samachara
www.samachara.com
‘ಸರಕಾರಕ್ಕೆ ಸಂಕಟ’: ಮೂರೂ ಬಿಟ್ಟ ಮೂರೂ ಪಕ್ಷಗಳು & ಉಳಿದವರು!
COVER STORY

‘ಸರಕಾರಕ್ಕೆ ಸಂಕಟ’: ಮೂರೂ ಬಿಟ್ಟ ಮೂರೂ ಪಕ್ಷಗಳು & ಉಳಿದವರು!

ಕರ್ನಾಟಕದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಿದೆ. ಪುಟ್ಟ ಜಿಲ್ಲೆ ಕೊಡಗು ಮಳೆಗೆ ತತ್ತರಿಸಿದೆ. ಸುಮಾರು 15 ಜಿಲ್ಲೆಗಳಲ್ಲಿ ಬರ ಘೋಷಣೆಯಾಗಿದೆ. ರಾಜಕಾರಣಿಗಳು ಮಾತ್ರ ಹೊಣೆಗಾರಿಕೆ ಮರೆತಿದ್ದಾರೆ. ಯಾಕೆ ಹೀಗೆ?

ಕರ್ನಾಟಕದಲ್ಲೊಂದು ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಿದೆ. ಒಬ್ಬ ಮುಖ್ಯಮಂತ್ರಿ ನಿತ್ಯ ಸುಮಾರು 9 ಕಿ.ಮೀ. ರಾಜಧಾನಿಯಲ್ಲಿ ಕೆಲಸದ ಕಾರಣಕ್ಕೆ ಝೀರೋ ಟ್ರಾಫಿಕ್‌ನಲ್ಲಿ ಸಂಚಸುತ್ತಿದ್ದಾರೆ. ಅದು ಬಿಟ್ಟರೆ ರಾಜ್ಯಾದ್ಯಂತ ಒಂದಷ್ಟು ದೇವಸ್ಥಾನಗಳಿಗೆ ಎಡತಾಕುತ್ತಿದ್ದಾರೆ. ಇವರಿಗೆ ನೆರವಾಗಲು ಒಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿದೆ. ಅವರ ಕೈಲಿ ನಾಲ್ಕು ಖಾತೆಗಳಿವೆ. ಉಳಿದಂತೆ 24 ಜನರ ಸಚಿವರು ನಾನಾ ಇಲಾಖೆಗಳ ಹೊಣೆ ಹೊತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಸರಕಾರ ಉರುಳುತ್ತೆ ಎಂಬ ಸುದ್ದಿ ಒಂದು ವಾರದಿಂದ ಸುದ್ದಿಕೇಂದ್ರವನ್ನು ಆಕ್ರಮಿಸಿಕೊಂಡಿದೆ.

“ಟಿವಿ 9 ನೋಡುತ್ತಿದ್ದರೆ ಇನ್ನೇನು ಸರಕಾರದ ಬಿತ್ತು ಅನ್ನಿಸುತ್ತಿದೆ. ಪಬ್ಲಿಕ್ ಟಿವಿ ನೋಡುತ್ತಿದ್ದರೆ ಡಿ. ಕೆ. ಶಿವಕುಮಾರ್ ಅರೆಸ್ಟ್ ಆಗೇ ಬಿಡ್ತಾರೆ ಅನ್ಸುತ್ತೆ. ಸುವರ್ಣ ಟಿವಿ ನೋಡಿದರೆ ಜಾರಕಿಹೋಳಿ ಸಹೋದರರು ಊರಿಗೆ ದೊಡ್ಡವರು ಅನ್ನಿಸುತ್ತದೆ. ನಿಜಕ್ಕೂ ಏನು ನಡೆಯುತ್ತಿದೆ?,’’ ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನ ಆಟೋ ಚಾಲಕರೊಬ್ಬರು.

ಸರಕಾರ ಎದುರಿಸಿತ್ತಿರುವ ಬಿಕ್ಕಟ್ಟಿನ ಕಾರಣಕ್ಕೆ ಸಾಮಾನ್ಯ ಜನರಿಗೆ ಸರಕಾರವೊಂದು ಅಸ್ಥಿತ್ವದಲ್ಲಿದೆ ಎಂಬುದು ಗೊತ್ತಾಗುತ್ತಿದೆ. ಅದು ಬಿಟ್ಟರೆ, ಚುನಾವಣೆಯಲ್ಲಿ ಮತ ಹಾಕಿದ ಸಾಮಾನ್ಯ ಜನರಿಗೆ, ಯಾಕೆ ಐದು ವರ್ಷ ಕಳೆದ ನಂತರ ಹೊಸ ಸರಕಾರವನ್ನು ಚುನಾಯಿಸಿದ್ದೇವೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ; ಇದು ರಾಜ್ಯದ ದುರಂತ, ಜನಪ್ರತಿನಿಧಿಗಳಿಗೆ ನಾಚಿಕೆಗೇಡಿನ ವಿಚಾರ.

ನೀವೊಮ್ಮೆ ದಶಕದ ಹಿಂದಿನ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಬೇಕು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರಿದ್ದ ದಿನಗಳು. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಕೃಷ್ಣೆ ಹಾಗೂ ತುಂಗಭದ್ರಾ ನದಿಗಳು ತುಂಬಿ ಹರಿದಿದ್ದವು. ರಾಯಚೂರು ಜಿಲ್ಲೆಯ ಗಡಿಯಂಚಿನ ಪುಟ್ಟ ಹಳ್ಳಿ ತಲೆಮಾರಿ, ಪ್ರವಾಹ ಇಳಿದ ನಂತರ ಮಹಾಮಾರಿ ಭೀತಿಯಲ್ಲಿತ್ತು. ಸಾಂಕ್ರಾಮಿಕ ರೋಗಗಳು ಹರಡಲು ಶುರುವಾಗಿದ್ದವು. ಈ ಸಮಯದಲ್ಲಿ ರಾಜ್ಯದಲ್ಲಿ ಮೊದಲ ರೆಸಾರ್ಟ್ ರಾಜಕಾರಣ ಶುರುವಾಗಿತ್ತು. ಬಾಗಲಕೋಟೆಗೆ ಭೇಟಿ ನೀಡಿದ್ದ ಅಂದಿನ ಸಿಎಂ ಬಿಎಸ್‌ವೈ ಅಕ್ಷರಶಃ ಕಣ್ಣೀರು ಹಾಕಿದ್ದರು. ಜನ ಆಗಲೂ ರಾಜಕಾರಣಿಗಳ ಕಡೆಗೆ ಅಸಹ್ಯದಿಂದ ನೋಡುವಂತಾಗಿತ್ತು.

ಇವತ್ತಿಗೆ ಪರಿಸ್ಥಿತಿ ಭಿನ್ನವಾಗಿಲ್ಲ. ಪುಟ್ಟ ಜಿಲ್ಲೆ ಕೊಡಗು ಮಳೆ ಹಾಗೂ ಗುಡ್ಡ ಕುಸಿತಗಳಿಂದ ನಲುಗಿ ಹೋಗಿದೆ. ಜನ ಸಾಮಾನ್ಯರ ನೆರವು, ಮಾಧ್ಯಮಗಳ ಫಂಡ್ ಕಲೆಕ್ಷನ್, ಸರಕಾರದ ಪರಿಹಾರ ಘೋಷಣೆಗಳು ಭೀಕರ ದುರಂತಕ್ಕೆ ಈಡಾದ ಜಿಲ್ಲೆಯನ್ನು ಇನ್ನೂ ಕಟ್ಟಿ ನಿಲ್ಲಿಸಲು ಆಗಿಲ್ಲ. ಜನ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. ಮನೆ ಮಠ ಕಳೆದುಕೊಂಡವರು ಹೊಸ ಬದುಕು ಆರಂಭಿಸಲು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾಡಳಿತ ಕೆಲಸ ಮಾಡುತ್ತಿದೆಯಾದರೂ, ಸರಕಾರದ ಮಟ್ಟದ ಬೆಳವಣಿಗೆಗಳು ಪುನರ್ವಸತಿ ಕೆಲಸಗಳಿಗೆ ಚುರುಕು ಮುಟ್ಟಿಸುತ್ತಿಲ್ಲ.

“ಮಳೆ ಸುರಿದು ಹೋದ ಮೊದಲ ಎರಡು ವಾರ ಕೊಡಗು ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಸಂತಾಪದ ಹೊಳೆಯೇ ಹರಿದು ಬಂದಿತ್ತು. ಆದರೆ ಇವತ್ತು ತಳಮಟ್ಟದಲ್ಲಿ ಪ್ರವಾಹ ನಿರ್ವಹಣೆ ಕೆಲಸಗಳು ನಿಧಾನಗತಿಯಲ್ಲಿವೆ. ಸರಕಾರವೇ ಅಲ್ಲಾಡುತ್ತಿರುವಾಗ ಹೆಚ್ಚಿನ ನಿರೀಕ್ಷೆಗಳು ಇಲ್ಲಿನ ಜನರಿಗೆ ಇಲ್ಲ,’’ ಎನ್ನುತ್ತಾರೆ ಪ್ರವಾಹ ಪೀಡಿತ ಸ್ಥಳಗಳಲ್ಲಿ ಓಡಾಡುತ್ತಿರುವ ‘ಸಮಾಚಾರ’ದ ಪ್ರತಿನಿಧಿ ವಸಂತ್ ಕೊಡಗು.

ಇದರ ಜತೆಗೆ, ರಾಜ್ಯದ 15 ಜಿಲ್ಲೆಗಳನ್ನು ಬರ ಪೀಡಿತ ಎಂದು ಸರಕಾರ ಘೋಷಿಸಿದೆ. ತುಮಕೂರು ಭಾಗದಲ್ಲಿ ಕೆರೆಗಳಿಗೆ ನಾಲೆ ನೀರು ಹರಿಸಲು ಲಂಚ ನೀಡಿ ಜನ ಸುಸ್ತಾಗಿದ್ದಾರೆ. ಮುಂಗಾರು ಮುಗಿದರೂ ಎಷ್ಟೋ ಕಡೆಗಳಲ್ಲಿ ಇನ್ನೂ ಕೃಷಿ ಚಟುವಟಿಕೆ ಆರಂಭಿಸುವ ಪರಿಸ್ಥಿತಿ ಇಲ್ಲ. ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ವಾಣಿಜ್ಯ ಬೆಳೆಗಳು ಕೈಕೊಟ್ಟಿವೆ. ರೈತರು ಮುಂದೇನು ಎಂದು ಕೈಚೆಲ್ಲಿ ಕುಳಿತಿದ್ದಾರೆ.

ಕೃಷಿ, ರೈತರ ಬದುಕು ಹೀಗಾದರೆ, ನಗರ ಪ್ರದೇಶದ ಜನ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಇಂಧನ ಬೆಲೆಯಲ್ಲಿ ಇಳಿಕೆ ಕಾಣಿಸುತ್ತಿಲ್ಲ. ಪರೋಕ್ಷವಾಗಿ ನಿತ್ಯ ಬದುಕು ದುಸ್ತರದ ಮಟ್ಟವನ್ನು ತಲುಪುತ್ತಿದೆ. ಉದ್ಯೋಗಗಳು ಸಿಗದೆ ಜನ ದುಡಿಮೆ ಇಲ್ಲದೆ ಪರದಾಡುತ್ತಿದ್ದಾರೆ.

“ಕಳೆದ ಮೂರು ತಿಂಗಳಿನಿಂದ ಸ್ವಂತ ಉದ್ಯೋಗ ಆರಂಭಿಸಲು ಸಾಲಕ್ಕಾಗಿ ಎಂ. ಎಸ್. ಬಿಲ್ಡಿಂಗ್ ಸುತ್ತುತ್ತಲೇ ಇದ್ದೇನೆ. ಕೇಂದ್ರ ಸರಕಾರದ ಯೋಜನೆಗಳಿರಲಿ, ರಾಜ್ಯ ಸರಕಾರದ ಯೋಜನೆಗಳಿರಲಿ, ಒಂದು ಫೈಲ್‌ ಕೂಡ ಹರಿದಾಡುತ್ತಿಲ್ಲ. ಮಳೆಯಿಂದ ನಮ್ಮ ಸಾಂಪ್ರದಾಯಿಕ ಮೀನುಗಾರಿಕೆಯ ಆದಾಯವೂ ಕಡಿಮೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬದುಕುವುದಕ್ಕೆ ಅರ್ಥವೇ ಇರುವುದಿಲ್ಲ,’’ ಎನ್ನುತ್ತಾರೆ ಉಡುಪಿ ಮೂಲದ ರವಿ ಮೊಗವೀರ. ಅಂದಹಾಗೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ರಮೇಶ್ ಜಾರಕಿಹೋಳಿ ಅವರ ಕೈಲಿದೆ.

ಹೊಸ ಸರಕಾರ ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಪರಿಸ್ಥಿತಿ ಹೀಗಿದೆ. ಅಷ್ಟರೊಳಗೆ ಸರಕಾರವನ್ನು ಕೆಡವಲು ಹೊರಟಿದೆ ಪ್ರತಿಪಕ್ಷ ಬಿಜೆಪಿ. ಪಕ್ಷದ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಮಂಗಳವಾರ ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ. ಚುನಾವಣೆ ಕಳೆಯುತ್ತಿದ್ದಂತೆ ಸರಕಾರ ರಚಿಸಲು ಮುಂದಾದವರು ಬಿಎಸ್‌ವೈ. ಆದರೆ ಸಂಖ್ಯಾಶಾಸ್ತ್ರವನ್ನು ಸರಿದೂಗಿಸುವಲ್ಲಿ ಸೋತ ಅವರು ರಾಜೀನಾಮೆ ಕೊಟ್ಟವರು. ಇದೀಗ ಮತ್ತೆ ಅಧಿಕಾರಕ್ಕೇರುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಪ್ರತಿಪಕ್ಷವಾಗಿ ಅವರು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ಮರೆತವರು ಆಡಳಿತಕ್ಕೆ ಬಂದರೂ ಪರಿಸ್ಥಿತಿಯಲ್ಲಿ ಬದಲಾವಣೆಯಾಗುತ್ತೆ ಎಂದು ನಂಬಲು ಸಾಧ್ಯವಿದೆಯಾ?

ಇನ್ನು, ಆಡಳಿತ ಪಕ್ಷಗಳ ಶಾಸಕರೂ ಕ್ಷೇತ್ರ ಬಿಟ್ಟು, ಮಾರುಕಟ್ಟೆಯಲ್ಲಿ ತಮಗೆಷ್ಟು ಬೆಲೆ ಇದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಜನರ ಸಂಕಷ್ಟಗಳಿಗೆ ಕಿವಿಯಾಗದೆ ಎಂತಹ ಆಡಳಿತವನ್ನು ಅವರು ನೀಡಲು ಸಾಧ್ಯ ಎಂಬ ಕನಿಷ್ಠ ವಿವೇಚನೆಯೂ ಅವರಲ್ಲಿ ಸತ್ತು ಹೋದಂತೆ ಕಾಣಿಸುತ್ತಿದೆ. ಒಟ್ಟಾರೆ, ಹೊಣೆಗಾರಿಕೆಯ ಆಡಳಿತ ನೀಡಬೇಕದ ಸರಕಾರ ವಿಧಾನಸೌಧದಿಂದ ಖಾಸಗಿ ಪಂಚಾತಾರ ಹೋಟೆಲ್‌ಗಳಿಗೆ ವರ್ಗಾವಣೆಗೊಂಡಿದೆ.

ಈ ಚಂದಕ್ಕೆ ಐದು ವರ್ಷಗಳ ನಂತರ ಒಂದು ಚುನಾವಣೆ, ಹೊಸ ಸರಕಾರದ ರಚನೆ ಮತ್ತು ಪ್ರಣಾಳಿಕೆಗಳ ಆಡಂಬರ.

“ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ನಿಮಗೆ ಗೊತ್ತಿರಬಹುದು. ಇಲ್ಲಿ ಮೂರು ಪ್ರಮುಖ ಪಕ್ಷಗಳು ಜನರ ಹಿತವನ್ನು, ತಮ್ಮ ಹೊಣೆಗಾರಿಕೆಯನ್ನು ಮರೆತಿವೆ. ರಾಜಕಾರಣ ಎಂದರೆ ಅಧಿಕಾರಕ್ಕಾಗಿ ನಡೆಸುವ ಪಟ್ಟುಗಳು ಎಂಬಂತಾಗಿದೆ. ಜನ ಓಟು ಹಾಕಿ ಗೆಲ್ಲಿಸಿ ಕಳುಹಿಸಿದ್ದು ಯಾಕೆ ಎಂಬ ಮೂಲಭೂತ ಕಾರಣವನ್ನೇ ಮರೆತಿದ್ದಾರೆ. ಇವರಿಗೆ ಬುದ್ಧಿ ಹೇಳಬೇಕಾದ ಮಾಧ್ಯಮಗಳೂ ಕೂಡ ಒಂದೊಂದು ಅಜೆಂಡಾ, ಜಾತಿ ರಾಜಕೀಯ ಹಾಗೂ ಪಕ್ಷಪಾತದಲ್ಲಿ ಮುಳುಗಿವೆ. ಪ್ರಜಾಪ್ರಭುತ್ವ ಎದುರಿಸುತ್ತಿರುವ ಇವತ್ತಿನ ಬಿಕ್ಕಟ್ಟಿನ ಮೂರ್ತ ಸ್ವರೂಪವೊಂದು ಕರ್ನಾಟಕದಲ್ಲಿ ಕಾಣಸಿಗುತ್ತಿದೆ,’’ ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಇಂತಹ ನಾಚಿಕೆಗೇಡಿನ ಸಂಗತಿಗಳು ಕರ್ನಾಟಕದ ರಾಜಕಾರಣದಲ್ಲಿ ಇವತ್ತು ನಡೆಯುತ್ತಿವೆ. ಈ ಸಮಯದಲ್ಲಿ ಅನ್ನಿಸುತ್ತಿರುವುದು ಇಷ್ಟೆ; ನಿದ್ದೆ ಮಾಡುವವರನ್ನು ಎಬ್ಬಿಸಬಹುದು. ಆದರೆ ಮಲಗಿದವರಂತೆ ನಟಿಸುವವರನ್ನು ಎಚ್ಚರಿಸಲು ಸಾಧ್ಯನಾ?