samachara
www.samachara.com
ಭೀಮ್‌ ಆರ್ಮಿ ನಾಯಕ ಅಜಾದ್ ಬಿಡುಗಡೆ: ಸಮಸ್ಯೆ ಮಾಯಾವತಿಗೋ? ಬಿಜೆಪಿಗೋ?
COVER STORY

ಭೀಮ್‌ ಆರ್ಮಿ ನಾಯಕ ಅಜಾದ್ ಬಿಡುಗಡೆ: ಸಮಸ್ಯೆ ಮಾಯಾವತಿಗೋ? ಬಿಜೆಪಿಗೋ?

ಅವಧಿಪೂರ್ವ ಬಿಡುಗಡೆ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಕೆಲಸ ಮಾಡಿರುವ ಅನುಮಾನಗಳಿವೆ. ಅದು ಅರ್ಥವಾಗಬೇಕು ಎಂದರೆ, ಮೊದಲು ಭೀಮ್ ಆರ್ಮಿಯ ಹಿನ್ನೆಲೆಯನ್ನು ನೋಡಬೇಕು.

ಬರೋಬ್ಬರಿ 15 ತಿಂಗಳ ಸೆರೆಮನೆ ವಾಸದ ನಂತರ ಭೀಮ್‌ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್‌ ಅಜಾದ್‌ ಉತ್ತರ ಪ್ರದೇಶದ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಮುಂಜಾನೆ 2.40ರ ಸುಮಾರಿಗೆ 31 ವರ್ಷದ ಅಜಾದ್‌ ಜೈಲಿನಿಂದ ಹೊರ ಬಂದಿದ್ದಾರೆ. ಜಾತಿ ಸಂಘರ್ಷವೊಂದಕ್ಕೆ ಸಂಬಂಧಿಸಿದಂತೆ 2017ರ ಜೂನ್‌ನಲ್ಲಿ ಅಜಾದ್ ಜೈಲು ಪಾಲಾಗಿದ್ದರು.

ಅಂದುಕೊಂಡಂತೆ ನಡೆದಿದ್ದರೆ ಎರಡು ತಿಂಗಳ ನಂತರ ಅಂದರೆ ನವೆಂಬರ್‌ನಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಬೇಕಾಗಿತ್ತು. ಆದರೆ ಅವರ ತಾಯಿ ಕಮಲೇಶ್‌ ದೇವಿ ಮನವಿ ಮೇರೆಗೆ ಅವಧಿಗೂ ಮುನ್ನ ಚಂದ್ರಶೇಖರ್‌ ಅಜಾದ್‌ ಜೈಲು ವಾಸ ಕೊನೆಯಾಗಿದೆ. ಹೀಗೊಂದು ಅವಧಿಪೂರ್ವ ಬಿಡುಗಡೆ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಕೆಲಸ ಮಾಡಿರುವ ಅನುಮಾನಗಳಿವೆ. ಅದು ಅರ್ಥವಾಗಬೇಕು ಎಂದರೆ, ಮೊದಲು ಭೀಮ್ ಆರ್ಮಿಯ ಹಿನ್ನೆಲೆಯನ್ನು ನೋಡಬೇಕು.

ಅದು ಭೀಮ್‌ ಆರ್ಮಿ:

ಮೂರು ವರ್ಷಗಳ ಹಿಂದೆ ಭೀಮ್‌ ಆರ್ಮಿ ಎಂಬುದು ಶಹರನ್‌ಪುರದಲ್ಲಿ ಹುಟ್ಟಿಕೊಂಡಿತ್ತು. ಉತ್ತರ ಪ್ರದೇಶದ ಮೇರು ದಲಿತ ನಾಯಕಿ ಮಾಯಾವತಿಯವರ ಬಿಎಸ್‌ಪಿ ಪಕ್ಷದಿಂದ ಹೊರಗಿದ್ದ ದಲಿತರನ್ನು ತಲುಪುವಲ್ಲಿ ಸಂಘಟನೆ ಯಶಸ್ವಿಯಾಗಿತ್ತು. ಅದರಲ್ಲೂ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಇದು ಬಹು ಬೇಗ ಜನಪ್ರಿಯತೆ ಪಡೆದುಕೊಂಡಿತು. ಇದಕ್ಕೆ ತಳ ಸಮುದಾಯಗಳ ಕಲ್ಯಾಣಕ್ಕಾಗಿ ಸಂಘಟನೆ ಇಟ್ಟಿದ್ದ ಆಕ್ರಮಣಕಾರಿ ನಡೆಗಳೂ ಕಾರಣವಾಗಿದ್ದವು. ಇವತ್ತಿಗೆ ಭೀಮ್‌ ಆರ್ಮಿ 300ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಬಲಿಷ್ಠ ಕಾರ್ಯಕರ್ತರ ಪಡೆಯೂ ಸಂಘಟನೆ ಬಳಿ ಇದೆ. ಇವೆಲ್ಲದರ ಹಿಂದಿದ್ದವರು ಇದೇ ಚಂದ್ರಶೇಖರ್‌ ಅಜಾದ್‌. ಅವರು ಹುಟ್ಟು ಹಾಕಿದ ಆರ್ಮಿ ಇವತ್ತು ಮಾಯಾವತಿ ವಿರುದ್ಧ ನೆಲೆಯಲ್ಲಿ ಗುರುತಿಸಿಕೊಂಡಿದೆ.

ಈ ಎಳೆ ಹಿಡಿದುಕೊಂಡು ಬುದ್ಧಿವಂತಿಕೆಯ ದಾಳ ಉರುಳಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೀಮ್‌ ಆರ್ಮಿ ಮೂಲಕ ಮಾಯಾವತಿ ಪ್ರಾಬಲ್ಯವನ್ನು ತಗ್ಗಿಸಿ ಲಾಭ ಪಡೆದುಕೊಳ್ಳುವ ಸನ್ನಾಹದಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಜೈಲಿನಿಂದ ಹೊರ ಬಂದು ಮಾತನಾಡಿರುವ ಅಜಾದ್‌, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭೀಮ್‌ ಆರ್ಮಿ ಪ್ರಮುಖ ಪಾತ್ರ ವಹಿಸುವ ಮುನ್ಸೂಚನೆ ನೀಡಿದ್ದಾರೆ. “ಯಾರು ಮುಂದಿನ 50 ವರ್ಷ ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೋ ಅವರನ್ನು 2019ರಲ್ಲಿ ಕಿತ್ತೆಸೆಯಲಾಗುವುದು. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ,” ಎಂದು ಗುಡುಗಿದ್ದಾರೆ.

2017ರ ಜೂನ್‌ನಲ್ಲಿ ಬಂಧನ:

ಇದೇ ಅಜಾದ್‌ರನ್ನು 2017ರ ಜೂನ್‌ನಲ್ಲಿ ಬಂಧಿಸಲಾಗಿತ್ತು. ಅವರ ಬಂಧನದ ಸಂದರ್ಭದಲ್ಲಿ ಹೈಡ್ರಾಮವೇ ನಡೆದಿತ್ತು. ಮೊದಲಿಗೆ ಉತ್ತರ ಪ್ರದೇಶದ ಶಹರಣ್‌ಪುರದ ಶಬ್ಬೀರ್‌ಪುರದಲ್ಲಿ ಮೇ 5, 2017ರಂದು ಸಣ್ಣ ಜಾತಿ ಸಂಘರ್ಷವೊಂದು ಹುಟ್ಟಿಕೊಂಡಿತ್ತು. ಠಾಕೂರ್‌ ಸಮುದಾಯ ಹೊರಟಿದ್ದ ಮೆರವಣಿಯ ಡಿಜೆ ಶಬ್ದ ಜಾಸ್ತಿಯಾಯಿತು ಎಂಬ ದಲಿತರ ತಕರಾರು ಸಂಘರ್ಷದ ಕಿಡಿ ಹೊತ್ತಿಸಿತ್ತು.

ಇಷ್ಟಕ್ಕೇ ಖಡ್ಗ, ಬಿದಿರಿನ ಕೋಲು, ದೇಸಿ ರಿವಾಲ್ವರ್‌, ಬಾಟಲಿಗಳಲ್ಲಿ ಪೆಟ್ರೋಲ್‌ ತುಂಬಿ ಠಾಕೂರರು ದಾಳಿ ನಡೆಸಿದ್ದರು. ಪರಿಣಾಮ 55ಕ್ಕೂ ಹೆಚ್ಚು ಗುಡಿಸಲುಗಳು ಹೊತ್ತಿ ಉರಿದು ಭಸ್ಮವಾಗಿದ್ದವು. ಈ ಘಟನೆಯಲ್ಲಿ ಹಲವು ದಲಿತರು ಗಾಯಗೊಂಡಿದ್ದರು.

ಇವರ ವಿರುದ್ಧ ತಿರುಗಿ ಬೀಳಲು ಕರೆ ನೀಡಿದ ಭೀಮ್‌ ಆರ್ಮಿ ಶಹರಣ್‌ಪುರದಲ್ಲಿ ‘ಮಹಾಪಂಚಾಯತ್‌’ ಹಮ್ಮಿಕೊಂಡಿತ್ತು. ಇದಕ್ಕೆ ಸರಕಾರ ಅನುಮತಿ ನೀಡಲಿಲ್ಲವಾದರೂ ನಿಷೇಧದ ನಡುವೆಯೇ ನಡೆದ ಪ್ರತಿರೋಧ ಸಮಾವೇಶ ಹಿಂಸೆಗೆ ತಿರುಗಿ ಓರ್ವ ಠಾಕೂರ್ ಸಮುದಾಯದ ವ್ಯಕ್ತಿ ಸಾವನ್ನಪ್ಪಿದ್ದರು.

ಬಂಧನದ ಸಂದರ್ಭದಲ್ಲಿ ಚಂದ್ರಶೇಖರ್‌ ಅಜಾದ್‌. 
ಬಂಧನದ ಸಂದರ್ಭದಲ್ಲಿ ಚಂದ್ರಶೇಖರ್‌ ಅಜಾದ್‌. 

ಘಟನೆ ನಡೆದ ಕೆಲವು ದಿನಗಳ ನಂತರ ಬ್ರಿಟೀಷರ ಕಾಲದ ‘ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)’ಯಡಿಯಲ್ಲಿ ಅಜಾದ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ದೇಶದ ಭದ್ರತೆಗೆ ಅಪಾಯ ಒಡ್ಡುವ, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುವವರ ವಿರುದ್ಧ ಸರಕಾರ ಈ ಪ್ರಕರಣ ದಾಖಲಿಸಬಹುದಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಜಾದ್‌‌ ಬಂಧನಕ್ಕೆ ಹೊರಟಿದ್ದರು. ಆದರೆ ಅವರು ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಅವರ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು 12,000 ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಅಜಾದ್‌ ಪತ್ರಿಕೆಗಳಿಗೆ , ಮಾಧ್ಯಮಗಳಿಗೆ ಅಜ್ಞಾತ ಸ್ಥಳದಿಂದ ಸಂದರ್ಶನ ನೀಡುತ್ತಾ ಓಡಾಡುತ್ತಿದ್ದರು.

ಕೊನೆಗೆ ಅವರ ಕರೆಗಳನ್ನು ಬೆನ್ನತ್ತಿದ್ದಾಗ ಹಿಮಾಚಲ ಪ್ರದೇಶದ ರೆಸಾರ್ಟ್‌ನಲ್ಲಿ ಅವರು ವಾಸ್ತವ್ಯ ಹೂಡಿರುವುದು ತಿಳಿದು ಬಂದಿತ್ತು. ಇದಾದ ಬೆನ್ನಿಗೆ ಅವರನ್ನು ಹಿಮಾಚಲ ಪ್ರದೇಶದಿಂದ ಬಂಧಿಸಿ ಕರೆತರಲಾಗಿತ್ತು. ಹೀಗೆ 2017ರ ಜೂನ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರನ್ನು ಜೈಲಿಗೆ ತಳ್ಳಲಾಯಿತು. ಇದರ ಪ್ರಕಾರ ಈ ವರ್ಷದ ನವೆಂಬರ್‌ನಲ್ಲಿ ಅವರು ಬಿಡುಗಡೆಯಾಗಬೇಕಿತ್ತು. ಆದರೆ ತಾಯಿಯ ಮನವಿ ಮತ್ತು ಬದಲಾದ ಕಾಲಘಟ್ಟದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಆಳದಲ್ಲಿ ತಮ್ಮ ರಾಜಕೀಯ ಹಕ್ಕು ಸ್ಥಾಪನೆಗೆ ಭೀಮ್‌ ಆರ್ಮಿಗೆ ಸಾಕಷ್ಟು ಸಮಯಾವಕಾಶ ನೀಡಿ ಅದರ ಲಾಭ ಪಡೆಯುವ ಹಿಡನ್‌ ಅಜೆಂಡಾವನ್ನು ಬಿಜೆಪಿ ಇಟ್ಟುಕೊಂಡಂತೆ ಕಾಣಿಸುತ್ತಿದೆ. ಈ ಹಿಂದೆ ಸ್ವತಃ ಮಾಯಾವತಿ ಭೀಮ್ ಆರ್ಮಿಯನ್ನು ಟೀಕಿಸಿದ್ದರು. ಇದು ಬಿಜೆಪಿಯದೇ ಉತ್ಪನ್ನ ಎಂದು ಜರೆದಿದ್ದರು. ಹೀಗಾಗಿ ಇಬ್ಬರ ಜಗಳದಲ್ಲಿ ತನಗೆ ಲಾಭವಾಗಬಹುದು ಎಂದು ಬಿಜೆಪಿ ಅಂದುಕೊಂಡಿದೆ.

ಆದರೆ ಜೈಲಿನಿಂದ ಹೊರ ಬಂದ ಅಜಾದ್ ಆಡಿರುವ ಮಾತೊಂದು ಬಿಜೆಪಿ ಆಸೆಗೆ ತಣ್ಣೀರು ಎರಚುವಂತಿದೆ. “ಯಾರೆಲ್ಲಾ ಬಹುಜನರ ವಿರುದ್ಧ ಮಾತನಾಡುತ್ತಿದ್ದಾರೋ, ಮೇಲ್ವರ್ಗದ ಪ್ರಾಬಲ್ಯದ ವಿರುದ್ಧ ಹೋರಾಡುತ್ತಿದ್ದಾರೋ ಅವರೆಲ್ಲಾ ತಮ್ಮ ಮೈತ್ರಿ ಮುರಿಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅವರೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕಿದೆ,” ಎಂದು ಅಜಾದ್‌ ಕರೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟದ ಮಾತುಗಳು ಕೇಳಿ ಬರುತ್ತಿರುವುದರ ಹೊತ್ತಲ್ಲಿ ಅಜಾದ್‌ರ ಭೀಮ್‌ ಆರ್ಮಿ ಎಲ್ಲಿ ನಿಲ್ಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. ಮತ್ತದು ಬಿಜೆಪಿಯ ಲೆಕ್ಕಾಚಾರಗಳ ಭವಿಷ್ಯವನ್ನೂ ನಿರ್ಧರಿಸಲಿದೆ.