ಏರುತ್ತಲೇ ಇದೆ ಇಂಧನ ಬೆಲೆ: ಮೌನಕ್ಕೆ ಶರಣಾದ ಕೇಂದ್ರ ಸರಕಾರ, ನಿದ್ದೆಗೆ ಜಾರಿದ ವಿರೋಧ ಪಕ್ಷಗಳು
COVER STORY

ಏರುತ್ತಲೇ ಇದೆ ಇಂಧನ ಬೆಲೆ: ಮೌನಕ್ಕೆ ಶರಣಾದ ಕೇಂದ್ರ ಸರಕಾರ, ನಿದ್ದೆಗೆ ಜಾರಿದ ವಿರೋಧ ಪಕ್ಷಗಳು

ದ್ರವ ರೂಪದ ಚಿನ್ನ ಪೆಟ್ರೋಲ್‌ ದರ ಗಗನಮುಖಿಯಾಗಿದ್ದು ಅದನ್ನೇ ಗಿಫ್ಟ್‌ ನೀಡುವ ಹಂತಕ್ಕೆ ಬಂದು ಮುಟ್ಟಿದೆ ಪರಿಸ್ಥಿತಿ.

ಪೆಟ್ರೋಲ್‌ ಬೆಲೆ ಸೆಂಚುರಿ ಬಾರಿಸುವ ಧಾವಂತದಲ್ಲಿರುವ ಹೊತ್ತಲ್ಲೇ, ದೇಶದಲ್ಲಿ ಇಂದನ ಬೆಲೆ ಏರಿಕೆ ಸುತ್ತ ನಡೆಯುತ್ತಿರುವ ಬೆಳವಣಿಗೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹಾಸ್ಯ, ಟ್ರೋಲ್‌ನಿಂದ ಆರಂಭಿಸಿ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಬಗ್ಗೆ ಗಂಭೀರ ಅಭಿಪ್ರಾಯಗಳು ಮೊಳಗುತ್ತಿವೆ. ಅವುಗಳ ಕೆಲವು ಧಾಟಿಗಳು ಹೀಗಿವೆ.

35 ರೂಪಾಯಿ ಪೆಟ್ರೋಲ್‌:

ಭಾನುವಾರ ಎನ್‌ಡಿಟಿವಿ ಯೂತ್‌ ಕಾನ್ಕ್ಲೇವ್‌ನಲ್ಲಿ ಮಾತನಾಡಿದ್ದ ಯೋಗ ಗುರು ಮತ್ತು ಉದ್ಯಮಿ ಬಾಬಾ ರಾಮ್‌ದೇವ್‌, ‘ಒಂದೊಮ್ಮೆ ಸರಕಾರ ನನ್ನ ಕೈಗೆ ಸಿಕ್ಕರೆ ನಾನು ಭಾರತಕ್ಕೆ 35-40 ರೂಪಾಯಿಗೆ ಪೆಟ್ರೋಲ್‌ ನೀಡುತ್ತೇನೆ’ ಎಂದಿದ್ದಾರೆ. ಜತೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ನ್ನು ಜಿಎಸ್‌ಟಿ ಅಡಿಯಲ್ಲಿ ತರಬೇಕು; ಹಾಗಂಥ ಅತಿ ಹೆಚ್ಚಿನ ತೆರಿಗೆ ಸ್ಥರ ಶೇಕಡಾ 28ರ ಅಡಿಯಲ್ಲೂ ಅದನ್ನು ಇಡಬಾರದು ಎಂದು ವಾದಿಸಿದ್ದಾರೆ. ತೆರಿಗೆ ನಷ್ಟ ದೇಶದ ಅಭಿವೃದ್ಧಿಯ ಓಟಕ್ಕೆ ತಡೆ ಒಡ್ಡಿದೆ ಎಂದು ಹೇಳಿರುವ ಅವರು, ನಾವು ಶ್ರಿಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಬಹುದು ಎಂದು ವಾದಿಸಿದ್ದಾರೆ.

ಪೆಟ್ರೋಲ್‌ ಉಡುಗೊರೆ:

ಸಾಮಾನ್ಯವಾಗಿ ಮದುವೆಗಳಲ್ಲಿ ದುಬಾರಿ ಉಡುಗೊರೆ ಎಂದು ಚಿನ್ನವನ್ನು ನೀಡುವ ಸಂಪ್ರದಾಯಗಳಿವೆ. ಆದರೆ ಇದೀಗ ದ್ರವ ರೂಪದ ಚಿನ್ನ ಪೆಟ್ರೋಲ್‌ ದರ ಗಗನಮುಖಿಯಾಗಿದ್ದು ಅದನ್ನೇ ಗಿಫ್ಟ್‌ ನೀಡುವ ಹಂತಕ್ಕೆ ಬಂದು ಮುಟ್ಟಿದೆ ಪರಿಸ್ಥಿತಿ. ತಮಿಳುನಾಡಿನ ಕಡಲೂರಿನಲ್ಲಿ ನಡೆದ ಮದುವೆಯಲ್ಲಿ ಅತಿಥಿಗಳು ನವ ದಂಪತಿಗೆ 5 ಲೀಟರ್‌ ಪೆಟ್ರೋಲ್‌ ಉಡುಗೊರೆ ನೀಡಿದ್ದಾರೆ. ಈ ಚಿತ್ರಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ದರ ಏರಿಕೆಯ ತೀವ್ರತೆಯನ್ನು ವಿಡಂಬನಾತ್ಮಕವಾಗಿ ಜನರ ಮುಂದಿಟ್ಟಿದೆ.

<b>ದಂಪತಿಗೆ ದುಬಾರಿ ಪೆಟ್ರೋಲ್‌ ಗಿಫ್ಟ್‌</b>
ದಂಪತಿಗೆ ದುಬಾರಿ ಪೆಟ್ರೋಲ್‌ ಗಿಫ್ಟ್‌

ಬೆಲೆ ಏರಿಕೆ ಪ್ರಶ್ನಿಸಿದವನಿಗೆ ಏಟು

ತಮಿಳುನಾಡಿನಲ್ಲಿ ಬೆಲೆ ಏರಿಕೆ ವಿರುದ್ಧ ಇಂಥಹದ್ದೊಂದು ವಿಡಂಬನಾತ್ಮಕ ಪ್ರತಿಭಟನೆ ನಡೆಯುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಪೆಟ್ರೋಲ್‌ ದರ ಏರಿಕೆ ಪ್ರಶ್ನಿಸಿದ ಆಟೋ ಚಾಲಕರೊಬ್ಬರು ಹಲ್ಲೆಗೆ ಒಳಗಾಗಿದ್ದಾರೆ. ಭಾನುವಾರ ರಾತ್ರಿ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಲಿಸಾಯಿ ಸೌಂದರ್ಯರಾಜನ್‌ ಸಾಯಿದಪೇಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಹಿರಿಯ ಆಟೋ ಚಾಲಕರೊಬ್ಬರು, ಪೆಟ್ರೋಲ್‌ ಬೆಲೆ ಯಾಕೆ ನಿರಂತರ ಏರುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಬಿಜೆಪಿ ಕಾರ್ಯಕರ್ತರು ಅವರನ್ನು ಸ್ಥಳದಿಂದ ದೂರ ತಳ್ಳಿ, ಹಲ್ಲೆ ಮಾಡಿದ್ದಾರೆ.

ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್‌ ಬೆಲೆ ಇಳಿಕೆ

ಇಂಧನ ಬೆಲೆ ಏರಿಕೆ ಕಾಣುತ್ತಿದ್ದಂತೆ ಹಲವು ರಾಜ್ಯಗಳು ಗ್ರಾಹಕರ ಸಹಾಯಕ್ಕೆ ಧಾವಿಸಿವೆ. ಇವುಗಳ ಸಾಲಿಗೆ ಸೋಮವಾರ ಕರ್ನಾಟಕವೂ ಸೇರ್ಪಡೆಯಾಗಿದ್ದು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ರಾಜ್ಯದಲ್ಲಿ ತಲಾ ಎರಡು ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ. ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 3.25 ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 3.27ರಷ್ಟು ಇಳಿಕೆ ಮಾಡಲಾಗಿದ್ದು ಬೆಲೆಯಲ್ಲಿ ತಲಾ ಎರಡು ರೂಪಾಯಿ ಇಳಿಕೆಯಾಗಿದೆ. ಸದ್ಯ ಬೆಲೆ ಇಳಿಕೆ ನಂತರ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 82.91 ರೂಪಾಯಿ ಮತ್ತು ಡೀಸೆಲ್‌ ಬೆಲೆ 74.33 ರೂಪಾಯಿ ಆಗಿದೆ. ತೈಲ ಬೆಲೆ ಏರಿಕೆಯ ಕಾರಣಕ್ಕೆ ಕರ್ನಾಟಕದ ಸಾರಿಗೆ ಸಂಸ್ಥೆಗಳ ಬಸ್‌ ದರದಲ್ಲಿ ಶೇಕಡಾ 18ರಷ್ಟು ಏರಿಕೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿತ್ತು. ಆದರೆ ತಡ ರಾತ್ರಿ ಈ ಆದೇಶಕ್ಕೆ ಮುಖ್ಯಮಂತ್ರಿಗಳು ತಡೆ ನೀಡುವುದರೊಂದಿಗೆ ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಹೀಗೆ ದೇಶದಾದ್ಯಂತ ತೈಲ ಬೆಲೆ ಏರಿಕೆಯ ಸುತ್ತ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೆಲವು ರಾಜ್ಯ ಸರಕಾರಗಳು ಸಣ್ಣ ಪ್ರಮಾಣದ ಬೆಲೆ ಇಳಿಕೆ ಮಾಡಿವೆ ಹೊರತು ಕೇಂದ್ರ ಸರಕಾರ ಬೆಲೆ ಇಳಿಕೆ ಮಾಡುವ ಗೋಜಿಗೆ ಹೋಗಿಲ್ಲ. ಆ ಬಗ್ಗೆ ಆಲೋಚನೆಯೂ ಮಾಡಿದಂತೆ ಕಾಣಿಸುತ್ತಿಲ್ಲ. ಇನ್ನೊಂದೆಡೆ ಇದನ್ನು ಪ್ರಶ್ನಿಸಬೇಕಾಗಿದ್ದ ವಿರೋಧ ಪಕ್ಷಗಳು ಕಾಟಾಚಾರದ ‘ಭಾರತ್‌ ಬಂದ್‌’ ನಂತರ ನಿದ್ರೆಗೆ ಜಾರಿದಂತಿವೆ.