ಏರುತ್ತಿದೆ ಪೆಟ್ರೋಲ್‌ ಬೆಲೆ, ಬೀಳುತ್ತಿದೆ ರೂಪಾಯಿ ಮೌಲ್ಯ; ಕಾಶಿಯಲ್ಲಿಂದು ಮೋದಿ ಜನ್ಮದಿನಾಚರಣೆ!
COVER STORY

ಏರುತ್ತಿದೆ ಪೆಟ್ರೋಲ್‌ ಬೆಲೆ, ಬೀಳುತ್ತಿದೆ ರೂಪಾಯಿ ಮೌಲ್ಯ; ಕಾಶಿಯಲ್ಲಿಂದು ಮೋದಿ ಜನ್ಮದಿನಾಚರಣೆ!

ಪೆಟ್ರೋಲ್‌ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಗಂಭೀರವಾಗಿ ಯೋಚಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಭಾರತ್‌ ಬಂದ್‌ಗಷ್ಟೇ ವಿರೋಧ ಪಕ್ಷಗಳ ಹೊಣೆಗಾರಿಕೆ ಕೊನೆಯಾಗುವುದಿಲ್ಲ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಕಳೆದ ವಾರ ಭಾರತ್‌ ಬಂದ್‌ ನಡೆಸಿದ್ದಾಯಿತು. ಕಾಂಗ್ರೆಸ್‌, ಬಿಜೆಪಿ ನಾಯಕರು ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯ ವಿಷಯದಲ್ಲಿ ತಮ್ಮ ತಮ್ಮದೇ ರೀತಿಯಲ್ಲಿ ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದಾಯಿತು. ಕೊನೆಗೆ, “ಕೇಂದ್ರ ಸರಕಾರ ದರ ನಿಯಂತ್ರಣಕ್ಕೆ ಮುಂದಾಗಿದೆ” ಎಂದು ಬಿಜೆಪಿ ಅಧ್ಯಕ್ಷ ‘ಕೇಂದ್ರದ ಪರವಾಗಿ’ ಹೇಳಿಕೆ ಕೊಟ್ಟಿದ್ದೂ ಆಯಿತು. ಆದರೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾತ್ರ ನಿಂತಿಲ್ಲ.

ಸೋಮವಾರ (ಸೆ.17) ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 84.74 ರೂಪಾಯಿ ಹಾಗೂ ಡೀಸೆಲ್‌ ದರ 76.16 ರೂಪಾಯಿಗೆ ಬಂದು ನಿಂತಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ದೇಶದಲ್ಲೇ ಗರಿಷ್ಠ 90 ರೂಪಾಯಿಗೆ ತಲುಪಿದೆ. ಬೆಲೆ ಏರಿಕೆ ಹೀಗೆ ಬಂದು ನಿಂತಿದ್ದರೆ ಪರವಾಗಿರಲಿಲ್ಲ. ಆದರೆ, ಈ ಏರಿಕೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳಂತೂ ಕಾಣುತ್ತಿಲ್ಲ. ಏಕೆಂದರೆ ಕಳೆದ ಹತ್ತು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಬರುತ್ತಿದೆ.

ಸೆಪ್ಟೆಂಬರ್‌ 7ರಂದು ಬೆಂಗಳೂರಿನಲ್ಲಿ ಲೀಟರ್‌ಗೆ 82.60 ರೂಪಾಯಿ ಇದ್ದ ಪೆಟ್ರೋಲ್‌ ಬೆಲೆ ಹತ್ತು ದಿನಗಳಲ್ಲಿ 2.14 ರೂಪಾಯಿ ಹೆಚ್ಚಾಗಿದೆ. ಹತ್ತು ದಿನಗಳ ಹಿಂದೆ 74.39 ರೂಪಾಯಿ ಇದ್ದ ಡೀಸೆಲ್‌ ಬೆಲೆ ಈಗ 1.77 ರೂಪಾಯಿ ಹೆಚ್ಚಿದೆ. ಕಳೆದ ತಿಂಗಳಿನಿಂದ ಏರಲು ಆರಂಭಿಸಿ ಪೆಟ್ರೋಲ್‌, ಡೀಸೆಲ್‌ ಬೆಲೆ ಈವರೆಗೂ ಇಳಿಮುಖ ಕಂಡಿಲ್ಲ. ಬೆಲೆ ಏರಿಕೆಗೆ ಕಡಿವಾಣ ಹಾಕುವುದಾಗಿ ಹೇಳುತ್ತಿರುವ ಸರಕಾರ ಹಾಗೂ ಆಡಳಿತ ಪಕ್ಷದ ನಾಯಕರು ಅದಕ್ಕಾಗಿ ಕೈಗೊಂಡಿರುವ ಕ್ರಮಗಳು ಏನು ಎಂಬ ಬಗ್ಗೆ ಬಾಯಿ ಬಿಡುತ್ತಿಲ್ಲ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಗೆ ಅಮೆರಿಕ ಮತ್ತು ಚೀನಾಗಳ ಕಡೆಗೆ ಬೊಟ್ಟು ಮಾಡಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, “ಅಮೆರಿಕ ಮತ್ತು ಚೀನಾಗಳ ಯುದ್ಧ ನೀತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಿಯಂತ್ರಣಕ್ಕೆ ಸರಕಾರ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಿದೆ” ಎಂದಿದ್ದಾರೆ. ಅಮಿತ್‌ ಶಾ ಶನಿವಾರ ಹೈದರಾಬಾದ್‌ನಲ್ಲಿ ಈ ಭಾಷಣ ಬಿಗಿಯುವ ಹೊತ್ತಿಗೆ ಇದ್ದ ಬೆಲೆಗೂ ಸೋಮವಾರದ ವೇಳೆಗೆ ಇರುವ ಬೆಲೆಗೂ ಸುಮಾರು 50 ಪೈಸೆಗಳಷ್ಟು ಹೆಚ್ಚಳವಾಗಿದೆ. ಹೀಗೆ ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಲೇ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರಕಾರ ಸಬೂಬು ಹೇಳುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಪ್ರತಿ ಬ್ಯಾರಲ್‌ ದರ ಸೋಮವಾರ 70 ಅಮೆರಿಕನ್‌ ಡಾಲರ್‌ನಷ್ಟಿದೆ. ಒಂದು ಬ್ಯಾರಲ್‌ ಎಂದರೆ ಸುಮಾರು 159 ಲೀಟರ್‌. ಡಾಲರ್‌ ಎದುರು ಭಾರತೀಯ ರೂಪಾಯಿಯ ಮೌಲ್ಯ ಈಗ 72.46. ಇದೆಲ್ಲವನ್ನೂ ಲೆಕ್ಕಹಾಕಿದರೆ ಜಾಗತಿಕ ಮಟ್ಟದಲ್ಲಿ ಪ್ರತಿ ಲೀಟರ್‌ ಕಚ್ಚಾತೈಲದ ಬೆಲೆ ಅಂದಾಜು 31.44 ರೂಪಾಯಿಯಷ್ಟಾಗುತ್ತದೆ.

ಆದರೆ, ಬೆಲೆ ಏರಿಕೆ ಸಂದರ್ಭದಲ್ಲಿ ಕಚ್ಚಾತೈಲದ ಬೆಲೆಯ ಕಡೆಗೆ ಮಾತು ತಿರುಗಿಸುವ ಕೇಂದ್ರ ಸರಕಾರ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದಾಗ ಬೆಲೆ ಇಳಿಕೆಯ ಮಾತನಾಡುವುದಿಲ್ಲ. ಕಳೆದ ವಾರ ಬ್ಯಾರಲ್‌ ಕಚ್ಚಾತೈಲದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ 67.5 ಡಾಲರ್‌ನಷ್ಟಿತ್ತು. ಆದರೆ, ಭಾರತದಲ್ಲಿ ಆ ಹೊತ್ತಿಗೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಲೇ ಇತ್ತು. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದಾಗ ಕೆಲವು ಪೈಸೆಗಳಲ್ಲಿ ದರ ಇಳಿಕೆ ಮಾಡುವ ಸರಕಾರ, ಬ್ಯಾರೆಲ್‌ ಮೇಲಿನ ದರ ಏರಿಕೆ ಸಂದರ್ಭದಲ್ಲಿ ರೂಪಾಯಿಗಳ ಲೆಕ್ಕದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಸುತ್ತಿದೆ.

ಈ ನಡುವೆ ಕಲಬುರ್ಗಿಯಲ್ಲಿ ಹೈದರಾಬಾದ್ ವಿಮೋಚನಾ ದಿನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ರಾಜ್ಯದ ಸೆಸ್‌ ಇಳಿಕೆ ಮಾಡಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರವನ್ನು 2 ರೂಪಾಯಿಗೆ ಇಳಿಸಲಾಗುವುದು” ಎಂದು ಘೋಷಿಸಿದ್ದಾರೆ. ಕೇಂದ್ರ ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಲು ಪರದಾಡುತ್ತಿರುವ ಹೊತ್ತಿನಲ್ಲಿ ಪ್ರತಿ ಲೀಟರ್‌ಗೆ 2 ರೂಪಾಯಿ ಬೆಲೆ ಇಳಿಕೆ ಘೋಷಣೆ ಮಾಡಿರುವ ರಾಜ್ಯ ಸರಕಾರದ ನಿರ್ಧಾರ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿ ಹೇಳಿದ್ದ ಮೋದಿ ನೇತೃತ್ವದ ಸರಕಾರ ಬೆಲೆ ಏರಿಕೆ ನಿಯಂತ್ರಣದಲ್ಲಿ ಸಂಪೂರ್ಣ ಸೋತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ನಾಗಾಲೋಟ ಹೆಚ್ಚಾಗಿದ್ದರೂ ಪ್ರಧಾನ ಸೇವಕ ಮೋದಿ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಸ್ಥಿರಗೊಳಿಸಲು ಮುಂದಾಗಬೇಕಿದ್ದ ಕೇಂದ್ರ ಸರಕಾರ ಆಮದು ಕಡಿತಕ್ಕೆ ಮುಂದಾಗಿದೆ. ಈ ಮೂಲಕ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಸಾಹಸಕ್ಕೆ ಸರಕಾರ ಕೈಹಾಕಿದೆ.

ಒಂದು ಕಡೆಗೆ ರೂಪಾಯಿ ಮೌಲ್ಯ ಕುಸಿತ, ಮತ್ತೊಂದು ಕಡೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಭಾರತದ ಆರ್ಥಿಕತೆಯನ್ನು ಸಂಕಷ್ಟಕ್ಕೆ ತಳ್ಳುವ ಲಕ್ಷಣಗಳಂತೂ ಕಾಣುತ್ತಿವೆ. ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ಪ್ರಯಾಣ ದರ ಸೇರಿದಂತೆ ಸರಕು ಸೇವೆಗಳ ಬೆಲೆಗಳೂ ಏರುತ್ತಿವೆ. ಇವುಗಳ ಜತೆಗೆ ಅಗತ್ಯ ವಸ್ತುಗಳ ಬೆಲೆ ತಂತಾನೆ ಏರುತ್ತಿದೆ. ದೇಶದ ಜನ ಬೆಲೆ ಏರಿಕೆಯ ಬೇಗೆಯಲ್ಲಿ ಬೇಯುತ್ತಿರುವ ಈ ಹೊತ್ತಿನಲ್ಲಿ ಪ್ರಧಾನ ಸೇವಕ ಮೋದಿ ವಾರಣಾಸಿಯಲ್ಲಿ ಇಂದು ತಮ್ಮ 68ನೇ ಜನ್ಮದಿನವನ್ನು ತಣ್ಣಗೆ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜನ್ಮದಿನದ ಶುಭಾಶಯಗಳು!