samachara
www.samachara.com
ವರ್ಷ 22, ಆಸ್ತಿ 100 ಕೋಟಿ: ಐಟಿ ಕಣ್ಗಾವಲಿನಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ
COVER STORY

ವರ್ಷ 22, ಆಸ್ತಿ 100 ಕೋಟಿ: ಐಟಿ ಕಣ್ಗಾವಲಿನಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ

ಆದಾಯ ತೆರಿಗೆ ಇಲಾಖೆಯೊಳಗೆ ಚರ್ಚೆಗೆ ಒಳಗಾಗಿರುವ ಹೆಸರು ಐಶ್ವರ್ಯ, ಡಾಟರ್ ಆಫ್ ಡಿ. ಕೆ. ಶಿವಕುಮಾರ್. 22 ವರ್ಷಕ್ಕೆ ಆಕೆ ಹೆಸರಿನಲ್ಲಿರುವ ಆಸ್ತಿ, ನೀಡಿರುವ ಸಾಲದ ಪ್ರಮಾಣ ಹುಬ್ಬೇರಿಸುವಂತಿದೆ. 

ರಾಜಕಾರಣದ ಪಡಸಾಲೆಯಲ್ಲಿ ಹುಟ್ಟುವ ಬಹುತೇಕ ಸುದ್ದಿಗಳಿಗೆ ಹೆಚ್ಚಿನ ಆಯಸ್ಸು ಇರುವುದಿಲ್ಲ. ಕಾಲದ ಅಗತ್ಯಕ್ಕೆ ತಕ್ಕಂತೆ ಹುಟ್ಟಿ ಹಾಗೆಯೇ ಸತ್ತು ಹೋಗುವ ವಿಚಾರಗಳೇ ಹೆಚ್ಚು. ಹೀಗಿರುವಾಗ ವಿಧಾನಸಭಾ ಚುನಾವಣೆ ಮುಂಚೆ ಮತ್ತು ನಂತರ ಎಲ್ಲಾ ಚೌಕಟ್ಟುಗಳನ್ನು ಮೀರಿ ಸುದ್ದಿಕೇಂದ್ರದಲ್ಲಿ ಉಳಿದುಕೊಂಡಿರುವುದು ಸಚಿವ ಡಿ. ಕೆ. ಶಿವಕುಮಾರ್ ಹಾಗೂ ಅವರ ಕುಟುಂಬದ ಸುತ್ತ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ತನಿಖೆ.

ಹೊರಗೆ ಮಾಧ್ಯಮಗಳ ಮೂಲಕ ಐಟಿ ತನಿಖೆ, ಡಿ. ಕೆ. ಶಿವಕುಮಾರ್ ಬಂಧನ ಸಾಧ್ಯತೆ, ಅದರ ರಾಜಕೀಯ ಪರಿಣಾಮಗಳ ಕುರಿತು ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಐಟಿ ಇಲಾಖೆ ಅಂಗಳದಲ್ಲಿ ಸುತ್ತಾಡುತ್ತಿರುವ ಹೆಸರು ಐಶ್ವರ್ಯ. ಈ ಐಶ್ವರ್ಯ ಸಚಿವ ಡಿ. ಕೆ. ಶಿವಕುಮಾರ್ ಅವರ ಮೊದಲ ಮಗಳು. ವಯಸ್ಸು 22, ಈಗಾಗಲೇ 100 ಕೋಟಿಯ ಒಡತಿ.

ಫ್ಲಾಷ್‌ ಬ್ಯಾಕ್:

ಅದು ಎಪ್ರಿಲ್ 19, 2018. ವಿಧಾನಸಭೆ ಚುನಾವಣೆಗೆ ಅದಾಗಲೇ ನಾಮಪತ್ರ ಸಲ್ಲಿಕೆ ಶುರುವಾಗಿತ್ತು. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಮಾಧ್ಯಮಗಳು ಅಫಿಡವಿಟ್‌ ಎದುರಿಗೆ ಇಟ್ಟುಕೊಂಡು ಕುಚೇಲರು ಯಾರು, ಆಗರ್ಭ ಶ್ರೀಮಂತರು ಯಾರು ಎಂದೆಲ್ಲಾ ತಡಕಾಡಲು ಆರಂಭಿಸುತ್ತವೆ. ಹೀಗೆ ಹುಡುಕಾಡುತ್ತಿದ್ದಾಗ ಗಮನ ಸೆಳೆದ ಹೆಸರು ಡಿ.ಕೆ. ಶಿವಕುಮಾರ್‌.

ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್‌ ಐಟಿ ದಾಳಿಯ ನಂತರವೂ 840 ಕೋಟಿ ಆಸ್ತಿ ಘೋಷಿಸಿದ್ದು ರಾಜ್ಯದಲ್ಲಷ್ಟೇ ಅಲ್ಲ ಇಡೀ ದೇಶದ ಜನರ ಕಣ್ಣು ಕುಕ್ಕಿಸಿತ್ತು. ಇದರಾಚೆಗೂ ಡಿಕೆಶಿ ಅಫಿಡವಿಟ್‌ನಲ್ಲಿ ಗಮನ ಸೆಳೆದಿದ್ದು ಅವರ ಪುತ್ರಿ 22 ವರ್ಷದ ಐಶ್ವರ್ಯ ಆಸ್ತಿ.

ಅಫಿಡವಿಟ್‌ನಲ್ಲಿ ಪುತ್ರಿ ಐಶ್ವರ್ಯ ಹೆಸರಿನಲ್ಲಿ 102.88 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು 5.17 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಇರುವುದಾಗಿ ಘೋಷಿಸಿ ಬೋಲ್ಡ್ ನಡೆ ಇಟ್ಟಿದ್ದರು ಡಿ. ಕೆ. ಶಿವಕುಮಾರ್. ಆಗಿನ್ನೂ ಆಕೆಗೆ 22ರ ಹರೆಯ. ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಹೊಂದಿರುವುದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿತ್ತು.

ಈ ಸಂದರ್ಭದಲ್ಲಿ ಪಬ್ಲಿಕ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಗಳ ಆಸ್ತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಡಿ. ಕೆ. ಶಿವಕುಮಾರ್‌, “ನಾನೇನು ಲೂಟಿ ಮಾಡಿದ್ದೀನಾ?, ಕಳ್ಳತನ ಮಾಡಿದ್ದೀನಾ? ಎಲ್ಲರೂ ಅವರ ಮಕ್ಕಳ ಹೆಸರಿಗೆ ಆಸ್ತಿ ಮಾಡದೆ ಬೇರೆಯವರ ಹೆಸರಿಗೆ ಮಾಡುತ್ತಾರಾ? ನನ್ನ ಮಗಳು ಪದವೀಧರೆ. ನಾನು ಅವಳಿಗೆ ಏನಾದರೂ ಒಂದು ತರಬೇತಿ ನೀಡಬೇಕು ಅಂತ ಒಂದು ಆಸ್ತಿನ ಸಾಲ ತೆಗೆದು ಕೊಟ್ಟಿದ್ದೇನೆ. 100 ಕೋಟಿ ಆಸ್ತಿಗೆ ಎಷ್ಟು ಸಾಲ ಇದೆ ಗೊತ್ತಿದೆಯಾ? ಶೇ. 99 ಸಾಲ ಇದೆ,” ಎಂದಿದ್ದರು ಡಿ.ಕೆ. ಶಿವಕುಮಾರ್‌.

ಮುಂದುವರಿದ ಅವರು, “ಅವಳು ಪದವಿ ಪಡೆದಿದ್ದಾಳೆ. ಅದಾದ ಮೇಲೆ ಆಕೆ ಕೆಲವು ವಿಷಯಗಳನ್ನು ಕಲಿತುಕೊಳ್ಳಬೇಕು. ಆಕೆ ನನ್ನ ಸಂಸ್ಥೆಗಳನ್ನು, ನನ್ನ ಉದ್ಯಮಗಳನ್ನು ಮುಂದೆ ನೋಡಿಕೊಳ್ಳಬೇಕಾದವಳು,” ಈ ಕಾರಣಕ್ಕೆ ನಾನು ಆಸ್ತಿ ಮಾಡಿಕೊಟ್ಟಿದ್ದೇನೆ. “ನನಗೆ ನನ್ನ ಜವಾಬ್ದಾರಿಗಳು ಗೊತ್ತಿದೆ,” ಎಂಬ ಸಮಜಾಯಿಷಿ ನೀಡಿದ್ದರು ರಾಜ್ಯದ ಶ್ರೀಮಂತ ಸಚಿವರು.

ನಂತರ, ಡಿ. ಕೆ. ಶಿವಕುಮಾರ್‌ ಮತ್ತು ಅವರ ಸಂಬಂಧಿಗಳು, ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗಳು ಶುರುವಾದವು. ಒಂದು ಹಂತದಲ್ಲಿ ಬಂಧನ ಭೀತಿಗೆ ಒಳಗಾದ ಡಿ. ಕೆ. ಶಿವಕುಮಾರ್‌ ನಿರೀಕ್ಷಣಾ ಜಾಮೀನನ್ನೂ ಪಡೆದುಕೊಂಡರು. ತಮ್ಮ ಡಿ. ಕೆ. ಸುರೇಶ್ ಸಹಿತ ಶಿವಕುಮಾರ್ ಹಲವು ಬಾರಿ ವಿಚಾರಣೆ ಹಾಜರಾದರು. ಈ ಸಮಯದಲ್ಲಿ ಪದೇ ಪದೇ ವಿಚಾರಣೆ ಒಳಗಾದ ಕುಟುಂಬದ ಮತ್ತೊಂದು ಹೆಸರು ಇದೇ ಐಶ್ವರ್ಯಳದ್ದು.

ಐಟಿ ದಾಳಿಯ ನಂತರ ಕುಟುಂಬ ಸಮೇತರಾಗಿ ಆದಾಯ ತೆರಿಗೆ ಇಲಾಖೆಗೆ ವಿಚಾರಣೆಗೆ ಹಾಜರಾಗಿದ್ದ ಡಿಕೆಶಿ. ಚಿತ್ರದಲ್ಲಿ ಐಶ್ವರ್ಯಾ ಕೂಡ ಇದ್ದಾರೆ.
ಐಟಿ ದಾಳಿಯ ನಂತರ ಕುಟುಂಬ ಸಮೇತರಾಗಿ ಆದಾಯ ತೆರಿಗೆ ಇಲಾಖೆಗೆ ವಿಚಾರಣೆಗೆ ಹಾಜರಾಗಿದ್ದ ಡಿಕೆಶಿ. ಚಿತ್ರದಲ್ಲಿ ಐಶ್ವರ್ಯಾ ಕೂಡ ಇದ್ದಾರೆ.
/ದಿ ಹಿಂದೂ

ದಾಖಲೆಗಳಲ್ಲಿ ಐಶ್ವರ್ಯ:

ಹೀಗೆ, ಆದಾಯ ತೆರಿಗೆ ಇಲಾಖೆಯೊಳಗೆ ಎಡತಾಕುತ್ತಿರುವ ಸಚಿವರ ಪುತ್ರಿಯ ಆಸ್ತಿ ಪಾಸ್ತಿಗಳು ನಿಜಕ್ಕೂ ಎಷ್ಟಿವೆ? ‘ಸಮಾಚಾರ’ ಈ ಕುರಿತು ಲಭ್ಯ ದಾಖಲೆಗಳನ್ನು ತಡಕಾಡಿದಾಗ ಇನ್ನೊಂದಿಷ್ಟು ಆಕೆ ನಡೆಸುತ್ತಿರುವ ಹೈಟೆಕ್ ಶಾಲೆ, ನೀಡಿದ ಬೃಹತ್ ಮೊತ್ತದ ಸಾಲ ಮತ್ತಿತರ ಕುತೂಹಲಕಾರಿ ಅಂಶಗಳು ಪತ್ತೆಯಾದವು.

ಐಶ್ವರ್ಯ ಸದ್ಯ ‘ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಸ್ಕೂಲ್‌’ನ ಟ್ರಸ್ಟಿ. ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಡಿ. ಕೆ. ಶಿವಕುಮಾರ್‌ ಇದರ ಅಧ್ಯಕ್ಷರಾಗಿದ್ದಾರೆ.

ಶಿವಕುಮಾರ್ ಸಲ್ಲಿಸಿದ ಅಫಿಡವಿಟ್‌ ಪ್ರಕಾರ, ಐಶ್ವರ್ಯಾ ವಿಜಯಾ ಬ್ಯಾಂಕ್‌ ಖಾತೆಯಲ್ಲಿ 1. 2 ಕೋಟಿ ರೂ.ಗಳಿವೆ. ಜತೆಗೆ, ಎಸ್‌. ಎಲ್‌. ನಾಗೇಂದ್ರ ಪ್ರಸಾದ್‌ ಮತ್ತು ತಾಯಿ ಉಷಾ ಶಿವಕುಮಾರ್‌ ಅವರುಗಳಿಗೆ ಕ್ರಮವಾಗಿ 1 ಕೋಟಿ ಮತ್ತು 2. 7 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. 950 ಗ್ರಾಂ ಚಿನ್ನವೂ ಅವರ ಬಳಿ ಇದೆ.

ಚರಾಸ್ತಿಗಳ ಕಥೆ ಹೀಗಾದರೆ, ಅವರ ಸ್ಥಿರಾಸ್ತಿಗಳ ಮೊತ್ತ ಅಚ್ಚರಿ ಮೂಡಿಸುವಷ್ಟಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ತಲಾ 12 ಕೋಟಿ ರೂಪಾಯಿ ಮೌಲ್ಯದ ಎರಡು ಜಾಗವನ್ನು ಅವರು ಹೊಂದಿದ್ದಾರೆ. ಐಶ್ವರ್ಯಾ ಮುಂಬೈನಲ್ಲಿ 1. 2 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ಫ್ಲಾಟ್‌ನ ಮಾಲಿಕರಾಗಿದ್ದಾರೆ. ಇದೆಲ್ಲಕ್ಕಿಂತ ದೊಡ್ಡ ಡೀಲ್‌ ಬೆಂಗಳೂರಿನ ವರ್ತೂರಿನಲ್ಲಿರುವ ಜಾಗದ್ದು. ಇಲ್ಲಿ ಆಕೆ ಸೋಲ್‌ ಸ್ಪೇಸ್‌ ಪ್ರಾಜೆಕ್ಟ್ಸ್‌ ಲಿ. ನವರಿಗೆ ಮಾಲ್‌ ಕಟ್ಟಲು ಜಾಗ ಖರೀದಿಗೆಂದು 76.11 ಕೋಟಿ ರೂಪಾಯಿ ಹಣವನ್ನು ಸಾಲ ರೂಪದಲ್ಲಿ ನೀಡಿದ್ದಾರೆ.

ಇದಲ್ಲದೆ ದೊಡ್ಡ ಮೊತ್ತದ ಸಾಲವನ್ನೂ ಅವರು ಪಡೆದುಕೊಂಡಿದ್ದಾರೆ. ವಿಜಯಾ ಬ್ಯಾಂಕ್‌, ಎಂ.ಜಿ.ರೋಡ್‌ ಶಾಖೆ ಬೆಂಗಳೂರಿನಿಂದ 39.82 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ತಂದೆ ಡಿ.ಕೆ. ಶಿವಕುಮಾರ್‌ ಮಗಳಿಗೆ 11.32 ಕೋಟಿ ರೂಪಾಯಿ ಸಾಲ ನೀಡಿದ್ದರೆ, ಚಿಕ್ಕಪ್ಪ ಡಿ.ಕೆ. ಸುರೇಶ್‌ 6.87 ಕೋಟಿ ರೂ. ಸಾಲ ನೀಡಿದ್ದಾರೆ. ಎಂ.ಎ. ಇಕ್ಬಾಲ್‌ ಹುಸೇನ್‌ರಿಂದ 1.75 ಕೋಟಿ ರೂ., ಎನ್‌.ಎಂ. ಗ್ರಾಂಟೈಲ್‌ರಿಂದ 1.25 ಕೋಟಿ ರೂ., ‘ಮೆಸರ್ಸ್‌ ಶಿವನ್‌ ಆಂಡ್‌ ಕೋ’ದಿಂದ 18.84 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಸಾಲವನ್ನು ಐಶ್ವರ್ಯಾ ಪಡೆದುಕೊಂಡಿದ್ದಾರೆ. ಇನ್ನು ತಾನೇ ಸಾಲ ನೀಡಿದ್ದ ಸೋಲ್‌ ಸ್ಪೇಸ್‌ ಪ್ರಾಜೆಕ್ಟ್ಸ್‌ ಲಿ. ನವರಿಂದ 1.56 ಕೋಟಿ ರೂಪಾಯಿ ಕಡ ಪಡೆದಿದ್ದಾರೆ.

ಹೀಗೆ ಒಟ್ಟು 81.92 ಕೋಟಿ ರೂಪಾಯಿ ಸಾಲ ಅವರ ತಲೆ ಮೇಲಿದೆ. ಜತೆಗೆ ಒಟ್ಟು 102.88 ಕೋಟಿ ರೂಪಾಯಿ ಸ್ಥಿರಾಸ್ತಿ ಮತ್ತು 5.17 ಕೋಟಿ ರೂಪಾಯಿ ಚರಾಸ್ತಿಯನ್ನು 2018ರ ಏಪ್ರಿಲ್‌ನಲ್ಲಿ ಸಲ್ಲಿಸಲಾದ ಅಫಿಡವಿಟ್‌ ಪ್ರಕಾರ ಅವರು ಹೊಂದಿದ್ದಾರೆ.

ಆದರೆ, “ಇದಕ್ಕಿಂತ ಹೆಚ್ಚಿನ ಆಸ್ತಿ ಐಶ್ವರ್ಯಾ ಬಳಿಯಲ್ಲಿದೆ. ಹಲವು ಬೇನಾಮಿ ಆಸ್ತಿಗಳ ಕುರಿತು ತನಿಖೆ ನಡೆಯುತ್ತಿದೆ. ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಬಂಧನದ ಅಗತ್ಯಗಳ ಕುರಿತು ಚರ್ಚೆಯಷ್ಟೆ ನಡೆದಿದೆ,’’ ಎನ್ನುತ್ತವೆ ಐಟಿ ಇಲಾಖೆಯ ಉನ್ನತ ಮೂಲಗಳು. ಹೊರಗೆ ಮಾಧ್ಯಮಗಳಲ್ಲಿ ಡಿ. ಕೆ. ಶಿವಕುಮಾರ್ ಸುತ್ತ ಐಟಿ ಬಲೆ ಎಂದು ಸುದ್ದಿಯಾಗುತ್ತಿದ್ದರೆ, ಇಲಾಖೆಯೊಳಗೆ ತನಿಖಾಧಿಕಾರಿಗಳು ಅವರ ಪುತ್ರಿ ಐಶ್ವರ್ಯಳಿಗೆ ಬಲೆ ಎಸೆದು ಕುಳಿತಿದ್ದಾರೆ. ತನಿಖೆ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ತಿರುವುಗಳ ಆಧಾರದ ಮೇಲೆ ಡಿ. ಕೆ. ಶಿವಕುಮಾರ್ ಕುಟುಂಬದ ಭವಿಷ್ಯ ನಿಂತಿದೆ.

Updated.