samachara
www.samachara.com
‘ಬೆಳಗಾವಿಯ ಪಾಳೇಗಾರರು’: ಪ್ರತಿಷ್ಠೆ, ಕುಟುಂಬ, ರಾಜಕಾರಣ ಮತ್ತು ಶೂನ್ಯ ಅಭಿವೃದ್ಧಿ!
COVER STORY

‘ಬೆಳಗಾವಿಯ ಪಾಳೇಗಾರರು’: ಪ್ರತಿಷ್ಠೆ, ಕುಟುಂಬ, ರಾಜಕಾರಣ ಮತ್ತು ಶೂನ್ಯ ಅಭಿವೃದ್ಧಿ!

ಹಣ ಬಲ, ತೋಳ್ಬಲ, ಜಾತಿ ಆಧಾರಿತ ರಾಜಕಾರಣದ ಮಾದರಿ ಕೊನೆಯಾಗಲು ಜನ ಎಚ್ಚೆತ್ತುಕೊಳ್ಳಬೇಕು. ಆದರೆ, ಜನ ಎಚ್ಚೆತ್ತುಕೊಳ್ಳುವುದು ಯಾವಾಗ?

ಸ್ಥಳೀಯ ರಾಜಕೀಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜಾರಕಿಹೊಳಿ ಸೋದರರು 14 ಮಂದಿ ಶಾಸಕರೊಂದಿಗೆ ಕಾಂಗ್ರೆಸ್‌ ಬಿಡಲಿದ್ದಾರೆ ಎಂಬ ಬೆಳವಣಿಗೆಗೆ ಸದ್ಯಕ್ಕೆ ಅಲ್ಪವಿರಾಮ ಬಿದ್ದಿದೆ. ನಾವು ಪಕ್ಷ ಬಿಡುವುದಿಲ್ಲ ಎಂದು ಸತೀಶ್‌ ಜಾರಕಿಹೊಳಿ ಹಾಗೂ ರಮೇಶ್‌ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಆದರೆ, ರಾಜಕೀಯವನ್ನು ಇಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಜನಪ್ರತಿನಿಧಿಗಳು ನಿಜಕ್ಕೂ ತಮ್ಮ ಕ್ಷೇತ್ರಗಳ ಅಭಿವೃದ್ಧಿಯನ್ನೂ ಅಷ್ಟೇ ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆಯೇ?

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಬೀದಿಗೆ ಬಂದ ಲಕ್ಷ್ಮೀ ಹೆಬ್ಬಾಳ್ಕರ್‌- ಜಾರಕಿಹೊಳಿ ನಡುವಿನ ಪ್ರತಿಷ್ಠೆಯ ಸಂಘರ್ಷ ಸಚಿವ ಡಿ. ಕೆ. ಶಿವಕುಮಾರ್‌ವರೆಗೂ ಹೋಗಿ ಜಾರಕಿಹೊಳಿ ಬೆಂಬಲಿಗ ಶಾಸಕರ ಜತೆಗೆ ಪಕ್ಷ ಬಿಡುವ ಮಟ್ಟಕ್ಕೂ ಹೋಗಿತ್ತು. ಈಗ ಶಮನವಾಗಿರುವಂತೆ ಕಾಣುವ ಕಾಂಗ್ರೆಸ್‌ ಒಳಗಿನ ಈ ಕಿಚ್ಚು ಸದ್ಯಕ್ಕಂತೂ ಆರುವಂಥದ್ದಲ್ಲ.

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಜಾರಕಿಹೊಳಿ ಸೋದರರ ಪೈಕಿ ಒಬ್ಬರಲ್ಲಾ ಒಬ್ಬರು ಸಚಿವ ಸ್ಥಾನಕ್ಕೇರುವ ರಾಜಕಾರಣದ ಮಾದರಿಯೊಂದು ಬೆಳಗಾವಿ ಜಿಲ್ಲೆಯಲ್ಲಿದೆ. ಇದು ಸುಮಾರು 20 ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ. ಆದರೆ, ಅಧಿಕಾರ ಹಿಡಿಯುವುದಕ್ಕಾಗಿ ತೋರುವ ಪ್ರತಿಷ್ಠೆಯನ್ನು ಬೆಳಗಾವಿ ಭಾಗದ ಜನಪ್ರತಿನಿಧಿಗಳು ಅಭಿವೃದ್ಧಿಗಾಗಿ ತೋರುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

“ರಾಜ್ಯದಲ್ಲಿ ಉಳಿದ ಭಾಗದ ರಾಜಕಾರಣವೇ ಒಂದು ರೀತಿಯದ್ದಾದರೆ ಬೆಳಗಾವಿ ರಾಜಕಾರಣವೇ ಮತ್ತೊಂದು ರೀತಿಯದ್ದು. ಇಲ್ಲಿ ಅಭಿವೃದ್ಧಿ ವಿಚಾರವಿರಲಿ, ಪಕ್ಷದ ನಿಷ್ಠೆಯ ವಿಚಾರದಲ್ಲೇ ಯಾವ ರಾಜಕಾರಣಿಗಳಿಗೂ ಬದ್ಧತೆ ಇಲ್ಲ. ಯಾರಿಗೂ ಪಕ್ಷ ಸಿದ್ಧಾಂತಗಳು ಮುಖ್ಯವಲ್ಲ. ಅಧಿಕಾರವಷ್ಟೇ ಮುಖ್ಯವಾಗಿ ಹಣ, ತೋಳ್ಬಲವನ್ನಷ್ಟೇ ಬಳಸಿಕೊಂಡು ಚುನಾವಣೆ ಗೆಲ್ಲುವ ಕೆಟ್ಟ ಮಾದರಿಯೊಂದು ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿದೆ” ಎನ್ನುತ್ತಾರೆ ಗೋಕಾಕಿನ ಸ್ಥಳೀಯರೊಬ್ಬರು.

“ಜಾರಕಿಹೊಳಿ, ಕತ್ತಿ, ಪಾಟೀಲ್‌ ಕುಟುಂಬಗಳ ಪಾಳೇಗಾರಿಕೆ ರಾಜಕಾರಣ ಬೆಳಗಾವಿ ಜಿಲ್ಲೆಯಲ್ಲಿದೆ. ಜನ ಈ ಪಾಳೇಗಾರಿಕೆಯನ್ನು ನೇರವಾಗಿ ಅಷ್ಟೇ ಅಲ್ಲ, ಚುನಾವಣೆಯಲ್ಲಿ ಎದುರಿಸಲೂ ಹೆದರುತ್ತಾರೆ. ಯಾವ ಬೂತ್‌ಗಳಿಂದ ತಮಗೆ ಹೆಚ್ಚಿನ ಓಟ್‌ಗಳು ಬಂದಿಲ್ಲವೋ ಆ ಬೂತ್‌ಗಳಿರುವ ಗ್ರಾಮಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸುವ ಕೆಲಸವನ್ನು ಇಲ್ಲಿನ ಪಾಳೇಗಾರಿಕೆ ರಾಜಕೀಯ ಮಾಡುತ್ತಿದೆ. ಇಲ್ಲಿ ಎಷ್ಟೋ ಬಾರಿ ಶಾಸಕರಿಗಿಂತ ಅವರ ಪಿ.ಎ. ಹಾಗೂ ಅವರ ಬಂಟರೇ ಶಾಸಕರ ಹುದ್ದೆ ನಿರ್ವಹಿಸುತ್ತಿರುತ್ತಾರೆ” ಎಂಬುದು ಬೆಳಗಾವಿಯ ಹಿರಿಯ ಪತ್ರಕರ್ತರೊಬ್ಬರ ಮಾತು.

ಸದ್ಯ ಕಾಂಗ್ರೆಸ್‌ನಲ್ಲಿರುವ ಸತೀಶ್‌ ಜಾರಕಿಹೊಳಿ ಮತ್ತು ಈಗ ಬಿಜೆಪಿಯಲ್ಲಿರುವ ಬಾಲಚಂದ್ರ ಜಾರಕಿಹೊಳಿ ಈ ಹಿಂದೆ ಜೆಡಿಎಸ್‌ನಲ್ಲಿದ್ದವರು. ಸಿದ್ದರಾಮಯ್ಯ ಜತೆಗೆ ಅಹಿಂದ ಮಾರ್ಗವಾಗಿ ಕಾಂಗ್ರೆಸ್‌ ಸೇರಿದ ಸತೀಶ್‌ ಜಾರಕಿಹೊಳಿ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದರು. ಬಿಜೆಪಿ ಸೇರಿದ್ದ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವರಾಗಿದ್ದರು. ಸದ್ಯ ರಮೇಶ್ ಜಾರಕಿಹೊಳಿ ಕುಮಾರಸ್ವಾಮಿ ಸಂಪುಟದ ಸಚಿವರು. ಹೀಗೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಜಾರಕಿಹೊಳಿ ಕುಟುಂಬದ ಒಬ್ಬರಲ್ಲಾ ಒಬ್ಬರು ಸಚಿವರಾಗುವುದು ನಡೆದೇ ಇದೆ.

“ಹೀಗೆ ಕುಟುಂಬದ ಒಬ್ಬರಲ್ಲಾ ಒಬ್ಬರ ಕೈಯಲ್ಲಿ ಸಚಿವ ಸ್ಥಾನ ಇದ್ದರೂ ಜಾರಕಿಹೊಳಿ ಸಹೋದರರು ಪ್ರತಿನಿಧಿಸುವ ಕ್ಷೇತ್ರಗಳು ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿವೆ. ಜಾರಕಿಹೊಳಿ ಕುಟುಂಬ ಮಾತ್ರವಲ್ಲ, ಉಮೇಶ್‌ ಕತ್ತಿ, ಎ.ಬಿ. ಪಾಟೀಲ್‌ ಸೇರಿದಂತೆ ಬೆಳಗಾವಿಯ ಬಹುತೇಕ ರಾಜಕಾರಣಿಗಳ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿಗಳು ನಡೆದಿವೆ. ಎಷ್ಟೋ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಮುರಿದು ಬೀಳುವ ಸ್ಥಿತಿಯಲ್ಲಿರುವ ಎಷ್ಟೋ ಶಾಲೆಗಳು ಈ ಭಾಗದಲ್ಲಿವೆ. ಆದರೆ, ಜನಪ್ರತಿನಿಧಿಗಳಿಗೆ ಈ ವಿಚಾರಗಳು ಮುಖ್ಯವಾಗುತ್ತಲೇ ಇಲ್ಲ” ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಬೆಳಗಾವಿಯ ಭಾಗದ ರಾಜಕಾರಣಿಯೊಬ್ಬರು.

“ಇಲ್ಲಿನ ಬಹುತೇಕ ಎಲ್ಲಾ ಶಾಸಕರೂ ಸಹಕಾರ ಸಂಘಗಳ ಸಕ್ಕರೆ ಕಾರ್ಖಾನೆಗಳಲ್ಲಿ ಹಿಡಿತ ಹೊಂದಿರುವುದರ ಜತೆಗೆ ತಮ್ಮ ಸ್ವಂತ ಸಕ್ಕರೆ ಕಾರ್ಖಾನೆಗಳನ್ನೂ ಹೊಂದಿದ್ದಾರೆ. ಎಲ್ಲರೂ ಚೆನ್ನಾಗಿ ಹಣ ಮಾಡಿಕೊಂಡಿದ್ದಾರೆ. ಹಣ ಮತ್ತು ತೋಳ್ಬಲದಿಂದಲೇ ರಾಜಕಾರಣವನ್ನು ನಡೆಸುವ ಕೆಟ್ಟ ಮಾದರಿಯನ್ನು ಮುಂದುವರಿಸಿದ್ದಾರೆ. ಹಣ ಮಾಡಲೆಂದೇ ಇವರು ರಾಜಕಾರಣಕ್ಕೆ ಬಂದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಅವರು.

“ಜನಸೇವೆ, ಪ್ರಗತಿಪರತೆ ಎಂದು ಹೇಳಿಕೊಳ್ಳುವವರೂ ಚುನಾವಣೆ ಸಮಯದಲ್ಲಿ ದೇವರ ಬಂಡಾರ ಹಿಡಿಸಿ ಜನರಿಂದ ತಮಗೇ ಮತಹಾಕುವ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಒಂದು ಕಾಲಕ್ಕೆ ಲಿಂಗಾಯತರ ಹಿಡಿತದಲ್ಲಿದ್ದ ಬೆಳಗಾವಿ ರಾಜಕಾರಣ ಈಗ ತಳ ಸಮುದಾಯದ ಕೈಗೆ ಸಿಕ್ಕಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಇವರು ಜನರ ಕೈ ಹಿಡಿಯುತ್ತಿಲ್ಲ. ಹೆದರಿಸಿ, ಬೆದರಿಸಿ, ಜನರಿಂದ ಆಣೆ- ಪ್ರಮಾಣ ಮಾಡಿಸಿಕೊಂಡು ಮತ ಪಡೆಯುವ ವ್ಯವಸ್ಥೆ ಇಲ್ಲಿ ಅವ್ಯಾಹತವಾಗಿದೆ” ಎಂದು ಬೇಸರಿಸುತ್ತಾರೆ ಅವರು.

ಕುಟುಂಬ ರಾಜಕಾರಣಕ್ಕೆ ಪಕ್ಕಾಗಿರುವ ಬೆಳಗಾವಿ ಅಭಿವೃದ್ಧಿ ವಿಚಾರದಲ್ಲಿ ಅದೇ ಮಟ್ಟದ ರಾಜಕೀಯ ಪ್ರತಿಷ್ಠೆಯನ್ನು ತೋರುತ್ತಿಲ್ಲ. ಜನರ ಸಮಸ್ಯೆಗಳನ್ನು ಕೇಳಬೇಕಿದ್ದ ಜನಪ್ರತಿನಿಧಿಗಳಿಗೆ ತಮ್ಮ ಪ್ರತಿಷ್ಠೆಯಷ್ಟೇ ಮುಖ್ಯವಾಗಿದೆ. ಸರಕಾರ, ಹೈಕಮಾಂಡ್‌ ಅನ್ನು ಹೆದರಿಸುವ ಮಟ್ಟಕ್ಕೆ ಇವರು ಬೆಳೆದಿರುವುದೇ ಸ್ವಪ್ರತಿಷ್ಠೆಯ ಮೂಲಕ. ಇವರೆಲ್ಲರೂ ವ್ಯಕ್ತಿಗತವಾಗಿ ರಾಜಕಾರಣದಲ್ಲಿ ಬೆಳೆದವರೇ ಹೊರತು, ಯಾವ ಪಕ್ಷಗಳೂ ಇವರಿಗೆ ಮುಖ್ಯವಲ್ಲ.

ಪಕ್ಷಗಳ ಬಲವಿಲ್ಲದಿದ್ದರೂ ತಾವು ಗೆಲ್ಲುತ್ತೇವೆ ಎಂಬ ಅತಿಯಾದ ನಂಬಿಕೆ ಇವರಲ್ಲಿದೆ. ಆದರೆ, ಇದನ್ನು ತಪ್ಪಿಸುವ ಮನಸ್ಥಿತಿ ಮತದಾರರಲ್ಲಿಲ್ಲ. ಸಕ್ಕರೆ ಕಾರ್ಖಾನೆ, ಕಬ್ಬಿನ ಬೆಳೆಯ ವಿಚಾರದಲ್ಲಿ ಮತದಾರರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಈ ರಾಜಕಾರಣಿಗಳು ಆ ಮೂಲಕ ಮತದಾರರನ್ನು ನಿಯಂತ್ರಿಸುವ, ಮತದಾರರನ್ನು ತಮ್ಮ ಹಂಗಿನಲ್ಲಿಟ್ಟುಕೊಂಡು ಪಾಳೇಗಾರಿಕೆ ಮುಂದುವರಿಸುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವದೊಳಗೇ ಅಚ್ಚುಕಟ್ಟಾಗಿ ಮಾಡಿಕೊಂಡು ಕುಳಿತ್ತಿದ್ದಾರೆ.

ಜಾರಕಿಹೊಳಿ ಸಹೋದರರು ಕಾಂಗ್ರೆಸ್‌ಗೆ ಕೈಕೊಡುತ್ತಾರೆ ಎಂಬ ವಿಷಯ ಸದ್ಯಕ್ಕಂತೂ ಅಂತ್ಯ ಕಂಡಿದೆ. ಆದರೆ, ಬೆಳಗಾವಿಯ ಪಾಳೇಗಾರಿಕೆಯ ರಾಜಕಾರಣವೂ ಅಂತ್ಯ ಕಾಣಬೇಕಿದೆ. ಜನರು ಹೆದರಿಕೆ, ಬೆದರಿಕೆಯ ಹಣ, ತೋಳ್ಬಲ, ಜಾತಿ ಆಧಾರಿತ ರಾಜಕಾರಣವನ್ನು ಕೊನೆಗಾಣಿಸಬೇಕಿದೆ. ಆದರೆ, ಜನ ಎಚ್ಚೆತ್ತುಕೊಳ್ಳುವುದು ಯಾವಾಗ ಎಂಬುದು ದೊಡ್ಡ ಪ್ರಶ್ನೆ.