ಅಮಾನ್ಯೀಕರಣದ ಸಡಗರದಲ್ಲಿ ನೋಟು ಬದಲಾವಣೆ ಮಾಡಿದ ಟಾಪ್ 10 ‘ಜಾಣ’ರಿವರು...
COVER STORY

ಅಮಾನ್ಯೀಕರಣದ ಸಡಗರದಲ್ಲಿ ನೋಟು ಬದಲಾವಣೆ ಮಾಡಿದ ಟಾಪ್ 10 ‘ಜಾಣ’ರಿವರು...

ಮೇಲ್ನೋಟಕ್ಕೆ ಹಗರಣವಲ್ಲದ, ಆದರೆ ಆಳದಲ್ಲಿ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿರುವ, ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿರಬಹುದಾದ ಪ್ರಕರಣಗಳು ಇವು.

ನವೆಂಬರ್‌ 8, 2016.. ದೇಶದಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧವನ್ನು ಘೋಷಿಸಿದ್ದರು ಪ್ರಧಾನಿ ನರೇಂದ್ರ ಮೋದಿ. ಇದಾದ ಮೂರು ದಿನಗಳ ನಂತರ ಹೊಸ ನೋಟುಗಳ ಜತೆ ಹಳೆ ನೋಟಿನ ಬದಲಾವಣೆಗಳಿಗೆ ಅವಕಾಶ ನೀಡಲಾಗಿತ್ತು. ಹೀಗೆ ನೋಟು ಬದಲಾವಣೆ ಮಾಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಟಾಪ್‌ 10 ಬ್ಯಾಂಕ್‌ಗಳು ಯಾವುವು? ಅವುಗಳ ನಿರ್ದೇಶಕರು ಯಾರು ಎಂಬುದನ್ನು ಹುಡುಕಿಕೊಂಡು ಹೊರಟರೆ ಕುತೂಹಲಕಾರಿ ಕಥೆಗಳು ತೆರೆದುಕೊಳ್ಳುತ್ತವೆ.

ಮೊದಲ ಸ್ಥಾನದಲ್ಲಿರುವ ಅಹಮದಾಬಾದ್‌ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮತ್ತು ಅದರ ನಿರ್ದೇಶಕ ಅಮಿತ್‌ ಶಾರಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳವರೆಗೆ ಈ ಮಾಹಿತಿ ತೆರೆದುಕೊಳ್ಳುತ್ತವೆ. ಮೇಲ್ನೋಟಕ್ಕೆ ಹಗರಣವಲ್ಲದ, ಆದರೆ ಆಳದಲ್ಲಿ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿರುವ, ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿರಬಹುದಾದ ಪ್ರಕರಣಗಳು ಇವು.

ಅನಾಣ್ಯೀಕರಣದ ಸಂದರ್ಭದಲ್ಲಿ ವಿನಿಮಯವಾದ ನೋಟುಗಳ ಮೌಲ್ಯದ ಬಗ್ಗೆ ‘ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌)‘ನಿಂದ ಆರ್‌ಟಿಐ ಮೂಲಕ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಮಾಹಿತಿ ಪಡೆದುಕೊಂಡಿದೆ.

ಇದರ ಪ್ರಕಾರ, ದೇಶದ 370 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಒಟ್ಟು 22,270 ಕೋಟಿ ರೂಪಾಯಿ ಮೌಲ್ಯದ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿ ಕೊಟ್ಟಿವೆ. ಇದರಲ್ಲಿ ಬರೋಬ್ಬರಿ ಶೇಕಡಾ 18.82 ಅಂದರೆ 4,191.39 ಕೊಟಿ ರೂಪಾಯಿಗಳನ್ನು ಕೇವಲ 10 ಬ್ಯಾಂಕ್‌ಗಳು ವಿನಿಮಯ ಮಾಡಿಕೊಟ್ಟಿವೆ. ಇದರ ಅಧ್ಯಕ್ಷರುಗಳು ದೇಶದ ಪ್ರಮುಖ ಪಕ್ಷಗಳಿಗೆ ಸೇರಿದ ಪ್ರಭಾವಿ ಮುಖಂಡರಾಗಿದ್ದಾರೆ. ಈ ಹತ್ತು ಬ್ಯಾಂಕ್‌ಗಳಲ್ಲಿ ತಲಾ ನಾಲ್ಕು ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿದೆ. ತಲಾ ಒಂದು ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿದೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಹಮದಾಬಾದ್‌ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 745.59 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಲಾಗಿದೆ. ಅಂದ ಹಾಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಇದರ ನಿರ್ದೇಶಕರಾಗಿದ್ದಾರೆ ಮತ್ತು ಬಿಜೆಪಿ ನಾಯಕ ಅಜಯ್‌ಭಾಯ್‌ ಎಚ್‌ ಪಟೇಲ್‌ ಇದರ ಅಧ್ಯಕ್ಷರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ರಾಜ್‌ಕೋಟ್‌ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಇದ್ದು ಇಲ್ಲಿ 693.19 ಕೋಟಿ ರೂಪಾಯಿಗಳಷ್ಟು ಹಣ ವಿನಿಮಯವಾಗಿದೆ. ಗುಜರಾತ್‌ ಸಚಿವ ಜಯೇಶ್‌ಭಾಯ್‌ ರಾದಾಡಿಯಾ ಇದರ ಅಧ್ಯಕ್ಷರಾಗಿದ್ದಾರೆ.

ಟಾಪ್‌ 10 ಬ್ಯಾಂಕ್‌ಗಳಲ್ಲಿ ಅನಾಣ್ಯೀಕರಣದ ವೇಳೆ ನಡೆದ ನೋಟು ಬದಲಾವಣೆಯ ಮೊತ್ತ. 
ಟಾಪ್‌ 10 ಬ್ಯಾಂಕ್‌ಗಳಲ್ಲಿ ಅನಾಣ್ಯೀಕರಣದ ವೇಳೆ ನಡೆದ ನೋಟು ಬದಲಾವಣೆಯ ಮೊತ್ತ. 

ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಇದೆ. ಇಲ್ಲಿ ಒಟ್ಟು 551.62 ಕೋಟಿ ರೂಪಾಯಿ ಹಣ ಈ ಅವಧಿಯಲ್ಲಿ ವಿನಿಮಯವಾಗಿದೆ. ಮಾಜಿ ಎನ್‌ಸಿಪಿ ಶಾಸಕ ರಮೇಶ್‌ ಥೋರಟ್‌ ಇದರ ಅಧ್ಯಕ್ಷರಾಗಿದ್ದರೆ, ಕಾಂಗ್ರೆಸ್‌ ನಾಯಕಿ ಅರ್ಚನಾ ಗರೆ ಇದರ ಉಪಾಧ್ಯಕ್ಷೆಯಾಗಿದ್ದಾರೆ. ಶರದ್‌ ಪವಾರ್‌ ಸಂಬಂಧಿ ಅಜಿತ್‌ ಪವಾರ್‌ ಬ್ಯಾಂಕ್‌ನ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ಹೀಗೆ ಪಟ್ಟಿ ಮುಂದುವರಿಯುತ್ತದೆ. ಇದರಲ್ಲಿ 7ನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸ್ಥಾನ ಪಡೆದಿದೆ. ಕಾಂಗ್ರೆಸ್ ನಾಯಕ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಜಿಲ್ಲೆಯ ಪ್ರಚಾರದ ಉಸ್ತುವಾರಿ ಹೊತ್ತಿದ್ದ ಎಂ.ಎನ್. ರಾಜೇಂದ್ರ ಕುಮಾರ್‌ ಇದರ ಅಧ್ಯಕ್ಷರಾಗಿದ್ದಾರೆ. ಈ ಬ್ಯಾಂಕ್‌ನಲ್ಲಿ ಅನಾಣ್ಯೀಕರಣದ ಅವಧಿಯಲ್ಲಿ 327.81 ಕೋಟಿ ರೂಪಾಯಿಗಳನ್ನು ಬದಲಾವಣೆ ಮಾಡಿ ಕೊಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಗಂಭೀರ ಅನುಮಾನಗಳಿದ್ದು 2016ರ ಡಿಸೆಂಬರ್‌ನಲ್ಲಿ ಬ್ಯಾಂಕ್‌ ಮೇಲೆ ಐಟಿ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ ಮೂರು ದಿನಗಳ ಪರಿಶೀಲನೆ ನಡೆಸಿದ್ದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದು ಟಾಪ್‌ 10 ಬ್ಯಾಂಕ್‌ಗಳ ಕಥೆ ಮಾತ್ರವಲ್ಲ. ಇದರಾಚೆಗೆ ಪಟ್ಟಿಯಲ್ಲಿರುವ ಪ್ರಮುಖ ಬ್ಯಾಂಕ್‌ಗಳಲ್ಲಿ ಅನಾಣ್ಯೀಕರಣದ ಸಂದರ್ಭ ದೊಡ್ಡ ಮೊತ್ತದ ನೋಟು ಬದಲಾವಣೆ ನಡೆದಿದೆ. ಮತ್ತು ಬಹುತೇಕ ಬ್ಯಾಂಕ್‌ಗಳ ಅಧ್ಯಕ್ಷಗಿರಿ ಪ್ರಭಾವಿ ರಾಜಕಾರಣಿಗಳ ಕೈಯಲ್ಲಿದೆ. ಇವರುಗಳು ಬ್ಯಾಂಕ್‌ಗಳ ಎಲ್ಲಾ ವ್ಯವಹಾರಗಳನ್ನು ನಿಯಂತ್ರಣ ಮಾಡುತ್ತಾ ಬಂದಿದ್ದು ಅನಾಣ್ಯೀಕರಣದ ಸಂದರ್ಭ ಅಕ್ರಮ ಎಸಗಿರುವ ಆರೋಪಗಳಿವೆ. ಆದರೆ ಈ ಬಗ್ಗೆ ತನಿಖೆ ಮಾಡುವವರು ಯಾರು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.