ಅಮರನಾಥ ಪಾಟೀಲ್‌.

ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಈಗಾಗಲೇ ಎರಡು ನಿಮ್ಝ್‌ ವಲಯಗಳನ್ನು ಕಳೆದುಕೊಂಡಂತಾಗಿದೆ. ಈಗ ಇರುವ ಎರಡು ನಿಮ್ಝ್‌ ವಲಯಗಳ ಸ್ಥಾಪನೆಗೂ ಸರಕಾರ ಸೂಕ್ತ ಗಮನ ಹರಿಸುತ್ತಿಲ್ಲ. ತುಮಕೂರಿನಲ್ಲಿ ಆದಷ್ಟೂ ಕೆಲಸ ಕಲಬುರ್ಗಿಯಲ್ಲಿ ಆಗಿಲ್ಲ. ಕಲಬುರ್ಗಿಯಲ್ಲಿ ಯೋಜನೆ ಜಾರಿಯಾಗುವ ಲಕ್ಷಣಗಳೇ ಕಾಣುತ್ತಿಲ್ಲ ಎಂಬ ದೂರು ಪಾಟೀಲ್‌ ಅವರದ್ದು.

ಕಲಬುರ್ಗಿಯಲ್ಲಿ ನಿಮ್ಝ್‌ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಡೆವಲಪ್‌ಮೆಂಟ್‌ ಪ್ಲಾನ್‌ ಮತ್ತು ಯೋಜನಾ ಒಪ್ಪಂದ ಪತ್ರವನ್ನು ಕೇಂದ್ರ ಸರಕಾರಕ್ಕೆ ಕಳಿಸಲು ವಿಳಂಬ ಮಾಡುತ್ತಿದೆ. ಇದು ಈ ಭಾಗದ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕೈಗಾರಿಕೆ ಅಭಿವೃದ್ಧಿಯಲ್ಲೂ ಸರಕಾರ ಪ್ರಾದೇಶಿಕ ಅಸಮಾನತೆ ತೋರುತ್ತಿದೆ. ಇಂಥ ಅಸಮಾನತೆಯೇ ಪ್ರತ್ಯೇಕತೆಯ ಕೂಗಿಗೆ ಕಾರಣ. ಇದು ಸರಕಾರಕ್ಕೆ ಅರಿವಾಗಬೇಕು.
- ಅಮರನಾಥ ಪಾಟೀಲ್‌, ಅಧ್ಯಕ್ಷರು, ಎಚ್‌ಕೆಸಿಸಿಐ

“ನಿಮ್ಝ್‌ ವಲಯ ಸ್ಥಾಪನೆಯಾದರೆ ಉತ್ಪಾದನಾ ವಲಯದ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸಾಕಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಜತೆಗೆ ಈ ಭಾಗದ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ತಯಾರಿದ್ದರೂ ರಾಜ್ಯ ಸರಕಾರ ನಿರಾಸಕ್ತಿ ತೋರುತ್ತಿದೆ. ಯೋಜನೆ ಜಾರಿಯ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಅವರಿಗೂ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಯಾವುದೇ ಬೆಳವಣಿಗೆಗಳಾಗಿಲ್ಲ” ಎನ್ನುತ್ತಾರೆ ಪಾಟೀಲ್‌.

ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಬಳಿಯೇ ನಿಮ್ಜ್‌ಗೆ ಭೂಸ್ವಾಧೀನ ನಡೆದಿದೆ. ಟೂಲ್ಸ್‌ ಪಾರ್ಕ್‌ ನಿರ್ಮಾಣ ನಡೆಯುತ್ತಿದೆ. ಆದರೆ, ಅದು ಕೂಡಾ ಕುಂಟುತ್ತಾ ಸಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಉದ್ಯಮಿಗಳು. ನಿಮ್ಝ್‌ ಯೋಜನೆ ಘೋಷಣೆಯಾಗಿ ನಾಲ್ಕು ವರ್ಷ ಕಳೆದಿದೆ. ಆದರೆ, ಇನ್ನೂ ಪೂರ್ತಿಯಾಗಿ ಭೂಸ್ವಾಧೀನ ನಡೆದಿಲ್ಲ. ವಸಂತ ನರಸಾಪುರದಲ್ಲಿ ಫುಡ್‌ ಪಾರ್ಕ್‌ ಇದೆ. ಟೂಲ್‌ ಪಾರ್ಕ್‌ ನಿರ್ಮಾಣವಾಗುತ್ತಿದೆ. ಆದರೆ, ನಿಮ್ಝ್‌ ಸ್ಥಾಪನೆಗೆ ವೇಗ ಸಿಕ್ಕಿಲ್ಲ. ಉತ್ಪಾದನಾ ವಲಯದ ಅಭಿವೃದ್ಧಿಗೆ ರಾಜ್ಯ ಸರಕಾರ ನೀಡುತ್ತಿರುವ ಉತ್ತೇಜನ ಸಾಲದು ಎಂದು ಬೇಸರಿಸುತ್ತಾರೆ ತುಮಕೂರಿನ ಉದ್ಯಮಿ ಸುಜ್ಞಾನ್‌ ಹಿರೇಮಠ್.

ಎರಡು ನಿಮ್ಝ್‌ಗಳನ್ನು ಕಳೆದುಕೊಂಡಿರುವ ರಾಜ್ಯದಲ್ಲಿ ಉಳಿದ ಎರಡು ನಿಮ್ಝ್‌ಗಳ ಸ್ಥಾಪನೆಗಾದರೂ ಸರಕಾರ ಆಸಕ್ತಿ ತೋರಬೇಕಿತ್ತು. ಆದರೆ, ರಾಜ್ಯ ಸರಕಾರ ಅಸ್ಥಿರಗೊಳಿಸುವ ನಾಟಕದಲ್ಲಿ ಬಿಸಿಯಾಗಿರುವ ಜನಪ್ರತಿನಿಧಿಗಳಿಗೆ ತಮ್ಮ ಸ್ಥಳೀಯ ಸಮಸ್ಯೆಗಳು ಯಾವುವೂ ಕಣ್ಣಿಗೆ ಕಾಣುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, ಚಿತ್ತಾಪುರ ಶಾಸಕ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರ್ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಪ್ರತಿಕ್ರಿಯೆ ಸಿಕ್ಕ ಬಳಿಕ ಅಪ್‌ಡೇಟ್‌ ಮಾಡಲಾಗುವುದು.