samachara
www.samachara.com
ಮಾಫಿಯಾ ಕೈಯಲ್ಲಿ ಸರಕಾರದ ಭವಿಷ್ಯ?; ‘ಫೈನಲ್‌ ಬೆಲ್‌’ವರೆಗೆ ನಡೆಯಲಿದೆ ‘ಸಮ್ಮಿಶ್ರ’ ನಾಟಕ!
COVER STORY

ಮಾಫಿಯಾ ಕೈಯಲ್ಲಿ ಸರಕಾರದ ಭವಿಷ್ಯ?; ‘ಫೈನಲ್‌ ಬೆಲ್‌’ವರೆಗೆ ನಡೆಯಲಿದೆ ‘ಸಮ್ಮಿಶ್ರ’ ನಾಟಕ!

ಸಮ್ಮಿಶ್ರ ಸರಕಾರ ಉರುಳಿಸಲು ಮಾಫಿಯಾ ಕಿಂಗ್‌ ಪಿನ್‌ಗಳು ಬಿಜೆಪಿ ಜತೆಗಿದ್ದಾರೆ ಎನ್ನುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರದ ಭವಿಷ್ಯ ಮಾಫಿಯಾ ಕೈಯಲ್ಲಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಇನ್ನೂ ನಾಲ್ಕು ತಿಂಗಳೂ ತುಂಬಿಲ್ಲ, ಆಗಲೇ ಸರಕಾರ ಪತನದ ಮಾತುಗಳು ಆರಂಭವಾಗಿವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಶಾಸಕರನ್ನು ಸೆಳೆಯುವ ಕಸರತ್ತನ್ನು ಬಿಜೆಪಿ ಪಕ್ಷ ಒಳಗೊಳಗೇ ಮಾಡುತ್ತಿದ್ದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ಸರಕಾರ ಉರುಳಿಸಲು ಮಾಫಿಯಾ ಸಂಚು ನಡೆಯುತ್ತಿದೆ” ಎಂದಿದ್ದಾರೆ.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಇಷ್ಟೂ ದಿನಗಳಲ್ಲಿ ಜನತಾ ದರ್ಶನ, ಕೊಡಗಿನ ಪ್ರವಾಹ, ಕುಮಾರಸ್ವಾಮಿ ದೇಗುಲ ದರ್ಶನಗಳನ್ನು ಬಿಟ್ಟರೆ ಸರಕಾರ ಎಂಬುದೊಂದು ರಾಜ್ಯದಲ್ಲಿದೆ ಎನ್ನುವುದು ಜನರ ಅರಿವಿಗೆ ಬಂದಿದ್ದು ಕಡಿಮೆ. ಸರಕಾರ ರಚನೆಯಾಗಿ ನೂರು ದಿನ ಕಳೆದರೂ ಕೇವಲ ರನ್‌ ವೇನಲ್ಲೇ ಸುತ್ತುತ್ತಿರುವ ಸಮ್ಮಿಶ್ರ ಸರಕಾರ ಇಂದೋ ನಾಳೆಯೋ ಟೇಕ್‌ಆಫ್‌ ಆಗುತ್ತದೆ ಎಂದು ಕಾಯುತ್ತಿದ್ದ ರಾಜ್ಯದ ಜನ ಈಗ ಸರಕಾರ ಪತನದ ಪ್ರಹಸನ ನೋಡುವಂತಾಗಿದೆ.

ಅವಸರದಲ್ಲಿ ಮುಖ್ಯಮಂತ್ರಿಯಾಗಿ ಮೂರು ದಿನವೂ ಅಧಿಕಾರದಲ್ಲಿರದೆ, ಬಹುಮತ ಸಾಬೀತು ಪಡಿಸುವ ಗೋಜಿಗೇ ಹೋಗದೆ ಸೋಲೊಪ್ಪಿಕೊಂಡವರು ಬಿ.ಎಸ್‌. ಯಡಿಯೂರಪ್ಪ. ಆದರೆ ಅವರ ಬಿಜೆಪಿ ಪಾಳಯ ಅಷ್ಟು ಸುಲಭವಾಗಿ ಇಷ್ಟು ದಿನ ತಣ್ಣಗೆ ಕುಳಿತಿರಲಿಲ್ಲ ಎಂಬುದು ಈಗ ಕಾಣುತ್ತಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಇಂಥದ್ದೊಂದು ಸಂದರ್ಭ ಸೃಷ್ಟಿಯಾಗುತ್ತದೆ, ಅದನ್ನು ಹೇಗೆಲ್ಲಾ ಲಾಭವಾಗಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಜಾರಕಿಹೊಳಿ ಸೋದರರ ಬಂಡಾಯ ಸಹಜವಾಗಿಯೇ ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ಈ ನಡುವೆ, “ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್‌, ಇಸ್ಪೀಟ್‌ ದಂಧೆ ನಡೆಸುವ ಮಾಫಿಯಾ ಜನ ಸರಕಾರ ಉರುಳಿಸಲು ಹಣ ಸಂಗ್ರಹಿಸುತ್ತಿದ್ದಾರೆ. ಸರಕಾರ ಉರುಳಿಸಲು ಈ ಮಾಫಿಯಾ ದೊಡ್ಡ ಮಟ್ಟದ ಸಂಚು ನಡೆಸಿದೆ” ಎನ್ನುವ ಮೂಲಕ ರಾಜ್ಯದಲ್ಲಿ ಈ ಮಾಫಿಯಾ ಸರಕಾರ ಕೆಡವುವಷ್ಟು ಶಕ್ತಿಯುತವಾಗಿದೆ ಎಂಬುದನ್ನು ಖುದ್ದು ಮುಖ್ಯಮಂತ್ರಿಯೇ ಒಪ್ಪಿಕೊಂಡಂತಾಗಿದೆ. ಮಾಫಿಯಾ ನಿಯಂತ್ರಿಸುವ ಅಧಿಕಾರವನ್ನು ಕೈಯಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಚಾರದಲ್ಲಿ ತಾನು ದುರ್ಬಲ ಎಂಬುದನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ, “ನಾನು ಕಾಂಗ್ರೆಸ್‌ನ ಹಂಗಿನಲ್ಲಿದ್ದೇನೆ” ಎಂದು ಹೇಳಿದ್ದ ಕುಮಾರಸ್ವಾಮಿ, ಅದಾದ ಕೆಲ ದಿನಗಳ ನಂತರ, “ನಾನು ವಿಷಕಂಠನಂತೆ ಒಳಗೇ ನೋವನ್ನು ನುಂಗಿಕೊಳ್ಳುತ್ತಿದ್ದೇನೆ” ಎಂದು ಜೆಡಿಎಸ್‌ ಕಾರ್ಯಕ್ರಮದ ವೇದಿಕೆಯಲ್ಲೇ ಕಣ್ಣೀರು ಸುರಿಸಿದ್ದರು. ಪದೇಪದೇ ಹೀಗೆ ತಮಗೆ ಅಧಿಕಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿಲ್ಲ ಎಂಬ ಅಸಮಾಧಾನವನ್ನು ಹೊರಹಾಕುತ್ತಲೇ ಬಂದಿರುವ ಕುಮಾರಸ್ವಾಮಿ ಈಗ ಸಮ್ಮಿಶ್ರ ಸರಕಾರ ಪತನಕ್ಕೂ ಮಾಫಿಯಾ ಸಂಚಿಗೂ ನಂಟು ಜೋಡಿಸಿದ್ದಾರೆ.

ಸರಕಾರವನ್ನು ಪತನ ಮಾಡುವಷ್ಟರ ಮಟ್ಟಿಗೆ ಮಾಫಿಯಾ ರಾಜ್ಯದಲ್ಲಿ ಪ್ರಬಲವಾಗಿದೆ ಎಂದರೆ ಅದನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಸೋತಿದೆ ಎಂದೇ ಅರ್ಥ. ಹಾಗಾದರೆ ಮೀಟರ್‌ ಬಡ್ಡಿ, ರಿಯಲ್‌ ಎಸ್ಟೇಟ್‌, ಇಸ್ಪೀಟ್‌ ದಂಧೆಗೆ ಕಡಿವಾಣ ಹಾಕಲು ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಕುಮಾರಸ್ವಾಮಿ ಮುಂದಾಗದಿರುವುದು ಏಕೆ? ರಾಜ್ಯದಲ್ಲಿ ಈ ಮಾಫಿಯಾ ದೊಡ್ಡಮಟ್ಟದಲ್ಲಿ ಬೇರು ಬಿಟ್ಟಿದೆ ಎಂದರೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಏನಾಗಿದೆ? ಮಾಫಿಯಾ ಕಿಂಗ್‌ ಪಿನ್‌ಗಳ ಬಗ್ಗೆ ಈಗ ಮಾತನಾಡುತ್ತಿರುವ ಕುಮಾರಸ್ವಾಮಿ ಇಷ್ಟು ದಿನ ಮಾಫಿಯಾ ವಿಚಾರವಾಗಿ ಮೌನವಾಗಿದ್ದೇಕೆ?

ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟಂತೆ ಕುಮಾರಸ್ವಾಮಿ ಸರಕಾರ ಪತನವಾಗುತ್ತದೆ ಎಂಬ ಹೊತ್ತಿನಲ್ಲಿ ಮಾಫಿಯಾ ಕೈವಾಡದ ಬಾಂಬ್‌ ಸಿಡಿಸಿದ್ದಾರೆ. ಒಂದೊಮ್ಮೆ ಸಮ್ಮಿಶ್ರ ಸರಕಾರ ಪತನವಾದರೆ ಮಾಫಿಯಾ ಕಳಂಕ ಬಿಜೆಪಿಗೆ ಹತ್ತಲಿ ಎಂಬ ಪ್ರಯತ್ನವನ್ನು ಕುಮಾರಸ್ವಾಮಿ ಮಾಡಿದ್ದಾರೆ.

ಸಿದ್ದರಾಮಯ್ಯ ಪ್ರವಾಸ, ಸರಕಾರದ ಭವಿಷ್ಯ!

ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೂ, ಸಮ್ಮಿಶ್ರ ಸರಕಾರ ಪತನಕ್ಕೂ ಬಿಜೆಪಿ ಮುಖಂಡರು ಈಗಾಗಲೇ ಸಂಬಂಧ ಕಲ್ಪಿಸಿದ್ದಾರೆ. ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್‌ ಬಂದ ನಂತರ ಸಮ್ಮಿಶ್ರ ಸರಕಾರ ಉರುಳಲಿದೆ ಎಂದು ಬಿಜೆಪಿ ಮುಖಂಡರು ಭವಿಷ್ಯ ನುಡಿದಿದ್ದಾರೆ.

ಇದರ ಜತೆಗೇ ವಿದೇಶ ಪ್ರವಾಸಕ್ಕೆ ತೆರಳಿರುವ ಸಿದ್ದರಾಮಯ್ಯ ವಿದೇಶದಲ್ಲೇ ಕುಳಿತು ಈ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ್ದಾರೆ ಎಂಬ ಊಹಾಪೋಹಗಳೂ ಇವೆ. ಸೆಪ್ಟೆಂಬರ್‌ 2ರಂದು ಹತ್ತು ದಿನಗಳ ವಿದೇಶ ಪ್ರವಾಸಕ್ಕೆಂದು ಹೊರಟ ಸಿದ್ದರಾಮಯ್ಯ ನಾಳೆ (ಸೆಪ್ಟೆಂಬರ್‌ 16) ವಾಪಸ್‌ ಬರಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ವಾಪಸ್‌ ಬಂದ ನಂತರ ಈ ರಾಜಕೀಯ ಹೈಡ್ರಾಮಾ ಬೇರೆಯದೇ ಸ್ವರೂಪ ಪಡೆಯಲಿದೆ.

Also read: ರಾಜ್ಯದ ‘ಕೃತಕ’ ರಾಜಕೀಯ ಬಿಕ್ಕಟ್ಟು; ಎಲ್ಲವೂ ಸರಿಹೋಗಲು ಸಿದ್ದರಾಮಯ್ಯ ಎಂಟ್ರಿ

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಈ ಬಿಕ್ಕಟ್ಟನ್ನು ಸುಲಭವಾಗಿ ಬಗೆಹರಿಸಲಿದ್ದಾರೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿದೆ. ಆದರೆ, ರಾಜಕೀಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ ಎಂಬುದು ನಿತ್ಯಸತ್ಯ. ಪಕ್ಷ ರಾಜಕಾರಣ ಮುಖ್ಯವೇ ಆಗದಿರುವ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಹಣ ಮತ್ತು ಅಧಿಕಾರವಷ್ಟೇ ರಾಜಕಾರಣಿಗಳ ಭವಿಷ್ಯ ನಿರ್ಧರಿಸಲಿವೆ. ಪರಿಸ್ಥಿತಿ ಹೀಗಿರುವಾಗ ಯಾವಾಗ ಯಾವ ಶಾಸಕರ ಕಾಲು ಯಾವ ಪಕ್ಷದ ಹೊಸ್ತಿಲೊಳಗಿರುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ.

ಸಮ್ಮಿಶ್ರ ಸರಕಾರ ಪತನಕ್ಕೆ ಈಗಾಗಲೇ ಕಾರ್ಯತಂತ್ರ ರೂಪಿಸಿಕೊಂಡಿರುವ ಬಿಜೆಪಿ ಸದ್ಯ ಮೌನವಾಗಿದೆ. ಬಿಜೆಪಿಯ ಮುಖಂಡರು ಯಾರೂ ಅಪ್ಪಿತಪ್ಪಿಯೂ ಶಾಸಕರನ್ನು ಸೆಳೆಯುವ, ಸರಕಾರ ಕೆಡವುವ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಕುಮಾರಸ್ವಾಮಿ ಮಾಫಿಯಾ ಪ್ರಯತ್ನದ ಹೇಳಿಕೆಗೂ ಬಿಜೆಪಿಯ ಪ್ರಮುಖ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಸಮ್ಮಿಶ್ರ ಸರಕಾರದ ಹಸಿಗೋಡೆಯ ತಳದ ಕೆಲವು ಇಟ್ಟಿಗೆಗಳನ್ನು ಕಿತ್ತಿಟ್ಟುಕೊಂಡು, ಅದು ಬೀಳುದನ್ನು ನೋಡಲು ಕಾತರದಲ್ಲಿರುವ ಬಿಜೆಪಿ ಸದ್ಯ ಜಾಣ ಮೌನಕ್ಕೆ ಶರಣಾಗಿದೆ.

ಗಣೇಶನ ಹಬ್ಬದ ದಿನದಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ, “ಸಮ್ಮಿಶ್ರ ಸರಕಾರಕ್ಕೆ ಕಾಂಗ್ರೆಸ್‌ ಅಸಹಕಾರ ತೋರಿದರೆ ಸಹಕಾರ ನೀಡುವವರು ಸಿದ್ಧವಾಗಿದ್ದಾರೆ” ಎಂದು ದೇವೇಗೌಡ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಜತೆಗೆ ಮೈತ್ರಿ ಸರಿಹೋಗದಿದ್ದರೆ ಈ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆಗೆ ಹೊಸ ಸಂಬಂಧ ಬೆಳೆಸಲು ಜೆಡಿಎಸ್‌ ಸಿದ್ಧವಾಗಿದೆ ಎಂಬುದನ್ನು ದೇವೇಗೌಡರೇ ಒಪ್ಪಿಕೊಂಡಂತಿದೆ.

ಆದರೆ, ಮತ್ತೊಂದು ‘ಅಸ್ಥಿರ ಸಮ್ಮಿಶ್ರ’ ಸರಕಾರ ರಚನೆಯ ಸಾಹಸಕ್ಕೆ ಈ ಬಾರಿ ಬಿಜೆಪಿ ಅಷ್ಟು ಸುಲಭವಾಗಿ ಕೈ ಹಾಕುವುದಿಲ್ಲ. ಸರಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರನ್ನು ಖರೀದಿ ಮಾಡಿಯಾದರೂ ಸರಿ ಸ್ವಂತ ಬಲದಿಂದಲೇ ಸರಕಾರ ರಚಿಸುವ ಉದ್ದೇಶ ಹೊಂದಿರುವ ಬಿಜೆಪಿ, ಜೆಡಿಎಸ್‌ ಜತೆಗೆ ಕೈ ಜೋಡಿಸಿ ಮತ್ತೊಮ್ಮೆ ಕೈ ಸುಟ್ಟಿಕೊಳ್ಳುವ ಸಾಧ್ಯತೆ ಕಡಿಮೆ. ಸದ್ಯಕ್ಕಂತೂ ರಾಜ್ಯ ರಾಜಕೀಯದಲ್ಲಿ ಏನಾಗಲಿದೆ ಎಂಬುದು ಅಸ್ಪಷ್ಟವಾಗಿಯಾದರೂ ಕಾಣುತ್ತಿದೆ.