ಎತ್ತಿನಹೊಳೆ ಯೋಜನೆ: ಮೊದಲ ಹಂತದ ಕಾಮಗಾರಿ 70%, ರೈತರಿಗೆ ಪರಿಹಾರ 0%!
COVER STORY

ಎತ್ತಿನಹೊಳೆ ಯೋಜನೆ: ಮೊದಲ ಹಂತದ ಕಾಮಗಾರಿ 70%, ರೈತರಿಗೆ ಪರಿಹಾರ 0%!

ಎತ್ತಿನಹೊಳೆ ಯೋಜನೆಯ ಕಾಮಗಾರಿಗೇನೋ ಆಡಳಿತ ಯಂತ್ರ ಚುರುಕು ನೀಡಿದೆ. ಆದರೆ, ಯೋಜನೆಗಾಗಿ ಭೂಮಿ ಕಳೆದುಕೊಂಡ ಬಹುತೇಕರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಬೃಹತ್‌ ಯೋಜನೆಗಾಗಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರ ಗೋಳು ಎಲ್ಲಾ ಊರುಗಳಲ್ಲೂ ಒಂದೇ. ಜೀವನಕ್ಕೆ ಆಧಾರವಾಗಿದ್ದ ನೆಲ ಕಳೆದುಕೊಳ್ಳುವವರೆಗೂ ಲಕ್ಷ ಲಕ್ಷ ಪರಿಹಾರದ ಹಗಲುಗನಸು ಕಾಣಿಸುವ ಯೋಜನೆಗಳು ಕೊನೆಗೆ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸುವ ಉದಾಹರಣೆಗಳೇ ಹೆಚ್ಚು. ಇಂಥದ್ದೇ ಪರಿಸ್ಥಿತಿ ಈಗ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ. ಎತ್ತಿನಹೊಳೆ ಯೋಜನೆಗಾಗಿ ಜಮೀನು ಕಳೆದುಕೊಂಡಿರುವ ರೈತರ ಕೈಗೆ ಇನ್ನೂ ಪರಿಹಾರದ ಹಣ ಸೇರಿಲ್ಲ.

ಬಯಲು ಸೀಮೆ ಜಿಲ್ಲೆಗಳಿಗೆ ನೀರು ತುಂಬಿಸುವ ಎತ್ತಿನಹೊಳೆ ಯೋಜನೆಗಾಗಿ ಜಮೀನು ಕಳೆದುಕೊಂಡಿರುವ ಸಕಲೇಶಪುರ ತಾಲ್ಲೂಕಿನ ಬಹುತೇಕ ರೈತರು ಇನ್ನೂ ಪರಿಹಾರದ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ. ನೇರ ಖರೀದಿ ಯೋಜನೆಯಲ್ಲಿ ರೈತರ ಜಮೀನಿಗೆ ಲಕ್ಷ ಲಕ್ಷ ಬೆಲೆ ಕಟ್ಟಿರುವ ಸರಕಾರ ಇನ್ನೂ ಪರಿಹಾರದ ಹಣವನ್ನು ರೈತರಿಗೆ ತಲುಪಿಸಿಲ್ಲ.

2012ರಲ್ಲಿ ಸರಕಾರದ ಅನುಮೋದನೆ ಪಡೆದ ಎತ್ತಿನಹೊಳೆ ಯೋಜನೆಯ ಕಾಮಗಾರಿಗಾಗಿ ನಾಲ್ಕು ವರ್ಷಗಳ ಹಿಂದೆ ಸಕಲೇಶಪುರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಯಿತು. ಯೋಜನೆಯ ಗುತ್ತಿಗೆ ಪಡೆದಿದ್ದ ಕಂಪೆನಿಗಳು ಮೂರು ವರ್ಷಗಳ ಹಿಂದೆ ‘ಗುಡ್‌ ವಿಲ್‌’ ಹೆಸರಿನಲ್ಲಿ ಎಕರೆಗೆ 6 ಲಕ್ಷ ರೂಪಾಯಿಯನ್ನು ರೈತರಿಗೆ ಕೊಟ್ಟಿದ್ದು ಬಿಟ್ಟರೆ ಈವರೆಗೂ ಬಹುತೇಕ ರೈತರಿಗೆ ಸರಕಾರದ ಪರಿಹಾರದ ಪೂರ್ತಿ ಹಣ ಸಿಕ್ಕಿಲ್ಲ.

ಭೂಮಿ ಕಳೆದುಕೊಂಡ ರೈತರು ಪರಿಹಾರದ ಹಣ ಬಿಡುಗಡೆಗಾಗಿ ಹಲವು ಬಾರಿ ಬೀದಿಗಳಿದು ಹೋರಾಟ ಮಾಡಿದ್ದಾರೆ. ದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭರವಸೆಯ ಹೊರತಾಗಿ ಹೆಚ್ಚೇನೂ ಪ್ರಯೋಜನವಾಗಿಲ್ಲ. ಪರಿಹಾರದ ಹಣ ಸಿಗದೆ, ಇತ್ತ ಕಳೆದುಕೊಂಡಿರುವ ಭೂಮಿಯಲ್ಲಿ ಬೆಳೆಯನ್ನೂ ಬೆಳೆಯಲಾಗದೆ ಕಳೆದ ಮೂರು ವರ್ಷಗಳಿಂದ ಇಲ್ಲಿನ ಸಣ್ಣ ಹಿಡುವಳಿದಾರರ ಬದುಕು ಅತಂತ್ರವಾಗಿದೆ.

“ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರದ ಹಣ ಕೈ ಸೇರಿಲ್ಲ. ಒಂದೋ, ಎರಡೋ ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಸಣ್ಣ ಹಿಡುವಳಿದಾರರು, ಬಡ ರೈತರ ಪಾಡು ಮೂರು ವರ್ಷದಿಂದ ಹೀನಾಯವಾಗಿದೆ. ಯೋಜನೆ ಆರಂಭಿಸಲು ಆರಂಭದಲ್ಲಿ ಗುತ್ತಿಗೆದಾರರು ಮೂರು ವರ್ಷಗಳ ಹಿಂದೆ 6 ಲಕ್ಷ ರೂಪಾಯಿ ಕೊಟ್ಟಿದ್ದರು. ಕೆಲವರು ಸರಕಾರದಿಂದ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಆ ಹಣವನ್ನೂ ಪಡೆಯಲಿಲ್ಲ. ಹೀಗಾಗಿ ಯೋಜನೆಗೆಂದು ಭೂಮಿ ಕಳೆದುಕೊಂಡಿರುವ ರೈತರ ಬದುಕು ಈಗ ಮೂರಾಬಟ್ಟೆಯಾಗಿದೆ” ಎನ್ನುತ್ತಾರೆ ಭೂಸ್ವಾಧೀನ ಪರಿಹಾರ ಹೋರಾಟದಲ್ಲಿ ಸಕ್ರಿಯರಾಗಿರುವ ಮಾಸವಳ್ಳಿ ಚಂದ್ರು.

ಚಂದ್ರು ಹೇಳುವ ಪ್ರಕಾರ, ಸಕಲೇಶಪುರ ತಾಲ್ಲೂಕಿನಲ್ಲಿ ಸುಮಾರು 600 ಎಕರೆ ಭೂಮಿ ಯೋಜನೆಗಾಗಿ ಹೋಗಿದೆ. ಕಳೆದ ವರ್ಷ ರೈತರಿಂದ ನೇರ ಖರೀದಿ ಯೋಜನೆಯಡಿ ಭೂಮಿಗೆ ಬೆಲೆ ನಿಗದಿ ಮಾಡಲಾಗಿದೆ. ಕಾಫಿತೋಟಗಳಿಗೆ 38 ಲಕ್ಷ, ತರಿ ಜಮೀನಿಗೆ 24 ಲಕ್ಷ ಪ್ರತಿ ಎಕರೆಗೆ ಬೆಲೆ ನಿಗದಿಯಾಗಿದೆ. ಆದರೆ, ಬೆಲೆ ನಿಗದಿಯಾಗಿ ವರ್ಷ ಕಳೆದರೂ ಇನ್ನೂ ಪರಿಹಾರದ ಹಣ ರೈತರ ಕೈಸೇರಿಲ್ಲ.

“ಅಧಿಕಾರಿಗಳನ್ನು ಕೇಳಿದರೆ ಸರ್ವೇ ಕಾರ್ಯ ಪೂರ್ತಿಯಾಗಬೇಕು ಎಂದು ಹೇಳುತ್ತಿದ್ದಾರೆ. ಸರ್ವೇ ಮಾಡುವ ಭೂಮಾಪನ ಇಲಾಖೆಯ ಅಧಿಕಾರಿಗಳು ಲಂಚ ನೀಡದ ಹೊರತು ಸರ್ವೇ ಕೆಲಸಕ್ಕೆ ಬರುತ್ತಿಲ್ಲ. ಸರ್ವೇ ಕಾರ್ಯ ಮುಗಿಯುವುದು ಯಾವಾಗ, ಪರಿಹಾರದ ಹಣ ರೈತರ ಕೈ ಸೇರುವುದು ಯಾವಾಗ ಗೊತ್ತಾಗುತ್ತಿಲ್ಲ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಹೋಗುವ ನಮ್ಮ ಕ್ಷೇತ್ರದ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ” ಎಂಬುದು ಚಂದ್ರು ಅವರ ದೂರು.

ಪರಿಹಾರದ ಹಣ ಬಿಡುಗಡೆ ವಿಳಂಬವಾಗಿರುವುದು ನಿಜ. ತಾಂತ್ರಿಕ ಕಾರಣಗಳಿಂದ ಪರಿಹಾರದ ಹಣ ಬಿಡುಗಡೆ ವಿಳಂಬವಾಗಿತ್ತು. ಕಡತ ವಿಲೇವಾರಿ ಬಗ್ಗೆ ನಾನು ಮಧ್ಯ ಪ್ರವೇಶಿಸಿ ಹಣ ಬಿಡುಗಡೆಗೆ ಇದ್ದ ತೊಡಕುಗಳನ್ನು ನಿವಾರಿಸಿದ್ದೇನೆ. ಆದಷ್ಟು ಬೇಗ ಜಮೀನು ಕಳೆದುಕೊಂಡಿರುವ ರೈತರಿಗೆ ಪರಿಹಾರದ ಹಣ ಸಿಗಲಿದೆ.
- ಎಚ್‌.ಕೆ. ಕುಮಾರಸ್ವಾಮಿ, ಸಕಲೇಶಪುರ ಶಾಸಕ

ಚಂದ್ರು ಅವರ ಸೋದರ ಸಂಬಂಧಿಗಳ ಬಹುತೇಕ ಜಮೀನು ಎತ್ತಿನಹೊಳೆ ಯೋಜನೆಗಾಗಿ ಹೋಗಿದೆ. ಜೀವನಕ್ಕೆ ಆಧಾರವಾಗಿದ್ದ ತುಂಡು ಭೂಮಿ ಕಳೆದುಕೊಂಡ ಬಡ ರೈತರು ಭೂಮಿಯೂ ಇಲ್ಲದೆ, ಪರಿಹಾರವೂ ಸಿಗದೆ ಕಂಗಾಲಾಗಿದ್ದಾರೆ. ಕೆಲವು ಕಡೆಗಳಲ್ಲಿ ಯೋಜನೆಗಾಗಿ ಜಮೀನಿನ ಮಧ್ಯದ ಭೂಮಿ ಗುರುತಿಸಲಾಗಿದೆ. ಇಂಥ ಕಡೆಗಳಲ್ಲಿ ಉಳಿದ ತುಂಡು ಭೂಮಿಯಲ್ಲಿ ಕೃಷಿ ಮಾಡುವುದು ಕಷ್ಟ. ಈ ತುಂಡು ಭೂಮಿಯನ್ನೂ ಯೋಜನೆಯ ವ್ಯಾಪ್ತಿಯಲ್ಲೇ ಖರೀದಿಸಿ ಪರಿಹಾರ ಕೊಡಬೇಕು ಎಂಬ ಬೇಡಿಕೆಯನ್ನೂ ಈ ಭಾಗದ ರೈತರು ಮುಂದಿಟ್ಟಿದ್ದಾರೆ.

ಸಕಲೇಶಪುರ ತಾಲ್ಲೂಕಿನಲ್ಲಿ ಸರಕಾರದ ಬೃಹತ್‌ ಯೋಜನೆಗಳಿಗಾಗಿಯೇ ಸಾವಿರಾರು ಜನ ಭೂಮಿ ಕಳೆದುಕೊಂಡಿದ್ದಾರೆ. ಮಂಗಳೂರು- ಬೆಂಗಳೂರು ಗ್ಯಾಸ್‌ ಪೈಪ್‌ಲೈನ್‌, ಎತ್ತಿನಹೊಳೆ ಯೋಜನೆ, ಗುಂಡ್ಯ ಯೋಜನೆಗಾಗಿ ಸಾಕಷ್ಟು ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಕಡೂರು- ಸಕಲೇಶಪುರ ರೈಲ್ವೆ ಯೋಜನೆಗಾಗಿ ಸದ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಯೋಜನೆಗಳಿಗೆ ಜಮೀನು ಕೊಟ್ಟ ರೈತರು ಪರಿಹಾರದ ಹಣದಲ್ಲಿ ಮತ್ತೊಂದು ಕಡೆ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿದ್ದಾರೆ. ಆದರೆ, ಸರಕಾರದ ವಿಳಂಬ ನೀತಿಯಿಂದ ರೈತರಿಗೆ ಪರಿಹಾರದ ಹಣ ಸಿಗುವುದು ಮುಂದೆ ಹೋಗುತ್ತಲೇ ಇದೆ.

ಎರಡು ತಿಂಗಳ ಹಿಂದೆ ಎತ್ತಿನಹೊಳೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದ ಬೃಹತ್‌ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಯಾವಾಗ ಪಾವತಿಯಾಗುತ್ತದೆ ಎಂಬ ಬಗ್ಗೆ ಮಾತನಾಡಲಿಲ್ಲ. 12 ಸಾವಿರ ಕೋಟಿ ರೂಪಾಯಿಯ ಬೃಹತ್‌ ಯೋಜನೆಯಲ್ಲಿ ಮೊದಲ ಹಂತದ ಶೇಕಡ 70ರಷ್ಟು ಕಾಮಗಾರಿ ಮುಗಿದಿದೆ ಎನ್ನಲಾಗುತ್ತಿದೆ. ಯೋಜನೆ ಮುಕ್ಕಾಲು ಭಾಗ ಮುಗಿದರೂ ಇನ್ನೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಹಣ ಸಿಕ್ಕಿಲ್ಲ.

ಮಲೆನಾಡು, ದಕ್ಷಿಣ ಕನ್ನಡ ಜಿಲ್ಲೆಗಳ ಜನರ ಹಾಗೂ ಪರಿಸರವಾದಿಗಳ ವಿರೋಧದ ನಡುವೆಯೂ ಜಾರಿಗೆ ಬಂದಿರುವ ಎತ್ತಿನಹೊಳೆ ಯೋಜನೆ ಯಾವಾಗ ಪೂರ್ತಿಯಾಗಿ ಬಯಲು ಸೀಮೆಯ ಕೆರೆಗಳಿಗೆ ಯಾವಾಗ ನೀರು ಹರಿಯುತ್ತದೆಯೋ ಗೊತ್ತಿಲ್ಲ. ಆದರೆ, ಭೂಮಿ ಕಳೆದುಕೊಂಡಿರುವ ರೈತರಿಗೆ ಆದಷ್ಟು ಬೇಗ ಪರಿಹಾರದ ಹಣ ಸಿಗಬೇಕಿದೆ.

ಎತ್ತಿನಹೊಳೆ ಯೋಜನೆ:

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 29 ತಾಲ್ಲೂಕುಗಳ 527 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದು. ಈ ಯೋಜನೆಯಿಂದ 24.01 ಟಿಎಂಸಿ ಅಡಿ ನೀರು ಸಿಗುವ ನಿರೀಕ್ಷೆ ಇದೆ. ಯೋಜನೆ ವೆಚ್ಚ 12,912 ಕೋಟಿ ರೂಪಾಯಿ. ಮೊದಲ ಹಂತದ ಕಾಮಗಾರಿಗೆ1,800 ಕೋಟಿ ರೂಪಾಯಿ ಖರ್ಚಾಗಿದೆ. ಕಳೆದ ವರ್ಷದ ಅಂತ್ಯದ ಹೊತ್ತಿಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಮಳೆಯ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ.