samachara
www.samachara.com
ಕುವೈತ್ ಜೈಲಲ್ಲಿರುವ ಶಂಕರ್ ಪೂಜಾರಿಯನ್ನು ಬಂಧಮುಕ್ತಗೊಳಿಸುವವರು ಬೇಕಾಗಿದ್ದಾರೆ...
COVER STORY

ಕುವೈತ್ ಜೈಲಲ್ಲಿರುವ ಶಂಕರ್ ಪೂಜಾರಿಯನ್ನು ಬಂಧಮುಕ್ತಗೊಳಿಸುವವರು ಬೇಕಾಗಿದ್ದಾರೆ...

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರ ಪೂಜಾರಿ ಎಂಬುವರು ಕುವೈತ್‌ನಲ್ಲಿ ಅನ್ಯಾಯವಾಗಿ ಜೈಲುಪಾಲಾಗಿ ಇವತ್ತಿಗೆ ಮೂರು ತಿಂಗಳು. ಪರಿಚಿತರು ಕೊಟ್ಟ ಮಾತ್ರೆಯ ಪಾರ್ಸಲನ್ನು ಒಯ್ದುದ್ದು ಅವರು ಎಸಗಿದ ಅಪರಾಧ. ಬಿಡುಗಡೆ ಯಾಕೆ ಸಾಧ್ಯವಾಗುತ್ತಿಲ್ಲ?

ರಾಮಣ್ಣ ಉಡುಪಿ.

ಇದು ನಿಜಕ್ಕೂ ಅಪರೂಪದಲ್ಲಿ ಅಪರೂಪದ ಪ್ರಕರಣ; ಮತ್ತೊಬ್ಬರಿಗೆ ಉಪಕಾರ ಮಾಡಲು ಹೋಗಿ ವಿದೇಶದಲ್ಲಿ ಜೈಲುಪಾಲಾದ ವ್ಯಕ್ತಿಯ ಕತೆ. ಮಾಡದ ತಪ್ಪಿಗೆ ದೂರದ ಕುವೈತ್‌ನಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಗಂಡನ ನೆನೆದು ಕೊರಗುತ್ತಿರುವ ಮಹಿಳೆಯ ವ್ಯಥೆ.

ನೇರವಾಗಿ ವಿಷಯಕ್ಕೆ ಬರೋಣ; ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಳಂಜದ ಶಂಕರ ಪೂಜಾರಿ ಕಳೆದ ನಾಲ್ಕು ವರ್ಷಗಳಿಂದ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಜ್ಯೋತಿ ಮತ್ತು ಇಬ್ಬರು ಮಕ್ಕಳು ಊರಿನಲ್ಲಿ ನೆಲೆಸಿದ್ದಾರೆ. ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದ ಶಂಕರ ಪೂಜಾರಿಯವರು ಕುವೈತ್ ದೇಶಕ್ಕೆ ಉದ್ಯೋಗ ನಿಮಿತ್ತ ತೆರಳುವಾಗ ಸಹೋದ್ಯೋಗಿಯೋರ್ವರ ವಿನಂತಿ ಮೇರೆಗೆ ಮಾತ್ರೆಗಳ ಪಾರ್ಸೆಲ್ ಕೊಂಡೊಯ್ಯುತ್ತಾರೆ.

ಕುವೈತ್‌ನ ಕಾನೂನಿಗೂ ಭಾರತದ ಕಾನೂನಿಗೂ ಅಜಗಜಾಂತರ ವ್ಯತ್ಯಾಸ. ವಿದೇಶೀ ಪ್ರಜೆಗಳನ್ನು ಅಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತದೆ. ಏರ್ ಪೋರ್ಟ್ ಮೂಲಕ ಒಂದು ಸೂಜಿ ಕೂಡ ಕಣ್ಣುತಪ್ಪಿಸಿ ಹೋಗುವಂತಿಲ್ಲ. ನಿಯಮದಂತೆ ವಿಮಾನ ನಿಲ್ದಾಣದಲ್ಲಿ ಶಂಕರ ಪೂಜಾರಿಯವರ ವಸ್ತುಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಈ ಸಂದರ್ಭ ಅವರು ಮಾತ್ರೆಗಳನ್ನು ತಂದಿರುವುದು ಪತ್ತೆಯಾಗಿದೆ. ಇದೇನು ಮಾತ್ರೆ? ಎಷ್ಟು ಪ್ರಮಾಣದಲ್ಲಿದೆ? ಇಷ್ಟೊಂದು ಮಾತ್ರೆಗಳು ಏಕೆ? ಮಾತ್ರೆಗಳು ಯಾರಿಗೆ ಸೇರಿದ್ದು ?ಎಂದು ಅಧಿಕಾರಿಗಳು ಸಹಜವಾಗಿಯೇ ಪ್ರಶ್ನೆ ಮಾಡಿದ್ದಾರೆ.

ಶಂಕರ ಪೂಜಾರಿಯವರಿಗೆ ತಮ್ಮ ಪರಿಚಿತರು ಕೊಟ್ಟಿರುವುದು ಮಾತ್ರೆ ಎಂದು ಗೊತ್ತಿತ್ತು. ಆದರೆ ಅದಕ್ಕೆ ಪೂರಕವಾದ ವೈದ್ಯರ ಚೀಟಿಯಾಗಲೀ, ತಾವು ತಂದಿರುವ ಮಾತ್ರೆಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದಾಗಲೀ ನಿಜಕ್ಕೂ ತಿಳಿದಿರಲಿಲ್ಲ. ಅವರ ಪಾರ್ಸೆಲ್ ನಲ್ಲಿ ಇದ್ದದ್ದು ಬರೋಬ್ಬರಿ 210 ಮಾತ್ರೆಗಳು. ಕುವೈತ್‌ನಲ್ಲಿ ಈ ಮಾತ್ರೆಗೆ ನಿಷೇಧವಿದೆ ಎಂದು ಹೇಳಲಾಗುತ್ತಿದೆ. ಮಾದಕ ದ್ರವ್ಯದ ಅಂಶ ಇರುವ ಈ ಟ್ಯಾಬ್ಲೆಟ್ಸ್ ನೋಡಿ ಸಹಜವಾಗಿಯೇ ಅಲ್ಲಿನ ಏರ್ ಪೋರ್ಟ್ ಅಧಿಕಾರಿಗಳು ಜಾಗೃತರಾಗುತ್ತಾರೆ. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾರೆ. ಪಾರ್ಸೆಲ್ ಒಯ್ದಿದ್ದ ಶಂಕರ್ ಪೂಜಾರಿ ನೀಡಿದ ವಿವರಣೆ ಪೊಲೀಸರಿಗೆ ತೃಪ್ತಿ ನೀಡುವುದಿಲ್ಲ. ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಕಾನೂನಿನ ಪ್ರಕಾರ ಜೈಲಿಗೆ ಹಾಕುತ್ತಾರೆ. ಇದಾಗಿ ಈಗ ಮೂರು ತಿಂಗಳುಗಳೇ ಕಳೆದಿವೆ.

ಮಾತ್ರೆ ಕೊಟ್ಟವನು ಮುಬಾರಕ್:

ಶಂಕರ ಪೂಜಾರಿ ರಜೆ ಮುಗಿಸಿ ಕುವೈತ್‌ಗೆ ಹೋಗುವ ಸಂದರ್ಭ ಅವರ ಸಹೋದ್ಯೋಗಿ ಸಾದಿಕ್ ಎಂಬವರ ವಿನಂತಿ ಮೇರೆಗೆ ಪಾರ್ಸೆಲ್ ನೀಡಿದ್ದು ಉಡುಪಿಯ ಮುಬಾರಕ್. ಆ ಮಾತ್ರೆಗಳ ಪಾರ್ಸೆಲ್ ಕುವೈತ್‌ನಲ್ಲಿರುವ ಮುಬಾರಕ್ ಅತ್ತೆ ತಸ್ಲೀಂ ಫಾತಿಮಾ ಅವರಿಗೆ ಸೇರಿದ್ದು. ತಸ್ಲೀಂ ಫಾತಿಮಾ, ಕುವೈತ್‌ನಲ್ಲಿ ಒಂದು ಮನೆಯಲ್ಲಿ ನೌಕರಿ ಮಾಡುತ್ತಿದ್ದಾರೆ. ತಾಯ್ನಾಡಲ್ಲಿ ಅವರಿಗೊಂದು ಆಪರೇಷನ್ ಆಗಿತ್ತು. ಹೀಗಾಗಿ ಬೆನ್ನುನೋವಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ಮಾತ್ರೆಗಳು ಅವರಿಗೆ ಬೇಕಿತ್ತು. ಇದೆಲ್ಲ ನಿಜ. ಮಾತ್ರೆಯ ವಿಷಯದಲ್ಲಿ ಯಾವುದೇ ದೋಖಾ ಇಲ್ಲ.

ಆದರೆ ಅಷ್ಟೊಂದು ಮಾತ್ರೆಗಳು ಏಕೆ ಬೇಕು? ಅದರ ಪ್ರೆಸ್ಕ್ರೀಪ್ಶನ್ ಎಲ್ಲಿ? ವೈದ್ಯರ ಚೀಟಿಗೂ ಮಾತ್ರೆಗಳ ಸಂಖ್ಯೆಗೂ ತಾಳೆ ಆಗುತ್ತಿಲ್ಲ ಏಕೆ? ಮುಖ್ಯವಾಗಿ ವೈದ್ಯರು ನೀಡಿದ ಮಾತ್ರೆ ಚೀಟಿಯ ಇಸವಿ ಓವರ್ ರೈಟ್ ಆಗಿರುವುದು ಏಕೆ? ಮೂರು ವರ್ಷ ಹಳೆಯ ಮಾತ್ರೆ ಚೀಟಿ ಯಾಕಿದೆ? ಇಂತಹ ಅಪಾಯಕಾರಿಯಲ್ಲದ, ತೀರಾ ಮಾಮೂಲಿ ಪ್ರಶ್ನೆಗಳಿಗೆ ಕುವೈಟ್ ಪೊಲೀಸರಿಗೆ ಉತ್ತರ ಸಿಗಲಿಲ್ಲ. ಇದೇ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ.

ಕುವೈಟ್ ಪೊಲೀಸರು ಶಂಕರ ಪೂಜಾರಿಯವರನ್ನು ಬಂಧಿಸಿದ ಸಂದರ್ಭ ಅವರ ಸಹೋದ್ಯೋಗಿ ಸಾದಿಕ್ ಎಂಬುವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಸಾದಿಕ್, “ಶಂಕರ ಪೂಜಾರಿಯವರು ತಂದ ಪಾರ್ಸೆಲ್‌ನಲ್ಲಿ ಮಾತ್ರೆಗಳಿದ್ದ ಸಂಗತಿ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ತಾನು ಶಂಕರ ಪೂಜಾರಿಯವರಿಗೆ ಯಾವುದೇ ಪಾರ್ಸೆಲ್ ತರುವಂತೆ ಹೇಳಿಲ್ಲ ಎಂದು ಸಾದಿಕ್ ನುಣುಚಿಕೊಂಡಿದ್ದಾರೆ. ಹೀಗಾಗಿ ತನ್ನ ಗಂಡ ಶಂಕರ ಪೂಜಾರಿ ಯಾವ ತಪ್ಪೂ ಮಾಡದೇ ಜೈಲು ಪಾಲಾಗಿದ್ದಾರೆ,” ಎಂಬುದು ಬಂಧಿತ ಶಂಕರ್ ಪುಜಾರಿ ಪತ್ನಿ ಜ್ಯೋತಿ ಪೂಜಾರಿ ಮಾಡುವ ಆರೋಪ.

ಸುಷ್ಮಾಗೂ ಟ್ವೀಟ್:

ನಮಗೆಲ್ಲ ತಿಳಿದಿರುವಂತೆ ಇಂತಹ ಜಟಿಲ ಪ್ರಕರಣಗಳಾದಾಗ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವಿಗೆ ಧಾವಿಸುತ್ತಾರೆ. ಈ ಪ್ರಕರಣದಲ್ಲೂ ಬಂಧಿತ ಶಂಕರ್ ಪೂಜಾರಿ ಪತ್ನಿ, ಬೇರೆಯವರ ನೆರವಿನಿಂದ ಟ್ವೀಟ್ ಮೂಲಕ ಸಚಿವೆ ಸುಷ್ಮಾ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗಿಲ್ಲ. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮತ್ತು ಹಲವು ಜನಪ್ರತಿನಿಧಿಗಳ ಮೊರೆಹೋಗಿದ್ದರೂ ಶಂಕರ ಪೂಜಾರಿಯವರನ್ನು ಕುವೈತ್‌ ಜೈಲಿನಿಂದ ಬಿಡಿಸಲು ಸಾಧ್ಯವಾಗಿಲ್ಲ.

ತನ್ನಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ ಪತ್ನಿ ಜ್ಯೋತಿ ಪೂಜಾರಿ ಇದೀಗ ಕಂಗಾಲಾಗಿದ್ದಾರೆ. ಇದೊಂದು ಕ್ಲಿಷ್ಟ ಪ್ರಕರಣವಾಗಿರೋದರಿಂದ ವಿದಾಶಾಂಗ ಇಲಾಖೆ ಮಧ್ಯಪ್ರವೇಶಿಸಿದರೆ ಮಾತ್ರ ಶಂಕರ್ ಪೂಜಾರಿ ಜೈಲಿನಿಂದ ಹೊರಬರಬಹುದು. ಆದರೆ ಉಡುಪಿ ಮತ್ತು ಮಂಗಳೂರು ಸಂಸದರು ಈ ಕುರಿತು ಹೆಚ್ಚಿನ ಆಸಕ್ತಿ ವಹಿಸದೇ ಇರುವ ಕಾರಣ ಶಂಕರ್ ಪೂಜಾರಿ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

ದೆಹಲಿಗೆ ಕರೆದುಕೊಂಡು ಹೋಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರ ಜೊತೆ ಕೇಳಿಕೊಂಡೆ. ಆದರೆ ಅವರದಕ್ಕೆ ಒಪ್ಪಲಿಲ್ಲ. ತಾವೇ ಪ್ರಯತ್ನ ಮಾಡುವುದಾಗಿ ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲು ಅವರಿಗೂ ವಿಷಯ ತಿಳಿಸಲಾಗಿದೆ. ಆದರೆ ಯಾವುದೇ ಪ್ರಯೋಜನವೂ ಆಗಲಿಲ್ಲ. 
ಜ್ಯೋತಿ, ಬಂಧಿತ ಶಂಕರ್ ಪೂಜಾರಿ ಪತ್ನಿ. 

ನೋಡಲ್ ಆಫೀಸರ್ ನೇಮಕ:

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಮಾತ್ರವಲ್ಲ, ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಅವರು ರವೀಂದ್ರನಾಥ್ ಶ್ಯಾನುಭಾಗ್‌ರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ.

ಈಗಾಗಲೇ ಪ್ರಕರಣದ ಸಮಗ್ರ ಅಧ್ಯಯನ ಮಾಡಿರುವ ಡಾ. ಶಾನುಭಾಗ್, ಕುವೈತ್‌ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅಲ್ಲಿ ನೆಲೆಸಿರುವ ಓರ್ವ ನುರಿತ ವಕೀಲರನ್ನೂ ನೇಮಕ ಮಾಡಿ ಶಂಕರ್ ಪೂಜಾರಿ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ. ಶಂಕರ್ ಪೂಜಾರಿ ಕೊಂಡೊಯ್ದಿರುವ ಮಾತ್ರೆಗಳ ವಿವರ, ಅದಕ್ಕೆ ಪೂರಕ ದಾಖಲೆಗಳು, ಯಾರು ಕೊಟ್ಟರು, ಯಾರಿಗೆ ತಲುಪಿಸಲು ಕೊಂಡೊಯ್ದರು ಇತ್ಯಾದಿ ದಾಖಲೆಗಳನ್ನು ಸಂಗ್ರಹಿಸಿ ಶಂಕರ್ ಪೂಜಾರಿ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ.

ಇಷ್ಟು ತಡ ಏಕೆ?

ಪ್ರಾರಂಭದಲ್ಲಿ ಈ ಪ್ರಕರಣವನ್ನು ಪತ್ನಿ ಜ್ಯೋತಿ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗಂಡ ಇವತ್ತು ಬಿಡುಗಡೆಯಾಗಬಹುದು, ನಾಳೆ ಆಗಬಹುದು ಎಂದು ಕಾದರು. ಬಳಿಕ ಅವರು ಮಾಡಿದ ತಪ್ಪು ಎಂದರೆ, ಕರವೇ ಮುಖಂಡರ ಸಹಾಯ ಕೇಳಿದ್ದು. ಇಂತಹ ಕ್ಲಿಷ್ಟ ಪ್ರಕರಣದಲ್ಲಿ ಕರವೇ ಏನೂ ಮಾಡುವಂತಿರಲಿಲ್ಲ. ಇದನ್ನು ಅರಿಯದ ಜ್ಯೋತಿ, ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರ ಮೊರೆ ಹೋಗಿದ್ದಾರೆ. ಅವರು ಹೇಳಿಕೆಗಳನ್ನು ಕೊಡುತ್ತಾ, ಸುದ್ದಿಗೋಷ್ಠಿ ಮಾಡುತ್ತಾ ಕಾಲ ಕಳೆದರೇ ಹೊರತು ಪರಿಹಾರ ಸಿಗಲಿಲ್ಲ.

ಇದೀಗ ,ಇಬ್ಬರು ಮಕ್ಕಳ ತಾಯಿ ಜ್ಯೋತಿ ಪೂಜಾರಿ ಕಂಡಕಂಡವರಲ್ಲಿ ತಮ್ಮ ಗಂಡನ ಬಿಡುಗಡೆಗೆ ಸಹಾಯ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಎಂಥ ಅವಕಾಶವಾದಿಗಳು ಇದ್ದಾರೆ ಅಂದ್ರೆ ಇಂಥ ಕಷ್ಟದಲ್ಲಿರುವ ಮಹಿಳೆಯ ಕೈಯಿಂದ ಗಂಡನ ಬಿಡುಗಡೆ ಮಾಡಿಸುವುದಾಗಿ ಸಾವಿರಾರು ರೂಪಾಯಿಗಳನ್ನು ಲಪಟಾಯಿಸಿದ್ದಾರೆ.

ಯಾವುದೇ ಸಂಘಟನೆಗಳು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ಇನ್ನು ಹದಿನೈದು ದಿನ ಸಂಘಟನೆಗಳು ಸುಮ್ಮನಿರಲಿ. ಹೇಳಿಕೆ ಕೊಡುವುದರಿಂದ ಏನೂ ಆಗುವುದಿಲ್ಲ. ಕುವೈತ್‌ನಲ್ಲಿ ಅನುಭವಿ ವಕೀಲರನ್ನು ನೇಮಿಸಿದ್ದೇವೆ. ಮುಂದಿನ ಪ್ರಕ್ರಿಯೆಗೆ ಬೇಕಾದ ಕ್ರಮ ಕೈಗೊಂಡಿದ್ದೇವೆ.
ಡಾ. ರವೀಂದ್ರನಾಥ್ ಶಾನುಭಾಗ್, ಅಧ್ಯಕ್ಷರು, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ.