samachara
www.samachara.com
ತೆಲಂಗಾಣದ ‘ಮರ್ಯಾದಾ ಹತ್ಯೆ’ಗೆ ಮಿಡಿದ ಕಂಬನಿ: ಮಂಡ್ಯ ಕಡೆಗೂ ಒಮ್ಮೆ ನೋಡಿ...
COVER STORY

ತೆಲಂಗಾಣದ ‘ಮರ್ಯಾದಾ ಹತ್ಯೆ’ಗೆ ಮಿಡಿದ ಕಂಬನಿ: ಮಂಡ್ಯ ಕಡೆಗೂ ಒಮ್ಮೆ ನೋಡಿ...

ತೆಲಂಗಾಣದ ದಲಿತ ಯುವಕ ಪ್ರಣಯ್ ಪ್ರಾಣ ಕಳೆದುಕೊಂಡಿದ್ದಾನೆ. ನಮ್ಮದೇ ರಾಜ್ಯದ ಗೋವಿಂದರಾಜು ಬದುಕಿದ್ದೂ ಸತ್ತಿದ್ದಾನೆ. 7 ವರ್ಷಗಳ ನಂತರವೂ ಜಾತಿ ಮೀರಿ ಪ್ರೀತಿಸಿದ ಕಾರಣಕ್ಕೆ ಈತ ಜೀವಭಯದಲ್ಲೇ ಓಡಾಡಿಕೊಂಡಿದ್ದಾನೆ.

ತೆಲಂಗಾಣದಲ್ಲಿ ನಡೆದ ‘ಮರ್ಯಾದಾ ಹತ್ಯೆ’ಯೊಂದು ಕರ್ನಾಟಕದ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಅಕ್ಷರಶಃ ಅಲ್ಲಾಡಿಸಿ ಹಾಕಿದೆ. ಕಳೆದ 72 ಗಂಟೆಗಳ ಅವಧಿಯಲ್ಲಿ ನೂರಾರು ಮಂದಿ ಜಾತಿ ಕಾರಣಕ್ಕೆ ಕೊಲೆಯಾದ ಪ್ರಣಯ್‌ಗೆ ಕಂಬನಿ ಮಿಡಿದಿದ್ದಾರೆ. ಮೂರು ತಿಂಗಳ ಗರ್ಭ ಹೊತ್ತಿದ್ದ ಅಮೃತವರ್ಷಿಣಿಯ ಕಣ್ಣೀರು ಇವರುಗಳ ಸಹಜ ಆಕ್ರೋಶಕ್ಕೆ ಕಾರಣವಾಗಿದೆ.

ಜಾತಿ ನೆಲೆಯಲ್ಲಿ ಇಂತಹ ಅಮಾನುಷ ಘಟನೆಗಳು ನಡೆದಾಗ ಹುಟ್ಟುವ ಪ್ರತಿಕ್ರಿಯೆಗಳಿವು. ಪಕ್ಕದ ರಾಜ್ಯದಲ್ಲಿ ನಡೆದಂತಹದ್ದೇ ಘಟನೆಗಳು ಕರ್ನಾಟಕದಲ್ಲೂ ನಡೆದಿವೆ. ಆ ಸಮಯದಲ್ಲಿಯೂ ಇಂತಹದ್ದೇ ಆಕ್ರೋಶಗಳು ಕಾಣಿಸಿಕೊಂಡಿವೆ. ಆದರೆ ಅಂತಿಮವಾಗಿ ಇಂತಹ ಪ್ರಕರಣಗಳು ಎಲ್ಲಿಗೆ ಹೋಗಿ ಮುಟ್ಟುತ್ತಿವೆ? ಜಾತಿ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆಗಳು ಬರುತ್ತಿವೆಯಾ? ‘ಮರ್ಯಾದಾ ಹತ್ಯೆ’ಗಳ ಹಿಂದೆ ಕೆಲಸ ಮಾಡುತ್ತಿರುವ ಜಾತಿ ಮನಸ್ಥಿತಿಗಳು ಬದಲಾಗುತ್ತವಾ? ಘಟನೆ ಆಚೆಗೆ ಆಲೋಚನೆ ಮಾಡಿದ ಕುರುಹುಗಳು ಕಾಣಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ, ಕರ್ನಾಟದಲ್ಲಿಯೇ ಬೆಳಕಿಗೆ ಬಂದ ಮೊಟ್ಟ ಮೊದಲ ಮರ್ಯಾದಾ ಹತ್ಯೆಯೊಂದರ ಕತೆ ಮತ್ತು ಇವತ್ತಿನ ತಳಮಟ್ಟದ ಪರಿಸ್ಥಿತಿ ಹೇಗಿದೆ ಎಂಬುದನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಪಕ್ಕದ ರಾಜ್ಯದಲ್ಲಿ ನಡೆದ ಅಮಾನವೀಯ ಘಟನೆಗೆ ಸ್ಪಂದಿಸುತ್ತಿರುವ ಸೂಕ್ಷ್ಮಮತಿಗಳಿಗೆ, ತಮ್ಮದೇ ಬುಡದಲ್ಲಿ ನಡೆದ ಅಂತಹದ್ದೇ ಘಟನೆ ಹಾಗೂ ಪರಿಣಾಮಗಳ ಮಾಹಿತಿ ಹೊಸ ಆಲೋಚನೆಗೆ ತೆರೆದುಕೊಳ್ಳಲು ಅನುಕೂಲವಾಗಬಹುದು.

ಅದು ಅಬಲವಾಡಿ:

ಕರ್ನಾಟಕದಲ್ಲಿ ಬೆಳಕಿಗೆ ಬಂದ ಮೊದಲ ಮರ್ಯಾದಾ ಹತ್ಯೆಯ ಎಫ್‌ಐಆರ್ ಪ್ರತಿ. 
ಕರ್ನಾಟಕದಲ್ಲಿ ಬೆಳಕಿಗೆ ಬಂದ ಮೊದಲ ಮರ್ಯಾದಾ ಹತ್ಯೆಯ ಎಫ್‌ಐಆರ್ ಪ್ರತಿ. 

ಮಂಡ್ಯ ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆ ಸರಹದ್ದಿನ ಅಬಲವಾಡಿ ಎಂಬ ಗ್ರಾಮದಲ್ಲಿ 2011ರಲ್ಲಿ ನಡೆದ ಘಟನೆ ಇದು. ಅಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಗೋವಿಂದರಾಜು ಹಾಗೂ ಒಕ್ಕಲಿಗ ಜಾತಿಗೆ ಸೇರಿದ ಸುವರ್ಣ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇದು ಗೊತ್ತಾದ ನಂತರ, ಗೋವಿಂದರಾಜು ಅಣ್ಣ, ಅಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯರೂ ಆಗಿದ್ದ ತಿಮ್ಮಪ್ಪ ಕರೆದು ಬುದ್ದಿವಾದ ಹೇಳಿದ್ದರು.

ಇದಾಗಿ ಕೆಲವು ದಿನಗಳ ನಂತರ, 2011ರ ನವೆಂಬರ್ 6ರಂದು ಗೋವಿಂದರಾಜು ಹಾಗೂ ಸುವರ್ಣ ಇಲ್ಲಿನ ಅರಸಿನಗೆರೆ ಗೇಟ್‌ ಬಳಿ ಮಾತನಾಡುತ್ತಿದ್ದರು. ಇದನ್ನು ನೋಡಿದ ಸುವರ್ಣ ಕಡೆಯವರು ಊರಿಗೆ ಸುದ್ದಿ ಮುಟ್ಟಿಸಿದರು. ಸುಮಾರು 20 ಜನ ಬೈಕ್‌ನಲ್ಲಿ ಬಂದು ಇಬ್ಬರನ್ನೂ ಊರಿಗೆ ಕರೆದುಕೊಂಡು ಹೋದರು.

ಈ ಸಮಯದಲ್ಲಿ ‘ಮಾದಿಗ ನಿನಗೆ ಒಕ್ಕಲಿಗರ ಹುಡುಗಿ ಬೇಕಾ’ ಎಂದು ನಿಂದಿಸಿ, ಹಲ್ಲೆ ನಡೆಸಲಾಯಿತು. ಕೊನೆಗೆ, ಸುವರ್ಣಳನ್ನು ಗೋವಿಂದರಾಜು ಮನೆಗೆ ಎತ್ತಿಕೊಂಡು ಬಂದು ಅಲ್ಲಿಯೇ ನೇಣು ಹಾಕಲಾಯಿತು. ಈ ಸಮಯದಲ್ಲಿ ಹಲ್ಲೆಕೋರರಿಂದ ತಪ್ಪಿಸಿಕೊಂಡ ಮಾದಿಗ ಯುವಕ ಗೋವಿಂದರಾಜು ಪ್ರಾಣ ಉಳಿಸಿಕೊಂಡ. ಸಂಜೆ ಹೊತ್ತಿಗೆ ಸುವರ್ಣಳ ಶವವನ್ನು ಮತ್ತೆ ಜಮೀನಿಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಲಾಯಿತು.

ಪ್ರಕರಣ ಏನಾಗಿದೆ?:

ಮಂಡ್ಯ ಪೊಲೀಸರು ದಾಖಲಿಸಿದ ದೋಷಾರೋಪ ಪಟ್ಟಿ. 
ಮಂಡ್ಯ ಪೊಲೀಸರು ದಾಖಲಿಸಿದ ದೋಷಾರೋಪ ಪಟ್ಟಿ. 

ಜಾತಿ ಮೀರಿ ಪ್ರೀತಿಸಿದ ಕಾರಣಕ್ಕೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಮೊದಲ ಮರ್ಯಾದಾ ಹತ್ಯೆ ಪ್ರಕರಣ ಇದು. ಅವತ್ತಿಗೆ ಇದು ದೊಡ್ಡ ಸುದ್ದಿಯೇನೋ ಆಗಿತ್ತು. ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಜಕೀಯ ಪ್ರಭಾವಗಳ ನಡುವೆ ಆರೋಪಿಗಳ ಬಂಧನವಾಗಿತ್ತು.

ಪ್ರಕರಣ ನಡೆದು ನಾಲ್ಕು ತಿಂಗಳಿಗೆ ಪೊಲೀಸರು ಒಟ್ಟು 11 ಜನರ ಮೇಲೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಇಂದಿಗೂ 27 ಸಾಕ್ಷಿಗಳ ವಿಚಾರಣೆ ಸುಮಾರು 7 ವರ್ಷಗಳ ನಂತರವೂ ನ್ಯಾಯಾಲಯದಲ್ಲಿ ನಡೆಯುತ್ತಲೇ ಇದೆ.

“ಒಂದು ಹಂತದಲ್ಲಿ ನ್ಯಾಯಾಧೀಶರೇ ರಾಜಿ ಮಾಡಿಕೊಳ್ಳಿ ಎಂದರು. ಕೆಲವರು ಸಾಕ್ಷಿ ನುಡಿದಿದ್ದಾರೆ. ಇನ್ನು ಕೆಲವರು ವ್ಯತಿರಿಕ್ತ ಸಾಕ್ಷಿ ನುಡಿಯುವ ಸಾಧ್ಯತೆ ಇದೆ. ಪ್ರಕರಣ ಕುಂಟುತ್ತಾ ಸಾಗಿದೆ,’’ ಎನ್ನುತ್ತಾರೆ ಪ್ರಕರಣದಲ್ಲಿ ಗೋವಿಂದರಾಜು ಪರವಾಗಿ ವಾದಿಸುತ್ತಿರುವ ಮಂಡ್ಯ ಮೂಲದ ವಕೀಲ ಲಕ್ಷ್ಮಣ್ ಚೀರನಹಳ್ಳಿ.

ಒಂದು ಕಡೆ ನ್ಯಾಯಾಲಯದಲ್ಲಿ ಪ್ರಕರಣದ ಸ್ಥಿತಿ ಹೀಗಿದ್ದರೆ, ಇವತ್ತಿಗೂ ಗೋವಿಂದರಾಜು ಕುಟುಂಬ ಘಟನೆ ನಂತರ ಊರಿಗೆ ಕಾಲಿಟ್ಟಿಲ್ಲ. ಸುವರ್ಣಳನ್ನು ನೇಣು ಹಾಕಿದ ಮನೆ ಪಾಳು ಬಿದ್ದಿದೆ. 7 ವರ್ಷಗಳ ನಂತರವೂ ಜಾತಿ ಮೀರಿ ಪ್ರೀತಿಸಿದ ಕಾರಣಕ್ಕೆ ಗೋವಿಂದರಾಜು ಜೀವಭಯದಲ್ಲೇ ಓಡಾಡಿಕೊಂಡಿದ್ದಾನೆ. ತೆಲಂಗಾಣದ ದಲಿತ ಯುವಕ ಪ್ರಣಯ್ ಪ್ರಾಣ ಕಳೆದುಕೊಂಡಿದ್ದಾನೆ. ನಮ್ಮದೇ ರಾಜ್ಯದ ಗೋವಿಂದರಾಜು ಬದುಕಿದ್ದೂ ಸತ್ತಿದ್ದಾನೆ.

“ಇವತ್ತಿಗೆ ಊರಿಗೆ ಹೋಗಿ ಬದುಕುವ ಪರಿಸ್ಥಿತಿ ಇಲ್ಲ. ನಮಗ ಅಲ್ಲಿ ಯಾರ ಬೆಂಬಲವೂ ಇಲ್ಲ. ಹಬ್ಬ ಏನಾದರೂ ಇದ್ದರೆ ಬೆಳಗ್ಗೆ ಹೋಗಿ ಸಂಜೆ ವಾಪಾಸ್ ಬಂದು ಬಿಡುತ್ತೇವೆ. ನ್ಯಾಯಾಲಯಕ್ಕೆ ಆಗಾಗ್ಗೆ ಹೋಗಿ ಬರುತ್ತೇವೆ. ನಮ್ಮ ಪರಿಸ್ಥಿತಿ ಹೀಗಿದೆ ನೋಡಿ,’’ ಎನ್ನುತ್ತಾರೆ ಗೋವಿಂದರಾಜು.

ಮರ್ಯಾದಾ ಹತ್ಯೆಗಳು ಎಲ್ಲಿಯೇ ನಡೆಯಲಿ, ಅದಕ್ಕೆ ಕಂಬನಿ ಮಿಡಿಯುವುದು ತಪ್ಪಲ್ಲ. ಆದರೆ, ಅದು ಕಂಬನಿಗಷ್ಟೆ ಸೀಮಿತಗೊಳ್ಳುತ್ತಾ ಹೋದರೆ, ಪ್ರತಿರೋಧದಲ್ಲೂ ಒಂದು ಏಕತಾನತೆ ಕಾಡುವ ಅಪಾಯ ಇದೆ. ಇದಕ್ಕೆ ಮಂಡ್ಯದ ಅಬಲವಾಡಿ ಪ್ರಕರಣಕ್ಕಿಂತ ಜೀವಂತ ಉದಾಹರಣೆ ಇನ್ನೊಂದು ಬೇಕಾ?