samachara
www.samachara.com
‘ಹಣ ಕಿತ್ತು, ಬಟ್ಟೆ ಬಿಚ್ಚಿಸಿ, ಜಾತಿ ನಿಂದಿಸಿದರು’: ಕರವೇ ಮುಖಂಡರ ವಿರುದ್ಧ ಎಫ್‌ಐಆರ್‌
COVER STORY

‘ಹಣ ಕಿತ್ತು, ಬಟ್ಟೆ ಬಿಚ್ಚಿಸಿ, ಜಾತಿ ನಿಂದಿಸಿದರು’: ಕರವೇ ಮುಖಂಡರ ವಿರುದ್ಧ ಎಫ್‌ಐಆರ್‌

ನೆರವಿನ ಹೆಸರಿನಲ್ಲಿ ದಲಿತ ದಂಪತಿ ಮೇಲೆ ದೌರ್ಜನ್ಯ ಎಸಗಿದ ಕೊಡಗಿನ ಸೋಮವಾರ ಪೇಟೆಯ ಕರವೇ ಮುಖಂಡರ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ಪ್ರವಾಹ, ಭೂಕುಸಿತದಿಂದ ತತ್ತರಿಸಿರುವ ಕೊಡಗಿನಲ್ಲಿ ನೆರವಿನ ರಾಜಕೀಯ ಹಾಗೂ ದೌರ್ಜನ್ಯ ನಡೆಸಿ, ಜಾತಿ ನಿಂದನೆ ಮಾಡಿದ್ದ ಆರೋಪದಡಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡರ ವಿರುದ್ಧ ಸೋಮವಾರ ಪೇಟೆ ಪೊಲೀಸರು ಶನಿವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಸೆಪ್ಟೆಂಬರ್‌ 3ರಂದು ನೆರೆ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಮಸಗೋಡು ಗ್ರಾಮದ ದಂಪತಿ ಸುಧೀರ್ ಮತ್ತು ಶೈಲ ಅವರಿಗೆ ನೆರವಿನ ರೂಪದಲ್ಲಿ ಒಟ್ಟು 20 ಸಾವಿರ ರೂಪಾಯಿ ಕೊಟ್ಟಿದ್ದರು. ಆದರೆ, ಸ್ಥಳೀಯ ಕರವೇ ಮುಖಂಡರು ಈ ದಂಪತಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡು ಈ ಹಣವನ್ನು ಕಸಿದುಕೊಂಡಿರುವ ಆರೋಪವಿದೆ.

ಅಂದು ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸೋಮವಾರಪೇಟೆ ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್‌ ಮತ್ತು ಆಕೆಯ ಪತಿ ಸುರೇಶ್ ಜತೆಗೆ ಸೋಮವಾರ ಪೇಟೆ ಘಟಕದ ಕರವೇ ಅಧ್ಯಕ್ಷ ದೀಪಕ್‌ ಮೂವರೂ ಶೈಲ ಅವರ ಮೇಲೆ ದೌರ್ಜನ್ಯ ಎಸಗಿ ಅವರಿಂದ 10 ಸಾವಿರ ಹಣ ಕಸಿದುಕೊಂಡಿದ್ದಾರೆ. ಅಲ್ಲದೆ ರಾತ್ರಿ ಮತ್ತೆ ಮಸಗೋಡಿನ ಶೈಲ ಅವರ ಮನೆಗೆ ಬಂದ ಈ ಮೂವರು ಸುಧೀರ್‌ ಅವರ ಬಳಿಯಿದ್ದ 10 ಸಾವಿರ ರೂಪಾಯಿಯನ್ನೂ ಕಸಿದುಕೊಂದಿದ್ದಾರೆ ಎಂದು ಈ ದಂಪತಿ ಸೋಮವಾರ ಪೇಟೆ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

“ಕಾರ್ಯಕ್ರಮ ಮುಗಿದ ಮೇಲೆ ನನ್ನ ಬಳಿ ಇದ್ದ ಹಣದ ಕವರ್‌ ಅನ್ನು ಕಸಿದುಕೊಂಡ ರೂಪಾ ಸುರೇಶ್‌, ಇನ್ನಷ್ಟು ಹಣವನ್ನು ನಾನು ಬಚ್ಚಿಟ್ಟುಕೊಂಡಿದ್ದೇನೆ ಎಂದು ಪತ್ರಿಕಾ ಭವನದ ಕೊಠಡಿಗೆ ಕರೆದುಕೊಂಡು ಹೋಗಿ ನನ್ನ ಬಟ್ಟೆಯನ್ನೆಲ್ಲಾ ಬಿಚ್ಚಿಸಿ ಹಣಕ್ಕಾಗಿ ತಡಕಾಡಿದರು. ಮೈಮೇಲೆ ತುಂಡು ಬಟ್ಟೆಯನ್ನೂ ಬಿಡದಂತೆ ಬಿಚ್ಚಿಸಿ ನನ್ನೊಂದಿಗೆ ಅಮಾನವೀಯವಾಗಿ ನಡೆದುಕೊಂಡರು” ಎಂದು ಶೈಲ ದೂರಿನಲ್ಲಿ ತಿಳಿಸಿದ್ದಾರೆ.

“ಹತ್ತು ಸಾವಿರ ಬಿಟ್ಟು ಉಳಿದ ಹಣ ಕೊಡುವಂತೆ ಅವರೆಲ್ಲರೂ ಸೇರಿ ನಿಂದಿಸಿದರು. ‘ಹೊಲೆಯ ಸೂಳೆ ಮಕ್ಕಳು ನೀವು. ನಿಮ್ಮ ಬುದ್ಧಿ ಬಿಡಲ್ಲ. ಆ ಹಣ ನೀವು ಬೆವರು ಸುರಿಸಿ ಸಂಪಾದಿಸಿದ್ದಲ್ಲ. ಆ ಹಣ ನಮಗೆ ಸೇರಬೇಕು’ ಎಂದು ರೂಪಾ, ಅವರ ಪತಿ ಸುರೇಶ್‌ ಮತ್ತು ದೀಪಕ್‌ ಮೂರೂ ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದರು” ಎಂದು ಶೈಲ ದೂರಿನಲ್ಲಿ ಹೇಳಿದ್ದಾರೆ.

ಕೊಡಗಿನ ಈ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಕರವೇ ಸ್ಥಳೀಯ ಮುಖಂಡರು ಇಷ್ಟು ಅಮಾನವೀಯವಾಗಿ ನಡೆದುಕೊಂಡಿರುವುದನ್ನು ನಾನು ಸಹಿಸುವುದಿಲ್ಲ. ತಪ್ಪು ಮಾಡಿರುವ ಅವರನ್ನು ಸಂಘಟನೆಯಿಂದ ಹೊರಗೆ ಹಾಕುತ್ತೇವೆ. ತಪ್ಪು ಯಾರೇ ಮಾಡಿದರೂ ತಪ್ಪೇ.
- ಟಿ.ಎ. ನಾರಾಯಣ ಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

“ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಮನೆಗೆ ನುಗ್ಗಿದ ಈ ಮೂರೂ ಜನ ಸುಧೀರ್‌ ಬಳಿ ಇದ್ದ 10 ಸಾವಿರ ರೂಪಾಯಿಯ ಕವರ್‌ ಕಸಿದುಕೊಂಡರು. ಇನ್ನೂ ಹೆಚ್ಚಿನ ಹಣ ಕವರ್‌ನಲ್ಲಿ ಇತ್ತು ಎಂದು ಮನೆಯನ್ನೆಲ್ಲಾ ತಡಕಾಡಿದರು. ಉಳಿದ ಹಣ ಕೊಡದಿದ್ದರೆ ಮನೆಗೆ ಗಂಧದ ಮರದ ತುಂಡು ತಂದಿಟ್ಟು ಜೈಲಿಗೆ ಹಾಕಿಸುವ ಬೆದರಿಕೆ ಒಡ್ಡಿದರು. ನಾರಾಯಣ ಗೌಡರು ಕೊಟ್ಟ ಕವರ್‌ನಲ್ಲಿ ಇದ್ದಿದ್ದೇ ಎಷ್ಟು ದುಡ್ಡು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಮತ್ತೆ ಹೊಲೆಯ ಸೂಳೆ ಮಕ್ಕಳು ಎಂದು ನಮ್ಮನ್ನು ನಿಂದಿಸಿದರು” ಎಂದು ಶೈಲ ದೂರಿದ್ದಾರೆ.

Also read: ‘ಮುಂದೆ ಹಣಕೊಟ್ಟರು ಹಿಂದೆ ಕಿತ್ತುಕೊಂಡರು’: ಕರವೇ ಮುಖಂಡರ ವಿರುದ್ಧ ಕೊಡಗಿನ ದಂಪತಿ ಆರೋಪ

ಮಸಗೋಡು ಗ್ರಾಮದವರೇ ಆದ ರೂಪಾ ಮತ್ತು ಸುರೇಶ್‌ ನೆರವು ಕೊಡಿಸುವುದಾಗಿ ಶೈಲ ಮತ್ತು ಸುಧೀರ್‌ ದಂಪತಿಯನ್ನು ಪತ್ರಿಕಾ ಭವನಕ್ಕೆ ಕರೆದುಕೊಂಡು ಹೋಗಿದ್ದರು. ನೆರವಿನ ಹಣದಲ್ಲಿ ಒಂದಷ್ಟನ್ನು ದಂಪತಿಗೆ ಕೊಟ್ಟು ಉಳಿದ ಹಣವನ್ನು ತಾವು ಕಬಳಿಸುವುದು ಇವರ ಉದ್ದೇಶವಾಗಿತ್ತು.

ಇಗ್ಗೋಡ್ಲು ಗ್ರಾಮದಲ್ಲಿ ಮನೆ ಕಳೆದುಕೊಂಡಿದ್ದ ಡ್ಯಾಲಿನ್ ಎಂಬವರಿಗೆ ಅದೇ ದಿನ ನಾರಾಯಣ ಗೌಡ 50 ಸಾವಿರ ರೂಪಾಯಿಗಳ ನೆರವು ನೀಡಿದ್ದರು. ಅದೇ ದಿನ ಸಂಜೆ ನಡೆದ ಕಾರ್ಯಕ್ರಮದಲ್ಲಿ ತಲಾ ಹತ್ತು ಸಾವಿರದ ಕವರ್‌ಗಳನ್ನು ಶೈಲ ಮತ್ತು ಸುಧೀರ್‌ ಅವರಿಗೆ ವಿತರಿಸಲಾಗಿತ್ತು. ಆದರೆ, ಈ ಕವರ್‌ಗಳಲ್ಲೂ ತಲಾ 50 ಸಾವಿರ ಕೊಡಲಾಗಿದೆ ಎಂದು ಭಾವಿಸಿದ್ದ ಕರವೇ ಮುಖಂಡರು 20 ಸಾವಿರ ಕಸಿದುಕೊಳ್ಳುವ ಜತೆಗೆ ಹೆಚ್ಚುವರಿ ಹಣ ನೀಡುವಂತೆ ದಂಪತಿಯನ್ನು ಪೀಡಿಸಿದ್ದಾರೆ.

ಘಟನೆ ನಡೆದ ಬಳಿಕ ಪೊಲೀಸರಿಗೆ ದೂರು ಕೊಡಬೇಡಿ ಎಂದು ರೂಪಾ ಮತ್ತು ಸುರೇಶ್‌ ಒತ್ತಡ ತಂದರು. ರಾಜೀ ಮಾಡಿಕೊಳ್ಳೋಣ ಎಂದು ಹೇಳಿದರು. ಆದರೆ, ಆಗಿರುವ ಅವಮಾನವನ್ನು ಮರೆಯಲು ಸಾಧ್ಯವಿಲ್ಲ. ಅವರು ಎಸಗಿರುವ ದೌರ್ಜನ್ಯಕ್ಕೆ ತಕ್ಕ ಶಿಕ್ಷೆ ಆಗಲೇಬೇಕು.
- ಶೈಲ, ಸಂತ್ರಸ್ತೆ

ಶನಿವಾರ ಎಫ್‌ಐಆರ್‌ ದಾಖಲಾದ ಬಳಿಕ ರೂಪಾ ಮತ್ತು ಸುರೇಶ್‌ ಮಸಗೋಡು ಗ್ರಾಮದ ತಮ್ಮ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ದೀಪಕ್‌ ಕೂಡಾ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಸೋಮವಾರ ಪೇಟೆ ಕರವೇ ಅಧ್ಯಕ್ಷ ದೀಪಕ್‌ ಪತ್ನಿ ಪೊಲೀಸ್‌ ಇಲಾಖೆಯಲ್ಲೇ ಕೆಲಸ ಮಾಡುತ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ ಪೊಲೀಸರು ದೀಪಕ್‌ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳೂ ಇವೆ.

‘ಹಣ ಕಿತ್ತು, ಬಟ್ಟೆ ಬಿಚ್ಚಿಸಿ, ಜಾತಿ ನಿಂದಿಸಿದರು’: ಕರವೇ ಮುಖಂಡರ ವಿರುದ್ಧ ಎಫ್‌ಐಆರ್‌
‘ಹಣ ಕಿತ್ತು, ಬಟ್ಟೆ ಬಿಚ್ಚಿಸಿ, ಜಾತಿ ನಿಂದಿಸಿದರು’: ಕರವೇ ಮುಖಂಡರ ವಿರುದ್ಧ ಎಫ್‌ಐಆರ್‌
‘ಹಣ ಕಿತ್ತು, ಬಟ್ಟೆ ಬಿಚ್ಚಿಸಿ, ಜಾತಿ ನಿಂದಿಸಿದರು’: ಕರವೇ ಮುಖಂಡರ ವಿರುದ್ಧ ಎಫ್‌ಐಆರ್‌

ಈ ಮಧ್ಯೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಪ್ಪು ಎಸಗಿರುವ ಕರವೇ ಮುಖಂಡರನ್ನು ಸಂಘಟನೆಯಿಂದ ಹೊರಹಾಕುವುದಾಗಿ ಹೇಳಿದ್ದಾರೆ. “ತಪ್ಪು ಯಾರು ಮಾಡಿದರೂ ತಪ್ಪೇ. ನಮ್ಮ ಸಂಘಟನೆಯವರು ತಪ್ಪು ಮಾಡಿದರೆ ಅದನ್ನು ಸಹಿಸುವುದಿಲ್ಲ. ಹಣದ ವಿಚಾರದಲ್ಲಿ ಅವರು ಇಷ್ಟು ಅಮಾನವೀಯವಾಗಿ ನಡೆದುಕೊಂಡಿರುವುದು ಸರಿಯಲ್ಲ” ಎಂದಿದ್ದಾರೆ.

ಸದ್ಯಕ್ಕೇನೋ ಪೊಲೀಸರು ಐಪಿಸಿ ಸೆಕ್ಷನ್‌ 354, 392, 448, 506 ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ, ಸೋಮವಾರ ಪೇಟೆಯಲ್ಲಿ ಪ್ರಭಾವಿಗಳಾಗಿರುವ ಆರೋಪಿಗಳು ದೂರು ಹಿಂಪಡೆಯುವಂತೆ ಸಂತ್ರಸ್ತ ದಂಪತಿಗಳ ಮೇಲೆ ಒತ್ತಡ ತರುವ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಸಂತ್ರಸ್ತ ದಂಪತಿಗೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲವಾದರೆ ಇಂಥ ದೌರ್ಜನ್ಯಗಳು ಮುಂದುವರಿಯುತ್ತಲೇ ಇರುತ್ತವೆ.