samachara
www.samachara.com
ಯಾರಿವನು ಟ್ರಂಪ್‌ ವಿರೋಧಿ? ಅಮೆರಿಕದಲ್ಲಿ ‘ಒಪೆಡ್‌ ಪೇಜ್‌ ಲೇಖನ’ ಸೃಷ್ಟಿಸಿದ ಬಿರುಗಾಳಿ 
COVER STORY

ಯಾರಿವನು ಟ್ರಂಪ್‌ ವಿರೋಧಿ? ಅಮೆರಿಕದಲ್ಲಿ ‘ಒಪೆಡ್‌ ಪೇಜ್‌ ಲೇಖನ’ ಸೃಷ್ಟಿಸಿದ ಬಿರುಗಾಳಿ 

ಟ್ರಂಪ್ ವಿರುದ್ಧ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಬರೆದ ಲೇಖನ ಸಹಜವಾಗಿಯೇ ಬಲಿಷ್ಠ ಮಾಧ್ಯಮಗಳ ಜಾಲ ಮತ್ತು ಅದರ ಬಗ್ಗೆ ಜನರ ಒಲವಿರುವ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕಾದಲ್ಲಿ ಆಗಾಗ ವಿವಾದದ ಅಲೆಯೆಬ್ಬಿಸುವ ವಿಲಕ್ಷಣ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ಆತನಿಗೆ ಸರಕಾರದೊಳಗೆಯೇ ನೂರಾರು ವೈರಿಗಳು. ಅವರಲ್ಲೊಬ್ಬ ‘ಅನಾಮಿಕ’ನಾಗಿ ಬರೆದ ಲೇಖನವೊಂದು ಈಗ ಅಮೆರಿಕಾ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೊರಗಿನ ಜಗತ್ತಿಗೆ ತಮಾಷೆಯಾಗಿ ಕಾಣುತ್ತಿರುವ ಈ ಬೆಳವಣಿಗೆ ದೊಡ್ಡಣ್ಣನ ರಾಷ್ಟ್ರದಲ್ಲಿ ಗಂಭೀರ ಪರಿಣಾಮಗಳನ್ನು ಬೀರಿದೆ.

ಅಮೆರಿಕಾದ ಪ್ರಖ್ಯಾತ ಪತ್ರಿಕೆ ‘ನ್ಯೂಯಾರ್ಕ್‌ ಟೈಮ್ಸ್‌’ನ ಒಪೆಡ್‌ (op-ed: ಸಂಪಾದೀಯ ಪುಟದ ವಿರುದ್ಧ ಪುಟ) ಪುಟದಲ್ಲಿ ‘ಟ್ರಂಪ್ ಆಡಳಿತದೊಳಗಿರುವ ಪ್ರತಿರೋಧದ ಭಾಗ ನಾನು’ ಎನ್ನುವ ತಲೆ ಬರಹದಲ್ಲಿ ಲೇಖನವೊಂದು ಸೆಪ್ಟೆಂಬರ್ 5ರಂದು ಪ್ರಕಟವಾಗಿತ್ತು. ಸಾಮಾನ್ಯವಾಗಿ ದೊಡ್ಡ ದೊಡ್ಡ ಪತ್ರಿಕೆಗಳು ಅನಾಮಿಕರ ಹೆಸರಿನಲ್ಲಿ ಯಾವುದೇ ಲೇಖನಗಳನ್ನು ಪ್ರಕಟಿಸುವುದಿಲ್ಲ. ಆದರೆ ನಾವು ಹೀಗೊಂದು ಅಪರೂಪದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎನ್ನುತ್ತಲೇ ಈ ಲೇಖನವನ್ನು ಪ್ರಕಟಿಸಿತ್ತು ನ್ಯೂಯಾರ್ಕ್‌ ಟೈಮ್ಸ್.

‘ಟ್ರಂಪ್‌ ಆಡಳಿತದಲ್ಲಿರುವ ಹಲವು ಹಿರಿಯ ಅಧಿಕಾರಿಗಳು ಅವರ ಕಾರ್ಯಸೂಚಿ ಮತ್ತು ಕೆಟ್ಟ ಪ್ರವೃತ್ತಿಯನ್ನು ನಿರಾಶೆಗೊಳಿಸಲು ಅವಿರತ ಶ್ರಮಿಸುತ್ತಿದ್ದಾರೆ. ಅವರಲ್ಲಿ ನಾನೂ ಒಬ್ಬ’ ಎಂದು ಅನಾಮಿಕ ಲೇಖಕರು ಬರೆದುಕೊಂಡಿದ್ದರು. ಮತ್ತು ಈ ದ್ವಂದ್ವ ಇನ್ನೂ ಟ್ರಂಪ್‌ಗೆ ಸರಿಯಾಗಿ ಅರ್ಥವಾಗಿಲ್ಲ ಎಂದವರು ಬರೆದಿದ್ದರು.

ಜತೆಗೆ, ‘ನಮಗೆ ದೇಶ ಮೊದಲು, ಅಧ್ಯಕ್ಷರೇನಿದ್ದರೂ ನಂತರದ ಆಯ್ಕೆ. ಈ ಕಾರಣಕ್ಕೆ ಹಲವರು ಟ್ರಂಪ್‌ ಆಡಳಿತದ ವಿರುದ್ಧ ಧ್ವನಿ ಎತ್ತುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ಯತ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಟ್ರಂಪ್‌ ಆಡಳಿತ ಪ್ರಜಾಪ್ರಭುತ್ವ ವಿರೋಧಿ ಮತ್ತು ವ್ಯಾಪಾರಿ ವಿರೋಧಿಯಾಗಿದೆ’ ಎಂದೆಲ್ಲಾ ಅವರು ಇದರಲ್ಲಿ ಕಿಡಿಕಾರಿದ್ದರು. ಹೀಗೆ ಆರೋಪಗಳ ಸರಣಿ ಮುಂದುವರಿದಿತ್ತು.

ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರದೇ ಸರಕಾರದ ನಿರ್ಣಾಯಕ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬ ಅವರನ್ನು ಟೀಕಿಸಿ ಹೀಗೆ ದೇಶದ ಖ್ಯಾತ ಪತ್ರಿಕೆಗೆ ಲೇಖನ ಬರೆಯುತ್ತಾರೆ. ಅದರ ಮುಂದಿನ ಪರಿಣಾಮಗಳು ಏನಿರಬಹುದು?

ಇಂಥಹದ್ದೇ ಬೆಳವಣಿಗೆಯೀಗ ಅಮೆರಿಕಾದಲ್ಲಿ ನಡೆಯುತ್ತಿದೆ. ದೇಶದ ಅಧ್ಯಕ್ಷರ ವಿರುದ್ಧ ತನ್ನದೇ ದೇಶದ ಹಿರಿಯ ಅಧಿಕಾರಿಯೊಬ್ಬರು ಬರೆದ ಈ ಲೇಖನ ಸಹಜವಾಗಿಯೇ ಬಲಿಷ್ಠ ಮಾಧ್ಯಮಗಳ ಜಾಲ ಮತ್ತು ಅದರ ಬಗ್ಗೆ ಜನರ ಒಲವಿರುವ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಅಲ್ಲೀಗ ಈ ಅನಾಮಿಕ ಯಾರು ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉದ್ಭವಿಸಿದೆ. ಆತ ಯಾರಿರಬಹುದು? ಆತ ಎಂಥವನು? ಅವನ ಮನಸ್ಥಿತಿ ಏನು? ಅವನನ್ನು ಪತ್ತೆ ಹಚ್ಚುವುದು ಹೇಗೆ? ಹೀಗೆ ತರಹೇವಾರಿ ಪ್ರಶ್ನೆಗಳ ಸರಮಾಲೆಯೇ ಸೃಷ್ಟಿಯಾಗಿದೆ. ಇಂಥಹ ಪ್ರಶ್ನೆಗಳನ್ನು ಮುಂದಿಟ್ಟುಕೊಂದು ಮಾಧ್ಯಮಗಳು, ಜನರು ರಾಜಕಾರಣಿಗಳು ಮತ್ತು ಸ್ವತಃ ಅಧ್ಯಕ್ಷ ಟ್ರಂಪ್‌ ಚರ್ಚೆ ನಡೆಸುತ್ತಿದ್ದಾರೆ.

ಯಾವೆಲ್ಲಾ ಕೋನಗಳಿಂದ ಆತನ ಬೆನ್ನು ಹತ್ತಿದ್ದಾರೆ ಎಂಬುದಕ್ಕೆ ಅಮೆರಿಕಾದ ಒಂದು ವೆಬ್‌ಸೈಟ್‌ ಮೇಲೆ ಕಣ್ಣಾಡಿಸಿದರೂ ಸಾಕು ಇದರ ವಿಸ್ತಾರಗಳು ತಿಳಿಯುತ್ತದೆ. ‘ಲೇಖಕನ ಬಗ್ಗೆ ಒಂದು ದೊಡ್ಡ ಸುಳಿವು’, ‘ಅನಾಮಿಕನೇ ಹೀರೋ’, ‘ಅನಾಮಿಕ ಬರಹಗಾರನ ಗುರುತಿನ ಬಗೆಗಿರುವ ಸಿದ್ಧಾಂತಗಳು’, ‘ಅನುಮಾನಾಸ್ಪದ ಅನಾಮಿಕ ವ್ಯಕ್ತಿಗಳ ಪಟ್ಟಿ’... ಹೀಗೆ ಲೇಖನ, ವಿಶ್ಲೇಷಣೆ, ಅಭಿಪ್ರಾಯಗಳ ಸರಣಿ ಮುಂದುವರಿದಿದೆ.

ಇದೀಗ ಆತ ರಾಷ್ಟ್ರೀಯ ಭದ್ರತಾ ವಿಭಾಗಕ್ಕೆ ಸೇರಿದವನು ಎಂಬ ನಿರ್ಧಾರಕ್ಕೆ ಟ್ರಂಪ್‌ ಬಂಟರು ಬಂದಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಈ ಲೇಖನ ಬರೆದವರು ಯಾರಿರಬಹುದು ಎಂಬ ಅನುಮಾನದ ಮೇಲೆ ಒಂದಷ್ಟು ಅಧಿಕಾರಿಗಳ ಪಟ್ಟಿ ಸಿದ್ದಪಡಿಸಲಾಗಿದ್ದು ಅದರಲ್ಲಿ ಒಂದೊಂದೇ ಹೆಸರುಗಳನ್ನು ತೆಗೆಯುತ್ತಾ ಬರಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ‘ಒಪೆಡ್‌ ಪುಟ’ದಲ್ಲಿ ಲೇಖನ ಬರೆದ ಅಧಿಕಾರಿಯನ್ನು ತನಿಖೆಗೆ ಒಳಪಡಿಸಬೇಕು ಎಂದು ಟ್ರಂಪ್‌ ಪಟ್ಟು ಹಿಡಿದು ಕುಳಿತಿದ್ದಾರೆ. ‘ಆತನನ್ನು ಅಟಾರ್ನಿ ಜನರಲ್ ಜೆಫ್‌ ಸೆಷನ್ಸ್‌ ತನಿಖೆಗೆ ಒಳಪಡಿಸಬೇಕು’ ಎಂದು ಟ್ರಂಪ್‌ ಗುಡುಗಿದ್ದಾರೆ.

ಕೇಳಲು ಈ ಬೆಳವಣಿಗೆಗಳು ತಮಾಷೆ ಅನಿಸಿದರೂ ಅದರಾಚೆಗೆ ಅಲ್ಲಿನ ಅಧಿಕಾರಿ ವಲಯದಲ್ಲಿ ದೇಶದ ಬಗೆಗಿರುವ ಕಾಳಜಿ, ಪತ್ರಿಕೆಗಳಿಗಿರುವ ಬದ್ಧತೆಯನ್ನು ಇದು ಸಾರುತ್ತಿದೆ. ಜತೆಗೆ ಮಾಧ್ಯಮವೊಂದಕ್ಕಿರುವ ಶಕ್ತಿಯನ್ನೂ ಇದು ತೆರದಿಟ್ಟಿದೆ. ಆದರೆ ಅಷ್ಟೇ ಪ್ರಬಲವಾಗಿರುವ ಭಾರತದ ಮಾಧ್ಯಮಗಳು ಸರಕಾರವನ್ನು ಹೀಗೆ ಎದುರು ಹಾಕಿಕೊಳ್ಳಬಲ್ಲವಾ? ಅಂಥಹದ್ದೊಂದು ಧೈರ್ಯ, ಬದ್ಧತೆ ಅವುಗಳಿಗಿದೆಯಾ?

ಸುಮ್ಮನೆ ನಿಮ್ಮನ್ನೇ ನೀವು ಕೇಳಿಕೊಳ್ಳಿ; ಅಷ್ಟೇ.