ರಾಜ್ಯದ ‘ಕೃತಕ’ ರಾಜಕೀಯ ಬಿಕ್ಕಟ್ಟು; ಎಲ್ಲವೂ ಸರಿಹೋಗಲು ಸಿದ್ದರಾಮಯ್ಯ ಎಂಟ್ರಿ
COVER STORY

ರಾಜ್ಯದ ‘ಕೃತಕ’ ರಾಜಕೀಯ ಬಿಕ್ಕಟ್ಟು; ಎಲ್ಲವೂ ಸರಿಹೋಗಲು ಸಿದ್ದರಾಮಯ್ಯ ಎಂಟ್ರಿ

ಸದ್ಯ ರಾಜ್ಯ ರಾಜಕೀಯದಲ್ಲಿ ತಲೆದೋರಿರುವ ‘ಕೃತಕ’ ಬಿಕ್ಕಟ್ಟು ಶಮನಕ್ಕೆ ಸಿದ್ದರಾಮಯ್ಯ ಅವರೇ ಅಖಾಡಕ್ಕೆ ಇಳಿಯಬೇಕಿದೆ.

ರಾಜ್ಯ ರಾಜಕೀಯದಲ್ಲಿ ಗೌರಿ ಹಬ್ಬಕ್ಕೂ ಮುನ್ನಾ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂಬವರೆಗೂ ಹೋಗಿನಿಂತಿದೆ. ಕಾಂಗ್ರೆಸ್ ಒಳಗೆ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯ ಸ್ಥಳೀಯ ರಾಜಕೀಯ ಜಿದ್ದಾಜಿದ್ದಿಯಿಂದ ಆರಂಭವಾದ ಈ ಬಿಕ್ಕಟ್ಟು ಸದ್ಯ ದೆಹಲಿಯ ಹೈಕಮಾಂಡ್‌ವರೆಗೂ ತಲುಪಿದೆ. ಈ ಕೃತಕ ರಾಜಕೀಯ ಬಿಕ್ಕಟ್ಟು ಶಮನಕ್ಕೆ ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರೇ ಬರಬೇಕಿದೆ.

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಡಿ.ಕೆ. ಶಿವಕುಮಾರ್‌ ಬೆಂಬಲವಾಗಿ ನಿಂತಿದ್ದಾರೆ ಎಂಬ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಾರಕಿಹೊಳಿ ಸಹೋದರರು ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಮಧ್ಯಪ್ರವೇಶಿಸಿರುವುದನ್ನು ಸಹಿಸುತ್ತಿಲ್ಲ. ಪರಿಣಾಮ ಸಮ್ಮಿಶ್ರ ಸರಕಾರ ಹೋಳಾಗುವ ಎಲ್ಲಾ ಲಕ್ಷಣಗಳನ್ನೂ ಜಾರಕಿಹೊಳಿ ಸೋದರರು ಕಾಂಗ್ರೆಸ್‌ಗೆ ತೋರಿದ್ದಾರೆ. ಜಾರಕಿಹೊಳಿ ಸೋದರರು 14 ಶಾಸಕರ ಜತೆಗೆ ಬಿಜೆಪಿಗೆ ಹೋಗುತ್ತಾರೆ ಎಂಬ ವಿಷಯ ಸದ್ಯಕ್ಕೆ ತಣ್ಣಗಾಗಿದ್ದರೂ, ಅವಕಾಶ ಸಿಕ್ಕರೆ ಆಪರೇಷನ್‌ ಕಮಲ ನಡೆಸುವ ಉಮೇದಿನಲ್ಲಿ ಬಿಜೆಪಿ ಇದೆ.

“ಎಲ್ಲವೂ ಸರಿಯಾಗಿದೆ, ಏನೂ ಗೊಂದಲ ಇಲ್ಲ” ಎಂದು ಕಾಂಗ್ರೆಸ್‌- ಜೆಡಿಎಸ್‌ ಮುಖಂಡರು ಕಳೆದ ಎರಡು ಮೂರು ದಿನಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಕಾಂಗ್ರೆಸ್‌- ಜೆಡಿಎಸ್‌ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಶಾಸಕರನ್ನು ನಾವೂ ಸೆಳೆಯುತ್ತೇವೆ ಎಂಬ ಮಾತುಗಳನ್ನು ಕಾಂಗ್ರೆಸ್‌- ಜೆಡಿಎಸ್‌ ಮುಖಂಡರು ಆಡುತ್ತಿದ್ದಾರೆ. ಸದ್ಯಕ್ಕೆ ಜಾರಕಿಹೊಳಿ ಸೋದರರ ಜತೆಗಿದ್ದ ಕೆಲವರಿಗಾದರೂ ಸಂಪುಟ ವಿಸ್ತರಣೆಯ ಲಾಭವಾಗುವ ಸಾಧ್ಯತೆ ಇದೆ. ಆದರೆ, ಈ ಶಾಸಕರನ್ನು ಬಿಟ್ಟು ಉಳಿದ ಅತೃಪ್ತ ಶಾಸಕರಿಗೆ ಗಾಳ ಹಾಕುವ ಕೆಲಸಕ್ಕೆ ಬಿಜೆಪಿ ಈಗಾಗಲೇ ಮುಂದಾಗಿದೆ.

ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿ ಈಗ ಅನಿರೀಕ್ಷಿತ ಬೆಳವಣಿಗೆಗಳಂತೂ ನಡೆಯುತ್ತಿವೆ. ಮುಖಂಡರು ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದರೂ, ಎಲ್ಲವೂ ಇನ್ನೂ ಸರಿಯಾಗಿಲ್ಲ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಜಾರಕಿಹೊಳಿ ಸೋದರರು ತಮ್ಮೊಂದಿಗಿರುವ ಶಾಸಕರಿಗೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವಾಗ ಉಳಿದ ಶಾಸಕರು ಸುಮ್ಮನೆ ಕೂರುವ ‘ತಾಳ್ಮೆ’ ತೋರುವುದಿಲ್ಲ. ಹೀಗಾಗಿ ಮುಖಂಡರ ಮನೆಗಳಿಗೆ ಶಾಸಕರ ಪರೇಡ್‌ ಮುಂದುವರಿದಿದೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಇಂಥದ್ದೊಂದು ಬಿಕ್ಕಟ್ಟು ಸೃಷ್ಟಿಯಾಗುವುದು ಅನಿರೀಕ್ಷಿತವೇನೂ ಆಗಿರಲಿಲ್ಲ. ಅಲ್ಲದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕರಲ್ಲಿ ಸಚಿವ ಸ್ಥಾನದ ಕನಸು ಗಟ್ಟಿಯಾಗುವುದೂ ಅಸಹಜವೇನಲ್ಲ. ಆದರೆ, ಈ ಸಂದರ್ಭದ ಜತೆಗೆ ತಳಕು ಹಾಕಿಕೊಂಡಿದ್ದು ಬೆಳಗಾವಿ ರಾಜಕಾರಣ. ಬೆಂಗಳೂರು ಕೇಂದ್ರಿತ ರಾಜಕಾರಣ ಬೆಳಗಾವಿ ಕಡೆಗೆ ತಿರುಗುವಂತೆ ಮಾಡಿದ ಜಾರಕಿಹೊಳಿ ಸೋದರರು ಸ್ಥಳೀಯ ರಾಜಕೀಯದ ವಿಷಯದಲ್ಲಿ ಇನ್ನೂ ತಣ್ಣಗಾಗಿಲ್ಲ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜಾರಕಿಹೊಳಿ ಸೋದರರ ಜತೆಗೆ ಮಾತನಾಡಿ ಬಿಕ್ಕಟ್ಟು ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ, ಈ ಹೈಡ್ರಾಮಾ ಹಾಗೂ ಸಂಪುಟ ವಿಸ್ತರಣೆಯ ಕಸರತ್ತು ಸರಿಹೋಗಲು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಬರಬೇಕಿದೆ.

Also read: ಮಗನ ಸಾವು, ಸೋಲಿನ ನೋವು; ‘ರಿಫ್ರೆಶ್‌ಮೆಂಟ್‌’ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ

ಸೆಪ್ಟೆಂಬರ್‌ 3ರಂದು 10 ದಿನಗಳ ವಿದೇಶ ಪ್ರವಾಸಕ್ಕೆ ಹೋಗಿದ್ದ ಸಿದ್ದರಾಮಯ್ಯ ಪ್ರವಾಸ ಇಂದಿಗೆ ಮುಗಿಯಲಿದೆ. ವಿದೇಶ ಪ್ರವಾಸ ಮುಗಿಸಿ ರಾಜಕೀಯ ಅಖಾಡಕ್ಕೆ ಬರುವ ಸಿದ್ದರಾಮಯ್ಯ ಮುಂದೆ ಸದ್ಯಕ್ಕೆ ಮೂರು ಸವಾಲುಗಳಿವೆ. ಒಂದು: ಜಾರಕಿಹೊಳಿ ಸೋದರರಿಂದಾಗಿ ಕಾಂಗ್ರೆಸ್‌ ಒಳಗೇ ಮೂಡಿರುವ ಬಿರುಕು ಸರಿಮಾಡುವುದು. ಎರಡು: ಸಂಪುಟ ವಿಸ್ತರಣೆ ವೇಳೆ ಅತೃಪ್ತ ಶಾಸಕರ ಅಸಮಾಧನವನ್ನು ತಣ್ಣಗಾಗಿಸುವುದು. ಮೂರು: ಕಾಂಗ್ರೆಸ್‌ ಒಳಗಿನ ಬಿಕ್ಕಟ್ಟನ್ನು ಲಾಭವಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ಪ್ರಯತ್ನಕ್ಕೆ ಬ್ರೇಕ್‌ ಹಾಕುವುದು.

ಇಂಥ ಸವಾಲುಗಳು ಸಿದ್ದರಾಮಯ್ಯ ಅವರಿಗೆ ಹೊಸತೇನೂ ಅಲ್ಲ. ಸ್ಥಳೀಯ ಕಾಂಗ್ರೆಸ್‌ ಬಿಕ್ಕಟ್ಟುಗಳ ವಿಚಾರದಲ್ಲಿ ಜಾರಕಿಹೊಳಿ ಸೋದರರು ಸಿದ್ದರಾಮಯ್ಯ ಅವರ ಮಾತು ಕೇಳಬಹುದು. ಆದರೆ, ಬೆಳಗಾವಿಯ ಸ್ಥಳೀಯ ರಾಜಕಾರಣವನ್ನು ಸಂಪುಟ ವಿಸ್ತರಣೆ ಜತೆಗೆ ತಳಕು ಹಾಕಿಕೊಂಡು ಕುಳಿತಿರುವ ಜಾರಕಿಹೊಳಿ ಸೋದರರು ತಮ್ಮ ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕೆಂಬ ಪಟ್ಟು ಸಡಿಲಿಸುವುದು ಕಷ್ಟವಿದೆ. ಮತ್ತೊಂದು ಕಡೆ ಸಿದ್ದರಾಮಯ್ಯ ಅವರೇ ವಿದೇಶದಲ್ಲಿ ಕುಳಿತುಕೊಂಡು ಜಾರಕಿಹೊಳಿ ಸೋದರರು ದಂಗೇಳುವಂತೆ ಮಾಡಿದ್ದಾರೆ ಎಂಬ ಮಾತುಗಳೂ ಇವೆ.

ಕಾಂಗ್ರೆಸ್‌ನಲ್ಲಿ ಮಾತ್ರವಲ್ಲದೆ, ಜೆಡಿಎಸ್‌ನಲ್ಲೂ ಅತೃಪ್ತ ಬಳಗ ಬಿಜೆಪಿಗೆ ಹೋಗಲು ಸಿದ್ಧವಾಗಿದೆ ಎಂಬ ವದಂತಿಗಳಿವೆ. ಸಚಿವ ಸ್ಥಾನ ಸಿಗದ ಎಲ್ಲಾ ಅತೃಪ್ತ ಶಾಸಕರು ಸಿದ್ದರಾಮಯ್ಯ ಮಾತು ಕೇಳಿಕೊಂಡು ಸುಮ್ಮನೆ ಕೂರುವುದು ಕಷ್ಟ. ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಮೂಡಿರುವ ಈ ರಾಜಕೀಯ ಬಿಕ್ಕಟ್ಟು ರಾಜ್ಯದಲ್ಲಿ ಮತ್ತೆ ರೆಸಾರ್ಟ್‌ ರಾಜಕಾರಣಕ್ಕೆ ಕಾರಣವಾದರೆ ಅದು ಅಚ್ಚರಿಯೇನಲ್ಲ. ಕೆಲ ದಿನಗಳ ಹಿಂದೆ ಸತೀಶ್‌ ಜಾರಕಿಹೊಳಿ, “ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು” ಎಂದು ಹೇಳಿರುವುದು ಇದೇ ಹಿನ್ನೆಲೆಯಲ್ಲೇ! ಆದರೆ, ಆಗಲಿರುವುದು ‘ಏನು’ ಎಂಬುದು ಮಾತ್ರ ಸದ್ಯಕ್ಕಂತೂ ಅಸ್ಪಷ್ಟ.