ಸಂಸದ ಪ್ರತಾಪ್‌ ಸಿಂಹಗೆ  ತರಾಟೆ; ನಡುಬೀದಿಯಲ್ಲಿ ನೀರಿಳಿಸಿದ ಕೊಡಗಿನ ದೇವಯ್ಯ ಯಾರು?
COVER STORY

ಸಂಸದ ಪ್ರತಾಪ್‌ ಸಿಂಹಗೆ ತರಾಟೆ; ನಡುಬೀದಿಯಲ್ಲಿ ನೀರಿಳಿಸಿದ ಕೊಡಗಿನ ದೇವಯ್ಯ ಯಾರು?

ಕೊಡಗಿನ ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ ಸಂಸದ ಪ್ರತಾಪ್‌ ಸಿಂಹಗೆ ನಡುಬೀದಿಯಲ್ಲಿ ನೀರಿಳಿಸಿದ್ದಾರೆ. ಜನಪ್ರತಿನಿಧಿ ಪ್ರತಾಪ್‌ ಬೆನ್ನು ತಿರುಗಿಸಿಕೊಂಡು ಹೋಗುವಂತೆ ಮಾಡಿದ ಈ ದೇವಯ್ಯ ಯಾರು?

ಒಂದು ಕಾಲದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಪತ್ರಿಕಾ ಕಚೇರಿಯಲ್ಲಿ ಅಂಕಣ ಬರೆದುಕೊಂಡಿದ್ದ ಪ್ರತಾಪ್‌ ಸಿಂಹ ಈಗ ಮೈಸೂರು- ಕೊಡಗು ಸಂಸದ. ಪ್ರತಾಪ್‌ ಸಿಂಹ ಅಂಕಣ, ಮೋದಿ ಕುರಿತ ಪುಸ್ತಕ ಬರೆಯುತ್ತಿದ್ದ ಕಾಲದಲ್ಲಿ ಯಾರಾದರೂ ಹೀಗೆ ತರಾಟೆ ತೆಗೆದುಕೊಂಡಿದ್ದರೆ ಅದಕ್ಕೆ ಮಾರುತ್ತರ ನೀಡದೆ ಸುಮ್ಮನೆ ಕೂರುತ್ತಿರಲಿಲ್ಲ. ಆದರೆ, ಕೊಡಗಿನಲ್ಲಿ ತಮ್ಮದೇ ಪಕ್ಷದ ಹಿರಿಯ ಮುಖಂಡ ಎಂ.ಬಿ. ದೇವಯ್ಯ ಸಾರ್ವಜನಿಕವಾಗಿ ತರಾಟೆ ತೆಗೆದುಕೊಂಡರೂ ಸಿಂಹ ಬೆನ್ನುತಿರುಗಿಸಿ ಹೋಗಿದ್ದಾರೆ. ಸಾರ್ವಜನಿಕವಾಗಿ ಸಿಂಹಗೆ ನೀರಿಳಿಸಿದ ಈ ದೇವಯ್ಯ ಯಾರು?

ಹದಿನೈದು ದಿನಗಳ ಹಿಂದೆ ಕೊಡಗಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಇಲಾಖೆ ವತಿಯಿಂದ 8 ಕೋಟಿ ರೂಪಾಯಿಗಳ ಅಲ್ಪ ಪರಿಹಾರ ಘೋಷಿಸಿ ಹಿಂತಿರುಗಿದ್ದು ಜಿಲ್ಲೆಯ ಜನತೆಯಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿತ್ತು. ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದ್ದು ಕೇಂದ್ರ ಸರ್ಕಾರ ಕೂಡಲೇ ಹೆಚ್ಚಿನ ಪರಿಹಾರ ಘೊಷಿಸಬೇಕೆಂಬ ಬಲವಾದ ಕೂಗು ಎದ್ದಿತ್ತು.

ನಿರ್ಮಲಾ ಸೀತಾರಾಮನ್ ಅವರು ದೆಹಲಿಗೆ ಹಿಂತಿರುಗಿ ಕೇಂದ್ರದ ವರಿಷ್ಠರಿಗೆ ವಸ್ತುಸ್ಥಿತಿ ವಿವರಿಸಿದ ನಂತರ ಕೇಂದ್ರ ಸರಕಾರ ಹಿರಿಯ ಅಧಿಕಾರಿಗಳ ತಂಡವನ್ನು ಕೊಡಗಿಗೆ ಕಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಗೌರಿ ಹಬ್ಬದ ದಿನವೇ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದಲ್ಲಿ ವಿಪತ್ತು ಅಧ್ಯಯನ ತಂಡ ಕೊಡಗಿಗೆ ಆಗಮಿಸಿತ್ತು.ಈ ತಂಡ ಗುರುವಾರ ಮಡಿಕೇರಿ ಸಮೀಪದ ಹೆಬ್ಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ. ದೇವಯ್ಯ ಸಂಸದ ಪ್ರತಾಪ್‌ ಸಿಂಹ ತರಾಟೆ ತೆಗೆದುಕೊಂಡಿದ್ದರು. ಜಿಲ್ಲಾಧಿಕಾರಿ ಶ್ರೀ ವಿದ್ಯಾ, ಶಾಸಕ ಅಪ್ಪಚ್ಚು ರಂಜನ್‌ ಕೂಡಾ ಈ ವೇಳೆ ಸ್ಥಳದಲ್ಲೇ ಇದ್ದರು.

ಈ ಹಿಂದೆ ಭೂ ಕುಸಿತದ ನಂತರ ಜಿಲ್ಲೆಗೆ ಭೇಟಿ ನೀಡಿದ್ದ ಸಂಸದ ಪ್ರತಾಪ್ ಸಿಂಹ, “ಹೊರಗಿನಿಂದ ಬಂದು ಭೂಮಿ ಖರೀದಿಸುತ್ತಿರುವವರು ರೆಸಾರ್ಟ್ ಮತ್ತು ಹೋಂ ಸ್ಟೇ ನಿರ್ಮಾಣದಲ್ಲಿ ತೊಡಗಿದ್ದಾರೆ. ಅಪಾರ ಪ್ರಮಾಣದ ಭೂ ಪರಿವರ್ತನೆ ಆಗುತಿದ್ದು, ಇದು ಜಿಲ್ಲೆಯ ಪರಿಸರಕ್ಕೆ ಮಾರಕ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ” ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ ಎಂ.ಬಿ. ದೇವಯ್ಯ ಎಲ್ಲರ ಎದುರೇ ಸಂಸದರ ಹೇಳಿಕೆಯನ್ನು ಖಂಡಿಸಿದ್ದರು. ಅಲ್ಲದೇ, “ನೀವು ಪಕ್ಷವನ್ನು ಉದ್ಧಾರವೂ ಮಾಡಿಲ್ಲ, ನಿಮ್ಮಂತವರನ್ನು ಆರಿಸಿ ಕಳಿಸಿದ್ದು ನಮ್ಮ ದುರಂತ” ಎಂದೂ ಹರಿಹಾಯ್ದಿದ್ದರು.

ಸ್ಥಳದಲ್ಲಿದ್ದ ಎಲ್ಲಾ ಮಾಧ್ಯಮದವರು ಈ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದರು. ಈ ಘಟನೆ ಸುದ್ದಿಯಾಗುವ ಜತೆಗೆ ದೇವಯ್ಯ ಪ್ರತಾಪ್‌ ಸಿಂಹಗೆ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೊ ವೈರಲ್ ಆದ ಕೂಡಲೇ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಫೇಸ್ ಬುಕ್ ಲೈವ್ ಬಂದ ಸಿಂಹ, “ಅವರ ವಯಸ್ಸಿಗೆ ಬೆಲೆ ಕೊಟ್ಟು ನಾನು ಮತಾಡಲು ಹೋಗಲಿಲ್ಲ. ಈ ಹಿಂದೆ ಇದೇ ರೀತಿ ನಾನು ಭಾಷಣ ಮಾಡುವಾಗ ಗಲಾಟೆ ಮಾಡಿದ ವ್ಯಕ್ತಿಗೆ ನಾನೇ ಥಳಿಸಲು ಹೇಳಿದ್ದೆ” ಎಂದೂ ಹೇಳಿಕೊಂಡಿದ್ದರು. ಥಳಿಸಿದ ನಂತರ ಆತ ಗಲಾಟೆ ಮಾಡಲಿಲ್ಲ ಎಂದಿದ್ದರಲ್ಲದೆ, ದಡ್ಡರಿಗೆ ದೊಣ್ಣೆ ಪಟ್ಟು ಮಾತ್ರ ಅರ್ಥವಾಗುತ್ತದೆ ಎಂದಿದ್ದರು. ಅಲ್ಲದೆ ಇವರು ಈ ಹಿಂದೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೂ ವಿರೋಧ ವ್ಯಕ್ತಪಡಿಸಿದ್ದು ಗೆದ್ದ ನಂತರ ಬಂದು ಕೈ ಕುಲುಕಿದ್ದರು ಎಂದೂ ಹೇಳಿದ್ದರು.

ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ ಹೇಳಿಕೆ ದೇವಯ್ಯ ಅವರ ಗಮನಕ್ಕೆ ಬರುತ್ತಿದಂತೆ ಶನಿವಾರ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಸಂಸದರನ್ನು ಮತ್ತೊಮ್ಮೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ದೇವಯ್ಯ. “ನಾನು ಗಾಂಧಿವಾದಿಯಲ್ಲ, ಸುಭಾಷ್ ಚಂದ್ರ ಬೋಸ್ ವಾದಿ ತದುಕಿದವನಿಗೆ ಎರಡು ಜಾಸ್ತಿ ತದುಕುವ ವ್ಯಕ್ತಿ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಹೇಡಿ ನಾನಲ್ಲ. ಪ್ರತಾಪ ಸಿಂಹ ಅಪ್ಪನಿಗೆ ಹುಟ್ಟಿದ್ದರೆ ನನ್ನ ಎದುರು ಬರಲಿ” ಎಂದು ದೇವಯ್ಯ ಸವಾಲು ಹಾಕಿದ್ದಾರೆ.

ಪ್ರತಾಪ್‌ ಸಿಂಹ ಹೇಳಿಕೆಗೆ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರೂ ವಿರೋಧ ವ್ಯಕ್ತಪಡಿಸಿದ್ದು, “ಸಂಸದರು ಕೇಂದ್ರದ ನಿಯೋಗಕ್ಕೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಲು ಪೂರಕವಾಗಿ ಮನವರಿಕೆ ಮಾಡಿಕೊಡಬೇಕಿತ್ತೇ ಹೊರತು ನಷ್ಟಕ್ಕೆ ಕಾರಣ ಏನು ಎಂಬ ಬಗ್ಗೆ ವಿಶ್ಲೇಷಣೆ ಮಾಡಲು ಹೋಗಿ ಕೇಂದ್ರ ತಂಡದ ದಾರಿ ತಪ್ಪಿಸಬಾರದು” ಎಂದು ಹೇಳಿದ್ದಾರೆ.

ಸಂಸದ ಪ್ರತಾಪ್‌ ಸಿಂಹ ಹಾಗೂ ಹಿರಿಯ ಬಿಜೆಪಿ ಮುಖಂಡ ದೇವಯ್ಯ ಅವರ ವಾಕ್ಸಮರದಿಂದ ಬಿಜೆಪಿ ಮುಜುಗರಕ್ಕೀಡಾಗಿದೆ. ಒಬ್ಬರು ಪಕ್ಷದ ಸಂಸದ, ಮತ್ತೊಬ್ಬರು ಬೇರುಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದಿರುವ, ಪಕ್ಷದ ಬೆಳವಣಿಗೆಗೆ ಶ್ರಮಿಸಿರುವ ವೃದ್ಧ ನಾಯಕ.

ನಾಲ್ಕು ದಶಕಗಳ ಬಿಜೆಪಿ ಸಖ್ಯ

ಕೊಡಗಿನಲ್ಲಿ ಬಿಜೆಪಿ ಬೆಳೆಯಲು ಹಾಗೂ ಸಂಸದ ಪ್ರತಾಪ್‌ ಸಿಂಹ ಗೆಲುವಿನ ಹಿಂದೆ ಎಂ.ಬಿ. ದೇವಯ್ಯ ಅವರ ಪಾತ್ರವಿದೆ. ಈಗಲೂ ಬಿಜೆಪಿ ಸಿಂಹಗೆ ಟಿಕೆಟ್‌ ನೀಡಿದರೆ ಸಿಂಹನಿಗೇ ನಾನು ಓಟ್‌ ಹಾಕುವುದು ಎನ್ನುವಷ್ಟು ಬಿಜೆಪಿ ಭಕ್ತ ದೇವಯ್ಯ. ಸುಮಾರು ನಾಲ್ಕು ದಶಕಗಳಿಂದ ಬಿಜೆಪಿ ಜತೆಗಿರುವ ದೇವಯ್ಯ ಕೊಡಗು ಭಾಗದಲ್ಲಿ ಪಕ್ಷಕ್ಕಾಗಿ ದುಡಿದವರು. 70ರ ದಶಕದಲ್ಲಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ದೇವಯ್ಯ ನಂತರ ಜನಸಂಘ, ಬಳಿಕ ಸಹಕಾರಿ ಚಳವಳಿ ಮೂಲಕ ಮುನ್ನೆಲೆಯಲ್ಲಿ ಕಾಣಿಸಿಕೊಂಡಿದ್ದರು.

ಕೊಡಗಿನಲ್ಲೇ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಎಲ್‍ಎಲ್‍ಬಿ ವ್ಯಾಸಂಗವನ್ನು ಅರ್ಧಕ್ಕೇ ಬಿಟ್ಟು ಕೊಡಗಿಗೆ ವಾಪಸ್‌ ಬಂದ ದೇವಯ್ಯ ಜನಸಂಘದಲ್ಲಿ ಸಕ್ರಿಯರಾಗಿದ್ದರು. ಜನಸಂಘದಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದ್ದ ದೇವಯ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ದೇವಯ್ಯ ಸದ್ಯ ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಜನತಾ ಬಜಾರ್‌ನ ನಿರ್ದೇಶಕ.

“ನಾನು ಪಕ್ಷದ ಶಿಸ್ತಿನ ಸೇವಕ. ನಾಳೆ ಪ್ರತಾಪ್ ಸಿಂಹ ಅವರಿಗೇ ಪುನಃ ಪಕ್ಷ ಟಿಕೇಟ್ ನೀಡಿದರೆ ಅವರಿಗೇ ಮತ ಹಾಕುತ್ತೇನೆ” ಎನ್ನುವ ದೇವಯ್ಯ ಅವರ ಈ ಹಿಂದಿನ ಮಾತುಗಳನ್ನು ಬಿಜೆಪಿ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದು ಅನುಮಾನ.